ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಯ ಹುಡುಕುತ್ತಾ...

Last Updated 24 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹಣದ ಲೆಕ್ಕಾಚಾರವೇ ಮೇಲುಗೈ ಸಾಧಿಸುತ್ತಿರುವ ಇಂದಿನ ಕ್ರಿಕೆಟ್‌ನಲ್ಲಿ ಒಂದಷ್ಟು ಸೊಗಡು ಉಳಿಸುವ ತಾಕತ್ತು ಇರುವುದು ಟೆಸ್ಟ್‌ ಕ್ರಿಕೆಟ್‌ಗೆ ಮಾತ್ರ. ಆದ್ದರಿಂದ ಟೆಸ್ಟ್‌ ಕ್ರಿಕೆಟ್ ಉಳಿಸುವ ಮತ್ತು ಅಭಿಮಾನಿಗಳನ್ನು ಅದರತ್ತ ಸೆಳೆಯುವ ಕಾರ್ಯಕ್ಕೆ ಭಾರತ ಕೈಜೋಡಿಸಿರುವುದು ಆಶಾದಾಯಕ ಬೆಳವಣಿಗೆ

ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಸುಗೆಂಪು ಚೆಂಡು ಪುಟಿಯಿತು. ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಉಳಿಸುವ ಒಂದು ಪ್ರಯತ್ನಕ್ಕೆ ಭಾರತವೂ ಕೈಜೋಡಿಸಿತು.

ಆದರೆ ಇಷ್ಟೇ ಸಾಕೆ? ಇದರಿಂದ ನಿಜಕ್ಕೂ ಟೆಸ್ಟ್ ಮಾದರಿಯನ್ನು ಉಳಿಸಲು ಸಾಧ್ಯವೇ? ಎಂಬ ಚರ್ಚೆಗಳು ಈಗ ಆರಂಭವಾಗಿವೆ.

‘ಇಷ್ಟೇ ಸಾಕಾಗುವುದಿಲ್ಲ. ಬೇರೆ ಬೇರೆ ವಿಧಗಳಿಂದಲೂ ಟೆಸ್ಟ್ ಜನಪ್ರಿಯತೆ ಹೆಚ್ಚಬೇಕು. ಕ್ರೀಡಾಂಗಣಗಳಲ್ಲಿ ಮೂಲಸೌಲಭ್ಯಗಳು ಅಭಿವೃದ್ಧಿಯಾಗಬೇಕು’ ಎಂದು ‘ವಾಲ್‌’ ಖ್ಯಾತಿಯ ಹಿರಿಯ ಬ್ಯಾಟ್ಸ್‌ಮನ್‌ ರಾಹುಲ್ ದ್ರಾವಿಡ್ ಹೇಳುತ್ತಾರೆ.

‘ಹಗಲು ರಾತ್ರಿ ಪಂದ್ಯಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಡಲು ಸಾಧ್ಯವಿಲ್ಲ. ವರ್ಷಕ್ಕೊಂದೋ ಎರಡೊ ಪರವಾಗಿಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳುತ್ತಾರೆ.

ಎಸ್‌.ಜಿ. ಚೆಂಡು, ಕುಕಬುರ‍್ರಾ ಚೆಂಡುಗಳು, ಪಿಂಕ್ ಬಾಲ್ ಗುಣಮಟ್ಟದ ಚರ್ಚೆಗಳು ತಾರಕಕ್ಕೇರಿವೆ. ಇದೆಲ್ಲದರ ನಡುವೆ ಟೆಸ್ಟ್‌ ಕ್ರಿಕೆಟ್‌ಗೆ ಅಸ್ತಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿ ಏಕೆ ಬಂತು ಎಂಬ ವಿಷಯ ಮಾತ್ರ ಪರದೆಯ ಹಿಂದೆ ಉಳಿದಿದೆ ಅಥವಾ ಬೇಕೆಂದೇ ಉಳಿಸಲಾಗುತ್ತಿದೆ ಎಂಬ ಭಾವನೆ ಬರದಿರದು.

ಟೆಸ್ಟ್ ಕ್ರಿಕೆಟ್ ಮಾದರಿ ಉಳಿಸಬೇಕು. ಕ್ರೀಡಾಂಗಣಕ್ಕೆ ಟೆಸ್ಟ್ ವೀಕ್ಷಿಸಲು ಬರುವ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕು ಎಂಬ ಕೂಗು ಎಲ್ಲ ಕಡೆ ಕೇಳಿ ಬರುತ್ತಿದೆ. ಟೆಸ್ಟ್ ಮಾದರಿಯ ಜನಪ್ರಿಯತೆ ಕುಗ್ಗಲು ಕಾರಣವಾಗಿದ್ದು ಬೇರೇನೂ ಅಲ್ಲ. ಅದು ಕ್ರಿಕೆಟ್‌ನ ಇತರ ಮಾದರಿಗಳಷ್ಟೇ!

ಹೌದು; ದಶಕಗಳ ಹಿಂದೆ ಕೆರಿ ಪ್ಯಾಕರ್ ಏಕದಿನ ಸರಣಿಯನ್ನು ಆರಂಭಿಸಿದಾಗಲೂ ಇಂತಹ ಕೂಗು ಕೇಳಿಬಂದಿತ್ತು. ಆದರೆ
50–50 ಮಾದರಿಯ ಅಬ್ಬರದಲ್ಲಿಯೂ ಟೆಸ್ಟ್ ಮಾದರಿ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. 15 ವರ್ಷಗಳ ಹಿಂದೆ ಟ್ವೆಂಟಿ–20 ಆರಂಭವಾಗಿದ್ದೇ ತಡ ಟೆಸ್ಟ್ ಮಾದರಿಗೆ ಅಸ್ತಿತ್ವದ ಪರೀಕ್ಷೆ ಎದುರಾಯಿತು. 2007ರಲ್ಲಿ ಟಿ–20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗೆದ್ದ ಮೇಲಂತೂ ಇಡೀ ವಿಶ್ವದ ಕ್ರಿಕೆಟ್‌ ಚಿತ್ರಣವೇ ಬದಲಾಗಿ ಹೋಯಿತು. ಅದರ ನಂತರದ ವರ್ಷದಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಹರಿಯಲಾರಂಭಿಸಿದ ಹಣದ ಹೊಳೆ ಎಲ್ಲರ ಕಣ್ಣು ಕುಕ್ಕಿತು. ಬಿಸಿಸಿಐ ಶ್ರೀಮಂತಿಕೆ ದುಪ್ಪಟ್ಟಾಯಿತು. ಎಲ್ಲ ದೇಶಗಳ ಆಟಗಾರರೂ ಐಪಿಎಲ್‌ನಲ್ಲಿ ಆಡಲು ತುದಿಗಾಲಿನಲ್ಲಿ ನಿಂತರು. ಬೌಂಡರಿ, ಸಿಕ್ಸರ್‌ಗಳ ಅಬ್ಬರ, ಚಿಯರ್ ಗರ್ಲ್ಸ್‌, ರಾಕ್ ಸಂಗೀತಗಳ ಸಡಗರದಲ್ಲಿ ಅಭಿಮಾನಿಗಳ ಹುಚ್ಚು ಹೊಳೆ ಹರಿಯಿತು. ಸಂಜೆಯ ಹೊತ್ತಿನ ಮನರಂಜನೆಯ ತಾಣವಾಗಿ ಕ್ರಿಕೆಟ್ ಅಂಗಳಗಳು ಪರಿವರ್ತನೆಗೊಂಡವು. ಇದರ ಇನ್ನೊಂದು ಮುಖವೂ ನಿಧಾನವಾಗಿ ಅನಾವರಣಗೊಂಡಿತು.

ಯುವ ಪೀಳಿಗೆಯ ಅಭಿರುಚಿ ಕೇವಲ ಚುಟುಕು ಕ್ರಿಕೆಟ್ ಆಯಿತು. ಟೆಸ್ಟ್ ಪಂದ್ಯಗಳು ನಡೆಯುವ ಕ್ರೀಡಾಂಗಣಗಳು ಖಾಲಿಯಾಗತೊಡಗಿದವು. ಇದು ಮೆಲ್ಲಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲಿಯೂ ಪರಿಣಾಮ ಬೀರತೊಡಗಿತು. ಹಿರಿಯ ಕ್ರಿಕೆಟಿಗರು ಆತಂಕ ವ್ಯಕ್ತಪಡಿಸತೊಡಗಿದರು. ಟಿ–20 ಮಾದರಿಯಲ್ಲಿ ಕ್ರಿಕೆಟ್‌ನ ಸೊಗಡು ಮರೆಯಾಗುತ್ತಿರುವ ಟೀಕೆಗಳಿಂದ ಎಚ್ಚೆತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಕ್ರಿಕೆಟ್ ಉಳಿಸಲು ಹೊಸ ಹೊಸ ಉಪಕ್ರಮಗಳಿಗೆ ಕೈಹಾಕಿತು. ಅದರ ಫಲವೇ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಮರುಜೀವ. ಅದರ ಹಿಂದೆಯೇ ಈಗ ಹೊನಲು ಬೆಳಕಿನ ಟೆಸ್ಟ್.

2015ರಲ್ಲಿ ಆಸ್ಟ್ರೇಲಿಯಾ ಮೊದಲ ಹೊನಲು ಬೆಳಕಿನ ಪಂದ್ಯ ಆಡಿತು. ಆದರೆ, ಚೆಂಡು ಮತ್ತಿತರ ತಾಂತ್ರಿಕ ಕಾರಣಗಳಿಂದ ಭಾರತ ಹಗಲು ರಾತ್ರಿ ಟೆಸ್ಟ್‌ನಿಂದ ದೂರವೇ ಉಳಿಯಿತು. ಇದೀಗ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಕೂಡಲೇ ಹೊನಲು ಬೆಳಕು ಬೆಳಗಿದೆ.

ಭಾರತ ಕ್ರಿಕೆಟ್‌ ಪ್ರೇಮದ ವೈಚಿತ್ರ್ಯ

ಕ್ರಿಕೆಟ್‌ ಒಂದು ಧರ್ಮದಂತೆ ಬೆಳೆದಿರುವ ಭಾರತದಲ್ಲಿ ನಿಜವಾಗಿಯೂ ಕ್ರಿಕೆಟ್ ಪ್ರೀತಿ ಇದೆಯೇ ಎಂಬ ಅನುಮಾನ ಆಗಾಗ ಕಾಡುವುದು ಸಹಜ. ಏಕೆಂದರೆ, ಥಳಕು ಬಳುಕಿನ ಟಿ–20 ಪಂದ್ಯಕ್ಕೆ ಸೇರುವ ಅರ್ಧದಷ್ಟು ಜನರು ಟೆಸ್ಟ್ ಪಂದ್ಯಕ್ಕೆ ಸೇರುವುದಿಲ್ಲ. ಆದರೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯುವ ಆ್ಯಷಸ್ ಟೆಸ್ಟ್‌ ಸರಣಿಯನ್ನು ನೋಡಿ.

ಎಲ್ಲ ಐದು ದಿನಗಳಲ್ಲಿಯೂ ಕ್ರೀಡಾಂಗಣದ ಗ್ಯಾಲರಿಗಳು ಭರ್ತಿಯಾಗಿರುತ್ತವೆ. ಜನರು ತಮ್ಮ ಕೆಲಸಗಳನ್ನು ಬಿಟ್ಟು ಪಂದ್ಯಗಳಿಗೆ ಧಾವಿಸುತ್ತಾರೆ. ಉಭಯ ದೇಶಗಳ ನಡುವೆ ಅಭಿಮಾನಿಗಳ ಪ್ರವಾಸ ನಡೆಯುತ್ತದೆ. ತಮ್ಮ ದುಡಿಮೆಯ ಒಂದು ಭಾಗವನ್ನು ಈ ಸರಣಿಯನ್ನು ನೋಡಲೆಂದೇ ವಿನಿಯೋಗಿಸುತ್ತಾರೆ. ಆದರೂ ಅಲ್ಲಿ ಟೆಸ್ಟ್ ಉಳಿಸಬೇಕೆಂಬ ಅಭಿಯಾನ ಬಹಳ ಮೊದಲೇ ಆರಂಭವಾಯಿತು. ಅದೇ ಕಾರಣಕ್ಕೆ ಈ ವರ್ಷ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಕೂಡ ಆರಂಭಿಸಲಾಗಿದೆ.

ಕ್ರಿಕೆಟ್‌ನ ಮೂಲಬೇರು ಮತ್ತು ಸ್ವಂತಿಕೆ ಇರುವ ಟೆಸ್ಟ್ ಮಾದರಿ ಉಳಿಯಲೇಬೇಕು ಎಂಬ ಐಸಿಸಿಯ ಉತ್ಕಟತೆಯಿಂದಾಗಿ ಯೋಚನೆ, ಯೋಜನೆ ಗಳು ಆರಂಭವಾದವು. ನಿಯಮಗಳು, ತಂತ್ರಜ್ಞಾನಗಳನ್ನು ಸುಧಾರಣೆ ಮಾಡಲಾಯಿತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ನಿಗದಿಯ ಓವರ್ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಪ್ರತ್ಯೇಕ ತಂಡಗಳನ್ನೇ ಕಟ್ಟಿದವು. ಇದರಿಂದಾಗಿ ಹೆಚ್ಚು ಪ್ರತಿಭಾನ್ವಿತರಿಗೆ ಅವಕಾಶ ಕೊಡಲು ಸಾಧ್ಯವಾಯಿತು.

ಇಂತಹ ಪ್ರಯೋಗ ಭಾರತದಲ್ಲಿ ಇನ್ನೂ ಆಗಬೇಕಿದೆ. ಏಕೆಂದರೆ ಇಲ್ಲಿ ಪ್ರತಿಭಾವಂತ ಆಟಗಾರರಿಗೆ ಕೊರತೆಯಂತೂ ಇಲ್ಲ. ಇತಿಹಾಸ ಮರುಕಳಿಸುವಂತೆ ಟೆಸ್ಟ್ ಕ್ರಿಕೆಟ್‌ ಕೂಡ ತನ್ನ ಜನಪ್ರಿಯತೆ ಮರಳಿ ಗಳಿಸಿಕೊಳ್ಳುವ ಆಶಾಭಾವ ಬಹಳಷ್ಟು ಜನಕ್ಕೆ ಇದೆ.

ಏಕೆಂದರೆ, ನಿಗದಿಯ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಮತ್ತಿತರ ಅನಿಷ್ಟಗಳ ತಾಂಡವದಿಂದ ಕ್ರಿಕೆಟ್‌ ಪ್ರೇಮಿಗಳ ಮನಸ್ಸು ಒಡೆಯುತ್ತಿರುವುದು ಸುಳ್ಳಲ್ಲ. ಮುಂದೊಂದು ದಿನ ಇದು ಆ ಮಾದರಿಯ ಕ್ರಿಕೆಟ್‌ಗೆ ತಿರುಗುಬಾಣವಾದರೆ ಅಚ್ಚರಿಯೂ ಇಲ್ಲ. ಕೇವಲ ಟಿ–20 ನೆಚ್ಚಿಕೊಂಡ ವಿಂಡೀಸ್ ಇವತ್ತು ಅನುಭವಿಸುತ್ತಿರುವ ಪಾಡು ಎಲ್ಲರಿಗೂ ಕಾಣುತ್ತಿದೆ. ಕ್ರಿಕೆಟ್‌ ಲೋಕದ ದೈತ್ಯರ ಬೀಡು ಈಗ ಅಫ್ಘಾನಿಸ್ತಾನದಂತಹ ಅಂಬೆಗಾಲಿಡುವ ಕೂಸಿನ ಎದುರು ಮಂಡಿಯೂರುತ್ತಿದೆ. ಆದ್ದರಿಂದ ಕ್ರಿಕೆಟ್‌ ಉಳಿಯಬೇಕೆಂದರೆ ಎಲ್ಲ ದೇಶಗಳೂ ಮರಳಿ ಮೂಲಕ್ಕೆ ಹೋಗುವ ಅನಿವಾರ್ಯತೆ ಇದೆ. ಭಾರತಕ್ಕಂತೂ ಅದು ಅತ್ಯಗತ್ಯ. ಕ್ರಿಕೆಟ್‌ನ ದೊಡ್ಡ ಮಾರುಕಟ್ಟೆಯೂ ಆಗಿರುವ ಇಲ್ಲಿ ಮೂರು ಮಾದರಿಗಳಿಗೂ ಪ್ರತ್ಯೇಕ ಫ್ಯಾನ್ ಬೇಸ್ ಸೃಷ್ಟಿಸಿಕೊಳ್ಳುವ ಅವಕಾಶ ಇದೆ. ಅದನ್ನೇ ಐಸಿಸಿಯೂ ಕೂಡ ನಿರೀಕ್ಷಿಸುತ್ತಿದೆ. ಇದರಿಂದ ಇಡೀ ವಿಶ್ವದ ಕ್ರಿಕೆಟ್‌ಗೆ ಲಾಭ ಎನ್ನುವ ನಿರೀಕ್ಷೆಯೂ ಇದೆ. ಐಪಿಎಲ್‌ನಿಂದ ಆದ ಪ್ರಮಾದವನ್ನು ಸರಿಪಡಿಸಲು ಇರುವ ಅವಕಾಶವೂ ಇದಾಗಿದೆ!

ಸ್ವದೇಶಿ ಪಿಂಕ್ ಬಾಲ್

ಕ್ರಿಕೆಟ್‌ ಆಟವು ಬ್ರಿಟಿಷರ ಕೊಡುಗೆಯಾಗಿದೆ. ಆದರೆ, ಈ ಆಟವು ಜನಪ್ರಿಯವಾಗಿದ್ದರ ಹಿಂದೆ ಭಾರತದ ಪಾತ್ರವೇ ದೊಡ್ಡದು. ಇದೀಗ ಈಡನ್ ಗಾರ್ಡನ್‌ನ ಪಿಂಕ್ ಟೆಸ್ಟ್‌ನಲ್ಲಿ ಬಳಕೆಯಾದ ಚೆಂಡು ಸ್ವದೇಶದಲ್ಲಿಯೇ ಸಿದ್ಧವಾಗಿರುವುದು ವಿಶೇಷ. ಉತ್ತರಪ್ರದೇಶದ ಮೀರತ್‌ನಲ್ಲಿ ಸೆನ್ಸ್‌ಪೆರಿಲ್ಸ್‌ ಗ್ರೀನ್‌ಲ್ಯಾಂಡ್ಸ್‌ (ಎಸ್‌.ಜಿ) ಚೆಂಡಿನ ಕಾರ್ಖಾನೆಯಿದೆ. ಆಸ್ಟ್ರೇಲಿಯಾದಲ್ಲಿರುವ ಕುಕಬುರ‍್ರಾ ಚೆಂಡಿನ ಕಾರ್ಖಾನೆಯ ಮಾದರಿಯಲ್ಲಿಯೇ ಇಲ್ಲಿಯೂ ಇದೆ. ಉಪಖಂಡದಲ್ಲಿ ಕುಕಬುರ‍್ರಾ ಚೆಂಡಿನ ಬಳಕೆಯನ್ನು ವ್ಯಾಪಕಗೊಳಿಸುವ ಪ್ರಯತ್ನ ಮೊದಲಿನಿಂದಲೂ ಇದೆ. ಆದರೆ, ಇಲ್ಲಿಯ ವಾತಾವರಣ, ಹವಾಗುಣ ಮತ್ತು ಪಿಚ್‌ ಸ್ಥಿತಿಗೆ ಸ್ವದೇಶಿ ನಿರ್ಮಿತವಾದ ಚೆಂಡು ಒಳ್ಳೆಯದು ಎಂಬ ಬಿಸಿಸಿಐ ನಿಲುವು ಕೂಡ ಅಚಲವಾಗಿದೆ. ಆದ್ದರಿಂದ ಎಸ್‌.ಜಿ. ಕಂಪೆನಿಯ 72 ಚೆಂಡುಗಳನ್ನು ಈ ಪಂದ್ಯಕ್ಕೆ ಸಿದ್ಧಗೊಳಿಸಲಾಗಿದೆ ಎಂದು ಇಂಡಿಯಾ ಟುಡೆ ವೆಬ್‌ಸೈಟ್ ವರದಿ ಮಾಡಿದೆ.

ರೋಚಕ ಫಲಿತಾಂಶವೇ ಮದ್ದು?

ಯಾವುದೇ ಆಟವು ರೋಚಕವಾಗಿದ್ದರೇನೆ ಜನರನ್ನು ಸೆಳೆಯಲು ಸಾಧ್ಯ. ಟ್ವೆಂಟಿ–20, ಏಕದಿನ ಪಂದ್ಯಗಳು ಜನಪ್ರಿಯವಾಗಲು ಇದೂ ಒಂದು ಕಾರಣ. ಆದರೆ, ಟೆಸ್ಟ್‌ನಲ್ಲಿ ಡ್ರಾ ಮತ್ತು ಏಕಪಕ್ಷೀಯವಾದ ಗೆಲುವುಗಳಿಗೆ ಬಹಳಷ್ಟು ಜನರು ಆಸಕ್ತಿ ತೋರುವುದಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಹಲವು ಪಂದ್ಯಗಳು ರೋಚಕ ಅಂತ್ಯ ಕಂಡ ಉದಾಹರಣೆಗಳಿವೆ. ಆದರೆ, ಇತ್ತೀಚೆಗೆ ಭಾರತದ ನೆಲದಲ್ಲಿ ನಡೆದ ಬಹಳಷ್ಟು ಪಂದ್ಯಗಳು ಎರಡೂವರೆ, ಮೂರು ದಿನಗಳಲ್ಲಿ ಮುಕ್ತಾಯವಾದ ಏಕಪಕ್ಷೀಯ ಪಂದ್ಯಗಳು. ಕೋಲ್ಕತ್ತದ ಪಿಂಕ್ ಟೆಸ್ಟ್ ಎರಡೂವರೆ ದಿನವೂ ನಡೆಯಲಿಲ್ಲ. ಆದ್ದರಿಂದ ಟೆಸ್ಟ್ ಮಾನ್ಯತೆ ಪಡೆದ ತಂಡಗಳು ಒಂದು ಉತ್ಕೃಷ್ಟ ಆಟ ತೋರುವಂತೆ ಆಯಾ ದೇಶಗಳ ಮಂಡಳಿಗಳು ಮತ್ತು ಐಸಿಸಿಯು ಕ್ರಮ ಕೈಗೊಳ್ಳಲು ಇದು ಸಕಾಲ. ಶ್ರೀಲಂಕಾ, ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾಗಳಲ್ಲಿ ಮಂಡಳಿಗಳ ಆಂತರಿಕ ಕಲಹಗಳು ಆ ತಂಡಗಳನ್ನು ದುರ್ಬಲಗೊಳಿಸಿವೆ. ಇದರಲ್ಲಿ ಐಸಿಸಿಯ ಮಧ್ಯಪ್ರವೇಶಿಸಿ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಮಾತ್ರ ಏಕಸ್ವಾಮ್ಯ ಮೆರೆಯುವಂತಾಗಬಹುದು. ಸ್ಪರ್ಧಾತ್ಮಕ ಪಂದ್ಯಗಳು ಮಾತ್ರ ಅಭಿಮಾನಿಗಳನ್ನು ಕೈಬೀಸಿ ಕರೆಯುತ್ತವೆ. ಅದರಿಂದ ಕ್ರಿಕೆಟ್ ಬೆಳೆಯುತ್ತದೆ.

ನಾವು ಆಸ್ಟ್ರೇಲಿಯಾದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲು ಸಿದ್ಧರಿದ್ದೇವೆ. ಆದರೆ ಅದಕ್ಕಾಗಿ ಪೂರ್ವಾಭ್ಯಾಸದ ಪಂದ್ಯ ಇಡಬೇಕು. ಅದರಿಂದ ಅಲ್ಲಿಯ ವಾತಾವರಣದಲ್ಲಿ ನಮಗೆ ಬೌಲರ್‌ಗಳನ್ನು ಎದುರಿಸುವುದು ರೂಢಿಯಾಗುತ್ತದೆ.

- ವಿರಾಟ್ ಕೊಹ್ಲಿ,ಭಾರತ ತಂಡದ ನಾಯಕ

ನಸುಗೆಂಪು ವರ್ಣದ ಚೆಂಡಿಗೆ ಹೊಂದಿಕೊಳ್ಳುವುದು ಆಟಗಾರರಿಗೆ ನಿಜಕ್ಕೂ ಸವಾಲಿನ ವಿಷಯ. ಇದೇ ಮೊದಲ ಬಾರಿಗೆ ಆಡುತ್ತಿದ್ದೇವೆ. ಇದೊಂದು ಐತಿಹಾಸಿಕ ಕ್ಷಣ. ಸಾಧಕ–ಬಾಧಕಗಳನ್ನು ಇನ್ನಷ್ಟೇ ವಿಶ್ಲೇಷಿಸಬೇಕು.
- ರವಿಶಾಸ್ತ್ರಿ, ಭಾರತ ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT