ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ನಿಂದನೆ ಗೂಂಡಾ ವರ್ತನೆಯ ಪರಮಾವಧಿ: ವಿರಾಟ್ ಕೊಹ್ಲಿ

Last Updated 10 ಜನವರಿ 2021, 19:02 IST
ಅಕ್ಷರ ಗಾತ್ರ

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರ ವಿರುದ್ಧ ಎದುರಾಗಿರುವ ಜನಾಂಗೀಯ ನಿಂದನೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ, ಇದು 'ಗೂಂಡಾ ವರ್ತನೆಯ ಪರಮಾವಧಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಾಂಗೀಯ ನಿಂದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಬೌಂಡರಿ ಗೆರೆಯಲ್ಲಿಇಂತಹ ಅಸಹ್ಯವೆನಿಸುವ ಅನೇಕ ಘಟನೆಗಳಿಂದ ಹಾದು ಹೋಗಿರುವುದರಿಂದ ಇದು ರೌಡಿ ವರ್ತನೆಯ ಪರಮಾವಧಿಯಾಗಿದೆ. ಮೈದಾನದಲ್ಲಿ ಇಂತಹ ಘಟನೆ ಸಂಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.

ಈ ಘಟನೆಯನ್ನು ತುರ್ತಾಗಿ ಅಷ್ಟೇ ಗಂಭೀರತೆಯಿಂದ ನೋಡಬೇಕಾಗಿದೆ. ಅಲ್ಲದೆ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ತಿಳಿಸಿದರು.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬೂಮ್ರಾ ಜನಾಂಗೀಯ ನಿಂದನೆಯನ್ನು ಎದುರಿಸಿದ್ದರು. ಈ ಪೈಕಿ ಸಿರಾಜ್ ವಿರುದ್ಧ ನಾಲ್ಕನೇ ದಿನದಾಟದ ನಡುವೆಯೂ ಪ್ರೇಕ್ಷಕ ಗ್ಯಾಲರಿಯಿಂದ ನಿಂದನೆ ಎದುರಾಗಿತ್ತು.

ತಕ್ಷಣ ನಾಯಕ ಅಜಿಂಕ್ಯ ರಹಾನೆ ಗಮನಕ್ಕೆ ತಂದು ಅಂಪೈರ್‌ಗೆ ದೂರು ಸಲ್ಲಿಸಿದ್ದರು. ಬಳಿಕ ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಆಪಾದಿತ ಆರು ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರ ಹಾಕಲಾಗಿತ್ತು. ಇದರಿಂದ ಪಂದ್ಯಕ್ಕೆ ಸುಮಾರು 10 ನಿಮಿಷಗಳಷ್ಟು ಅಡಚಣೆಯಾಗಿತ್ತು.

ಜನಾಂಗೀಯ ನಿಂದನೆ ಘಟನೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾವು, ಭಾರತ ಕ್ರಿಕೆಟ್ ತಂಡದಕ್ಷಮೆಯಾಚಿಸಿದೆ. ಅತ್ತ ಬಿಸಿಸಿಐ ದೂರಿನ ಮೆರೆಗೆ ಐಸಿಸಿ ತನಿಖೆಯನ್ನು ನಡೆಸುತ್ತಿದೆ.

ಅಡಿಲೇಡ್‌ ಓವಲ್‌ನಲ್ಲಿ ನಡೆದ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಬಳಿಕ ಪಿತೃತ್ವ ರಜೆಯ ಮೆರೆಗೆ ತಾಯ್ನಾಡಿಗೆ ಹಿಂತಿರುಗಿದ್ದರು.

ಕೊಹ್ಲಿ ಇರುತ್ತಿದ್ದರೆ...
ಇನ್ನು ಕೆಲವು ಅಭಿಮಾನಿಗಳು ಭಾರತೀಯ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಯಾಗುವಾಗ ಅಲ್ಲಿ ವಿರಾಟ್ ಕೊಹ್ಲಿ ಇರುತ್ತಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮದೇ ಧಾಟಿಯಲ್ಲಿ ಎದುರಾಳಿಗಳಿಗೆ ಉತ್ತರ ನೀಡುತ್ತಿದ್ದರು ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ವರದಿ ನೀಡಲು ಐಸಿಸಿ ಸೂಚನೆ

ಸಿಡ್ನಿಯಲ್ಲಿ ನಡೆದ ಜನಾಂಗೀಯ ನಿಂದನೆ ಪ್ರಕರ ಣವನ್ನು ಐಸಿಸಿ ತೀವ್ರವಾಗಿ ಖಂಡಿಸಿದೆ. ಈ ಘಟನೆ ಬಗ್ಗೆ ತೆಗೆದುಕೊಂಡಿರುವ ಕ್ರಮದ ಕುರಿತು ಸಮಗ್ರ ವರದಿ ನೀಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸೂಚಿಸಿದೆ. ’ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ‘ ಎಂದೂ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ‘ವರ್ಣಭೇದ ನೀತಿ ನಿಷೇಧವು ನಮ್ಮ ನೀತಿ ಸಂಹಿತೆಯ ಪ್ರಮುಖ ಭಾಗವಾಗಿದೆ. ಕಟ್ಟುನಿಟ್ಟಾದ ನಿಯಮವೂ ಐಸಿಸಿಯಲ್ಲಿದೆ’ ಎಂದು ಮುಖ್ಯ ಕಾರ್ಯನಿರ್ವಾಹಕ ಮನು ಸವಾನಿ ತಿಳಿಸಿದ್ದಾರೆ. ಬಿಸಿಸಿಐ ದೂರು: ಸಿರಾಜ್ ಅವರನ್ನು ನಿಂದಿಸಿದ ವಿಷಯವನ್ನು ಕೂಡಲೇ ಫೀಲ್ಡ್‌ ಅಂಪೈರ್‌ಗಳ ಗಮನಕ್ಕೆ ತರಲಾಯಿತು. ಬೂಮ್ರಾ ಅವರನ್ನೂ ಕೆಲವು ಪ್ರೇಕ್ಷಕರು ನಿಂದಿಸುತ್ತಿದ್ದರು. ಶನಿವಾರವೂ ಇಂತಹದೇ ಘಟನೆ ನಡೆದಿತ್ತು.

ಭಾರತ ಬೆಂಬಲಿಸಿ ಮನಗೆದ್ದ ಪೇನ್

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾ ತಂಡದ ಕೆಲವು ಅಭಿಮಾನಿಗಳಿಂದ ಜನಾಂಗೀಯ ನಿಂದನೆಯ ಕಹಿ ಅನುಭವಿಸಿದ ಭಾರತದ ಆಟಗಾರರ ಬೆಂಬಲಕ್ಕೆ ನಿಂತ ಆತಿಥೇಯ ತಂಡದ ನಾಯಕ ಟಿಮ್ ಪೇನ್ ಮನಗೆದ್ದರು.

ಭಾನುವಾರ ಟಿಮ್ ಪೇನ್ ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿಯೇ ಈ ಅಹಿತಕರ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಆಟ ಸ್ಥಗಿತವಾಯಿತು. ಅಗ ಗುಂಪುಗೂಡಿ ನಿಂತಿದ್ದ ಭಾರತ ತಂಡದತ್ತ ನಡೆದ ಟಿಮ್ ಪೇನ್ ಮಾತನಾಡಿದರು.

‘ಈ ಹಿಂದೆಯೂ ಇಂತಹ ಘಟನೆಯಾಗಿದೆ’

‘ಈ ಘಟನೆಯಿಂದಾಗಿರುವ ಬೇಸರವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ನಾನು ನಾಲ್ಕನೇ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದೇನೆ. ಸಿಡ್ನಿಯಲ್ಲಿ ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ‘ ಎಂದು ಭಾರತ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದರು. ದಿನದಾಟದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರೇಕ್ಷಕರ ಇಂತಹ ವರ್ತನೆಗಳಿಗೆ ಒಂದೆರಡು ಸಲ ನಮ್ಮ ಆಟಗಾರರೂ ಪ್ರತಿಕ್ರಿಯೆ ಕೊಟ್ಟು ತೊಂದರೆಗೊಳಗಾದರು. ಆದರೆ ಗ್ಯಾಲರಿಯಿಂದ ಅತ್ಯಂತ ಕೀಳುಮಟ್ಟದ ಪದ ಬಳಕೆ ಕೇಳಿಬರುತ್ತದೆ. ನಾವು ಸಿಟ್ಟಿಗೆದ್ದು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತಾರೆ. ಅದೊಂದು ಅಸಹ್ಯಕರ ನಡವಳಿಕೆ‘ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT