ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಫೈನಲ್‌ ಇಂದಿನಿಂದ| 42ನೇ ಪ್ರಶಸ್ತಿಯತ್ತ ಮುಂಬೈ ಚಿತ್ತ

ರಣಜಿ ಫೈನಲ್‌ ಇಂದಿನಿಂದ lಮಧ್ಯಪ್ರದೇಶ ಎದುರಾಳಿ lಬೆಂಗಳೂರಿನಲ್ಲಿ 100ನೇ ಪಂದ್ಯ
Last Updated 22 ಜೂನ್ 2022, 10:15 IST
ಅಕ್ಷರ ಗಾತ್ರ

ಬೆಂಗಳೂರು: ದಾಖಲೆಯ 42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ತಂಡ, ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಮಧ್ಯಪ್ರದೇಶದ ಸವಾಲನ್ನು ಎದುರಿಸಲಿದೆ.

ಈ ಋತುವಿನಲ್ಲಿ ದೇಸಿ ಕ್ರಿಕೆಟ್‌ನ ‘ರಾಜ’ ಯಾರಾಗುವರು ಎಂಬ ಪ್ರಶ್ನೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗುವ ಪಂದ್ಯ ಉತ್ತರ ನೀಡಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ 100ನೇ ರಣಜಿ ಪಂದ್ಯ ಇದಾಗಿದ್ದು, ಕ್ರಿಕೆಟ್ ಪ್ರೇಮಿಗಳ ಕುತೂಹಲ ಗರಿಗೆದರಿದೆ.

ಈ ಋತುವಿನ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನವನ್ನು ಗಮನಿಸಿದಾಗ, ಮುಂಬೈ ತಂಡವೇ ಗೆಲ್ಲುವ ’ಫೇವರಿಟ್‘ ಎನಿಸಿಕೊಂಡಿದೆ. ಆದರೆ ಪ್ರಬಲ ತಂಡಗಳನ್ನು ಮಣಿಸಿ ಫೈನಲ್‌ ಪ್ರವೇಶಿಸಿರುವ ಮಧ್ಯಪ್ರದೇಶ ಅಚ್ಚರಿಯ ಫಲಿತಾಂಶ ನೀಡುವ ತವಕದಲ್ಲಿದೆ.

ಪೃಥ್ವಿ ಶಾ ನೇತೃತ್ವದ ಮುಂಬೈ, ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದು ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಮತ್ತೊಂದೆಡೆ ಆದಿತ್ಯ ಶ್ರೀವಾಸ್ತವ ನಾಯಕತ್ವದ ಮಧ್ಯಪ್ರದೇಶ, ಬಂಗಾಳ ಎದುರು 174 ರನ್‌ಗಳ ಜಯ ಸಾಧಿಸಿತ್ತು.

ರಾಷ್ಟ್ರೀಯ ತಂಡದ ಕದ ತಟ್ಟುತ್ತಿರುವ ಯುವ ಬ್ಯಾಟರ್‌ಗಳೇ ಮುಂಬೈ ತಂಡದ ಶಕ್ತಿ. ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್, ಅರ್ಮಾನ್‌ ಜಾಫರ್, ಸರ್ಫರಾಜ್ ಖಾನ್‌ ಮತ್ತು ಸುವೇದ್‌ ಪಾರ್ಕರ್‌ ಅವರು ಮಧ್ಯಪ್ರದೇಶದ ಬೌಲರ್‌ಗಳ ಮೇಲೆ ಸವಾರಿ ಮಾಡಲು ಸಜ್ಜಾಗಿದ್ದಾರೆ.

ಕ್ವಾರ್ಟರ್‌ ಫೈನಲ್‌ ಮತ್ತು ಸೆಮಿಫೈನಲ್‌ನಲ್ಲಿ ತಾವು ಆಡಿದ ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರು ಶತಕ ಗಳಿಸಿರುವ ಜೈಸ್ವಾಲ್‌ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸರ್ಫರಾಜ್‌ ಮತ್ತು ಅರ್ಮಾನ್ ಕೂಡಾ ದೊಡ್ಡ ಇನಿಂಗ್ಸ್‌ ಕಟ್ಟುವ ತಾಕತ್ತು ಹೊಂದಿದ್ದಾರೆ.

ಎಡಗೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ ಅವರನ್ನು ಹೊರತುಪಡಿಸಿದರೆ, ಮಧ್ಯಪ್ರದೇಶ ತಂಡದಲ್ಲಿ ಪ್ರಭಾವಿ ಎನಿಸಬಲ್ಲ ಇನ್ನೊಬ್ಬ ಬೌಲರ್‌ ಇಲ್ಲ. ಕಾರ್ತಿಕೇಯ ಈ ಟೂರ್ನಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಮುಂಬೈ ಬ್ಯಾಟರ್‌ಗಳನ್ನು ನಿಯಂತ್ರಿಸುವ ಬಲುದೊಡ್ಡ ಸವಾಲು ಇವರ ಮುಂದಿದೆ.

ಮಧ್ಯಪ್ರದೇಶ ತಂಡ ಬ್ಯಾಟಿಂಗ್‌ನಲ್ಲಿ ರಜತ್‌ ಪಾಟೀದಾರ್, ಹಿಮಾಂಶು ಮಂತ್ರಿ ಮತ್ತು ಅಕ್ಷತ್‌ ರಘುವಂಶಿ ಅವರನ್ನು ನೆಚ್ಚಿಕೊಂಡಿದೆ.

ಮುಂಬೈ 2016 ರಲ್ಲಿ ಕೊನೆಯ ಬಾರಿ ಚಾಂಪಿಯನ್‌ ಆಗಿತ್ತು. ಇದೀಗ ಆರು ವರ್ಷಗಳ ಬಿಡುವಿನ ಬಳಿಕ ಮತ್ತೆ ಟ್ರೋಫಿ ಎತ್ತಿಹಿಡಿಯುವ ಉತ್ಸಾಹದಲ್ಲಿದೆ. ಮಧ್ಯಪ್ರದೇಶ ತಂಡ ಒಮ್ಮೆ ಮಾತ್ರ (1998–99 ರಲ್ಲಿ) ಫೈನಲ್‌ ಪ್ರವೇಶಿಸಿತ್ತು. ಅಂದು ಕರ್ನಾಟಕದ ಎದುರು ಸೋತು ’ರನ್ನರ್‌ ಅಪ್‌‘ ಆಗಿತ್ತು.‌

ಕೋಚ್‌ಗಳ ‘ಕಾದಾಟ’: ಈ ಪಂದ್ಯ ಮುಂಬೈ ತಂಡದ ಕೋಚ್‌ ಅಮೋಲ್‌ ಮಜುಂದಾರ್‌ಮತ್ತು ಮಧ್ಯಪ್ರದೇಶ ತಂಡದ ಕೋಚ್‌ ಚಂದ್ರಕಾಂತ್‌ ಪಂಡಿತ್‌ ನಡುವಿನ ‘ಪೈಪೋಟಿ’ಯಿಂದಲೂ ಗಮನ ಸೆಳೆದಿದೆ.

ಮಜುಂದಾರ್‌ ಮತ್ತು ಚಂದ್ರಕಾಂತ್‌ ಇಬ್ಬರೂ ರಮಾಕಾಂತ ಅಚ್ರೇಕರ್‌ ಅವರ ಮಾರ್ಗದರ್ಶನದಲ್ಲಿ ಪಳಗಿದವರು. ಚಂದ್ರಕಾಂತ್‌ ಮುಂಬೈ ಪರ ಆಡಿದ್ದರಲ್ಲದೆ, ಆ ತಂಡಕ್ಕೆ ಕೋಚಿಂಗ್‌ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ಮುಂಬೈ ತಂಡ ರಣಜಿ ಟ್ರೋಫಿ ಕೂಡಾ ಜಯಿಸಿತ್ತು.

ಉಚಿತ ಪ್ರವೇಶ: ಈ ಪಂದ್ಯಕ್ಕೆ ಕ್ರಿಕೆಟ್‌ ಪ್ರೇಮಿಗಳಿಗೆ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಪ್ರೇಕ್ಷಕರು ‘ಪಿ3’ ಸ್ಟ್ಯಾಂಡ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸಬಹುದು.

ಬೆಂಗಳೂರಿನಲ್ಲಿ ನಾಲ್ಕನೇ ಫೈನಲ್‌

ರಣಜಿ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಬೆಂಗಳೂರು ನಾಲ್ಕನೇ ಬಾರಿ ಆತಿಥ್ಯ ವಹಿಸಿದೆ. ಈ ಹಿಂದೆ 1979, 1998 ಮತ್ತು 1999ರ ಟೂರ್ನಿಯ ಫೈನಲ್‌ ಪಂದ್ಯಗಳು ಇಲ್ಲಿ ನಡೆದಿದ್ದವು. ಈ ಮೂರು ಫೈನಲ್‌ನಲ್ಲಿ ಕರ್ನಾಟಕ ತಂಡ ಕ್ರಮವಾಗಿ ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಜತೆ ಪೈಪೋಟಿ ನಡೆಸಿತ್ತು. ಕರ್ನಾಟಕವನ್ನು ಹೊರತುಪಡಿಸಿ ಎರಡು ತಂಡಗಳು ಬೆಂಗಳೂರಿನಲ್ಲಿ ಫೈನಲ್‌ ಆಡುತ್ತಿರುವುದು ಇದೇ ಮೊದಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT