ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಪಪುವಾ ನ್ಯೂಗಿನಿ ವಿರುದ್ಧ 10 ವಿಕೆಟ್ ಜಯ; ಒಮನ್ ಶುಭಾರಂಭ

Last Updated 17 ಅಕ್ಟೋಬರ್ 2021, 13:25 IST
ಅಕ್ಷರ ಗಾತ್ರ

ಅಲ್ ಅಮೆರತ್: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಒಮನ್ ಶುಭಾರಂಭ ಮಾಡಿಕೊಂಡಿದೆ.

ತವರಿನ ಮೈದಾನದ ಸಂಪೂರ್ಣ ಪ್ರಯೋಜನ ಪಡೆದ ಒಮನ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಅರ್ಹ ಗೆಲುವು ದಾಖಲಿಸಿತು.

'ಬಿ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಒಮನ್ ನಾಯಕ ಜೀಶನ್ ಮಕ್ಸೂದ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇದನ್ನು ಸರಿಯೆಂದು ಸಾಬೀತುಪಡಿಸಿದ ಬೌಲರ್‌ಗಳು, ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಪಪುವಾ ನ್ಯೂಗಿನಿ, ನಾಯಕ ಅಸ್ಸಾದ್ ವಾಲಾ ಆಕರ್ಷಕ ಅರ್ಧಶತಕದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಸಮರ್ಥವಾಯಿತು. 43 ಎಸೆತಗಳನ್ನು ಎದುರಿಸಿದ ಅಸ್ಸಾದ್ ವಾಲಾ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.

ಆರಂಭಿಕರಾದ ಟೋನಿ ಉರಾ ಹಾಗೂ ಲೆಗಾ ಸಿಯಾಕಾ ಖಾತೆ ತೆರೆಯುವಲ್ಲಿ ವಿಫಲವಾದರು. ಚಾರ್ಲ್ಸ್ ಅಮಿನಿ 37 ರನ್ ಗಳಿಸಿದರು. ಕೊನೆಯ ಆರು ವಿಕೆಟ್‌ಗಳನ್ನು ಕೇವಲ 27 ರನ್ ಅಂತರದಲ್ಲಿ ಕಳೆದುಕೊಂಡಿತು.

ಒಮನ್ ಪರ ನಾಯಕ ಜೀಶನ್ ಮಕ್ಸೂದ್ ನಾಲ್ಕು ಮತ್ತು ಬಿಲಾಲ್ ಖಾನ್ ಹಾಗೂ ಖಲೀಮುಲ್ಲಾ ತಲಾ ಎರಡು ವಿಕೆಟ್‌ಗಳನ್ನು ಕಿತ್ತು ಮಿಂಚಿದರು.

ಬಳಿಕ ಗುರಿ ಬೆನ್ನತ್ತಿದ ಒಮನ್, ಆರಂಭಿಕರಾದ ಜತೀಂದರ್ ಸಿಂಗ್ ಹಾಗೂ ಅಕಿಬ್ ಇಲ್ಯಾಸ್ ಅಜೇಯ ಅರ್ಧಶತಕಗಳ ನೆರವಿನಿಂದ 13.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.

42 ಎಸೆತಗಳನ್ನು ಎದುರಿಸಿದ ಜತೀಂದರ್ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಔಟಾಗದೆ ಉಳಿದರು. ಅಲ್ಲದೆ ಕೇವಲ 33 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅತ್ತ ಅಕಿಬ್ 43 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT