ಬುಧವಾರ, ಆಗಸ್ಟ್ 17, 2022
25 °C

ಆಸ್ಟ್ರೇಲಿಯಾದಲ್ಲಿ ಮೂರೂ ಮಾದರಿಯ ಸರಣಿ ಗೆದ್ದ ಭಾರತದ ಏಕೈಕ ನಾಯಕ ವಿರಾಟ್ ಕೊಹ್ಲಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಒಂದು ಪಂದ್ಯ ಬಾಕಿ ಇರುವಂತೆಯೇ 2–0 ಅಂತರದಲ್ಲಿ ಗೆದ್ದುಕೊಂಡಿದೆ. ಆ ಮೂಲಕ ಆಸ್ಟ್ರೇಲಿಯಾದಲ್ಲಿ ಮೂರೂ ಮಾದರಿಯಲ್ಲಿ ಸರಣಿ ಗೆದ್ದ ಭಾರತದ ಮೊದಲ ಹಾಗೂ ಒಟ್ಟಾರೆ ಎರಡನೇ ನಾಯಕ ಎಂಬ ದಾಖಲೆಯನ್ನು ವಿರಾಟ್ ತಮ್ಮ ಹೆಸರಿಗೆ ಬರೆದುಕೊಂಡರು.

ಟಿ20 ಸರಣಿಯ ಮೊದಲ ಪಂದ್ಯವನ್ನು 11 ರನ್‌ ಅಂತರದಿಂದ ಜಯ ಸಾಧಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಮೂರನೇ ಪಂದ್ಯ ನಾಳೆ ಸಿಡ್ನಿಯಲ್ಲಿ ನಡೆಯಲಿದೆ.

ಇದರೊಂದಿಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾದಲ್ಲಿ (SENA ದೇಶಗಳಲ್ಲಿ) ಟಿ20 ಸರಣಿ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಶ್ರೇಯವೂ ಕೊಹ್ಲಿಯದ್ದಾಯಿತು. ಟೀಂ ಇಂಡಿಯಾದ ಯಶಸ್ವಿ ನಾಯಕ ಎನಿಸಿರುವ ಎಂಎಸ್‌ ಧೋನಿ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದ್ದರು. ಆದರೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ಅವರಿಗೆ ಗೆಲುವು ದಕ್ಕಿರಲಿಲ್ಲ.

ಕೊಹ್ಲಿ ಪಡೆ 2018ರಲ್ಲಿ ಆಫ್ರಿಕಾ (2–1) ಮತ್ತು ಇಂಗ್ಲೆಂಡ್‌ನಲ್ಲಿ (2–1) ಹಾಗೂ ಇದೇ ವರ್ಷ ನ್ಯೂಜಿಲೆಂಡ್‌ನಲ್ಲಿ (5–0) ಸರಣಿ ಜಯಿಸಿತ್ತು.

ಮೂರೂ ಮಾದರಿಯಲ್ಲಿ ಜಯ
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ನಾಯಕ ಫಾಫ್‌ ಡು ಪ್ಲೆಸಿ ತಮ್ಮ ತಂಡಕ್ಕೆ ಆಸಿಸ್‌ನಲ್ಲಿ ಮೂರೂ ಮಾದರಿಯಲ್ಲಿ ಗೆಲುವು ತಂದುಕೊಟ್ಟಿದ್ದರು. 2018ರಲ್ಲಿ ವಿರಾಟ್‌ ಪಡೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2–1 ರಿಂದ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2–1ರಿಂದ ಗೆದ್ದುಕೊಂಡಿತ್ತು.

ಸದ್ಯ ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯ ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ಮೂರನೇ ಪಂದ್ಯವನ್ನು ಗೆದ್ದು ಸಮಾಧಾನಪಟ್ಟುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು