ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ಗೆ ನೂರನೇ ಟೆಸ್ಟ್‌ ವಿಜಯ ತಂದು ಕೊಟ್ಟ ಭಾರತದ ಬ್ಯಾಟಿಂಗ್ ವೈಫಲ್ಯ

Last Updated 24 ಫೆಬ್ರುವರಿ 2020, 9:01 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಬ್ಯಾಟಿಂಗ್‌ನಲ್ಲಿ ತೀವ್ರ ಕುಸಿತ ಕಂಡ ಭಾರತ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯವನ್ನು ಕೈಚೆಲ್ಲಿದೆ.

ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಪ್ರಬಲ ಬೌಲಿಂಗ್‌ ದಾಳಿ ಮಾಡಿದರೆ, ಪ್ರವಾಸಿ ಭಾರತೀಯರು ಬ್ಯಾಟಿಂಗ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಹೀಗಾಗಿ ಭಾರತ ಐಸಿಸಿ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿಮೊದಲ ಸೋಲು ಕಂಡಿತು. ಇತ್ತ ನ್ಯೂಜಿಲೆಂಡ್‌ ತಂಡ,ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂರನೇ ಜಯದ ಸವಿಯುಂಡಿತು.

ಭಾರತವು ಮೊದಲ ಇನಿಂಗ್ಸ್‌ನಲ್ಲಿ 165 ರನ್‌ ಕಲೆಹಾಕಿತ್ತು. ಎರಡನೇ ದಿನದಾಟದಲ್ಲಿ ಕಿವೀಸ್ ತಂಡವು 5ಕ್ಕೆ216 ರನ್ ಗಳಿಸಿತ್ತು. ಈ ಮೊತ್ತಕ್ಕೆ ಭಾನುವಾರ 132 ರನ್‌ಗಳು ಸೇರ್ಪಡೆಯಾಗಲು ಕೈಲ್ ಮತ್ತು ಟ್ರೆಂಟ್ ಆಟ ಪ್ರಮುಖ ಕಾರಣವಾಯಿತು.

ಬೌಲಿಂಗ್‌ನಲ್ಲಿಯೂ ಮಿಂಚಿದ ಅನುಭವಿ ಟ್ರೆಂಟ್, ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ತಂಡಕ್ಕೆ ಭಾರಿ ಪೆಟ್ಟು ಕೊಟ್ಟರು. ಮಯಂಕ್ (58; 99ಎ, 7ಬೌಂ, 1ಸಿ) ಅವರ ದಿಟ್ಟ ಹೋರಾಟದಿಂದ ತಂಡವು ಚೇತರಿಸಿಕೊಂಡಿತು. ಮೂರನೇ ದಿನದಾಟದ ಕೊನೆಯಲ್ಲಿ ಅಜಿಂಕ್ಯ ರಹಾನೆ (ಬ್ಯಾಟಿಂಗ್ 25) ಮತ್ತು ಹನುಮವಿಹಾರಿ (ಬ್ಯಾಟಿಂಗ್ 15) ತಾಳ್ಮೆಯ ಆಟದಿಂದ ವಿಕೆಟ್ ಪತನಕ್ಕೆ ತಡೆಯೊಡ್ಡಿದ್ದರು. ತಂಡವು 65 ಓವರ್‌ಗಳಲ್ಲಿ 4ಕ್ಕೆ144 ರನ್‌ ಗಳಿಸಿ ಮೂರನೇ ದಿನದಾಟವನ್ನು ಮುಗಿಸಿತ್ತು.

ಕಿವೀಸ್ ಬಾಕಿ ಚುಕ್ತಾಕ್ಕೆ ಇನ್ನೂ 39 ರನ್ ಇರುವಂತೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಕಂಡಿತು. 144 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲೇ ಅಜಿಂಕ್ಯಾ ರಹಾನೇ (29) ಮತ್ತು ಹನುಮ ವಿಹಾರಿ (15) ಅನ್ನು ಬಲಿಪಡೆಯಿತು. ರಿಷಭ್‌ ಪಂಥ ರಕ್ಷಣಾತ್ಮಕ ಆಟ ಆಡಿದರಾದರೂ ಅವರೂ 25 ರನ್‌ಗಳಿಗೆ ಔಟಾದರು. ಇಷಾಂತ್‌ ಶರ್ಮಾ 12 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಹಿಂದಿನ 144 ರನ್‌ಗಳಿಗೆ ಭಾರತ ನಾಲ್ಕನೇ ದಿನದಾಟದಲ್ಲಿ ಕೇವಲ 47ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. ಅಂತಿಮವಾಗಿ ಭಾರತ 191 ರನ್‌ಗಳಿಗೆ ತನ್ನ ಬ್ಯಾಟಿಂಗ್‌ ವ್ಯವಹಾರ ಮುಗಿಸಿತ್ತು.

ಕೇವಲ 9 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ ಕೇವಲ 7 ನಿಮಿಷಗಳಲ್ಲಿ ಆಟ ಮುಗಿಸಿತು. 1.4 ಓವರ್‌ಗಳಲ್ಲಿ ಗುರಿ ತಲುಪಿ 10 ವಿಕೆಟ್‌ಗಳ ಭಾರಿ ಜಯ ಸಾಧಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ಪರ ಬೌಲರ್‌ಗಳಾದ ಟಿಮ್‌ ಸೌಥಿ 5 ವಿಕೆಟ್‌ ಕಿತ್ತರೆ ಬೌಲ್ಟ್‌ 4 ವಿಕೆಟ್‌ ಗಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT