ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಜೈಸ್ವಾಲ್ -ಹೆಟ್ಮೆಯರ್ ಅರ್ಭಟ, ಪಂಜಾಬ್ ವಿರುದ್ಧ ರಾಯಲ್ಸ್‌ಗೆ ಜಯ

Published 13 ಏಪ್ರಿಲ್ 2024, 17:58 IST
Last Updated 13 ಏಪ್ರಿಲ್ 2024, 17:58 IST
ಅಕ್ಷರ ಗಾತ್ರ

ಮುಲ್ಲನ್‌ಪುರ (ಚಂಡೀಗಢ): ಬೌಲರ್‌ಗಳ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಎರಡೂ ತಂಡಗಳು ವೇಗವಾಗಿ ರನ್‌ ಗಳಿಸಲು ಪರದಾಡಿದವು.

ಆದರೆ ರಾಜಸ್ಥಾನ್ ರಾಯಲ್ಸ್‌ ತಂಡ ಶಿಮ್ರೋನ್ ಹೆಟ್ಮೆಯರ್ ಅವರ ಕೊನೆಗಳಿಗೆಯ ಬೀಸಾಟದಿಂದ (ಅಜೇಯ 27, 10ಎ) ಶನಿವಾರ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮೇಲೆ ಮೂರು ವಿಕೆಟ್‌ಗಳ ರೋಚಕ ಪಡೆಯಿತು.

ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಮೊದಲು ಆಡಲು ಕಳುಹಿಸಲ್ಪಟ್ಟ ಪಂಜಾಬ್ 20 ಓವರುಗಳಲ್ಲಿ 8 ವಿಕೆಟ್‌ಗೆ 147 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ‌ಇದಕ್ಕೆ ಉತ್ತರವಾಗಿ ರಾಯಲ್ಸ್ ತಂಡ ಉತ್ತಮ ಆರಂಭ ಮಾಡಿದರೂ ಮಧ್ಯಮ ಹಂತದಲ್ಲಿ ಪರದಾಡಿ ಕೊನೆಗೆ ಒಂದು ಎಸೆತ ಇರುವಂತೆ 7 ವಿಕೆಟ್‌ಗೆ 152 ರನ್ ಹೊಡೆಯಿತು.

ಕೊನೆಯ 5 ಓವರುಗಳಲ್ಲಿ ರಾಯಲ್ಸ್‌ಗೆ ಜಯಗಳಿಸಲು 49 ರನ್‌ಗಳು ಬೇಕಿದ್ದವು. ಏಳು ವಿಕೆಟ್‌ಗಳು ಕೈಲಿದ್ದವು. ಆದರೆ ಪಂಜಾಬ್ ಬೌಲರ್‌ಗಳು ಸುಲಭವಾಗಿ ಬಿಟ್ಟು ಕೊಡಲಿಲ್ಲ.

ಶಿಖರ್ ಧವನ್ ಗಾಯಾಳಾಗಿದ್ದರಿಂದ ನಾಯಕತ್ವ ವಹಿಸಿದ್ದ ಸ್ಯಾಮ್ ಕರನ್ 19ನೇ ಓವರ್‌ನಲ್ಲಿ ಎರಡು ಬೌಂಡರಿ ನೀಡಿದರೂ, ಎರಡು ವಿಕೆಟ್‌ (ರೋವ್ಮನ್ ಪಾವೆಲ್ ಮತ್ತು ಕೇಶವ ಮಹಾರಾಜ್) ಪಡೆದ ಕಾರಣ ಪಂದ್ಯ ರೋಚಕವಾಯಿತು.

ಕೊನೆಯ ಓವರ್‌ನಲ್ಲಿ ಹತ್ತು ರನ್‌ಗಳು ಬೇಕಿದ್ದವು. ಅರ್ಷದೀಪ್‌ ಸಿಂಗ್‌ ಬೌಲಿಂಗ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಹೆಟ್ಮೆಯರ್‌ ಎರಡು ಸಿಕ್ಸರ್‌ ಸೇರಿ 14 ರನ್ ಬಾರಿಸಿದರು.

ರಾಯಲ್ಸ್‌ ತಂಡಕ್ಕೆ ತನುಷ್ ಕೋಟ್ಯಾನ್ (24) ಮತ್ತು ಯಶಸ್ವಿ ಜೈಸ್ವಾಲ್ (39, 28ಎ) 8 ಓವರುಗಳಲ್ಲಿ 56 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು.

ಜೋಸ್ ಬಟ್ಲರ್ ಬದಲು ಅವಕಾಶ ಪಡೆದ ಮುಂಬೈನ ತನುಷ್‌ ಟಿ20ಯಲ್ಲಿ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ್ದರು. ಲಿವಿಂಗ್‌ಸ್ಟೋನ್ ಈ ಜೊತೆಯಾಟ ಮುರಿದರು. ನಂತರ ಸಂಜು ಸ್ಯಾಮ್ಸನ್‌ (18) ಮತ್ತು ರಿಯಾನ್ ಪರಾಗ್ 23 ರನ್ ಕೊಡುಗೆಯಿತ್ತರು.

ಇದಕ್ಕೆ ಮೊದಲು, ಪಂಜಾಬ್ ತಂಡವೂ ಪರದಾಡಿತು. 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 26 ರನ್‌ ಗಳಿಸಿದ್ದ ಆತಿಥೇಯ ತಂಡ, ಆರಂಭ ಆಟಗಾರ ಅಥರ್ವ ತೈಡೆ (16, 12 ಎ) ಅವರ ನಿರ್ಗಮನದ ಬಳಿದ ಬಳಿಕ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು.

ಟ್ರೆಂಟ್‌ ಬೌಲ್ಟ್‌ ಪವರ್‌ ಪ್ಲೇ ಅವಧಿಯ ಮೊದಲ ಮೂರು ಓವರುಗಳಲ್ಲಿ 15 ರನ್ ಮಾತ್ರ ನೀಡಿದರು.

ಒಟ್ಟಾರೆ ಮೊದಲ ಆರು ಓವರ್‌ಗಳಲ್ಲಿ ಬಂದಿದ್ದು 38 ರನ್‌ಗಳಷ್ಟೇ.

ಅರ್ಧದಷ್ಟು ಓವರ್‌ಗಳು ಮುಗಿದಾಗ ಪಂಜಾಬ್‌ ಮೊತ್ತ 4 ವಿಕೆಟ್‌ಗೆ 53. ಜಾನಿ ಬೇಸ್ಟೊ, ಸ್ಯಾಮ್‌ ಕರನ್‌ ಮತ್ತು ಪ್ರಭಸಿಮ್ರನ್‌ ಸಿಂಗ್‌ ಅವರ ವಿಕೆಟ್‌ಗಳನ್ನೂ ಕಳೆದುಕೊಂಡಿತು.

ಇನಿಂಗ್ಸ್‌ನ ಕೊನೆಯ ಹಂತದಲ್ಲಿ ‘ಇಂಪ್ಯಾಕ್ಟ್‌ ಸಬ್‌’ ಅಶುತೋಷ್‌ ಶರ್ಮಾ (31, 16 ಎಸೆತ) ತಮಗೆ ಕೊಟ್ಟ ಕೆಲಸವನ್ನು ಉತ್ತಮವಾಗಿಯೇ ನಿರ್ವಹಿಸಿದರು.

ವಿಕೆಟ್ ಕೀಪರ್ ಜಿತೇಶ್‌ ಶರ್ಮಾ (29, 24 ಎಸೆತ) ಸಹ ಉಪಯುಕ್ತ ಆಟವಾಡಿದರು.

ಕೊನೆಯ ಆರು ಓವರುಗಳಲ್ಲಿ 72 ರನ್‌ಗಳು ಹರಿದುಬಂದು ತಂಡದ ಮೊತ್ತ 150ರ ಸನಿಹ ತಲುಪಿತು.

ವೇಗಿ ಆವೇಶ್‌ ಖಾನ್ (34ಕ್ಕೆ 2) ಮತ್ತು ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ (23ಕ್ಕೆ2) ಯಶಸ್ಸು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT