ಶುಕ್ರವಾರ, ಮೇ 7, 2021
25 °C
ರಾಜಸ್ಥಾನ್‌ ರಾಯಲ್ಸ್‌ಗೆ ಸನ್‌ರೈಸರ್ಸ್ ಹೈದರಾಬಾದ್‌ ಸವಾಲು; ಕೇನ್ ವಿಲಿಯಮ್ಸನ್‌ಗೆ ಸತ್ವಪರೀಕ್ಷೆ

IPL 2021 | RR vs SRH: ಸೋಲಿನ ಸುಳಿಯಿಂದ ಮೇಲೇಳುವ ಬಯಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೋಲಿನ ಮೇಲೆ ಸೋಲು ಕಂಡು ಪಾಯಿಂಟ್ ಪಟ್ಟಿಯ ಕೊನೆಯ ಎರಡು ಸ್ಥಾನಗಳನ್ನು ಹಂಚಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಭಾನುವಾರ ಮುಖಾಮುಖಿಯಾಗಲಿವೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆಯಲಿರುವ ಹಣಾಹಣಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ ಅವರಿಗೆ ಸತ್ವಪರೀಕ್ಷೆಯಾಗಲಿದೆ. ಡೇವಿಡ್ ವಾರ್ನರ್ ಬದಲಿಗೆ ನಾಯಕತ್ವ ವಹಿಸಿಕೊಂಡಿರುವ ಅವರ ಮೇಲೆ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಇದೆ.

ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದ ರಾಜಸ್ಥಾನ್ ಕೂಡ ಗೆಲುವೊಂದನ್ನೇ ಗುರಿಯಾಗಿರಿಸಿಕೊಂಡು ಕಣಕ್ಕೆ ಇಳಿಯಲಿದೆ. ವಿಲಿಯಮ್ಸನ್ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆದು ತಂಡಕ್ಕೆ ಜಯ ತಂದುಕೊಡಬೇಕಾಗಿರುವ ಒತ್ತಡ ಸಂಜು ಸ್ಯಾಮ್ಸನ್ ಮೇಲೆಯೂ ಇದೆ. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿದ್ದ ರಾಯಲ್ಸ್ ನಂತರ ಐದನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಜಯ ಗಳಿಸಿತ್ತು. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದಿತ್ತು.

ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪರಾಕ್ರಮದಿಂದಾಗಿ ತಂಡ 4 ವಿಕೆಟ್‌ಗಳಿಗೆ 171 ರನ್ ಕಲೆ ಹಾಕುವಲ್ಲಿ ಸಮರ್ಥವಾಗಿತ್ತು. ಆದರೆ ಬೌಲಿಂಗ್ ವಿಭಾಗ ನೀರಸ ಪ್ರದರ್ಶನ ನೀಡಿತ್ತು. ಹೀಗಾಗಿ ಎದುರಾಳಿಗಳು ಒಂಬತ್ತು ಎಸೆತ ಉಳಿದಿರುವಾಗಲೇ ಏಳು ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದರು.

ಬೆನ್‌ ಸ್ಟೋಕ್ಸ್ ಮತ್ತು ಜೊಫ್ರಾ ಆರ್ಚರ್ ಅನುಪಸ್ಥಿತಿಯಲ್ಲಿ ತಂಡ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ತಂಡದ ಬ್ಯಾಟಿಂಗ್ ವಿಭಾಗ ಪೂರ್ಣವಾಗಿ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಅವಲಂಬಿಸಿದೆ. ಆದರೆ ಮೊದಲ ಪಂದ್ಯದಲ್ಲಿ 119 ರನ್ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಸಂಜು ಕೂಡ ಹೆಚ್ಚು ಮಿಂಚಲಿಲ್ಲ. ಶತಕದ ನಂತರ ಅವರ ಗರಿಷ್ಠ ಮೊತ್ತ 42.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಡೇವಿಡ್ ಮಿಲ್ಲರ್ ಒಂದು ಅರ್ಧಶತಕ ಮಾತ್ರ ಗಳಿಸಿದ್ದು ರಿಯಾನ್ ಪರಾಗ್ ಅವರ ಇಲ್ಲಿವರೆಗಿನ ಗರಿಷ್ಠ ಮೊತ್‌ 25 ರನ್‌. ಬೌಲಿಂಗ್ ವಿಭಾಗದಲ್ಲಿ ‘ದುಬಾರಿ ಆಟಗಾರ’ ಕ್ರಿಸ್ ಮೊರಿಸ್ ಉತ್ತಮ ಸಾಧನೆ ಮಾಡಿದ್ದಾರೆ. ಆರು ಪಂದ್ಯಗಳಲ್ಲಿ ಅವರು 11 ವಿಕೆಟ್ ಗಳಿಸಿದ್ದಾರೆ. ಆದರೆ ಉಳಿದವರಿಂದ ಸಮರ್ಪಕ ಸಹಕಾರ ಸಿಗುತ್ತಿಲ್ಲ.

ರಾಹುಲ್ ತೆವಾಥಿಯಾ, ಜಯದೇವ ಉನದ್ಕತ್‌ ಮತ್ತು ಮುಸ್ತಫಿಜುರ್ ರಹಮಾನ್ ಅವರಿಗೆ ನಿರೀಕ್ಷಿತ ಮಟ್ಟಕ್ಕೇರಲು ಆಗಲಿಲ್ಲ. ಆರಂಭದಲ್ಲಿ ಮಿಂಚಿದ್ದ ಚೇತನ್ ಸಕಾರಿಯ ನಂತರ ನಿರಾಸೆ ಕಂಡಿದ್ದಾರೆ. 

ಬ್ಯಾಟಿಂಗ್ ವಿಭಾಗದ ಮೇಲೆ ಕಣ್ಣು
ಡೆಲ್ಲಿ ಎದುರು ಸೂಪರ್ ಓವರ್‌ನಲ್ಲಿ ಅನುಭವಿಸಿದ ಸೋಲು ಸೇರಿದಂತೆ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಸನ್‌ರೈಸರ್ಸ್‌ ಜಯದ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ. ಜಾನಿ ಬೆಸ್ಟೊ, ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ ಮುಂತಾದವರನ್ನು ಒಳಗೊಂಡಿರುವ ಬ್ಯಾಟಿಂಗ್ ವಿಭಾಗದ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ. ಮನೀಷ್ ಪಾಂಡೆ ಎರಡು ಅರ್ಧಶತಕ ಗಳಿಸಿದ್ದಾರೆ.

ಬೌಲಿಂಗ್ ವಿಭಾಗಕ್ಕೆ ಸ್ಪಿನ್ನರ್ ರಶೀದ್ ಖಾನ್ ಬಲ ತುಂಬಿದ್ದಾರೆ. ಆದರೆ ಉಳಿದವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಅನುಭವಿ ವೇಗಿ ಭುವನೇಶ್ವರ್ ಕುಮಾರ್‌ ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್ ಮಾತ್ರ ಗಳಿಸಿದ್ದಾರೆ. ಹಿಂದಿನ ಎರಡು ಪಂದ್ಯಗಳಲ್ಲಿ ಕಣಕ್ಕೆ ಇಳಿಯಲೂ ಇಲ್ಲ.

ತಂಡಗಳು: ರಾಜಸ್ಥಾನ್ ರಾಯಲ್ಸ್‌: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್ ಮತ್ತು ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್‌), ಯಶಸ್ವಿ ಜೈಸ್ವಾಲ್‌, ಮನನ್ ವೊಹ್ರಾ, ಅನುಜ್ ರಾವತ್‌, ರಿಯಾನ್ ಪರಾಗ್‌, ಡೇವಿಡ್ ಮಿಲ್ಲರ್‌, ರಾಹುಲ್ ತೆವಾಥಿಯಾ, ಮಹಿಪಾಲ್ ಲುಮ್ರರ್‌, ಶ್ರೇಯಸ್ ಗೋಪಾಲ್, ಮಯಂಕ್ ಮಾರ್ಕಂಡೆ, ಜಯದೇವ ಉನದ್ಕತ್‌, ಕಾರ್ತಿಕ್ ತ್ಯಾಗಿ, ಶಿವಂ ದುಬೆ, ಕ್ರಿಸ್ ಮೊರಿಸ್‌, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯ, ಕೆ.ಸಿ.ಕಾರ್ಯಪ್ಪ, ಕುಲದೀಪ್ ಯಾದವ್‌, ಆಕಾಶ್ ಸಿಂಗ್‌. 

‌ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಜಾನಿ ಬೆಸ್ಟೊ (ವಿಕೆಟ್ ಕೀಪರ್‌), ಮನೀಷ್ ಪಾಂಡೆ, ಶ್ರೀವತ್ಸ್ ಗೋಸ್ವಾಮಿ (ವಿಕೆಟ್ ಕೀಪರ್‌), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಪ್ರಿಯಂ ಗರ್ಗ್‌, ವಿಜಯಶಂಕರ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್‌, ವಿರಾಟ್ ಸಿಂಗ್‌, ಜೇಸನ್ ಹೋಲ್ಡರ್‌, ಮೊಹಮ್ಮದ್ ನಬಿ, ರಶೀದ್ ಖಾನ್, ಶಹಬಾಜ್ ನದೀಂ, ಭುವನೇಶ್ವರ್ ಕುಮಾರ್‌, ಸಂದೀಪ್ ಶರ್ಮಾ, ಖಲೀಲ್ ಅಹಮ್ಮದ್‌, ಸಿದ್ಧಾರ್ಥ್ ಕೌಲ್‌, ಬೇಸಿಲ್ ತಂಬಿ, ಜೆ.ಸುಚಿತ್‌, ಕೇದಾರ್ ಜಾಧವ್‌, ಮುಜೀಬ್ ಉರ್ ರಹಮಾನ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು