ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy: ಮಯಂಕ್ ಬಳಗಕ್ಕೆ ಮೊದಲ ಗೆಲುವು

Last Updated 22 ಡಿಸೆಂಬರ್ 2022, 22:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬೌಲರ್‌ಗಳು ಗುರುವಾರ ಬೆಳಿಗ್ಗೆ ಗೆಲುವಿನ ಕೇಕೆ ಹಾಕಿದರು. ಪುದುಚೇರಿ ಎದುರು ಮಯಂಕ್ ಅಗರವಾಲ್ ಬಳಗವು ಇನಿಂಗ್ಸ್ ಮತ್ತು 7 ರನ್‌ಗಳಿಂದ ಜಯಭೇರಿ ಬಾರಿಸಿತು.

ಪ್ರಸಕ್ತ ರಣಜಿ ಟೂರ್ನಿಯಲ್ಲಿ ಎರಡನೇ ಪಂದ್ಯ ಆಡಿದ ಕರ್ನಾಟಕ ತಂಡಕ್ಕಿದು ಮೊದಲ ಜಯ. ಸಿ ಗುಂಪಿನ ಈ ಪಂದ್ಯವು ಎರಡೂವರೆ ದಿನಗಳಲ್ಲಿಯೇ ಮುಕ್ತಾಯವಾಯಿತು. ಆತಿಥೇಯ ಬಳಗವು ಏಳು ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.

ಎರಡನೇ ದಿನವಾದ ಬುಧವಾರ ಸಮರ್ಥ್ ಶತಕದ ಬಲದಿಂದ ಕರ್ನಾಟಕ ತಂಡವು 134 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಪುದುಚೇರಿ 27 ಓವರ್‌ಗಳಲ್ಲಿ 58 ರನ್‌ ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಗುರುವಾರ ಕೇವಲ 93 ನಿಮಿಷಗಳಲ್ಲಿ ಉಳಿದ ಏಳು ವಿಕೆಟ್‌ಗಳನ್ನು ಕಬಳಿಸುವಲ್ಲಿ ಕರ್ನಾಟಕದ ಬೌಲರ್‌ಗಳು ಸಫಲ ರಾದರು. ಪುದುಚೇರಿ 43 ಓವರ್‌ಗಳಲ್ಲಿ 127 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸರ್ವಿಸಸ್‌ ಎದುರಿನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕ ಮೂರು ಅಂಕ ಗಳಿಸಿತ್ತು. ಇದೀಗ ಸಿ ಗುಂಪಿನ ಪಟ್ಟಿಯಲ್ಲಿ ಒಟ್ಟು 10 ಅಂಕಗಳನ್ನು ಗಳಿಸಿದೆ.

’ಈ ಬಾರಿಯ ಋತುವಿನಲ್ಲಿ ನಮ್ಮ ತಂಡ ಉತ್ತಮ ಆರಂಭ ಮಾಡಿದೆ. ಇದೇ ಲಯವನ್ನು ಮುಂದಿನ ಪಂದ್ಯಗಳಲ್ಲಿಯೂ ಕಾಪಾಡಿಕೊಳ್ಳುತ್ತೇವೆ. ಪಂದ್ಯದಿಂದ ಪಂದ್ಯಕ್ಕೆ ಪೈಪೋಟಿ ಹೆಚ್ಚಿ ದಂತೆ ನಮ್ಮ ಆಟಗಾರರ ಸಾಮರ್ಥ್ಯವೂ ಉತ್ಕೃಷ್ಟವಾಗಲಿದೆ‘ ಎಂದು ಪಂದ್ಯದ ನಂತರ ಕರ್ನಾಟಕ ತಂಡದ ಕೋಚ್ ಪಿ.ವಿ. ಶಶಿಕಾಂತ್ ಹೇಳಿದರು.

ಆತಿಥೇಯ ವೇಗಿಗಳಿಗೆ 18 ವಿಕೆಟ್

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಕಳೆದ ಎರಡೂವರೆ ದಿನಗಳಲ್ಲಿ ಒಟ್ಟು 30 ವಿಕೆಟ್‌ಗಳು ಪತನವಾದವು. ಅದರಲ್ಲಿ ಕರ್ನಾಟಕದ ವೇಗಿಗಳಿಗೆ 18 ವಿಕೆಟ್‌ಗಳು ಲಭಿಸಿದವು. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ ಮತ್ತು ಕೆ. ಗೌತಮ್ ತಲಾ ಒಂದು ವಿಕೆಟ್ ಗಳಿಸಿದರು.

ದಿನದಾಟದ ಎರಡನೇ ಓವರ್‌ನಲ್ಲಿ ವಿದ್ವತ್ ಎರಡು ವಿಕೆಟ್‌ಗಳನ್ನು ಗಳಿಸಿದರು. ರಾತ್ರಿ ಕ್ರೀಸ್‌ ಕಾದಿದ್ದ ಜಯ್ ಪಾಂಡೆ ಹಾಗೂ ಎಸ್. ಅಶ್ವತ್ ಅವರಿಬ್ಬರನ್ನೂ ಕ್ಲೀನ್‌ಬೌಲ್ಡ್ ಮಾಡಿದರು.

ಡಿ. ರೋಹಿತ್, ಅಂಕಿತ್ ಶರ್ಮಾ ಮತ್ತು ಸಾಗರ್ ಉದೇಶಿ ವಿಕೆಟ್‌ಗಳು ರೋನಿತ್ ಮೋರೆ ಪಾಲಾದವು. ಕೆ.ಬಿ. ಅರುಣ್ ಕಾರ್ತಿಕ್ ಮತ್ತು ಎಂ. ವಿಘ್ನೇಷ್ ವಿಕೆಟ್‌ಗಳನ್ನು ವೈಶಾಖ ಉರುಳಿಸಿದರು.

’ನಮ್ಮ ಬೌಲಿಂಗ್ ವಿಭಾಗವು ಸಶಕ್ತವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಹಿಂದೆ ವಿನಯಕುಮಾರ್, ಮಿಥುನ್ ಮತ್ತುಅರವಿಂದ್ ಅವರಿದ್ದರು. ಅವರ ನಿರ್ಗಮನದ ನಂತರ ಖಾಲಿಯಾಗಿರುವ ಜಾಗಕ್ಕೆ ಸೂಕ್ತವಾಗುವಂತಹ ಭರವಸೆಯನ್ನು ವಿದ್ವತ್ ಮತ್ತು ವೈಶಾಖ ಮೂಡಿಸಿದ್ದಾರೆ. ಅನುಭವಿ ರೋನಿತ್ ಮೋರೆ ಉತ್ತಮವಾಗಿ ಆಡುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಇನ್ನಷ್ಟು ಬಲಯುತವಾಗಬೇಕಿದೆ. ಅನುಭವಿ ಮನೀಷ್ ಪಾಂಡೆ ಲಯಕ್ಕೆ ಮರಳಿದರೆ ಸಮತೋಲನಗೊಳ್ಳುತ್ತದೆ. ಅವರು ಮುಂದಿನ ಹಂತದಲ್ಲಿ ಚೆನ್ನಾಗಿ ಆಡುವ ಭರವಸೆ ಇದೆ‘ ಎಂದು ಶಶಿಕಾಂತ್ ಅಭಿಪ್ರಾಯಪಟ್ಟರು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಪುದುಚೇರಿ 170, ಕರ್ನಾಟಕ 304

ಎರಡನೇ ಇನಿಂಗ್ಸ್: ಪುದುಚೇರಿ 127 (43 ಓವರ್‌ಗಳಲ್ಲಿ)

ಜಯ್ ಬಿ ವಿದ್ವತ್ 26 (70ಎ, 4X4)

ಅಶ್ವತ್ ಬಿ ವಿದ್ವತ್ 8 (32ಎ, 4X1)

ರೋಹಿತ್ ಸಿ ಶ್ರೇಯಸ್ ಬಿ ರೋನಿತ್ 18 (20ಎ, 4X2)

ಅರುಣ್ ಸಿ ಶರತ್ ಬಿ ವೈಶಾಖ 10 (33ಎ, 4X1)

ಅಂಕಿತ್ ಸಿ ಮನೀಷ್ ಬಿ ರೋನಿತ್ 25 (15ಎ, 4X6)

ವಿಘ್ನೇಷ್ ಸಿ ಶರತ್ ಬಿ ವೈಶಾಖ 4 (9ಎ, 4X1)

ಸಾಗರ್ ಸಿ ವಿಶಾಲ್ ಬಿ ರೋನಿತ್ 5 (6ಎ, 4X1)

ಅಬಿನ್ ಔಟಾಗದೆ 0 (3ಎ)

ಇತರೆ: 3 (ಲೆಗ್‌ಬೈ 3)

ವಿಕೆಟ್ ಪತನ: 4–64 (ಅಶ್ವಥ್; 28.1), 5–65 (ಜಯ್ ಪಾಂಡೆ; 28.6), 6–85 (ರೋಹಿತ್ ದಾಮೋದರನ್; 33.3), 7–111(ಅಂಕಿತ್ ಶರ್ಮಾ; 37.3), 8–122 (ವಿಘ್ನೇಷ್;40.1), 9–127 (ಸಾಗರ್ ಉದೇಶಿ; 41.3), 10–127 (ಅರುಣ್ ಕಾರ್ತಿಕ್; 42.6)

ಬೌಲಿಂಗ್‌: ವಿದ್ವತ್ 13–6–44–2, ರೋನಿತ್ ಮೋರೆ 14–6–36–4, ವಿಜಯಕುಮಾರ್ ವೈಶಾಖ 10–3–23–3, ಕೃಷ್ಣಪ್ಪ ಗೌತಮ್ 6–1–21–1

ಫಲಿತಾಂಶ: ಕರ್ನಾಟಕ ತಂಡಕ್ಕೆ ಇನಿಂಗ್ಸ್ ಮತ್ತು 7 ರನ್‌ಗಳ ಜಯ ಹಾಗೂ ಏಳು ಅಂಕಗಳು.

ಮುಂದಿನ ಪಂದ್ಯ: ಗೋವಾ ವಿರುದ್ಧ; ಡಿಸೆಂಬರ್ 27ರಿಂದ.

ಸ್ಥಳ: ಪೊರ್ವೆರಿಯಂ (ಗೋವಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT