ಬುಧವಾರ, ಜನವರಿ 27, 2021
16 °C

PV Web Exclusive: ಹನುಮನ ಸಂಯಮದ ಗುಟ್ಟುಗಳು...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಹನುಮ ವಿಹಾರಿಯ ಸಂಯಮದ ಗುಟ್ಟುಗಳು ಹಲವು. ಕಳೆದ ವರ್ಷ ಐಪಿಎಲ್‌ಗೆ ಯಾರೂ ತಮ್ಮನ್ನು ಹರಾಜು ಕೂಗದೇ ಇದ್ದಾಗಲೂ ಸ್ಥಿತಪ್ರಜ್ಞನಂತೆ ಇದ್ದ ಅವರ ಮನೋಬಲ ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್‌ನಲ್ಲಿ ಅನಾವರಣಗೊಂಡಿದ್ದು ಅವರನ್ನು ಬಲ್ಲವರಿಗೆ ಅಚ್ಚರಿಯೇನೂ ಅಲ್ಲ.

‘ಗೋಲ್ಡನ್ ರಿಟ್ರೀವರ್’ ಎಂಬ ಮಿಶ್ರತಳಿಯ ನಾಯಿಯೊಂದಿದೆ. ತಾಳಿಕೊಳ್ಳುವ ಗುಣಕ್ಕೆ ಅದು ಹೆಸರುವಾಸಿ. ಅಮೆರಿಕದಲ್ಲಿ ಎಷ್ಟೋ ಜನರು ಅದನ್ನು ಸಾಕುವುದೇ ತಾಳ್ಮೆಯನ್ನು ಮೆಚ್ಚಿ. ತಮ್ಮ ಒತ್ತಡದ ಸನ್ನಿವೇಶಗಳಲ್ಲಿ ಅದು ಕೊಡುವ ಸಂಯಮದ ಪ್ರತಿಕ್ರಿಯೆ ಅವರ ಮನಸ್ಸನ್ನು ಮುದಗೊಳಿಸುತ್ತದೆ ಎನ್ನುವುದು ನಂಬಿಕೆ. ಭಾರತದಲ್ಲಿಯೂ ಈ ತಳಿಯ ನಾಯಿಯನ್ನು ಸಾಕುವವರಿದ್ದಾರೆ. ಅವರಲ್ಲಿ ಆಂಧ್ರಪ್ರದೇಶದ ಕ್ರಿಕೆಟಿಗ ಹನುಮ ವಿಹಾರಿ ಕೂಡ ಒಬ್ಬರು. ಅವರ ಬಳಿ ಡಾಲ್ಮೇಸಿಯನ್ ತಳಿಯ ನಾಯಿಯೂ ಇದೆ. ಅದು ಹೆಚ್ಚೇ ಅಪಾಯಕಾರಿ. ಗೋಲ್ಡನ್ ರಿಟ್ರೀವರ್‌ಗೆ ಅವರಿಟ್ಟಿರುವ ಹೆಸರು ಬೆಂಟ್ಲಿ. ಡಾಲ್ಮೇಸಿಯನ್‌ಗೆ ರ‍್ಯಾಂಡಿ. ಹನುಮ ವಿಹಾರಿ ಅವರ ಬೆಂಟ್ಲಿಯಂತೆ ತಾಳ್ಮೆಯ ಮೂರ್ತಿಯೂ ಹೌದು, ರ‍್ಯಾಂಡಿಯ ಹಾಗೆ ಅಪಾಯಕಾರಿಯೂ ಹೌದು.

ರಿಟ್ರೀವರ್‌ ನಾಯಿಯನ್ನು ಶ್ವಾನಕ್ರೀಡೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದು ವೇಗವಾಗಿ ಓಡಬಲ್ಲದು. ಆಘ್ರಾಣಿಸುವ ಶಕ್ತಿಯ ವಿಷಯದಲ್ಲೂ ಅದು ಮುಂದು. ಹಠಾತ್ತನೆ ಪ್ರತಿಕ್ರಿಯಿಸದೆ, ತಲೆ ಓಡಿಸಿ ವರ್ತಿಸುವುದರಿಂದಾಗಿ ಜನಪ್ರಿಯ. ಮೊನ್ನೆ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಹನುಮ ವಿಹಾರಿ ಆಡಿದ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನ ಅತಿ ತಾಳ್ಮೆಯ ಆಟ ನೋಡಿದಾಗ ಅವರ ನಾಯಿಯ ಈ ಗುಣಗಳೆಲ್ಲ ತಂತಾವೇ ನೆನಪಾದವು. 161 ಎಸೆತಗಳನ್ನು ಆಡಿ 23 ರನ್‌ ಮಾತ್ರ ಗಳಿಸಿ ಹನುಮ ಔಟಾಗದೆ ಉಳಿದರು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಹ್ಯಾಜಲ್‌ವುಡ್‌, ನೇಥನ್ ಲಯಾನ್ ತರಹದ ಮಾಗಿದ ಬೌಲರ್‌ಗಳ ಎಸೆತವೈವಿಧ್ಯವನ್ನು ಅಷ್ಟು ಸುದೀರ್ಘಾವಧಿ ತಾಳಿಕೊಳ್ಳುವುದು ವಿಶೇಷವೇ. ಅವರ ಆಟ ಶತಕದಾಟಕ್ಕೆ ಸರಿಸಮ ಎಂದು ಆರ್‌.ಅಶ್ವಿನಿ ಶಹಬ್ಬಾಸ್‌ಗಿರಿ ಕೊಟ್ಟಿದ್ದು, ನಾಯಕ ರಹಾನೆ ಸಂಯಮದಾಟವನ್ನು ಹೊಗಳಿದ್ದು ಅರ್ಥಪೂರ್ಣ.

ಸಂಯಮ ಹಾಗೂ ಮನೋಬಲ ಬಾಲ್ಯದಿಂದಲೇ ಹನುಮ ವಿಹಾರಿಗೆ ಒಲಿದಿವೆ. ಅವರ ತಂದೆ ತೀರಿಹೋದಾಗ ಇನ್ನೂ ಹತ್ತರ ಬಾಲಕ. ಆ ಅವಘಡದ ಆಘಾತ ಆವರಿಸಿಕೊಳ್ಳುವ ಮೊದಲೇ ಮೂರನೇ ದಿನದಲ್ಲೇ ಶಾಲಾ ಕ್ರಿಕೆಟ್‌ ಫೈನಲ್ ಕ್ರಿಕೆಟ್‌ ಆಡಲು ಕಣಕ್ಕೆ ಇಳಿದಿದ್ದ. ಆ ದಿನವನ್ನು ಬಾಲ್ಯದ ಕೋಚ್ ಜಾನ್ ಮನೋಜ್ ಈಗಲೂ ಮೆಲುಕುಹಾಕುತ್ತಾರೆ. ‘ಅವತ್ತು ಅವನು ಆಡಲು ಬಂದಾಗ ಏನು ಹೇಳಬೇಕೋ ತೋಚಿರಲಿಲ್ಲ. ಎಂಬತ್ತು ಚಿಲ್ಲರೆ ರನ್‌ಗಳನ್ನು ಹೊಡೆದ. ಒಳಗೆ ಎಂಥ ನೋವಿತ್ತು ಎನ್ನುವುದನ್ನು ನಾವೆಲ್ಲರೂ ಊಹಿಸಬಲ್ಲೆವಷ್ಟೆ. ಅದನ್ನು ಮೀರಿ ಆಟದಲ್ಲೇ ಭವಿಷ್ಯವಿದೆ ಎಂದುಕೊಂಡು ಆಡಲು ಮನಸ್ಸು ತುಂಬಾ ಗಟ್ಟಿಯಾಗಿರಬೇಕು’ ಎನ್ನುವ ಅವರ ಮಾತಿಗೆ ಈಗ ಇನ್ನೂ ದೊಡ್ಡ ಅರ್ಥ ಪ್ರಾಪ್ತಿಯಾಗಿದೆ.

ಹನುಮ ವಿಹಾರಿ ದೇಸಿ ಕ್ರಿಕೆಟ್‌ನಲ್ಲಿ ಸಂಯಮದಿಂದಲೇ ಗುರುತಾದವರು. 90 ಪ್ರಥಮ ದರ್ಜೆ ಪಂದ್ಯಗಳಲ್ಲಿ 56.75ರ ಸರಾಸರಿಯಲ್ಲಿ 7,094 ರನ್‌ಗಳನ್ನು ಕಲೆಹಾಕಿದ್ದಾರೆ. 21 ಶತಕ, 36 ಅರ್ಧ ಶತಕ ಅವರ ತಾಳ್ಮೆಗೆ ಕನ್ನಡಿ ಹಿಡಿಯುತ್ತವೆ. ಏಳು ಋತುಗಳಲ್ಲಿ ರಣಜಿ ಕ್ರಿಕೆಟ್ ಆಡಿದರೂ ಒಂದೂ ತ್ರಿಶತಕ ದಾಖಲಿಸಲು ಆಗಲಿಲ್ಲವಲ್ಲ ಎಂದು ಅವರು 2017ರವರೆಗೆ ಕೊರಗುತ್ತಿದ್ದರು. ಆ ವರ್ಷ ಆ ಕೊರಗನ್ನು ನೀಗಿಕೊಂಡರು. ಒಡಿಶಾ ತಂಡದ ವಿರುದ್ಧ ಔಟಾಗದೆ 302 ರನ್‌ ಗಳಿಸಿದ ಮೇಲೆ ಆ ಕೊರಗು ನೀಗಿತು. 29 ಬೌಂಡರಿಗಳು ಹಾಗೂ 2 ಸಿಕ್ಸರ್‌ಗಳಿದ್ದ ಸ್ಮರಣೀಯ ಇನಿಂಗ್ಸ್‌ ಅದು. 682 ನಿಮಿಷ (ಸುಮಾರು ಹನ್ನೊಂದೂಕಾಲು ಗಂಟೆ) ಅದೊಂದು ಇನಿಂಗ್ಸ್‌ ಕಟ್ಟಲು ಬೆವರು ಹರಿಸಿದ್ದರು. ಅಷ್ಟೇ ಅಲ್ಲ, ಆ ವರ್ಷ ರಣಜಿ ಋತುವಿನಲ್ಲಿ ಅವರು ಆರು ಪಂದ್ಯಗಳಲ್ಲಿ 752 ರನ್‌ಗಳನ್ನು ಸೇರಿಸಿ, ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಇದುವರೆಗೆ ಅವರು 12 ಟೆಸ್ಟ್‌ಗಳನ್ನು ಆಡಿದ್ದಾರೆ. ಆ ಪೈಕಿ 11 ವಿದೇಶಿ ಮೈದಾನಗಳಲ್ಲಿ ಆಡಿದವು. 32.84ರ ಸರಾಸರಿಯಲ್ಲಿ 624 ರನ್‌ಗಳನ್ನಷ್ಟೇ ಅವರು ಗಳಿಸಿದ್ದಾರೆ. ಒಂದು ಶತಕ, ನಾಲ್ಕು ಅರ್ಧ ಶತಕ. ಅದ್ಭುತ ಎನಿಸದೇ ಇದ್ದರೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುದುರಿಕೊಳ್ಳಲು ಬೇಕಾದ ಲಕ್ಷಣವನ್ನು ಈ ಅಂಕಿಅಂಶ ತೋರಿಸುತ್ತದೆ. ಕಿಂಗ್ಸ್‌ಟನ್‌ನಲ್ಲಿ 2019ರಲ್ಲಿ ವಿಂಡೀಸ್‌ ವಿರುದ್ಧ ಚೊಚ್ಚಲ ಶತಕ ಗಳಿಸಿದಾಗ ಕಠಿಣ ಪಿಚ್‌ನಲ್ಲೂ ಹೇಗೆ ಆಡಬೇಕು ಎಂಬ ಪ್ರಾತ್ಯಕ್ಷಿಕೆ ಸಿಕ್ಕಿತ್ತು. ಅದಕ್ಕೂ ಹಿಂದಿನ ಪಂದ್ಯದಲ್ಲಿ ಬರೀ 128 ಎಸೆತಗಳಲ್ಲಿ 93 ರನ್‌ಗಳನ್ನು ವಿಂಡೀಸ್‌ ಎದುರು ಎರಡನೇ ಇನಿಂಗ್ಸ್‌ನಲ್ಲಿ ಕಲೆಹಾಕಿ ಪ್ರಾಬಲ್ಯ ಸಾಧಿಸಲು ಕಾರಣರಾಗಿದ್ದರು. ಚೊಚ್ಚಲ ಟೆಸ್ಟ್‌ನಲ್ಲೇ ಇಂಗ್ಲೆಂಡ್‌ ವಿರುದ್ಧ ಅರ್ಧಶತಕ ಹೊಡೆದು, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದನ್ನೂ ಮರೆಯುವ ಹಾಗಿಲ್ಲ.

2020ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಹರಾಜು ನಡೆದಾಗ ಯಾರೂ ಹನುಮ ವಿಹಾರಿ ಹೆಸರನ್ನು ಕೂಗಿರಲಿಲ್ಲ. ತಾಳ್ಮೆಯನ್ನೇ ಮೈವೆತ್ತಂತೆ ಆಡುವ ಕ್ರಿಕೆಟಿಗ ಐಪಿಎಲ್‌ನ ವೇಗಕ್ಕೆ ಅಷ್ಟಾಗಿ ಬೇಕಾಗುವುದಿಲ್ಲ. ಆದರೆ, ಈ ಆಟಗಾರನಿಗೆ ಬೇರೆ ಬೇರೆಯ ಪಾತ್ರಗಳನ್ನು ನಿರ್ವಹಿಸುವ ಛಾತಿ ಇರುವುದನ್ನು ವಿರಾಟ್ ಕೊಹ್ಲಿ ತರಹದ ಅನುಭವಿ ನಾಯಕ ಕೂಡ ಗುರುತಿಸಿದ್ದಾರೆ. ಅದರ ಫಲವಾಗಿಯೇ ಅವರು ಟೆಸ್ಟ್‌ ತಂಡದಲ್ಲಿ ಈಗಲೂ ಸವಾಲುಗಳನ್ನು ಎದುರಿಸಲು ಅವಕಾಶ ಪಡೆಯುತ್ತಿರುವುದು. ಇಂಗ್ಲೆಂಡ್, ವಿಂಡೀಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದ ನೆಲಗಳಲ್ಲಿ ಅಲ್ಲಿನ ವೇಗಿಗಳನ್ನು ಎದುರಿಸಿ ಆಡುವುದೇ ಒಂದು ಕಮ್ಮಟದಂತೆ. ಇದುವರೆಗೆ ಹನುಮ ವಿಹಾರಿಗೆ ಸಿಕ್ಕಿರುವುದು ಅಂಥದ್ದೇ ಸಾಣೆ.  

1998ರಲ್ಲಿ ವಿವಿಎಸ್‌ ಲಕ್ಷ್ಮಣ್ ಜೆಮ್‌ಷೆಡ್‌ಪುರದಲ್ಲಿ ಬಿಹಾರದ ವಿರುದ್ಧ ರಣಜಿ ಪಂದ್ಯದಲ್ಲಿ 301 ರನ್ ಗಳಿಸಿದ್ದರು. ಹತ್ತೂಕಾಲು ತಾಸಿನ ಇನಿಂಗ್ಸ್‌ ಅದು. ಎರಡು ವರ್ಷಗಳ ನಂತರ ರಣಜಿ ಋತುವಿನಲ್ಲೇ ಕರ್ನಾಟಕದ ಎದುರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದೇ ಲಕ್ಷ್ಮಣ್  353 ಹೊಡೆದರು. ಹನ್ನೆರಡೂವರೆ ತಾಸು ಬೇಡಿದ ಇನಿಂಗ್ಸ್ ಅದು. ಹೈದರಾಬಾದ್‌ನ ಈ ಆಟಗಾರನನ್ನು ಆರಾಧಿಸುತ್ತಾ, ಸಚಿನ್ ತೆಂಡೂಲ್ಕರ್ ಪ್ರತಿಭೆಯನ್ನು ಗಮನಿಸುತ್ತಾ ಬಂದವರು ಹನುಮ. ಲಕ್ಷ್ಮಣ್ ತರಹವೇ ಹೈದರಾಬಾದಿ ಎನ್ನಿಸಿಕೊಂಡು ಅವರದ್ದೇ ಸಂಯಮವನ್ನು ಅಳವಡಿಸಿಕೊಂಡದ್ದು ವಿಹಾರಿ ವೈಶಿಷ್ಟ್ಯ.

ರಾಹುಲ್ ದ್ರಾವಿಡ್ 2007ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಇನಿಂಗ್ಸ್‌ ಒಂದರಲ್ಲಿ 96 ಎಸೆತಗಳನ್ನು ಆಡಿ ಬರೀ 12 ರನ್ ಗಳಿಸಿದ್ದರು. 140 ನಿಮಿಷಗಳ ಆಟ ಅದು. ಯಶ್‌ಪಾಲ್‌ ಶರ್ಮ ಅದೇ ನೆಲದಲ್ಲಿ 1981ರಲ್ಲಿ ಇಂಗ್ಲೆಂಡ್‌ ಎದುರೇ 157 ಎಸೆತಗಳನ್ನು ಆಡಿ ಬರೀ 13 ರನ್ ಕಲೆಹಾಕಿ ಗೋಳುಹೊಯ್ದುಕೊಂಡಿದ್ದರು. ವೇಗದ ಬ್ಯಾಟಿಂಗ್‌ನಿಂದಾಗಿಯೇ ಜನಪ್ರಿಯರಾಗಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ದೆಹಲಿಯಲ್ಲಿ 2015ರಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಗೆಲುವು ದಕ್ಕದೇ ಇರಲಿ ಎಂದು 244 ಎಸೆತಗಳನ್ನು ಆಡಿ ಕೇವಲ 43 ರನ್‌ ಗಳಿಸಿದ್ದ ಇನಿಂಗ್ಸ್‌ ಅನ್ನೂ ಮರೆಯಲಾಗದು. ಸುಮಾರು ಆರು ತಾಸು ಅವರು ಕ್ರೀಸ್‌ನಲ್ಲಿ ಲಂಗರು ಹಾಕಿದ್ದರು. ಅದೇ ಪಂದ್ಯದಲ್ಲಿ ಅವರದ್ದೇ ತಂಡದ ಹಷೀಮ್ ಆಮ್ಲ ಕೂಡ 289 ನಿಮಿಷ ಔಟಾಗದೆ ಉಳಿದು, ಬರೀ 25 ರನ್ ಸೇರಿಸಿದ್ದರು. ಇಂತಹ ಪರಮ ಸಂಯಮದ ಇನಿಂಗ್ಸ್‌ಗಳ ಯಾದಿಗೆ ಈಗ ಹನುಮ ವಿಹಾರಿಯ ತಾಳ್ಮೆಯ ಅಜೇಯ 23 ಸಹ ಸೇರಿಕೊಂಡಿದೆ.

ಭಾರತವು ಇದುವರೆಗೆ ಟೆಸ್ಟ್‌ ಪಂದ್ಯವೊಂದನ್ನು ಡ್ರಾ ಮಾಡಿಕೊಳ್ಳಲು ಎಂದೂ ನಾಲ್ಕನೇ ಇನಿಂಗ್ಸ್‌ನಲ್ಲಿ 131 ಓವರ್‌ ಆಡಿರಲಿಲ್ಲ. ಆಸ್ಟ್ರೇಲಿಯಾ ಎದುರು ಅಂಥದೊಂದು ದಾಖಲೆ ಬರೆಯಿತು. ಆ ಪೈಕಿ 27 ಓವರ್‌ಗಳನ್ನು ಹನುಮ ವಿಹಾರಿ ಒಬ್ಬರೇ ಆಡಿದಂತಾಯಿತು. 2016ರಲ್ಲಿ ದೆಹಲಿಯ ರಿಷಭ್ ಪಂತ್ ಕೂಡ ರಣಜಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರದ ಎದುರು 308 ರನ್ ಹೊಡೆದಿದ್ದರು. ಅಷ್ಟು ದೊಡ್ಡ ಮೊತ್ತ ದಾಖಲಿಸಲು ಅವರಿಗೆ ಎಂಟೂವರೆ ತಾಸು ಸಾಕಾಗಿತ್ತು, ಆ ಇನಿಂಗ್ಸ್‌ನಲ್ಲಿಯೂ 9 ಸಿಕ್ಸರ್‌ ಹಾಗೂ 42 ಬೌಂಡರಿಗಳಿದ್ದವು. ಸಿಡ್ನಿಯಲ್ಲಿ ಅವರು ಆಸ್ಟ್ರೇಲಿಯಾ ಎದುರು ಎರಡನೇ ಇನಿಂಗ್ಸ್‌ನಲ್ಲಿ 97 ರನ್‌ಗಳನ್ನು ಪಟಪಟನೆ ಸೇರಿಸಿದಾಗ ಅವರ ಆ ಹಳೆಯ ಆಟ ನೆನಪಾಯಿತು. ಅದಕ್ಕೆ ಸಾಕ್ಷಿಯಾಗಿಯೂ, ಅದನ್ನು ಪ್ರಲೋಭನೆಯಾಗಿ ಸ್ವೀಕರಿಸದ ಹನುಮ ವಿಹಾರಿಯಂತಹ ತಾಳ್ಮೆಯ ಮೂರ್ತಿಗಳ ಅಗತ್ಯ ತಂಡಕ್ಕೆ ಸದಾ ಇರುತ್ತದೆ. ಹನುಮನ ತಾಯಿ ವಿಜಯಲಕ್ಷ್ಮೀ ಕ್ರಿಕೆಟ್‌ ಆಟದ ಸೂಕ್ಷ್ಮಗಳ ಕುರಿತು ಮಗನ ಜತೆ ಮಾತನಾಡುವಾಗಲೆಲ್ಲ ತಾಳ್ಮೆಯ ಪಾಠ ತಂತಾನೇ ನಡೆಯುತ್ತಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು