ಕಿಂಗ್ ಕೊಹ್ಲಿಗೆ ದ್ರಾವಿಡ್ ಬ್ಯಾಟಿಂಗ್ ಟಿಪ್ಸ್: ಟೀಮ್ ಇಂಡಿಯಾ ಭರದ ಸಿದ್ಧತೆ

ಸೆಂಚುರಿಯನ್: ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಬಹಳ ಮಹತ್ವದ ಪಂದ್ಯವಾಗಲಿದೆ.
ಏಕದಿನ ತಂಡದ ನಾಯಕತ್ವ ಕಳೆದುಕೊಂಡ ನಂತರ ಕೊಹ್ಲಿ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಕಳೆದ ಎರಡು ವರ್ಷಗಳಿಂದ ಶತಕ ಹೊಡೆದಿಲ್ಲ. ಬ್ಯಾಟಿಂಗ್ನಲ್ಲಿಯೂ ಸ್ಥಿರತೆ ಇಲ್ಲ. ಆದ್ದರಿಂದ ಈ ಸರಣಿಯಲ್ಲಿ ಅವರು ತಮ್ಮ ಲಯಕ್ಕೆ ಮರಳಿ ‘ರನ್ ಯಂತ್ರ‘ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಅವರ ನೆರವಿಗೆ ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ನಿಂತಿದ್ದಾರೆ.
ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ವಿರಾಟ್ ನೆಟ್ಸ್ನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ದ್ರಾವಿಡ್ ವಿಶೇಷ ನಿಗಾ ವಹಿಸಿದರು. ವಿರಾಟ್ ಬ್ಯಾಟಿಂಗ್ ಶೈಲಿ, ಹೊಡೆತಗಳ ಆಯ್ಕೆ, ಪದಚಲನೆಗಳನ್ನು ಗಮನವಿಟ್ಟು ನೋಡಿದರು. ವಿರಾಟ್ ಜೊತೆ ಸಮಾಲೋಚನೆ ನಡೆಸಿ, ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿದರು.
ಭಾರತ ತಂಡದ ಅಭ್ಯಾಸದ ಚಿತ್ರಗಳು ಮತ್ತು ವಿಡಿಯೊ ತುಣುಕನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ಟ್ವಿಟರ್ನಲ್ಲಿ ಪ್ರಕಟಿಸಿದೆ.
ವಿರಾಟ್ 2019ರ ನವೆಂಬರ್ನಲ್ಲಿ ಶತಕ ಬಾರಿಸಿದ್ದೇ ಕೊನೆ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲಿ 50ಕ್ಕಿಂತ ಹೆಚ್ಚಿನ ರನ್ ಸರಾಸರಿ ಹೊಂದಿರುವ ಹೆಗ್ಗಳಿಕೆ ಅವರದ್ದು. ಲಯಕ್ಕೆ ಮರಳಲು ಚೇತೇಶ್ವರ್ ಪೂಜಾರ ಕೂಡ ಹಲವು ದಿನಗಳಿಂದ ಪರದಾಡುತ್ತಿದ್ದಾರೆ. ಆದ್ದರಿಂದ ಮಧ್ಯಮಕ್ರಮಾಂಕವನ್ನು ಬಲಿಷ್ಠಗೊಳಿಸಲು ಕೊಹ್ಲಿ ಬ್ಯಾಟಿಂಗ್ ಪ್ರಮುಖವಾಗಲಿದೆ.
ತಂಡದ ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಆರ್. ಆಶ್ವಿನ್ ಅವರ ಎಸೆತಗಳನ್ನು ಕೊಹ್ಲಿ ಎದುರಿಸಿದರು. ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಕೂಡ ಕೊಹ್ಲಿ ಮತ್ತು ಉಳಿದ ಬ್ಯಾಟರ್ಗಳಿಗೆ ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ: ಮುಂದಿನ ಮೂರು ದಿನಗಳ ಗುಣಮಟ್ಟದ ತರಬೇತಿ ನಿರ್ಣಾಯಕ: ದ್ರಾವಿಡ್
— BCCI (@BCCI) December 20, 2021
ಇದನ್ನೂ ಓದಿ: ಕೋವಿಡ್ ಆತಂಕ: ಭಾರತ– ದಕ್ಷಿಣ ಆಫ್ರಿಕಾ ಟೆಸ್ಟ್ಗೆ ಪ್ರೇಕ್ಷಕರಿಗಿಲ್ಲ ಅನುಮತಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.