ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಾಸ್ಕರ್ ಪ್ರಕಾರ ಆರ್‌ಸಿಬಿಗೆ ಫಿನಿಷರ್ ಕೊರತೆ ನೀಗಿಸಬಲ್ಲ ಆಟಗಾರ ಯಾರು ಗೊತ್ತೇ?

Last Updated 8 ನವೆಂಬರ್ 2020, 12:14 IST
ಅಕ್ಷರ ಗಾತ್ರ

ಐಪಿಎಲ್‌–2020 ಟೂರ್ನಿಯ ಆರಂಭದಲ್ಲಿ ಈ ಸಲ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋಲು ಕಂಡಿದೆ. ಇದರೊಂದಿಗೆ 13ನೇ ವರ್ಷವೂ ಪ್ರಶಸ್ತಿ ಇಲ್ಲದೆ ಟೂರ್ನಿಯಿಂದ ಹೊರನಡೆದಿದೆ.

ಉತ್ತಮ ಆರಂಭ ದೊರೆತರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಟ ನಡೆಸಿದ್ದರು. ಇದು ಲೀಗ್‌ ಹಂತದ ಕೊನೆಯ ಕೆಲವು ಪಂದ್ಯಗಳಲ್ಲಿ ಹಿನ್ನಡೆಗೆ ಕಾರಣವಾಗಿತ್ತು. ಸದ್ಯ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಮುಂದಿನ ಐಪಿಎಲ್‌ನತ್ತ ಚಿತ್ತಹರಿಸಬೇಕಾಗಿದ್ದು, ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಳ್ಳಬೇಕಿದೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್‌, 2021ರ ಟೂರ್ನಿಯಲ್ಲಿ ಶಿವಂ ದುಬೆ ಆರ್‌ಸಿಬಿ ಪರ ಫಿನಿಷರ್‌ ಪಾತ್ರ ನಿಭಾಯಿಸಬಲ್ಲರು ಎಂದು ಹೇಳಿದ್ದಾರೆ.

ಕ್ರೀಡಾವಾಹಿತಿಯೊಂದರ ಜೊತೆ ಮಾತನಾಡಿರುವ ಗವಾಸ್ಕರ್‌, ‘ಶಿವಂ ದುಬೆಗೆ ಸೂಕ್ತ ಪಾತ್ರವನ್ನು ನೀಡುವ ಕುರಿತು ಅವರು (ಆರ್‌ಸಿಬಿ) ಚಿಂತಿಸಬೇಕಾಗಿದೆ ಎಂದು ನನಗನಿಸುತ್ತದೆ. ದುಬೆ, ವಾಷಿಂಗ್ಟನ್ ಸುಂದರ್‌ ಅವರಿಗಿಂತ ಕೆಳ ಕ್ರಮಾಂಕದಲ್ಲಿ ಆಡಿದ್ದಾರೆ. ಒಂದು ವೇಳೆ ಸೂಕ್ತ ಜವಾಬ್ದಾರಿ ವಹಿಸಿ ಕಳುಹಿಸಿದರೆ ದುಬೆಗೆ ನೆರವಾಗಲಿದೆ. ಸದ್ಯ ಅವರು ಗೊಂದಲದಲ್ಲಿದ್ದಾರೆ. ಒಂದು ವೇಳೆ ಆರ್‌ಸಿಬಿ ಐದನೇ ಕ್ರಮಾಂಕದಲ್ಲಿ ಸಮರ್ಥ ಆಟಗಾರನನ್ನು ಕಂಡುಕೊಂಡರೆ ಅದರಿಂದ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ಹೇಳಿದ್ದಾರೆ.

ಆರ್‌ಸಿಬಿ ಈ ಬಾರಿಯ ಟೂರ್ನಿಯಿಂದ ಹೊರಬೀಳಲು ಸಾಕಷ್ಟು ಕಾರಣಗಳಿವೆ. ಕೊಹ್ಲಿ 15 ಪಂದ್ಯಗಳಿಂದ ಕೇವಲ 121.35ರ ಸ್ಟ್ರೈಕ್‌ರೇಟ್‌ನಲ್ಲಿ 466 ರನ್ ಗಳಿಸಿದ್ದಾರೆ. ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ಅವರಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಆರ್‌ಸಿಬಿ ಮಧ್ಯಮ ಕ್ರಮಾಂಕದಲ್ಲಿ ರನ್‌ ಗಳಿಸಲು ಪರದಾಡಿತ್ತು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

‘ಕೊಹ್ಲಿಯೇ ನಿಗದಿಪಡಿಸಿಕೊಂಡಿರುವ ಸಾಮರ್ಥ್ಯದ ಮಟ್ಟವನ್ನು ಗಮನಿಸಿದರೆ, ಅದಕ್ಕೆ ಹೊಂದಿಕೆಯಾಗುವಂತಹ ಆಟವನ್ನು ಅವರು ಆಡಿಲ್ಲ ಎಂದು ಹೇಳಬಹುದು. ಆರ್‌ಸಿಬಿ ಮುಂದಿನ ಹಂತಕ್ಕೆ ಸಾಗದಿರಲು ಇದೂ ಒಂದು ಕಾರಣ ಎನ್ನಬಹುದು. ಏಕೆಂದರೆ ಕೊಹ್ಲಿ, ವಿಲಿಯರ್ಸ್‌ ಜೊತೆಗೂಡಿ ದೊಡ್ಡ ಇನಿಂಗ್ಸ್‌ ಆಡಿದ್ದರೆ ತಂಡವೂ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಗುತ್ತಿತ್ತು’ ಎಂದಿದ್ದಾರೆ.

ಮುಂದುವರಿದು, ಆರ್‌ಸಿಬಿಯ ಬೌಲಿಂಗ್‌ ವಿಭಾಗವು ಎದುರಾಳಿ ವಿರುದ್ಧ ನಿರಂತರವಾಗಿ ಮೇಲುಗೈ ಸಾಧಿಸುವ ಕ್ಷಮತೆ ತೋರದೇ ಇದ್ದುದು ಹಿನ್ನಡೆಯಾಯಿತು ಎಂದೂ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT