ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ಕ್ರಿಕೆಟ್ | ಭಾರತಕ್ಕೆ ಜಯ: ಸಚಿನ್ ದಾಖಲೆ ಮುರಿದ ಶಫಾಲಿ, ಮಿಂಚಿದ ಸ್ಮೃತಿ

ವಿಂಡೀಸ್‌ ವಿರುದ್ಧ ಮೊದಲ ಪಂದ್ಯ
Last Updated 10 ನವೆಂಬರ್ 2019, 19:34 IST
ಅಕ್ಷರ ಗಾತ್ರ

ಗ್ರಾಸ್‌ ಐಲ್‌: ಹದಿಹರೆಯದ ಶೆಫಾಲಿ ವರ್ಮಾ ಮತ್ತು ಅನುಭವಿ ಸ್ಮೃತಿ ಮಂದಾನಾ ಅವರ ಮಿಂಚಿನ ಆರ್ಧ ಶತಕಗಳ ನೆರವಿನಿಂದ ಭಾರತ ಮಹಿಳೆಯರು ಶನಿವಾರ ನಡೆದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಮೇಲೆ 84 ರನ್‌ಗಳ ಸುಲಭ ಗೆಲುವನ್ನು ಪಡೆದರು.

ಈ ಜಯದೊಡನೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.

ಡ್ಯಾರೆನ್ ಸಮಿ ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 15 ವರ್ಷದ ಶೆಫಾಲಿ ಮತ್ತು ಮಂದಾನಾ 143 ರನ್‌ಗಳ ಭರ್ಜರಿ ಜೊತೆಯಾಟವಾಡಿ ಭಾರತ 20 ಓವರುಗಳಲ್ಲಿ 4 ವಿಕೆಟ್‌ಗೆ 185 ರನ್‌ಗಳ ಉತ್ತಮ ಮೊತ್ತ ಪೇರಿಸಲು ನೆರವಾದರು. ನಂತರ ಆತಿಥೇಯರನ್ನು 101 ರನ್‌ಗಳಿಗೆ (9 ವಿಕೆಟ್‌ಗೆ) ಕಟ್ಟಿಹಾಕಿದರು.

ಮಧ್ಯಮ ವೇಗಿ ಶಿಖಾ ಪಾಂಡೆ (22ಕ್ಕೆ2), ಸ್ಪಿನ್ನರ್‌ಗಳಾದ ರಾಧಾ ಯಾದವ್ (10ಕ್ಕೆ2) ಮತ್ತು ಪೂನಮ್‌ ಯಾದವ್ (24ಕ್ಕೆ2) ಯಶಸ್ವಿ ಬೌಲರ್‌ಗಳೆನಿಸಿದರು.

‘ಪಂದ್ಯದ ಆಟಗಾರ್ತಿ’ ಶೆಫಾಲಿ (73) ಮತ್ತು ಮಂದಾನಾ (67) ಮೊದಲ ವಿಕೆಟ್‌ಗೆ ಕೇವಲ 10 ಓವರುಗಳಲ್ಲಿ 102 ರನ್‌ ಚಚ್ಚಿದ್ದರು. ಶೆಫಾಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ಚೊಚ್ಚಲ ಅರ್ಧ ಶತಕ ದಾಖಲಿಸಿದರು. ಮಂದಾನಾ ಕೂಡ ಹಿಂದೆ ಬೀಳದೇ 46 ಎಸೆತಗಳ ಇನಿಂಗ್ಸ್‌ನಲ್ಲಿ 11 ಬೌಂಡರಿ ಬಾರಿಸಿದರು.

ಇವರಿಬ್ಬರು ಸೇರಿಸಿದ 143 ರನ್‌ಗಳು ಟಿ–20 ಪಂದ್ಯಗಳಲ್ಲಿ ಭಾರತದ ಪರ ಅತ್ಯಧಿಕ ಜೊತೆಯಾಟ ಎನಿಸಿತು. 2013ರಲ್ಲಿ ಬಾಂಗ್ಲಾದೇಶ ವಿರುದ್ಧ ತಿರುಶ್‌ ಕಾಮಿನಿ ಮತ್ತು ಪೂನಂ ರಾವುತ್‌ 130 ರನ್‌ ಸೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಸ್ಕೋರುಗಳು
ಭಾರತ:
20 ಓವರುಗಳಲ್ಲಿ 4 ವಿಕೆಟ್‌ಗೆ 185 (ಶೆಫಾಲಿ ವರ್ಮಾ 73, ಸ್ಮೃತಿ ಮಂದಾನಾ 67, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೇ 21; ಅನಿಸಾ ಮೊಹಮ್ಮದ್‌ 35ಕ್ಕೆ2, ಶಕಿರಾ ಸೆಲ್ಮನ್‌ 36ಕ್ಕೆ2)
ವೆಸ್ಟ್‌ ಇಂಡೀಸ್‌: 20 ಓವರುಗಳಲ್ಲಿ 9 ವಿಕೆಟ್‌ಗೆ 101 (ಶೆರ್ಮೇನ್‌ ಕ್ಯಾಂಪ್‌ಬೆಲ್‌ 33; ರಾಧಾ ಯಾದವ್‌ 10ಕ್ಕೆ2, ಶಿಖಾ ಪಾಂಡೆ 22ಕ್ಕೆ2, ಪೂನಂ ಯಾದವ್‌ 24ಕ್ಕೆ2).

ತೆಂಡೂಲ್ಕರ್‌ ದಾಖಲೆ ಮುರಿದ ಶಫಾಲಿ
ಭಾರತ ತಂಡದ ಶೆಫಾಲಿ ವರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧ ಶತಕ ಹೊಡೆದ ಅತಿ ಕಿರಿಯ ಆಟಗಾರ್ತಿ ಎನಿಸಿದರು. 49 ಎಸೆತಗಳಲ್ಲಿ 73 ರನ್‌ ಹೊಡೆದ ಅವರು ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ 30 ವರ್ಷ ಹಳೆಯ ದಾಖಲೆ ಅಳಿಸಿಹಾಕಿದರು.

ಐದನೇ ಟಿ–20 ಪಂದ್ಯ ಆಡಿದ ಶೆಫಾಲಿ ವಯಸ್ಸು 15 ವರ್ಷ 285 ದಿನ. ಕ್ರಿಕೆಟ್‌ ಕಣ್ಮಣಿ ಸಚಿನ್‌ ಟೆಸ್ಟ್‌ ಪಂದ್ಯದಲ್ಲಿ ಮೊದಲ ಅರ್ಧ ಶತಕ ಹೊಡೆದಾಗ ಅವರ ವಯಸ್ಸು 16 ವರ್ಷ 214 ದಿನ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT