ಭಾನುವಾರ, ಏಪ್ರಿಲ್ 2, 2023
23 °C

IND vs NZ 2nd ODI: 8 ವಿಕೆಟ್‌ಗಳ ಭರ್ಜರಿ ಜಯ; ಭಾರತಕ್ಕೆ ಸರಣಿ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ರಾಯಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. 

ಇದನ್ನೂ ಓದಿ: 

ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ 34.3 ಓವರ್‌ಗಳಲ್ಲಿ 108 ರನ್‌ಗಳಿಗೆ ಸರ್ವಪತನ ಕಂಡಿತು. 

ಬಳಿಕ ಗುರಿ ಬೆನ್ನಟ್ಟಿದ ಭಾರತ, ನಾಯಕ ರೋಹಿತ್ ಶರ್ಮಾ ಅರ್ಧಶತಕದ ಬೆಂಬಲದೊಂದಿಗೆ 20.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

50 ಎಸೆತಗಳನ್ನು ಎದುರಿಸಿದ ರೋಹಿತ್, ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್, 40 ರನ್ (53 ಎಸೆತ, 6 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ 11 ಮತ್ತು ಇಶಾನ್ ಕಿಶನ್ ಅಜೇಯ 8 ರನ್ ಗಳಿಸಿದರು. 

ಭಾರತೀಯ ಬೌಲರ್‌ಗಳ ಮಿಂಚು...
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 10.3 ಓವರ್‌ಗಳಲ್ಲೇ 15 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 

ಫಿನ್ ಅಲೆನ್ (0), ಡೆವೊನ್ ಕಾನ್ವೇ (7), ಹೆನ್ರಿ ನಿಕೋಲಸ್ (2), ಡೆರಿಲ್ ಮಿಚೆಲ್ (1), ಟಾಮ್ ಲೆಥಮ್ (1) ನಿರಾಸೆ ಮೂಡಿಸಿದರು. 

ಕೆಳ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ (36), ಮೈಕಲ್ ಬ್ರೇಸ್‌ವೆಲ್ (22) ಮತ್ತು ಮಿಚೆಲ್ ಸ್ಯಾಂಟ್ನರ್ (27) ಸ್ಪಲ್ವ ಹೊತ್ತು ಪ್ರತಿರೋಧ ಒಡ್ಡಿದರು. ಇನ್ನುಳಿದಂತೆ ಹೆನ್ರಿ ಶಿಪ್ಲೆ (2*), ಲಾಕಿ ಫರ್ಗ್ಯೂಸನ್ (1), ಬ್ಲೇರ್ ಟಿಕ್ನರ್ (2) ರನ್ ಗಳಿಸಿದರು. 

ಭಾರತದ ಪರ ಮೊಹಮ್ಮದ್ ಶಮಿ ಮೂರು, ವಾಷಿಂಗ್ಟನ್ ಸುಂದರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ಮತ್ತು ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಗಳಿಸಿ ಮಿಂಚಿದರು. 

ಜನವರಿ 18ರಂದು ನಡೆದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಚೊಚ್ಚಲ ದ್ವಿಶತಕದ ನೆರವಿನಿಂದ ಭಾರತ 12 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಸರಣಿಯ ಅಂತಿಮ ಪಂದ್ಯ ಮಂಗಳವಾರ ಇಂದೋರ್‌ನಲ್ಲಿ ನಡೆಯಲಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು