ಭಾನುವಾರ, ಮಾರ್ಚ್ 26, 2023
24 °C

T20 WC | ಡಿಯರ್‌ ಕೊಹ್ಲಿ, ದ್ವೇಷಿಸುವವರನ್ನು ಕ್ಷಮಿಸಿ: ರಾಹುಲ್‌ ಗಾಂಧಿ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಸೋಲು ಕಂಡಿದ್ದು, ಸೆಮಿಫೈನಲ್‌ ಹಂತಕ್ಕೇರುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನಾತ್ಮಕ ಸಂದೇಶಗಳು ಹರಿದಾಡುತ್ತಿವೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ನಿಮ್ಮನ್ನು ಟ್ರೋಲ್‌ ಮಾಡುತ್ತಿರುವವರನ್ನು ಕ್ಷಮಿಸಿಬಿಡಿ ಎಂದು ಸಲಹೆ ನೀಡಿದ್ದಾರೆ.

ʼಪ್ರಿಯ ವಿರಾಟ್‌, ಈ ಜನರು ದ್ವೇಷವನ್ನು ತುಂಬಿಕೊಂಡಿದ್ದಾರೆ. ಏಕೆಂದರೆ ಯಾರೊಬ್ಬರೂ ಅವರಿಗೆ ಪ್ರೀತಿ ನೀಡಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿʼ ಎಂದು ಟ್ವೀಟ್‌ ಮಾಡಿದ್ದಾರೆ.‌

ಕೊಹ್ಲಿ ಪಡೆ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹತ್ತು ವಿಕೆಟ್‌ ಅಂತರದ ಹೀನಾಯ ಸೋಲುಕಂಡಿತ್ತು. 

ಈ ಪಂದ್ಯದಲ್ಲಿ ದುಬಾರಿಯಾಗಿದ್ದ ವೇಗಿ ಮೊಹಮ್ಮದ್ ಶಮಿ ಅವರನ್ನು ಟ್ರೋಲ್‌ ಮಾಡಲಾಗಿತ್ತು. ಸಹ ಆಟಗಾರರನ ಬೆಂಬಲಕ್ಕೆ ನಿಂತ ಕೊಹ್ಲಿ, ಧರ್ಮದ ಆಧಾರದಲ್ಲಿ ಟೀಕಿಸುವುದು ಅತ್ಯಂತ ಕೀಳುಮಟ್ಟದ ಕೆಲಸವಾಗಿದೆ. ಬೆನ್ನೆಮೂಳೆ ಇಲ್ಲದ ಜನರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ನಂತರದ ಪಂದ್ಯವನ್ನು ನ್ಯೂಜಿಲೆಂಡ್‌ ಎದುರು ಆಡಿದ ಭಾರತ, ಎಂಟು ವಿಕೆಟ್‌ಗಳಿಂದ ಶರಣಾಗಿತ್ತು.

ಹೀಗಾಗಿ ಕೊಹ್ಲಿ ಮತ್ತು ಭಾರತ ತಂಡವನ್ನು ಟ್ರೋಲ್‌ ಮಾಡಲಾಗುತ್ತಿದೆ. ಕಿಡಿಗೇಡಿಗಳು, ಕೊಹ್ಲಿಯ 9 ತಿಂಗಳ ಹೆಣ್ಣು ಮಗುವಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಇವನ್ನೂ ಓದಿ










ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು