ಶನಿವಾರ, ಫೆಬ್ರವರಿ 22, 2020
19 °C

ಸಂಜು ಸ್ಯಾಮ್ಸನ್ ‘ಅಲ್ಪವಿರಾಮ’: ಆಯ್ಕೆ ಸಮಿತಿ ವಿರುದ್ಧ ಟ್ವಿಟರ್‌ನಲ್ಲಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದ ಯುವ ಕ್ರಿಕೆಟಿಗ ಹಾಗೂ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಮಾಡಿರುವ ಟ್ವೀಟ್‌ವೊಂದು ವೈರಲ್‌ ಆಗಿದೆ. ಭಾರತ ಏಕದಿನ ವಿಶ್ವಕಪ್‌ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿರುವುದರಿಂದ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರನಿಗಾಗಿ ಟೀ ಇಂಡಿಯಾ ಹುಡುಕಾಟ ನಡೆಸುತ್ತಿದೆ.

ಸೀಮಿತ ಓವರ್‌ಗಳ ಮಾದರಿಯಲ್ಲಿ ರಿಷಭ್‌ ಪಂತ್‌ಗೆ ಅವಕಾಶ ನೀಡಲಾಗಿದೆ. ಪಂತ್‌, ಇತ್ತೀಚೆಗೆ ಮುಗಿದ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ತುಸು ಗಮನ ಸೆಳೆದರೂ ವಿಕೆಟ್‌ ಕೀಪಿಂಗ್‌ನಲ್ಲಿ ಮಂಕಾಗಿದ್ದರು. ಹೀಗಾಗಿ ನಂತರ ನಡೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಸ್ಯಾಮ್ಸನ್‌ರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಆಡಲು ಅವಕಾಶ ಸಿಕ್ಕಿದ್ದು ಒಂದೇ ಪಂದ್ಯದಲ್ಲಿ ಮಾತ್ರ. ಅದರಲ್ಲಿ ಅವರು ಆರು ರನ್‌ ಗಳಿಸಿ ಔಟಾಗಿದ್ದರು.

ಇದೇ ತಿಂಗಳು 5 ಟಿ20 ಸರಣಿ ಆಡಲು ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಿಂದ ಸ್ಯಾಮ್ಸನ್‌ಗೆ ಕೋಕ್‌ ನೀಡಲಾಗಿದೆ. ಅದಲ್ಲದೆ, ಸದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದ ವೇಳೆ ಪಂತ್‌ ತಲೆಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಅವರು ಎರಡನೇ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಸಂಜುಗೆ ಅವಕಾಶ ನಿರೀಕ್ಷಿಸಲಾಗಿತ್ತು. ಆದರೆ, ಈ ಪಂದ್ಯಕ್ಕೆ ಆಂಧ್ರಪ್ರದೇಶದ ಕೆ.ಎಸ್‌. ಭರತ್‌ಗೆ ಸ್ಥಾನ ನೀಡಲಾಗಿದೆ.

ಇದೇ ವೇಳೆ ಸಂಜು ಸ್ಯಾಮ್ಸನ್‌ ಅಲ್ಪವಿರಾಮ ಚಿಹ್ನೆಯನ್ನಷ್ಟೇ ಹಾಕಿ ಟ್ವೀಟ್‌ ಮಾಡಿದ್ದಾರೆ. ಅದು ವೈರಲ್‌ ಆಗಿದೆ. ನ್ಯೂಜಿಲೆಂಡ್ ಪ್ರವಾಸದಿಂದ ಕೈಬಿಟ್ಟಿರುವುದಕ್ಕೆ, ಆಸ್ಟ್ರೇಲಿಯಾ ವಿರುದ್ಧದ ಉಳಿದ ಪಂದ್ಯಗಳಿಗೆ ಪರಿಗಣಿಸದಿರುವುದಕ್ಕೆ ಬೇಸರಗೊಂಡು ಈ ರೀತಿ ಟ್ವೀಟ್‌ ಮಾಡಿರಬಹುದು ಎನ್ನಲಾಗಿದೆ.

ಸಂಜು ಟ್ವೀಟ್‌ ಸುಮಾರು 11 ಸಾವಿರಕ್ಕೂ ಹೆಚ್ಚು ಲೈಕ್‌ ಗಿಟ್ಟಿಸಿಕೊಂಡಿದ್ದು, 1.4 ಸಾವಿರ ಜನರು ರೀಟ್ವೀಟ್‌ ಮಾಡಿಕೊಂಡಿದ್ದಾರೆ.

‘ಇದೇ ಅಂತ್ಯವಲ್ಲ. ಇದು ಕೇವಲ ಅಲ್ಪವಿರಾಮ ಅಷ್ಟೇ. ಆಟ ಇನ್ನೂ ಬಾಕಿ ಇದೆ ಎಂಬುದು ನಮಗೆ ಅರ್ಥವಾಗಿದೆ’ ಎಂಬರ್ಥದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ‘ಅವಕಾಶಕ್ಕಾಗಿ ಹೀಗೆ ‘,’ ಟೈಪ್‌ ಮಾಡುವ ಬದಲು ಸ್ಥಿರ ಪ್ರದರ್ಶನದೊಂದಿಗೆ ಹೆಚ್ಚಾಗಿ ರನ್‌ ಗಳಿಸು. ಆ ಮೂಲಕ ತಂಡದ ಬಾಗಿಲು ತಟ್ಟು’ ಎಂದು ಸಲಹೆ ನೀಡಿದ್ದಾರೆ. ಬಿಸಿಸಿಐ ತಂಡದ ಆಯ್ಕೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂಬರ್ಥದ ಅಸಮಾಧಾನದ ಪ್ರತಿಕ್ರಿಯೆಗಳೂ ಬಂದಿವೆ.

ಅಂದಹಾಗೆ, ಚುಟುಕು ಕ್ರಿಕೆಟ್‌ಗೆ 2015ರಲ್ಲೇ ಪದಾರ್ಪಣೆ ಮಾಡಿರುವ ಸಂಜು ಇದುವರೆಗೆ ಆಡಿರುವುದು ಎರಡು ಪಂದ್ಯಗಳನ್ನು ಮಾತ್ರ. 2017ರಲ್ಲಿ ಪದಾರ್ಪಣೆ ಮಾಡಿದ ಪಂತ್‌ 11 ಟೆಸ್ಟ್‌, 16 ಏಕದಿನ ಮತ್ತು 28 ಟಿ20 ಪಂದ್ಯ ಆಡಿದ್ದಾರೆ.

2019 ಏಕದಿನ ವಿಶ್ವಕಪ್‌ಗೆ ಅಂಬಟಿ ರಾಯುಡು ಅವರನ್ನು ಕಡೆಗಣಿಸಿದ್ದ ಆಯ್ಕೆ ಸಮಿತಿ, ತಮಿಳುನಾಡು ಆಲ್ರೌಂಡರ್‌ ವಿಜಯ್ ಶಂಕರ್‌ ಅವರಿಗೆ ಮಣೆಹಾಕಿತ್ತು. ಬಳಿಕ, ಮೂರೂ (ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್) ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ಆಯ್ಕೆ ಮಾಡಿದ್ದೇವೆ ಎಂದು ಸಮರ್ಥನೆ ನೀಡಿತ್ತು.

ಇದರ ವಿರುದ್ಧ ಕಿಡಿಕಾರಿದ್ದ ರಾಯುಡು ಟ್ವಿಟರ್‌ನಲ್ಲಿ, ‘ವಿಶ್ವಕಪ್‌ ವೀಕ್ಷಿಸಲು ಈಗಷ್ಟೇ 3ಡಿ ಕನ್ನಡಕ ಆರ್ಡರ್‌ ಮಾಡಿದ್ದೇನೆ’ ಎಂದು ವ್ಯಂಗ್ಯವಾಡಿದ್ದರು. ಈ ಟ್ವೀಟ್‌ ಕೂಡ ಸಾಕಷ್ಟು ಸದ್ದು ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು