ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ನಲ್ಲಿ ಎಂಜಲೊಂದೇ ಸಮಸ್ಯೆಯಲ್ಲ!

Last Updated 28 ಮೇ 2020, 9:12 IST
ಅಕ್ಷರ ಗಾತ್ರ

ಕೊರೊನಾ ವೈರಸ್‌..ಇಡೀ ಜಗತ್ತಿನ ಜೀವನವನ್ನೇ ಬುಡಮೇಲು ಮಾಡಿದ ಮಹಾಮಾರಿ. ಇದೀಗ ಕೆಲವು ಕ್ರೀಡೆಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ರೂಢಿಗಳನ್ನೂ ನುಂಗಿ ನೀರು ಕುಡಿಯುವಂತೆ ಕಾಣುತ್ತಿದೆ.

ಹೌದು; ಕ್ರಿಕೆಟ್‌ ಪಂದ್ಯಗಳಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು, ಬೆವರು ಬಳಸಬೇಕೋ ಬೇಡವೋ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಚೆಂಡು ವಿರೂಪ ತಡೆಯ ನಿಯಮಾವಳಿಯನ್ನೇ ತಿದ್ದುಪಡಿ ಮಾಡಲು ಐಸಿಸಿ ಯೋಚಿಸುತ್ತಿದೆ.

ಈಗಾಗಲೇ ಎಂಜಲು ಮತ್ತು ಬೆವರಿಗೆ ಪರ್ಯಾಯವಾಗಿ ಬಳಸುವ ಪದಾರ್ಧ ಏನಿರಬೇಕು ಎಂಬುದರ ಕುರಿತ ಚಿಂತನೆಯೂ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಬಹಳಷ್ಟು ಆಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಾಜಿ ಬೌಲರ್‌ಗಳಾದ ಆಶಿಶ್ ನೆಹ್ರಾ, ಸ್ಪಿನ್ನರ್ ಹರಭಜನ್ ಸಿಂಗ್ ಅವರು ಈಗಾಗಲೇ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಎಂಜಲು, ಬೆವರು ಬಳಕೆ ನಿಷೇಧ ಬೇಡ ಎಂದಿದ್ದಾರೆ. ಆದರೆ ಇದೆಲ್ಲದರ ನಡುವೆಯೇ ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ಎಂಜಲು, ಬೆವರು ಬಳಕೆಗೆ ತಡೆಹಾಕಲಾಗಿದೆ. ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯೂ ತಾತ್ಕಾಲಿಕವಾಗಿ ಎಂಜಲು ಬಳಕೆಯನ್ನು ನಿಷೇಧಿಸಬೇಕು ಎಂದು ಶಿಫಾರಸು ಮಾಡಿದೆ. ಕೊರೊನಾ ಸಮಸ್ಯೆ ಮುಗಿದ ಮೇಲೆ ಮತ್ತೆ ಹಳೆಯ ನಿಯಮಗಳನ್ನು ಪಾಲಿಸಬಹುದು ಎಂದೂ ಸಲಹೆ ನೀಡಿದ್ದಾರೆ. ಗುರುವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯದ ಕುರಿತು ನಿರ್ಧಾರ ಹೊರಹೊಮ್ಮುವ ಸಾಧ್ಯತೆ ಇದೆ.

ಎಂಜಲಿಲ್ಲದಿದ್ದರೆ..?

ಕ್ರಿಕೆಟ್‌ ಯಾವಾಗಲೂ ಬ್ಯಾಟ್ಸ್‌ಮನ್‌ಗಳ ಆಟವೆಂದೇ ಪ್ರಚಲಿತ. ಆದರೆ, ಬ್ಯಾಟ್ಸ್‌ಮನ್‌ಗಳ ರನ್‌ಗಳಿಕೆಯನ್ನು ನಿಯಂತ್ರಿಸಲು ಬೌಲರ್‌ಗಳು ಹೊಸ ಹೊಸ ತಂತ್ರಗಳನ್ನು ರೂಢಿಸಿಕೊಂಡರು. ತಮ್ಮ ಬತ್ತಳಿಕೆಯಲ್ಲಿ ಇನ್‌ಸ್ವಿಂಗ್, ಔಟ್‌ಸ್ವಿಂಗ್, ರಿವರ್ಸ್‌ ಸ್ವಿಂಗ್, ಲೆಗ್‌ಸ್ಪಿನ್, ಡ್ರಿಫ್ಟ್‌, ಗೂಗ್ಲಿ, ಕೇರಂ ಬಾಲ್, ದೂಸ್ರಾ ಇತ್ಯಾದಿ ಅಸ್ತ್ರಗಳನ್ನು ಇಟ್ಟುಕೊಂಡಿದ್ದಾರೆ. ಇದೆಲ್ಲದರ ಹಿಂದೆ ಬಯೋಮೆಕ್ಯಾನಿಕಲ್ ಅಂಶಗಳಿವೆ.

ಲೆದರ್‌ ಬಾಲ್ ಸ್ವಿಂಗ್ ಆಗಬೇಕೆಂದರೆ ಅದರ ಒಂದು ಬದಿಯು ಉತ್ತಮವಾಗಿ ಹೊಳೆಯುತ್ತಿರಬೇಕು. ಅದರಿಂದ ಚೆಂಡು ಪಿಚ್‌ ಮೇಲೆ ಚೆಂಡು ಲ್ಯಾಂಡ್ ಆದಾಗ ಸ್ವಿಂಗ್ ಆಗಿ ಬ್ಯಾಟ್ಸ್‌ಮನ್‌ಗೆ ಸವಾಲೊಡ್ಡಲು ಎಂಜಲಿನ ಲೇಪನ ಇದ್ದರೆ ಒಳ್ಳೆಯದು. ಆದರೆ, ಎಂಜಲು ಅಥವಾ ಬೆವರು ಹಾಕುವುದರಿಂದ ಚಂಡಿನ ಮೇಲ್ಪದರವು ಬೇಗನೆ ಹೀರಿಕೊಳ್ಳುತ್ತದೆ. ಆದರೆ ವ್ಯಾಸಲೀನ್, ಜೆಲ್ಲಿ ಹಾಕುವುದರಿಂದ ಚೆಂಡು ಹೊಳೆಯುತ್ತದೆ. ಬೇಗ ಒಣಗುವುದಿಲ್ಲ. ಆದರೆ ಸ್ವಿಂಗ್ ಆಗುವ ಸಂಭವ ತೀರಾ ಕಡಿಮೆ.

‘1976ರಲ್ಲಿ ಇಂಗ್ಲೆಂಡ್‌ನ ಜಾನ್ ಲೀವರ್ ವ್ಯಾಸಲೀನ್ ಬಳಸಿದ ಉದಾಹರಣೆ ಇದೆ. ಆದರೆ ಅವರು ಅದರೊಂದಿಗೆ ಬೆವರು ಮತ್ತು ಎಂಜಲನ್ನೂ ಬಳಸಿರಲೇಬೇಕು. ವ್ಯಾಸಲೀನ್ ಹಾಕುವುದರಿಂದ ಚೆಂಡು ಪಿಚ್‌ನಲ್ಲಿ ಸ್ಕಿಡ್ ಆಗಬಹುದು’ ಎಂದು ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಹೇಳಿದ್ದಾರೆ.

ಹೊಳಪಿಲ್ಲದ ಚೆಂಡನ್ನು ಪ್ರಯೋಗಿಸುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಇದು ಅನುಕೂಲವಾಗುವ ಸಾಧ್ಯತೆ ಹೆಚ್ಚು ಎಂಬುದು ಬಹುತೇಕ ಬೌಲರ್‌ಗಳ ಆತಂಕ. ಆಗ ಬೌಲಿಂಗ್ ಎಂಬ ಸುಂದರ ಕಲೆಯೇ ನಶಿಸಿ ಹೋದರೆ ಹೇಗೆ? ಎಂಬ ಚಿಂತೆ ಮತ್ತೊಂದು ಕಡೆ. ಹಾಗಿದ್ದರೆ ಕ್ರಿಕೆಟ್‌ನಲ್ಲಿ ಎಂಜಲು ಮತ್ತು ಬೆವರ ಬಳಕೆಯಿಂದ ಮಾತ್ರವಷ್ಟೇ ಸೋಂಕು ಹರಡುವ ಸಾಧ್ಯತೆ ಇದೆಯೇ? ‌

ಸ್ಟ್ರೈಕರ್ ಮತ್ತು ನಾನ್‌ ಸ್ಟ್ರೈಕರ್‌ ಬ್ಯಾಟ್ಸ್‌ಮನ್‌ಗಳು ಪರಸ್ಪರ ಬಳಿ ನಿಂತು ರನ್‌ ಗಳಿಕೆಯ ಯೋಜನೆ ರೂಪಿಸುವಾಗ ಅಪಾಯವಿಲ್ಲವೇ? ಸ್ಪಿನ್ನರ್ ಬೌಲಿಂಗ್ ಮಾಡುವಾಗ ಬ್ಯಾಟ್ಸ್‌ಮನ್‌ಗೆ ಸಮೀಪದಲ್ಲಿಯೇ ವಿಕೆಟ್‌ಕೀಪರ್, ಶಾರ್ಟ್‌ ಲೆಗ್‌, ಸಿಲ್ಲಿ ಪಾಯಿಂಟ್ ಫೀಲ್ಡರ್‌ಗಳು ಇರುತ್ತಾರೆ. ಅವರಲ್ಲಿ ಯಾರಿಗಾದರೂ ಸೋಂಕಿದ್ದರೆ ಹರಡುವುದಿಲ್ಲವೇ?

ಅಷ್ಟೇ ಏಕೆ, ಜೊತೆಗೂಡಿ ಪ್ರಯಾಣಿಸುವಾಗ, ಡ್ರೆಸ್ಸಿಂಗ್ ರೂಮ್‌, ಹೋಟೆಲ್ ಕೋಣೆ, ಊಟ ಮಾಡುವ ಸ್ಥಳಗಳಲ್ಲಿಯೂ ಸೋಂಕು ಹರಡುವ ಸಾಧ್ಯತೆ ಇದ್ದೇ ಇದೆ. ಇದೆಲ್ಲವನ್ನೂ ಐಸಿಸಿ ಅನುಲಕ್ಷಿಸಬೇಕು. ಈ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಏನು ಕ್ರಮಕೈಗೊಳ್ಳುತ್ತದೆ ಎಂಬ ಕುತೂಹಲವೂ ಈಗ ಆಟಗಾರರಲ್ಲಿದೆ.

ಇದೆಲ್ಲದರ ಹೊರತಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸೋಂಕಿತರಿದ್ದರೆ ಏನು ಗತಿ ಎಂಬ ಪ್ರಶ್ನೆಯೂ ಇದೆ. ಒಂದೊಮ್ಮೆ ಬ್ಯಾಟ್ಸ್‌ಮನ್ ಸಿಕ್ಸರ್‌ಗೆ ಎತ್ತಿದ ಚೆಂಡನ್ನು ಅಕಸ್ಮಾತ್ ಕೊರೊನಾ ಇರುವ (ಆತನಿಗೇ ಗೊತ್ತಿರುವುದಿಲ್ಲ) ವ್ಯಕ್ತಿಯು ಹಿಡಿದು ಫೀಲ್ಡರ್‌ಗೆ ಮರಳಿಸಬಹುದು. ಆ ವ್ಯಕ್ತಿಯ ಅಂಗೈಯಲ್ಲಿ ವೈರಾಣುಗಳಿದ್ದರೆ ಅದು ಚೆಂಡಿನ ಮೂಲಕ ಫೀಲ್ಡರ್‌ಗೆ ಹಾಗೂ ಆತನ ಮೂಲಕ ತಂಡದೊಳಗೆ ‘ಪದಾರ್ಪಣೆ’ ಮಾಡಬಹುದಲ್ಲವೇ?

ಈ ಸಮಸ್ಯೆಗೂ ಒಂದು ಪರಿಹಾರ ಸೂತ್ರವನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯು (ಇಸಿಬಿ) ಕೊಡುವ ಪ್ರಯತ್ನ ಮಾಡುತ್ತಿದೆ. ಬಯೋ ಸೆಕ್ಯೂರ್ (ಜೀವ ಸುರಕ್ಷೆ) ತಾಣಗಳನ್ನು ರೂಪಿಸಬೇಕು. ಅಲ್ಲಿ ಪಂದ್ಯಗಳನ್ನು ನಡೆಸಬೇಕು. ಅದಕ್ಕಾಗಿ ಆಟಗಾರರು, ಪ್ರೇಕ್ಷಕರು ಮತ್ತಿತರರ ತಪಾಸಣೆ, ಸೋಂಕುನಿವಾರಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದೆ.

ಆದರೆ ಈ ಪರಿಕಲ್ಪನೆಯು ಅಷ್ಟೇನೂ ಅವಾಸ್ತವಿಕ ಎಂಬುದು ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಅವರ ಅಭಿಪ್ರಾಯ.

‘ ಒಂದು ಟೆಸ್ಟ್ ಪಂದ್ಯಕ್ಕೂ ಮುನ್ನ ಎಲ್ಲರನ್ನೂ ಪರೀಕ್ಷೆ ಮಾಡಿ ಕಣಕ್ಕಿಳಿಸಲಾಗುತ್ತದೆ. ಆದರೆ, ಒಂದೊಮ್ಮೆ ಪಂದ್ಯದ ಎರಡೋ ಅಥವಾ ಮೂರನೇ ದಿನ ಯಾವುದಾದರೂ ಒಬ್ಬ ಆಟಗಾರನಿಗೆ ಸೋಂಕು ದೃಢಪಟ್ಟಾಗ ಏನು ಮಾಡಬೇಕು? ಸದ್ಯದ ಆರೋಗ್ಯ ಇಲಾಖೆಯ ನಿಯಮದಂತೆ ಆ ಸೋಂಕಿತನ ಸಂಪರ್ಕದಲ್ಲಿರುವವರೆಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕಾಗುತ್ತದೆ. ಇದರರ್ಥ ಆ ಟೆಸ್ಟ್ ಪಂದ್ಯವು ಅರ್ಧಕ್ಕೆ ಸ್ಥಗಿತವಾಗುತ್ತದೆ. ಅಷ್ಟೇ ಏಕೆ, ಇಡೀ ಸರಣಿಯೇ ರದ್ದಾಗಬಹುದು. ಜೊತೆಗೆ ಅದಕ್ಕಾಗಿ ಮಾಡಿದ ಅಪಾರ ವೆಚ್ಚವು ನೀರಿನಲ್ಲಿ ಕೊಚ್ಚಿಹೋದಂತಾಗುತ್ತದೆ’ ಎಂದು ದ್ರಾವಿಡ್ ಹೇಳುತ್ತಾರೆ.

ಈ ಎಲ್ಲ ಚರ್ಚೆಗಳನ್ನೂ ಅವಲೋಕಿಸಿದರೆ, ಕೋವಿಡ್ ಕಾಲದ ಕ್ರಿಕೆಟ್‌ಗೆ ಎಂಜಲೊಂದೇ ಸಮಸ್ಯೆಯಲ್ಲ. ಇನ್ನೂ ಹತ್ತಾರು ಸಮಸ್ಯೆ–ಸವಾಲುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಆಟಗಾರರ ಆರೋಗ್ಯ ಮತ್ತು ಜೀವರಕ್ಷಣೆಗೆ ಆದ್ಯತೆ ನೀಡುವ ಸವಾಲು ಮುಖ್ಯವಾದದ್ದು.

ಉಪ್ಪು ಇಲ್ಲದ ಊಟ!

ಚೆಂಡಿಗೆ ಎಂಜಲು ಬಳಸದಿರುವುದು ಊಟಕ್ಕೆ ಉಪ್ಪು ಹಾಕದಿರುವುದು ಎರಡೂ ಒಂದೇ. ಈಗ ಉದ್ದೀಪನ ಮದ್ದು ಸೇವನೆಯ ಪರೀಕ್ಷೆ ಮಾಡಲಾಗುತ್ತಿದೆ ಅಲ್ಲವೇ? ಅದೇ ರೀತಿ ಕೊರೊನಾ ಟೆಸ್ಟ್‌ ಮಾಡಲು ವ್ಯವಸ್ಥೆ ಮಾಡಬೇಕು. ಆಟಗಾರರ ಸುರಕ್ಷತೆ ಮತ್ತುಆರೋಗ್ಯ ಪರೀಕ್ಷೆಯ ಮಾನದಂಡ ಬದಲಿಸಿ. ಕೊರೊನಾ ಸೋಂಕು ಇಲ್ಲದವನ ಎಂಜಲಿನಿಂದ ರೋಗ ಹರಡುವುದಿಲ್ಲ. ಎಂಜಲು ನಿಷೇಧಿಸಿದರೂ ರೋಗ ಹರಡಲು ಬೇರೆ ಮಾರ್ಗಗಳಿವೆ ಎಂಬುದನ್ನೂ ನೋಡಬೇಕು.

ದೊಡ್ಡಗಣೇಶ

ಗೋವಾ ಕ್ರಿಕೆಟ್ ತಂಡದ ಮುಖ್ಯ ಕೋಚ್

****

ಐದನೇ ಓವರ್‌ನಲ್ಲಿಯೇ ರಿವರ್ಸ್ ಸ್ವಿಂಗ್!

ಚೆಂಡು ವಿರೂಪಗೊಳಿಸುವುದನ್ನು ನಿಯಮಬದ್ಧಗೊಳಿಸಿದರೆ ಆಟಗಾರರು ಬಾಟಲಿಯ ಮುಚ್ಚಳದಿಂದ ಚೆಂಡಿನ ಹೊಳಪು ಹೆಚ್ಚಿಸುತ್ತಾರೆ. ಆಗ ಇನಿಂಗ್ಸ್‌ನಲ್ಲಿ ಐದು ಓವರ್‌ಗಳು ಕಳೆಯುವಷ್ಟರಲ್ಲಿ ಚೆಂಡು ರಿವರ್ಸ್‌ ಸ್ವಿಂಗ್ ಆಗುತ್ತದೆ. ಇದು ಸರಿಯೇ? ಎಂಜಲು ಬಳಕೆ ನಿಷೇಧಿಸಿದರೆ ಸ್ವಿಂಗ್‌ ತಂತ್ರವನ್ನು ಕೈಬಿಟ್ಟಂತೆಯೇ ಸರಿ.

ಹರಭಜನ್ ಸಿಂಗ್

ಆಫ್‌ಸ್ಪಿನ್ನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT