ಸೋಮವಾರ, ಜುಲೈ 4, 2022
21 °C

ರಾಹುಲ್ ಸಲಹೆಯಿಂದ ಹೆಚ್ಚಿದ ಸಕಾರಾತ್ಮಕ ಮನೋಭಾವ: ಮಯಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:  'ರಣಜಿ  ಋತುವಿನಲ್ಲಿ ಬಹಳಷ್ಟು ರನ್‌ಗಳನ್ನು ಪೇರಿಸಿದ್ದೆ. ಭಾರತ ಎ ತಂಡದಲ್ಲಿಯೂ ಚೆನ್ನಾಗಿ ಆಡಿದ್ದೆ. ಆದರೂ ನಾನೇಕೆ ಭಾರತ ತಂಡಕ್ಕೆ ಆಯ್ಕೆಯಾಗುತ್ತಿಲ್ಲ ಎಂಬ ಚಿಂತೆ ಇತ್ತು. ಆಗ ರಾಹುಲ್ ದ್ರಾವಿಡ್ ಅವರು ನನ್ನ ದುಗುಡವನ್ನು ದೂರ ಮಾಡಿದರು‘ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಹೇಳಿದ್ದಾರೆ.

’ಅದೊಂದು ಸಲ ನಾನು ಈ ಕುರಿತು ರಾಹುಲ್ ಭಾಯ್ ಜೊತೆಗೆ ಚರ್ಚೆ ಮಾಡಿದೆ. ಆಗ ಅವರು, ನಿನ್ನ ಕೈಯಲ್ಲಿರುವುದೆಲ್ಲವನ್ನೂ ಮಾಡಿರುವೆ. ಕಠಿಣ ಪರಿಶ್ರಮದಿಂದ ಆಡಿದ್ದಿ. ಉತ್ತಮ ಬ್ಯಾಟಿಂಗ್ ಮೂಲಕ  ಈ ಹಂತಕ್ಕೆ ತಲುಪಿದ್ದಿಯಾ. ಆಯ್ಕೆ ಪ್ರಕ್ರಿಯೆ ನಮ್ಮ ಕೈಯಲ್ಲಿರುವುದಿಲ್ಲ. ಹೀಗೆ ನಿರಂತರವಾಗಿ ಉತ್ತಮವಾಗಿ ಆಡುತ್ತಿದ್ದರೆ ಅವಕಾಶ ಖಚಿತವಾಗಿ ಸಿಗುತ್ತದೆ. ಚಿಂತೆ ಬೇಡ ಎಂದು ಬೆನ್ನು ತಟ್ಟಿದ್ದರು. ಅದು ನನ್ನ ಪಾಲಿಗೆ ನಿಜವಾಯಿತು‘ ಎಂದು ಮಯಂಕ್  ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ‘ ವಿಡಿಯೊಕಾಸ್ಟ್‌ನಲ್ಲಿ ಸಂಜಯ್ ಮಾಂಜ್ರೇಕರ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

’ನಕಾರಾತ್ಮಕ ಯೋಚನೆಗಳನ್ನು ಬಳಿಗೆ ಸುಳಿಯದಂತೆ ಜಾಗ್ರತೆ ವಹಿಸಿದರೆ ಯಶಸ್ಸು ಖಂಡಿತವಾಗಿಯೂ ಒಲಿಯುತ್ತದೆಯೆಂದು ದ್ರಾವಿಡ್ ಹೇಳುವ ಮಾತುಗಳು ಸ್ಫೂರ್ತಿದಾಯಕವಾಗಿವೆ. ಭಾರತ ತಂಡಕ್ಕೆ ಆಯ್ಕೆಯಾದಾಗ ಅವರಿಗೆ ಕರೆ ಮಾಡಿ ಧನ್ಯವಾದ ತಿಳಿಸಿದ್ದೆ‘ ಎಂದು ನೆನಪಿಸಿಕೊಂಡಿದ್ದಾರೆ.

2018–19ರಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನ (ಎಂಸಿಜಿ)ಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಯಂಕ್ ಪದಾರ್ಪಣೆ ಮಾಡಿದ್ದರು.  ಆಸ್ಟ್ರೇಲಿಯಾದ ವೇಗದ ಬೌಲರ್‌ಗಳನ್ನು ಎದುರಿಸಿ 76 ರನ್‌ ಗಳಿಸಿ ಗಮನ ಸೆಳೆದಿದ್ದರು.

ಈ ಮಾತುಕತೆಯಲ್ಲಿ ತಮ್ಮ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿರುವ ಮಯಂಕ್, ’ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ಎಸೆತಗಳನ್ನು ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿ ಕ್ರಿಕೆಟ್‌ನತ್ತ ಆಕರ್ಷಿತನಾದೆ. ಶಾಲೆಯಲ್ಲಿ  ಆಡುವಾಗ ಆಫ್‌ಸ್ಪಿನ್ನರ್ ಆಗಿದ್ದೆ. ಆದರೆ, ಅದೊಮ್ಮೆ ನೆಟ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ನನ್ನ ಎಸೆತಗಳನ್ನು ದಂಡಿಸಿದರು. ಆಗ ಬ್ಯಾಟಿಂಗ್‌ನತ್ತ ಹೊರಳಿದೆ. ವೀರೇಂದ್ರ ಸೆಹ್ವಾಗ್ ಅವರಂತೆ ಓಪನರ್ ಆಗುವತ್ತ ಚಿತ್ತ ನೆಟ್ಟೆ.  19 ವರ್ಷದೊಳಗಿನವರ ಭಾರತ ತಂಡದಲ್ಲಿದ್ದಾಗ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಶಿಸ್ತಿನ ತರಬೇತಿಯು ನನ್ನ ಮೇಲೆ ಬಹಳ ಒಳ್ಳೆಯ ಪ್ರಭಾವ ಬೀರಿತು‘ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು