ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ಕಳಪೆ ಬೌಲಿಂಗ್‌ಗೆ ಬೆಲೆತೆತ್ತ ಭಾರತ; ಪ್ರಶಸ್ತಿ ಸುತ್ತಿಗೆ ಇಂಗ್ಲೆಂಡ್

ರೋಹಿತ್ ಪಡೆಗೆ ಹೀನಾಯ ಸೋಲು
Last Updated 10 ನವೆಂಬರ್ 2022, 19:17 IST
ಅಕ್ಷರ ಗಾತ್ರ

ಅಡಿಲೇಡ್: ಭಾರತ ತಂಡವು ಗುರುವಾರ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡದ ಆರ್ಭಟಕ್ಕೆ ಜರ್ಜರಿತವಾಯಿತು.

ಚಲನಶೀಲವಾಗಿರುವ ಟಿ20 ಕ್ರಿಕೆಟ್‌ ಕ್ಷೇತ್ರದ ವೇಗಕ್ಕೆ ಒಗ್ಗಿಕೊಳ್ಳಲು ವಿಫಲವಾದ ರೋಹಿತ್ ಪಡೆ ಸೋಲಿನ ಕಹಿಯುಂಡಿತು. ಅಚ್ಚುಕಟ್ಟಾದ ತಂತ್ರಗಾರಿಕೆಯೊಂದಿಗೆ ಆಡಿದ ಇಂಗ್ಲೆಂಡ್ ತಂಡವು ಭಾರತದ ಎದುರಿನ ಸೆಮಿಫೈನಲ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದು, ಫೈನಲ್‌ಗೆ ಲಗ್ಗೆಯಿಟ್ಟಿತು. ರೋಹಿತ್ ಶರ್ಮಾ ಬಳಗವು 10 ವಿಕೆಟ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತು. ಹೋದ ವರ್ಷದ ಟೂರ್ನಿಯಲ್ಲಿಯೂ ಭಾರತ ತಂಡವು ಪಾಕಿಸ್ತಾನ ಎದುರೂ ಹತ್ತು ವಿಕೆಟ್‌ಗಳಿಂದ ಸೋತಿತು.

ಬ್ಯಾಟರ್‌ಗಳ ಅಸ್ಥಿರತೆ, ಹೋರಾಟದ ಛಲವೇ ಇಲ್ಲದ ಬೌಲಿಂಗ್ ರೋಹಿತ್ ಬಳಗದ ಸೋಲಿಗೆ ಕಾರಣವಾದವು. ಈ ಹಿಂದೆ ಮಾಡಿದ ತಪ್ಪುಗಳಿಂದ ಕಲಿಯದ ಭಾರತ ಪಡೆಯು ದಂಡ ತೆರಬೇಕಾಯಿತು.

ಟಾಸ್ ಗೆದ್ದ ಬಟ್ಲರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗಲೇ ಆತ್ಮವಿಶ್ವಾಸದಲ್ಲಿದ್ದರು. ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕ ಜೋಡಿ ರೋಹಿತ್ ಮತ್ತು ರಾಹುಲ್ ಯಥಾಪ್ರಕಾರ ಉತ್ತಮ ಆರಂಭ ನೀಡದೇ ನಿರ್ಗಮಿಸಿದರು. ಈ ಹಂತದಲ್ಲಿ ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಂಡ ವಿರಾಟ್ ಕೊಹ್ಲಿ ಹಾಗೂ ಕೊನೆಯ ಐದು ಓವರ್‌ಗಳಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ಬಲದಿಂದ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 168 ರನ್ ಗಳಿಸಿತು.

ಭಾರತದ ಸತ್ವರಹಿತ ಬೌಲಿಂಗ್ ಅನ್ನು ಬಟ್ಲರ್ ಹಾಗೂ ಅಲೆಕ್ಸ್ ಜೋಡಿ ನಿರ್ದಯವಾಗಿ ದಂಡಿಸಿತು. ಇದರಿಂದಾಗಿ ಇನಿಂಗ್ಸ್‌ನಲ್ಲಿ ಇನ್ನೂ ನಾಲ್ಕು ಓವರ್‌ಗಳು ಬಾಕಿಯಿರುವಾಗಲೇ ಇಂಗ್ಲೆಂಡ್ ಜಯ ಗಳಿಸಿತು. ಕ್ರೀಡಾಂಗಣದಲ್ಲಿ ಸೇರಿದ್ದ 40,094 ಪ್ರೇಕ್ಷಕರು ಏಕಪಕ್ಷೀಯ ಫಲಿತಾಂಶಕ್ಕೆ ಸಾಕ್ಷಿಯಾದರು!

ಭುವನೇಶ್ವರ್ ಕುಮಾರ್ ಹಾಕಿದ ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದ ಬಟ್ಲರ್ ಉತ್ತಮ ಆರಂಭ ನೀಡಿದರು. ಇದರಿಂದಇನ್ನೊಂದು ಬದಿಯಲ್ಲಿದ್ದ ಅಲೆಕ್ಸ್‌ ಹೇಲ್ಸ್ ಕೂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ನಂತರ ಅವರ ಅಬ್ಬರಕ್ಕೆ ಭಾರತದ ಬೌಲಿಂಗ್ ಪಡೆ ಅಕ್ಷರಶಃ ತತ್ತರಿಸಿದರು.

ಆದರೆ, ಭಾರತಕ್ಕೆ ಬ್ಯಾಟಿಂಗ್‌ನಲ್ಲಿ ಇಂತಹ ಆರಂಭ ಸಿಗಲಿಲ್ಲ. ರೋಹಿತ್ ಹಾಗೂ ರಾಹುಲ್ ಜೊತೆಯಾಟದಲ್ಲಿ ಬಂದಿದ್ದು 9 ರನ್ ಮಾತ್ರ. ಟೂರ್ನಿಯ ಆರು ಪಂದ್ಯಗಳ ಪೈಕಿ 27 ರನ್‌ಗಳ ಗರಿಷ್ಠ ಜೊತೆಯಾಟವೊಂದು ಇವರ ಹೆಸರಿನಲ್ಲಿದೆ.ಬಟ್ಲರ್ ಹಾಗೂ ಅಲೆಕ್ಸ್ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಎದುರಿನ ಪಂದ್ಯಗಳಲ್ಲಿಯೂ ಅರ್ಧಶತಕದ ಜೊತೆಯಾಟವಾಡಿದ್ದರು. ಇಲ್ಲಿ ಇಡೀ ಇನಿಂಗ್ಸ್‌ ಅನ್ನೇ ತಮ್ಮದಾಗಿಸಿಕೊಂಡರು.

ಮೊಹಮ್ಮದ್ ಶಮಿ ಹಾಕಿದ 16ನೇ ಓವರ್‌ನ ಕೊನೆಯ ಎಸೆತವನ್ನು ಬಟ್ಲರ್ ಸಿಕ್ಸರ್‌ಗೆತ್ತಿ ವಿಜಯೋತ್ಸವ ಆಚರಿಸಿದರು.ಭಾನುವಾರದ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಭಾರತ ಆಡಬೇಕು ಎಂಬ ಅಸಂಖ್ಯಾತ ಅಭಿಮಾನಿಗಳ ಕನಸೂ ನುಚ್ಚುನೂರಾಯಿತು. 1992ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿಯೂ ಪಾಕ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಆಗ ಇಮ್ರಾನ್ ಖಾನ್ ನಾಯಕತ್ವದ ಪಾಕ್ ಚಾಂಪಿಯನ್ ಆಗಿತ್ತು. ಅಂದು ಆ ಪಂದ್ಯ ನಡೆದಿದ್ದ ಮೆಲ್ಬರ್ನ್‌ನಲ್ಲಿಯೇ ಈ ಬಾರಿಯೂ ಫೈನಲ್ ನಡೆಯಲಿದೆ.

ಈ ಪಂದ್ಯದಲ್ಲಿ ಭಾರತದ ಮಟ್ಟಿಗೆ ಕೊಹ್ಲಿ ಹಾಗೂ ಹಾರ್ದಿಕ್ ಇನಿಂಗ್ಸ್‌ಗಳಷ್ಟೇ ಒಳ್ಳೆಯ ನೆನಪುಗಳು. ಆರಂಭಿಕ ಜೋಡಿ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಇದರಿಂದಾಗಿ ರನ್‌ಗಳಿಕೆ ವೇಗ ಕಡಿಮೆಯಾಯಿತು. ಕೊಹ್ಲಿ ಗಟ್ಟಿಯಾಗಿ ನಿಂತಿದ್ದರೂ ತಂಡದ ಮೊತ್ತ 15 ಓವರ್‌ಗಳಲ್ಲಿ 3 ವಿಕೆಟ್‌ಗಳಗೆ 100 ರನ್‌ಗಳಾಗಿತ್ತು. ಅಲ್ಲಿಯವರೆಗೂ ತಾಳ್ಮೆಯಿಂದಿದ್ದ ಹಾರ್ದಿಕ್ ಬೀಸಾಟವಾಡಿದರು. ಇದರಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 68 ರನ್‌ಗಳು ಹರಿದುಬಂದವು. ಹಾರ್ದಿಕ್ 33 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರು. ಅದರಲ್ಲಿ ಐದು ಸಿಕ್ಸರ್‌ಗಳಿದ್ದವು.

T20 WC | ಕಳಪೆ ಬೌಲಿಂಗ್‌ಗೆ ಬೆಲೆತೆತ್ತ ಭಾರತ; ಪ್ರಶಸ್ತಿ ಸುತ್ತಿಗೆ ಇಂಗ್ಲೆಂಡ್
T20 WC | ಕಳಪೆ ಬೌಲಿಂಗ್‌ಗೆ ಬೆಲೆತೆತ್ತ ಭಾರತ; ಪ್ರಶಸ್ತಿ ಸುತ್ತಿಗೆ ಇಂಗ್ಲೆಂಡ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT