ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಓವರ್‌ನಲ್ಲಿ 5 ಸಿಕ್ಸ್‌ ಚಚ್ಚಿಸಿಕೊಂಡಿದ್ದ ದಯಾಳ್ ಸೇರಿ 6 ಮಂದಿ ಆರ್‌ಸಿಬಿಗೆ

Published 19 ಡಿಸೆಂಬರ್ 2023, 16:25 IST
Last Updated 19 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ದುಬೈ: ಮುಂದಿನ ವರ್ಷ ನಡೆಯುಲಿರುವ ಐಪಿಎಲ್‌ ಟಿ20 ಟೂರ್ನಿಗಾಗಿ ಇಂದು ದುಬೈನಲ್ಲಿ ನಡೆದ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತಲಾ ಮೂವರು ಭಾರತ ಹಾಗೂ ವಿದೇಶಿ ಆಟಗಾರರನ್ನು ಖರೀದಿ ಮಾಡಿದೆ.

ಈ ವರ್ಷ ನಡೆದಿದ್ದ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಚಚ್ಚಿಸಿಕೊಂಡಿದ್ದ ವೇಗದ ಬೌಲರ್‌ ಯಶ್‌ ದಯಾಳ್‌ ಅವರನ್ನೂ ಆರ್‌ಸಿಬಿ ಕೊಂಡುಕೊಂಡಿದೆ.

ಉಳಿದಂತೆ ವೆಸ್ಟ್‌ಇಂಡೀಸ್‌ನ ವೇಗದ ಬೌಲರ್‌ ಅಲ್ಜಾರಿ ಜೋಸೆಫ್‌ (₹ 11.50 ಕೋಟಿ), ನ್ಯೂಜಿಲೆಂಡ್‌ನ ವೇಗಿ ಲಾಕಿ ಫರ್ಗ್ಯೂಸನ್‌ (₹ 2 ಕೋಟಿ), ಇಂಗ್ಲೆಂಡ್‌ ಆಲ್‌ರೌಂಡರ್‌ ಟಾಮ್ ಕರನ್‌ (₹ 1.50 ಕೋಟಿ), ಭಾರತದ ಬ್ಯಾಟರ್‌ ಸೌರವ್‌ ಚೌಹಾಣ್‌ (₹ 20 ಲಕ್ಷ) ಮತ್ತು ಆಲ್‌ರೌಂಡರ್‌ ಸ್ವಪ್ನಿಲ್‌ ಸಿಂಗ್ (₹ 20 ಲಕ್ಷ) ಅವರನ್ನು ಖರೀದಿಸಿದೆ.

ಐದು ಸಿಕ್ಸ್‌ ಚಚ್ಚಿಸಿಕೊಂಡಿದ್ದ ಯಶ್‌
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಪ್ರಿಲ್‌ 9ರಂದು ನಡೆದಿದ್ದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್‌ ಮುಖಾಮುಖಿಯಾಗಿದ್ದವು. 

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್‌, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ್ದ ಕೋಲ್ಕತ್ತ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್‌ ಗಳಿಸಿತ್ತು. ಈ ಹಂತದಲ್ಲಿ ರಿಂಕು ಸಿಂಗ್‌ ಮತ್ತು ಉಮೇಶ್ ಯಾದವ್‌ ಕ್ರೀಸ್‌ನಲ್ಲಿದ್ದರು. ಕೋಲ್ಕತ್ತ ಗೆಲ್ಲಲು 29 ರನ್‌ ಬೇಕಿದ್ದಾಗ ಬೌಲಿಂಗ್‌ಗೆ ಬಂದ ಯಶ್‌, ಮೊದಲ ಎಸೆತದಲ್ಲಿ ಕೇವಲ 1 ರನ್‌ ನೀಡಿದ್ದರು.

ನಂತರ ಸ್ಟ್ರೈಕ್‌ ಪಡೆದುಕೊಂಡ ರಿಂಕು ಸಿಂಗ್, ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಷ್ಟಲ್ಲದೆ ಗುರಿ ಬೆನ್ನಟ್ಟುವ ವೇಳೆ ಕೊನೇ ಓವರ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಸಾಧನೆಯನ್ನೂ ಅವರು ಮಾಡಿದ್ದರು. ಅದಾದ ಬಳಿಕ ಯಶ್‌ಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ.

ಇದೀಗ ಅದೇ ಯಶ್‌ ಅವರಿಗೆ ಆರ್‌ಸಿಬಿ ₹ 5 ಕೋಟಿ ನೀಡಿದೆ.

ಹರಾಜಿನ ಬಳಿಕ ಆರ್‌ಸಿಬಿ ತಂಡ

ಫಾಫ್‌ ಡು ಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ರಜತ್‌ ಪಟೀದಾರ್‌, ಅನೂಜ್ ರಾವತ್‌, ದಿನೇಶ್‌ ಕಾರ್ತಿಕ್‌, ಸುಯಾಸ್ ಪ್ರಭುದೇಸಾಯಿ, ವಿಲ್‌ ಜಾಕ್ಸ್‌, ಮಹಿಪಾಲ್‌ ಲಾಮ್ರೋರ್‌, ಕರಣ್‌ ಶರ್ಮಾ, ಮನೋಜ್‌ ಭಾಂದಗೆ, ಮಯಾಂಕ್‌ ದಾಗರ್‌, ವಿಜಯ್‌ಕುಮಾರ್‌ ವೈಶಾಕ್‌, ಆಕಾಶ್‌ ದೀಪ್‌, ಮೊಹಮ್ಮದ್‌ ಸಿರಾಜ್‌, ರೀಸಿ ಟಾಪ್ಲೇ, ಹಿಮಾಂಶು ಶರ್ಮಾ, ರಾಜನ್‌ ಕುಮಾರ್‌, ಕ್ಯಾಮರೂನ್‌ ಗ್ರೀನ್‌, ಅಲ್ಜಾರಿ ಜೋಸೆಫ್‌, ಯಶ್‌ ದಯಾಳ್‌, ಲಾಕಿ ಫರ್ಗ್ಯೂಸನ್‌, ಟಾಮ್ ಕರನ್‌, ಸೌರವ್‌ ಚೌಹಾಣ್‌, ಸ್ವಪ್ನಿಲ್‌ ಸಿಂಗ್

ಒಟ್ಟು ಆಟಗಾರರು: 25

ವಿದೇಶಿ ಆಟಗಾರರು: 8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT