ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ರೋನಿತ್ ದಾಳಿಗೆ ಉರುಳಿದ ರೈಲ್ವೆ

ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ
Last Updated 23 ಡಿಸೆಂಬರ್ 2018, 19:52 IST
ಅಕ್ಷರ ಗಾತ್ರ

ಶಿವಮೊಗ್ಗ: ರೋನಿತ್‌ ಮೋರೆ ಒಳಗೊಂಡಂತೆ ಮಧ್ಯಮ ವೇಗಿಗಳು ನಡೆಸಿದ ಬಿಗುವಾದ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡದವರು ರೈಲ್ವೇಸ್‌ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.

ನವುಲೆಯ ಕೆಎಸ್‌ಸಿಎ ಕ್ರೀಡಾಂ ಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ರೈಲ್ವೇಸ್‌ 143 ರನ್‌ಗಳಿಗೆ ಆಲೌ ಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 214 ರನ್‌ ಗಳಿಸಿದ್ದ ಕರ್ನಾಟಕ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 41 ರನ್‌ ಗಳಿಸಿದ್ದು, ಒಟ್ಟಾರೆ 112 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

71 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆತಿ ಥೇಯರಿಗೆ ದೇವದತ್ತ ಪಡಿಕ್ಕಲ್‌ (11) ಮತ್ತು ಡಿ.ನಿಶ್ಚಲ್ (25) ಉತ್ತಮ ಆರಂಭ ನೀಡಿದರು. ಕ್ಯಾಚ್‌ ಹಿಡಿ ಯುವ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ಡಿ.ಸಮರ್ಥ್ ಇನಿಂಗ್ಸ್‌ ಆರಂಭಿಸಲಿಲ್ಲ.

ಮಧ್ಯಮವೇಗಿಗಳ ಮಿಂಚು: ಕರ್ನಾಟಕ ವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಸಂತಸದೊಂದಿಗೆ ಮೊದಲ ಇನಿಂಗ್ಸ್‌ ಆರಂಭಿಸಿದ ರೈಲ್ವೇಸ್‌ಗೆ ‘ತ್ರಿಮೂರ್ತಿ’ಗಳಾದ ರೋನಿತ್‌ ಮೋರೆ (45ಕ್ಕೆ 5), ಅಭಿಮನ್ಯು ಮಿಥುನ್ (22ಕ್ಕೆ 2) ಮತ್ತು ಪ್ರಸಿದ್ಧ ಕೃಷ್ಣ (26ಕ್ಕೆ 2) ಅವರು ಪ್ರಹಾರ ನೀಡಿದರು.

ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ಅಪಾಯವಿದೆ ಎಂಬುದನ್ನರಿತ ರೈಲ್ವೇಸ್‌ ತಂಡ ಸಕಾರಾತ್ಮಕ ಮನೋಭಾವ ದೊಂದಿಗೆ ಇನಿಂಗ್ಸ್‌ ಆರಂಭಿಸಿತು. ಮೊದಲ ಎರಡು ಓವರ್‌ಗಳಲ್ಲಿ ಮೂರು ಬೌಂಡರಿಗಳು ಬಂದವು.

ಆದರೆ ಎದುರಾಳಿ ತಂಡದ ಸಕಾರಾತ್ಮಕ ಮನೋಭಾವಕ್ಕೆ ಕರ್ನಾಟಕ ಮೂರನೇ ಓವರ್‌ನಲ್ಲೇ ‘ಬ್ರೇಕ್‌’ ಹಾಕಿ ತು. ಮಿಥುನ್ ಬೌಲ್ ಮಾಡಿದ ಚೆಂಡು ಸೌರಭ್‌ ವಾಕಸ್ಕರ್‌ ಅವರ ಬ್ಯಾಟ್‌ನ ಅಂಚನ್ನು ಸವರಿಕೊಂಡು ವಿಕೆಟ್‌ ಕೀಪರ್ ಶರತ್‌ ಶ್ರೀನಿವಾಸ್‌ ಕೈಸೇರಿತು.

ಬೇಗನೇ ವಿಕೆಟ್‌ ಬಿದ್ದದ್ದರಿಂದ ರೈಲ್ವೇಸ್‌ ತಂಡ ‘ಗೇರ್‌’ ಬದಲಿಸಿ ರಕ್ಷಣಾತ್ಮಕ ಆಟದ ಮೊರೆಹೋಯಿತು. ಇದರಿಂದ ಕರ್ನಾಟಕಕ್ಕೆ ಯೋಜನೆಯ ಪ್ರಕಾರ ಬೌಲಿಂಗ್‌ ಮಾಡಲು ಸಾಧ್ಯವಾಯಿತು. ಪ್ರಸಿದ್ಧ ಕೃಷ್ಣ ಅವರು ಆರನೇ ಓವರ್‌ನಲ್ಲಿ ನಿತಿನ್‌ ಭಿಲ್ಲೆ ಹಾಗೂ 12ನೇ ಓವರ್‌ನಲ್ಲಿ ಪ್ರಥಮ ಸಿಂಗ್‌ ಅವರನ್ನು ಪೆವಿಲಿಯನ್‌ಗಟ್ಟಿದರು.

ಮೊದಲ ಬದಲಾವಣೆ ರೂಪದಲ್ಲಿ ದಾಳಿಗಿಳಿದ ರೋನಿತ್‌ ಮೋರೆ ಕೂಡಾ ವಿಕೆಟ್‌ ಬೇಟೆ ಶುರುಮಾಡಿದ್ದು ರೈಲ್ವೇಸ್‌ ತಂಡದ ಸಂಕಷ್ಟವನ್ನು ಇಮ್ಮಡಿಗೊಳಿಸಿತು. ನಾಯಕ ಅರಿಂದಮ್‌ ಘೋಷ್‌ ಮತ್ತು ಸಾಹಿಮ್‌ ಹಸನ್ ಅವರು ಮೋರೆ ಮೊನಚಿನ ದಾಳಿಗೆ ಪೆವಿಲಿಯನ್‌ ಸೇರಿದರು.

ಉತ್ತಮವಾಗಿ ಆಡುತ್ತಿದ್ದ ಪ್ರಶಾಂತ್‌ ಗುಪ್ತಾ (35, 80 ಎಸೆತ) ಅವರು ಮಿಥುನ್‌ಗೆ ವಿಕೆಟ್‌ ಒಪ್ಪಿಸಿ ಔಟಾಗುವುದರೊಂದಿಗೆ ರೈಲ್ವೇಸ್ ಅತಿಯಾದ ಒತ್ತಡಕ್ಕೆ ಒಳಗಾಯಿತು. 55 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳು ಬಿದ್ದವು.

ಮನೀಷ್‌ ಅರ್ಧಶತಕ: ಎದುರಾಳಿ ತಂಡವನ್ನು 100 ರನ್‌ಗಳ ಒಳಗೆ ಕಟ್ಟಿಹಾಕುವ ಅವಕಾಶ ಕರ್ನಾಟಕಕ್ಕೆ ಇತ್ತು. ಆದರೆ ಮನೀಷ್‌ ರಾವ್‌ (ಔಟಾಗದೆ 52, 132 ಎ., 8 ಬೌಂ) ಕೊನೆಯ ಕ್ರಮಾಂಕದ ಆಟಗಾರರ ನೆರವಿನಿಂದ ಆತಿಥೇಯರನ್ನು ಕಾಡಿದರು. ರೈಲ್ವೇಸ್‌ ತಂಡ ಕೊನೆಯ ನಾಲ್ಕು ವಿಕೆಟ್‌ಗಳಿಂದ 88 ರನ್‌ ಪೇರಿಸಿತು.

ಇದಕ್ಕೂ ಮುನ್ನ 9 ವಿಕೆಟ್‌ಗೆ 208 ರನ್‌ಗಳಿಂದ ಬೆಳಿಗ್ಗೆ ಆಟ ಮುಂದುವರಿಸಿದ್ದ ಕರ್ನಾಟಕ 2.4 ಓವರ್‌ಗಳನ್ನು ಆಡಿ 214 ರನ್‌ಗಳಿಗೆ ಆಲೌಟಾಯಿತು. ಶರತ್‌ ಶ್ರೀನಿವಾಸ್ 31 ರನ್‌ಗಳೊಂದಿಗೆ ಔಟಾಗದೆ ಉಳಿದುಕೊಂಡರು.

ಆತಂಕ ತಂದ ಜೇನುನೊಣ

ಎರಡನೇ ದಿನದ ಅಂತಿಮ ದಿನದಾಟದ ವೇಳೆ ಜೇನುನೊಣಗಳು ಅಂಗಳದ ಮೇಲಿನಿಂದ ಹಾರಿಹೋದವು. ಆಟಗಾರರು ಅಂಗಳದಲ್ಲಿ ಮಲಗಿ ಜೇನು ನೊಣಗಳ ದಾಳಿಯಿಂದ ಪಾರಾದರು.

ಮಧ್ಯಮ ವೇಗಿಗಳಿಗೆ ನೆರವು

ಶಿವಮೊಗ್ಗ ಕ್ರೀಡಾಂಗಣದ ಪಿಚ್‌ ಎರಡನೇ ದಿನವೂ ಮಧ್ಯಮ ವೇಗಿಗಳಿಗೆ ನೆರವು ನೀಡಿತು. ಎರಡು ದಿನಗಳಲ್ಲಿ ಒಟ್ಟು 20 ವಿಕೆಟ್‌ಗಳು ಬಿದ್ದವು. ಇದರಲ್ಲಿ 11 ಮಂದಿ, ವಿಕೆಟ್‌ ಕೀಪರ್‌ ಮತ್ತು ಸ್ಲಿಪ್‌ ಫೀಲ್ಡರ್‌ಗಳಿಗೆ ಕ್ಯಾಚಿತ್ತು ಔಟಾಗಿದ್ದಾರೆ. ಐವರು ಕ್ಲೀನ್‌ ಬೌಲ್ಡ್‌ ಆದರೆ, ಇಬ್ಬರು ಎಲ್‌ಬಿಡಬ್ಲ್ಯು ಆಗಿ ವಿಕೆಟ್‌ ಒಪ್ಪಿಸಿದರು. ಸ್ವಿಂಗ್‌ ಮತ್ತು ಬೌನ್ಸ್‌ಗೆ ಈ ಪಿಚ್ ಯಾವ ರೀತಿ ನೆರವು ನೀಡಿದೆ ಎಂಬುದಕ್ಕೆ ಇದು ಸಾಕ್ಷಿ.

***

ಬೌಲಿಂಗ್‌ ಕೋಚ್ ಅರವಿಂದ್, ಸಹ ಆಟಗಾರರಾದ ವಿನಯ್‌ ಮತ್ತು ಮಿಥುನ್ ಅವರ ಸಲಹೆಗಳಿಂದ ನನ್ನ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಆಗಿದೆ.

– ರೋನಿತ್‌ ಮೋರೆ, ಕರ್ನಾಟಕದ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT