ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಧ್ಯಮವೇಗಿ ಶಾರ್ದೂಲ್ ಠಾಕೂರ್‌ನ ಸಿಕ್ಸರ್‌ ಕಥೆ

Last Updated 19 ಜನವರಿ 2021, 7:59 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಶಾರ್ದೂಲ್ ನರೇಂದ್ರ ಠಾಕೂರ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದ ದಾಖಲೆ ಹೊಂದಿದ್ದಾರೆ!

ಹೌದು; 2006ರಲ್ಲಿ ನಡೆದ ಹ್ಯಾರಿಸ್ ಶೀಲ್ಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸ್ವಾಮಿ ವಿವೇಕಾನಂದ ಶಾಲೆಯ ತಂಡದಲ್ಲಿ ಆಡುತ್ತಿದ್ದ ಶಾರ್ದೂಲ್ ‘ಸಿಕ್ಸ್‌ ಸಿಕ್ಸರ್‌‘ ಸಾಧನೆ ಮಾಡಿದ್ದರು. ಅದು ಅವರ ಜೀವನಕ್ಕೆ ತಿರುವು ನೀಡಿತ್ತು. ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶಾರ್ದೂಲ್ ಅವರು ವಾಷಿಂಗ್ಟನ್ ಸುಂದರ್ ಜೊತೆಗೆ ಏಳನೇ ವಿಕಟ್‌ಗೆ 123 ರನ್‌ಗಳನ್ನು ಕಲೆಹಾಕದೇ ಇದ್ದಿದ್ದರೆ ಪಂದ್ಯದ ಚಿತ್ರಣ ಬೇರೆಯೇ ಆಗಿರುತ್ತಿತ್ತು. ಭಾರತದ ಹೋರಾಟಕ್ಕೆ ಅಂದೇ ದೊಡ್ಡ ಪೆಟ್ಟು ಬೀಳುತ್ತಿತ್ತು. ಆದರೆ, ಶಾರ್ದೂಲ್ ಛಲದ ಬ್ಯಾಟಿಂಗ್ ನಿಂದಾಗಿ ತಂಡದ ಹೋರಾಟಕ್ಕೆ ಬಲ ಬಂದಿತ್ತು. ಅಷ್ಟೇ ಅಲ್ಲ ಮೊದಲ ಇನಿಂಗ್ಸ್‌ನಲ್ಲಿ ಮೂರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಗಳಿಸಿದ ಅವರು ಆಸ್ಟ್ರೇಲಿಯಾದ ಬ್ಯಾಟಿಂಗ್‌ಗೆ ಬಲವಾದ ಹೊಡೆತ ನೀಡಿದ್ದರು. ಅಂದ ಹಾಗೆ; ಅವರು ಗಾಬಾದಲ್ಲಿ ತಮ್ಮ ಖಾತೆ ಆರಂಭಿಸಿದ್ದು ಸಿಕ್ಸರ್ ಮೂಲಕ ಮತ್ತು ಚೊಚ್ಚಲ ಅರ್ಧಶತಕದ ಗಡಿ ದಾಟಿದ್ದು ಕೂಡ ಸಿಕ್ಸರ್‌ನೊಂದಿಗೆ!

15 ವರ್ಷಗಳ ಹಿಂದೆ ಶಾರ್ದೂಲ್ ಪ್ರತಿಭೆ ಗುರುತಿಸಿದ್ದ ಎಸ್‌ವಿಎಸ್‌ ಕೋಚ್ ದಿನೇಶ್ ಲಾಡ್ ಅವರ ದೂರದೃಷ್ಟಿ ಮತ್ತು ಶ್ರಮಕ್ಕೆ ಗಾಬಾದಲ್ಲಿ ಸಾರ್ಥಕ ಪ್ರತಿಫಲ ಸಿಕ್ಕಿದ್ದು ಸುಳ್ಳಲ್ಲ. ಈ ಹಂತಕ್ಕೆ ಬೆಳೆಯಲು ಶಾರ್ದೂಲ್ ಮುಂದೆ ಹೂವಿನ ಹಾದಿ ಇರಲಿಲ್ಲ.

ಶಾರ್ದೂಲ್ ಠಾಕೂರ್
ಶಾರ್ದೂಲ್ ಠಾಕೂರ್

ಶಾರ್ದೂಲ್ ಅಭ್ಯಾಸಕ್ಕಾಗಿ ತಮ್ಮ ತವರೂರು ಪಾಲ್ಘರ್‌ನಿಂದ ದಿನವೂ ಮುಂಬೈಗೆ ಪ್ರಯಾಣಿಸಬೇಕಿತ್ತು. ಏಕೆಂದರೆ ಅವರ ಊರಿನಲ್ಲಿ ಕ್ರಿಕೆಟ್ ತರಬೇತಿಗೆ ಯಾವುದೇ ಸೌಲಭ್ಯವೇ ಇರಲಿಲ್ಲ. ಪ್ರತಿದಿನ 90 ಕಿ.ಮೀ ದೂರದ ಮುಂಬೈನ ಬೊಯ್ಸರ್‌ಗೆ ಪ್ರಯಾಣ. ಅಂದರೆ ಪ್ರತಿದಿನ ಹೋಗಿ–ಬರುವ ಹಾದಿ ಸುಮಾರು 180 ಕಿ.ಮೀ ಮತ್ತು ಒಟ್ಟು ಆರು ತಾಸುಗಳ ಅವಧಿ. ಅದೂ ಮಣಭಾರದ ಕ್ರಿಕೆಟ್ ಕಿಟ್‌ ಹೊತ್ತುಕೊಂಡು! ಬಹಳ ದಿನಗಳವರೆಗೆ ಈ ಕಷ್ಟ ಅನುಭವಿಸಿಯೂ ಅಭ್ಯಾಸ ಮಾಡಿದರು. ಅವರ ಬೌಲಿಂಗ್ ಮತ್ತು ಅವರ ಈ ಪ್ರಯಾಣದ ಕಾರಣಕ್ಕೆ ಆಪ್ತವಲಯದಲ್ಲಿ ’ಪಾಲ್ಘರ್ ಎಕ್ಸ್‌ಪ್ರೆಸ್‌‘ ಎಂದೇ ಹೆಸರಾದರು. ಅದೊಂದು ದಿನ ಶಾರ್ದೂಲ್ ಅವರ ಅಪ್ಪ–ಅಮ್ಮನ ಮನವೊಲಿಸಿದ ದಿನೇಶ್ ಲಾಡ್ ತಮ್ಮ ಮನೆಯಲ್ಲಿಯೇ ಉಳಿಯುವ ವ್ಯವಸ್ಥೆ ಮಾಡಿದರು. ಅದರಿಂದಾಗಿ ಅಭ್ಯಾಸಕ್ಕೆ ಹೆಚ್ಚಿನ ಸಮಯ ಸಿಕ್ಕಿತು. ಮೊದಮೊದಲು ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಶಾರ್ದೂಲ್‌ ಅವರನ್ನು ಲಾಡ್ ಅವರು ಮಧ್ಯಮವೇಗಿಯನ್ನಾಗಿ ರೂಪುಗೊಳಿಸಿದರು.

ಶಾಲೆಯಿಂದ ಮುಂಬೈ ತಂಡದವರೆಗೆ ಬೆಳೆದ ನಂತರವೂ ಅಸ್ಥಿರತೆ ಕಾಡಿತ್ತು. 2012ರ ರಣಜಿ ಋತುವಿನಲ್ಲಿ ರಾಜಸ್ಥಾನ ಎದುರಿನ ಪಂದ್ಯದಲ್ಲಿ ಶಾರ್ದೂಲ್ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ 23 ಓವರ್‌ ಬೌಲಿಂಗ್ ಮಾಡಿದ್ದ ಅವರು ಪಡೆದಿದ್ದು ಒಂದೇ ವಿಕೆಟ್. ಅದರಿಂದಾಗಿ ನಿರಂತರ ಅವಕಾಶಗಳು ಸಿಗಲಿಲ್ಲ. ಮತ್ತೆ ನೆಟ್ಸ್‌ನಲ್ಲಿ ತಮ್ಮ ಸ್ವಿಂಗ್‌ ಎಸೆತಗಳಿಗೆ ಸಾಣೆ ಹಿಡಿಯುವ ಕೆಲಸಕ್ಕೆ ಮುಂದಾದರು. ಅವರ ತಾಳ್ಮೆಯ ಗುಣವೇ ಶಕ್ತಿಯಾಯಿತು. 2013–14ರ ರಣಜಿ ಋತುವಿನಲ್ಲಿ 48 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಆ ವರ್ಷ ಕರ್ನಾಟಕದ ಆರ್‌. ವಿನಯಕುಮಾರ್ ಅವರೊಂದಿಗೆ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಹಂಚಿಕೊಂಡರು.

2015–16 ರಣಜಿ ಟೂರ್ನಿಯಲ್ಲಿಯೂ 41 ವಿಕೆಟ್‌ಗಳನ್ನು ಕಿತ್ತು ತಮ್ಮ ಬುಟ್ಟಿಗೆ ಹಾಕಿಕೊಂಡರು. ಫೈನಲ್ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿದ ಅವರು ಪ್ರಶಸ್ತಿ ಗೆಲುವಿನ ರೂವಾರಿಯಾದರು. ವಿಜಯ್ ಹಜಾರೆ ಟೂರ್ನಿಯಲ್ಲಿಯೂ ತಮ್ಮ ಬೌಲಿಂಗ್‌ ಕೌಶಲ ಮೆರೆದ ಶಾರ್ದೂಲ್ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್‌ಗಳ ಗಮನ ಸೆಳೆದರು. ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹಮಾಲೀಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ₹ 20 ಲಕ್ಷ ನೀಡಿ ಶಾರ್ದೂಲ್ ಅವರನ್ನು ಖರೀದಿಸಿತು. ಈಗ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಇದ್ದಾರೆ. ಚೆನ್ನೈ ತಂಡದಲ್ಲಿದ್ದಾಗ ಮಹೇಂದ್ರಸಿಂಗ್ ಧೋನಿ, ವಾಟ್ಸನ್ ಮತ್ತು ಹರಭಜನ್ ಸಿಂಗ್ ಅವರ ಸಾಂಗತ್ಯದಿಂದ ಕಲಿತ ಪಾಠಗಳು ಅಸಂಖ್ಯ. ಅವು ಶಾರ್ದೂಲ್ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಮೆಟ್ಟಿಲುಗಳಾದವು. ಸಣ್ಣ ಪಟ್ಟಣವೊಂದರ ಮಧ್ಯಮವರ್ಗದ ಕುಟುಂಬದ ಹುಡುಗ ಕೋಟ್ಯಧೀಶನಾದರು.

ಭಾರತ ಏಕದಿನ ತಂಡದಲ್ಲಿ 2017ರಲ್ಲಿ ಆಡುವ ಅವಕಾಶ ಲಭಿಸಿತು. ಆದರೆ, ಯಾರಾದರೂ ಗಾಯಗೊಂಡಾಗಲಷ್ಟೇ ಇವರಿಗೆ ಬುಲಾವ್ ಬರುತ್ತಿತ್ತು. 2018ರಲ್ಲಿ ಟಿ20 ಮಾದರಿಗೂ ಪದಾರ್ಪಣೆ ಮಾಡಿದರು. 12 ಏಕದಿನ ಪಂದ್ಯಗಳಲ್ಲಿ 15 ವಿಕೆಟ್ ಮತ್ತು 17 ಟಿ20 ಪಂದ್ಯಗಳಿಂದ 23 ವಿಕೆಟ್ ಗಳಿಸಿದ್ದಾರೆ. 2018ರಲ್ಲಿ ಹೈದರಾಬಾದಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆದರೆ ಅದರಲ್ಲಿ ಹತ್ತು ಎಸೆತಗಳನ್ನು ಹಾಕಲಷ್ಟೇ ಸಾಧ್ಯವಾಗಿತ್ತು. ಗಾಯಗೊಂಡಿದ್ದ ಅವರು ಹೊರಬಿದ್ದಿದ್ದರು. ನಂತರ ಮತ್ತೊಂದು ಟೆಸ್ಟ್ ಆಡಲು ಅವರು ಇಲ್ಲಿಯವರೆಗೆ ಕಾಯಬೇಕಾಯಿತು.

ಜಸ್‌ಪ್ರೀತ್ ಬೂಮ್ರಾ ಗಾಯಗೊಂಡ ಕಾರಣ ಸಿಕ್ಕ ಅವಕಾಶವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಭಾರತ ತಂಡಕ್ಕೆ ಮತ್ತೊಬ್ಬ ಆಲ್‌ರೌಂಡರ್ ಆಗಿ ಶಾರ್ದೂಲ್ ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ. ಮುಂಬರುವ ಇಂಗ್ಲೆಂಡ್‌ ಎದುರಿನ ಸರಣಿಗೆ ತಂಡದ ಆಯ್ಕೆ ನಡೆದಾಗ 29 ವರ್ಷದ ಶಾರ್ದೂಲ್ ನಗಣ್ಯರಾಗುವುದಿಲ್ಲ ಎಂಬುದಂತೂ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT