ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ashes 2023 | ಆ್ಯಷಸ್ ಟೆಸ್ಟ್: ಮಾರ್ಕ್ – ಮಾರ್ಷ್ ಜಿದ್ದಾಜಿದ್ದಿ

ಆಸ್ಟ್ರೇಲಿಯಾ ಸಾಧಾರಣ ಮೊತ್ತ; ಮಿಚೆಲ್ ಮಿಂಚಿನ ಶತಕ, ವುಡ್‌ಗೆ ಐದು ವಿಕೆಟ್
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

ಲೀಡ್ಸ್: ಆಸ್ಟ್ರೇಲಿಯಾದ ಬ್ಯಾಟರ್ ಮಿಚೆಲ್ ಮಾರ್ಷ್ ಮತ್ತು ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಅವರ ಜಿದ್ದಾಜಿದ್ದಿಗೆ ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಮೀಸಲಾಯಿತು. ‌

ಹೆಡಿಂಗ್ಲೆಯಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ  ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ದಾಳಿಯನ್ನೂ ಸಂಘಟಿಸಿತು.  ಇದರಿಂದಾಗಿ ಆಸ್ಟ್ರೇಲಿಯಾ ತಂಡವು 60.4 ಓವರ್‌ಗಳಲ್ಲಿ 263 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಮಾರ್ಕ್ ವುಡ್ (34ಕ್ಕೆ5), ಸ್ಟುವರ್ಟ್ ಬ್ರಾಡ್ (58ಕ್ಕೆ2) ಹಾಗೂ ಕ್ರಿಸ್ ವೋಕ್ಸ್ (73ಕ್ಕೆ3) ಅವರ ದಾಳಿಗೆ ಅಗ್ರಕ್ರಮಾಂಕದ ಬ್ಯಾಟರ್‌ಗಳು  ವಿಫಲರಾದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕವಿತ್ತು. ಈ ಹಂತದಲ್ಲಿ ಆರನೇ ಕ್ರಮಾಂಕದ ಬ್ಯಾಟರ್ ಮಿಚೆಲ್ ಮಾರ್ಷ್ (118; 118ಎ, 4X17, 6X4) ತಂಡದ ಗೌರವ ಉಳಿಸಿದರು. 28ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್‌ ಬೌಲಿಂಗ್‌ನಲ್ಲಿ ಮೊದಲ ಸ್ಪಿಪ್‌ನಲ್ಲಿದ್ದ ಜೋ ರೂಟ್ ಕೈಬಿಟ್ಟ ಕ್ಯಾಚ್‌ನಿಂದಾಗಿ ಸಿಕ್ಕ ಅವಕಾಶವನ್ನು ಮಾರ್ಷ್ ಸಮರ್ಥವಾಗಿ ಬಳಸಿಕೊಂಡರು. ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೂ ದಿಟ್ಟತನದಿಂದ ಬ್ಯಾಟ್ ಬೀಸಿದರು.

85 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಷ್ ಮರುಜೀವ ತುಂಬಿದರು. ಅವರು ಮತ್ತು ಟ್ರಾವಿಸ್ ಹೆಡ್ (39; 74ಎ) ಸೇರಿ ಐದನೇ ವಿಕೆಟ್ ಜೊತೆಯಾಟದಲ್ಲಿ 155 ರನ್‌ ಸೇರಿಸಿದರು. ಮಾರ್ಷ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಪೂರೈಸಿದರು.

ಆದರೆ, ಕ್ರಿಸ್ ವೋಕ್ಸ್ ಹಾಕಿದ  53ನೇ ಓವರ್‌ನಲ್ಲಿ ಮಿಚೆಲ್ ಮಾರ್ಷ್ ಕೊಟ್ಟ ಕ್ಯಾಚ್ ಪಡೆದ ಜಾಕ್ ಕ್ರಾಲಿ ಸಂಭ್ರಮಿಸಿದರು. ವೋಕ್ಸ್ ತಮ್ಮ ಇನ್ನೊಂದು ಓವರ್‌ನಲ್ಲಿ ಟ್ರಾವಿಸ್ ವಿಕೆಟ್ ಕೂಡ ಕಬಳಿಸಿದರು. ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ.

ಮಾರ್ಕ್ ವುಡ್ ಅವರು ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಟಾಡ್ ಮರ್ಫಿ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಐದು ಪಂದ್ಯಗಳ  ಸರಣಿಯಲ್ಲಿ ಆಸ್ಟ್ರೇಲಿಯಾ 2–0ಯಿಂದ ಮುಂದಿದೆ.  ಆತಿಥೇಯ ತಂಡಕ್ಕೆ ಸರಣಿ ಗೆಲುವಿನ ಕನಸು ಜೀವಂತವಾಗುಳಿಯಬೇಕಾದರೆ ಈ ಪಂದ್ಯದಲ್ಲಿ ಜಯಿಸುವುದು ಮುಖ್ಯವಾಗಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 60.4 ಓವರ್‌ಗಳಲ್ಲಿ 263 (ಮಾರ್ನಸ್ ಲಾಬುಷೇನ್ 21, ಸ್ಟೀವ್ ಸ್ಮಿತ್ 22, ಟ್ರಾವಿಸ್ ಹೆಡ್ 39, ಮಿಚೆಲ್ ಮಾರ್ಷ್ 118, ಸ್ಟುವರ್ಟ್ ಬ್ರಾಡ್ 58ಕ್ಕೆ2, ಮಾರ್ಕ್ ವುಡ್ 34ಕ್ಕೆ5, ಕ್ರಿಸ್ ವೋಕ್ಸ್ 73ಕ್ಕೆ3)

ಆಸ್ಟ್ರೇಲಿಯಾದ ಬ್ಯಾಟರ್ ಮಿಚೆಲ್ ಮಾರ್ಷ್ ಶತಕ ಗಳಿಸಿ ಸಂಭ್ರಮಿಸಿದರು – ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾದ ಬ್ಯಾಟರ್ ಮಿಚೆಲ್ ಮಾರ್ಷ್ ಶತಕ ಗಳಿಸಿ ಸಂಭ್ರಮಿಸಿದರು – ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT