ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2019 | ಕ್ರಿಕೆಟ್ ಲೋಕದಲ್ಲಿ ಸುದ್ದಿಯಾದ ಪ್ರಮುಖ 5 ವಿವಾದಗಳು

Last Updated 1 ಜನವರಿ 2020, 7:45 IST
ಅಕ್ಷರ ಗಾತ್ರ

ಅತ್ಯಂತ ರೋಚಕ ಹಣಾಹಣಿಯನ್ನು ಕಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ಗೆ ಸಾಕ್ಷಿಯಾದ ವರ್ಷ 2019.ಕ್ರಿಕೆಟ್‌ ಲೋಕದ ಪ್ರತಿಷ್ಠಿತ ಪ್ರಶಸ್ತಿಯಾದ ವಿಶ್ವಕಪ್‌ನ ಈ ಪಂದ್ಯವು ಸಾಕಷ್ಟು ವಿವಾದವನ್ನೂ ಹುಟ್ಟುಹಾಕಿತು. ಭಾವುಕತೆ, ಉದ್ವೇಗ, ಪೈಪೋಟಿಯ ಸನ್ನಿವೇಶಗಳನ್ನು ಕಂಡ ಫೈನಲ್‌, ನಿಯಮಗಳಲ್ಲಿನ ಸವಾಲುಗಳನ್ನೂ ಎತ್ತಿ ಹಿಡಿಯಿತು. ಅಂತೆಯೇ ಕಳೆದ ವರ್ಷ ಸುದ್ದಿಯಾದ ಪ್ರಮುಖ ಐದು ವಿವಾದಗಳು ಇಲ್ಲಿವೆ.

ವಿಶ್ವಕಪ್‌ ಫೈನಲ್‌: ಬೌಂಡರಿ ಕೌಂಟ್ ನಿಯಮ
ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಕಿರೀಟ ಧರಿಸಿತು. ಅತ್ಯಂತ ರೋಚಕವಾಗಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಇಂಗ್ಲೆಂಡ್ ಜಯಿಸಿತು.

ಬೆನ್ ಸ್ಟೋಕ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಸೂಪರ್ ಓವರ್ ಹಂತಕ್ಕೆ ಸಾಗಿದ ಈ ಪಂದ್ಯ ಫಲಿತಾಂಶ ನಿರ್ಧಾರವಾಗಿದ್ದು ಬೌಂಡರಿ ಕೌಂಟ್ ನಿಯಮದಿಂದ. ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆಗ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಯಿತು.

ಇಂಗ್ಲೆಂಡ್ 22 ಮತ್ತು ನ್ಯೂಜಿಲೆಂಡ್ 14 ಬೌಂಡರಿ ಗಳಿಸಿದ್ದವು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಅಪರೂಪಕ್ಕೆ ಬಳಕೆಯಾದ ಈ ನಿಯಮ ಸರಿಯಿಲ್ಲ. ಕಿವೀಸ್‌ಗೆ ಅನ್ಯಾಯವಾಯಿತು ಎಂಬ ಟೀಕೆಗಳೂ ಕೇಳಿಬಂದವು. ಆದರೆ ಕೇನ್ ವಿಲಿಯಮ್ಸ್‌ ನಾಯಕತ್ವ ಮತ್ತು ಅವರ ಬಳಗದ ಆಟ ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದ್ದು ಸುಳ್ಳಲ್ಲ.

ಐಸಿಸಿ ನಿಯಮಉಲ್ಲಂಘನೆ ಶಕೀಬ್‌ಗೆ 2 ವರ್ಷ ನಿಷೇಧ
ಎರಡು ವರ್ಷಗಳ ಹಿಂದೆ ಬುಕ್ಕಿಯೊಬ್ಬರು ತಮ್ಮನ್ನು ಭೇಟಿಯಾಗಿ ಆಮಿಷ ಒಡ್ಡಿದ್ದರು ಎಂಬ ವಿಚಾರವನ್ನು ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್‌ ಅಲ್‌ ಹಸನ್‌ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಮನಕ್ಕೆ ತಂದಿರಲಿಲ್ಲ. ಹೀಗಾಗಿ ಶಕೀಬ್‌ಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದಎರಡು ವರ್ಷಗಳ ಅವಧಿಗೆಅಕ್ಟೋಬರ್‌ನಲ್ಲಿ ನಿಷೇಧ ಹೇರಲಾಗಿದೆ.

2018ರ ಜನವರಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಜಿಂಬಾಬ್ವೆಯನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಮತ್ತು ಅದೇ ವರ್ಷದ ಐಪಿಎಲ್‌ ವೇಳೆಯೂ ಬುಕ್ಕಿಗಳು ಶಕೀಬ್‌ರನ್ನು ಸಂಪರ್ಕಿಸಿದ್ದರು. ಆದರೆ, ಈ ವಿವರವನ್ನು ಅವರು ಐಸಿಸಿಯ ಭ್ರಷ್ಟಾಚಾರ ತಡೆ ಘಟಕಕ್ಕೆ ತಿಳಿಸಿರಲಿಲ್ಲ.

ಹೀಗಾಗಿ ಐಸಿಸಿಯ ಭ್ರಷ್ಟಾಚಾರ ತಡೆ ಸಂಹಿತೆಯನ್ನು ಉಲ್ಲಂಘಸಿದ ಆರೋಪದ ಮೇಲೆ ಅವರಿಗೆ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಷರತ್ತಿಗೆ ಒಳಪಟ್ಟು ಒಂದು ವರ್ಷ ನಿಷೇಧ ಶಿಕ್ಷೆಯ ಅಮಾನತಿಗೆ ಅವಕಾಶ ಇದೆ. ಹೀಗಾಗಿ ಶಕೀಬ್‌ 2020ರ ಅಕ್ಟೋಬರ್‌ 29ರ ನಂತರ ಕ್ರಿಕೆಟ್‌ಗೆ ಮರಳಬಹುದು.

ಬಾಂಗ್ಲಾದೇಶದ ಪ್ರಮುಖ ಆಟಗಾರರಾದಶಕೀಬ್‌ 56 ಟೆಸ್ಟ್‌, 206 ಏಕದಿನ ಮತ್ತು 76 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಅವರು 600ಕ್ಕೂ ಹೆಚ್ಚು ರನ್‌ ಗಳಿಸಿ, 11 ವಿಕೆಟ್‌ಗಳನ್ನು ಉರುಳಿಸಿದ್ದರು.

ಪಾಕಿಸ್ತಾನ ನಾಯಕನಿಂದ ಜನಾಂಗೀಯ ನಿಂದನೆ
ಪಾಕಿಸ್ತಾನ ಕ್ರಿಕೆಟ್ ತಂಡವು 2019ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ತಲಾ ಮೂರು ಟೆಸ್ಟ್‌ ಮತ್ತು ಟಿ20 ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಿತ್ತು. ಈ ಪ್ರವಾಸದ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಜನಾಂಗೀಯ ನಿಂದನೆ ಮಾಡಿದ ಆರೋಪಕ್ಕೆ ಗುರಿಯಾದರು.

ಜನವರಿ 22ರಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನ 203 ರನ್‌ ಗಳಿಸಿ ಆಲೌಟ್‌ ಆಗಿತ್ತು. ಮೊತ್ತ ಬೆನ್ನಟ್ಟಿದ್ದ ಆಫ್ರಿಕಾ, 42 ಓವರ್‌ಗಳಲ್ಲಿ 207 ರನ್‌ ಗಳಿಸಿ ಐದು ವಿಕೆಟ್‌ಗಳ ಜಯ ಸಾಧಿಸಿತ್ತು.

ಆತಿಥೇಯರ ಇನಿಂಗ್ಸ್‌ನ 37ನೇ ಓವರ್‌ನಲ್ಲಿ ಆ್ಯಂಡಿಲೆ ಪಿಶುವಾಯೊ ರನ್‌ಗಾಗಿ ಓಡುತ್ತಿದ್ದಾಗ, ಸರ್ಫರಾಜ್‌ ಉರ್ದುವಿನಲ್ಲಿ ‘ಅಬೆ ಕಾಲೆ...’ (ಏ ಕರಿಯಾ) ಎಂದಿದ್ದರು. ವಿಕೆಟ್‌ಕೀಪರ್‌ ಆಗಿರುವಸರ್ಫರಾಜ್‌ ಆಡಿದ ಮಾತುಗಳು, ಸ್ಟಂಪ್‌ಗೆ ಅಳವಡಿಸಿರುವ ಮೈಕ್‌ನಲ್ಲಿ ದಾಖಲಾಗಿತ್ತು.

ಪಂದ್ಯದಲ್ಲಿ ಪಿಶುವಾಯೊ ಔಟಾಗದೆ 69 ರನ್ ಗಳಿಸಿದರು.

ಪಾಠ ಕಲಿಸಿದ ‘ಕಾಫಿ’
ಕನ್ನಡಿಗ ಕಣ್ಣೂರು ಲೋಕೇಶ್ ರಾಹುಲ್ ಅವರಿಗೆ ಇದು ಅಗ್ನಿಪರೀಕ್ಷೆಗೆ ಒಡ್ಡಿದ ವರ್ಷವಾಯಿತು. ಆದರೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಪರೀಕ್ಷೆಯಲ್ಲಿ ಪಾಸ್ ಆದರು. ವರ್ಷದ ಆರಂಭದಲ್ಲಿಯೇ ಟಿ.ವಿ ವಾಹಿನಿ ಕಾಫಿ ವಿಥ್ ಕರಣ್ ರಿಯಾಲಿಟಿ ಶೋನಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಭಾಗವಹಿಸಿದ್ದ ರಾಹುಲ್, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿ ಟೀಕೆಗೊಳಗಾಗಿದ್ದರು.

ನ್ಯೂಜಿಲೆಂಡ್ ಎದುರಿನ ಸರಣಿಯ ಎರಡು ಪಂದ್ಯಗಳಿಂದ ಅಮಾನತು ಕೂಡ ಆಗಿದ್ದರು. ಆ ಆಘಾತದಿಂದ ಹೊರಬರಲು ಹರಸಾಹಸಪಟ್ಟರು. ತಪ್ಪಿಗೆ ಕ್ಷಮೆ ಕೋರಿದರು. ಕೆಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರು. ಆದರೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪುಟಿದೆದ್ದರು. ಬ್ಯಾಟಿಂಗ್‌ನಲ್ಲಿ ರನ್ ಹೊಳೆ ಹರಿಸಿ, ಕೀಪಿಂಗ್‌ನಲ್ಲಿಯೂ ಮಿಂಚಿದರು. ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಶತಕ, ಅರ್ಧಶತಕಗಳ ಮೂಲಕ ತಮ್ಮತನಕ್ಕೆ ಮರಳಿದರು. ಮುಂದಿನ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕತ್ವಕ್ಕೂ ಆಯ್ಕೆಯಾದರು.

ಸಿಟ್ಟು ತೋರಿದ ಧೋನಿ
2019ರ ಐಪಿಎಲ್‌ ಟೂರ್ನಿ ವೇಳೆರಾಜಸ್ಥಾನ ರಾಯಲ್ಸ್‌–ಚೆನ್ನೈ ಸೂಪರ್‌ ಕಿಂಗ್ಸ್‌ ಪಂದ್ಯ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 157 ರನ್‌ ಗಳಿಸಿತ್ತು. ಮೊತ್ತ ಬೆನ್ನಟ್ಟಿದ ಚೆನ್ನೈ, ಆರು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತ್ತು.

ಚೆನ್ನೈ ಬ್ಯಾಟಿಂಗ್ ವೇಳೆ ರಾಜಸ್ಥಾನದ ಬೆನ್ ಸ್ಟೋಕ್ಸ್‌ ಹಾಕಿದ ಎಸೆತವನ್ನು ಅಂಪೈರ್ ಉಲ್ಲಾಸ ಗಂಧೆ ಅವರು ನೋಬಾಲ್ ಎಂದು ಸಂಜ್ಞೆ ಮಾಡಿದ್ದರು.ಆದರೆ ಸ್ಕ್ವೆರ್‌ ಲೆಗ್‌ನಲ್ಲಿದ್ದ ಅಂಪೈರ್ ಆಕ್ಸೆನ್‌ಫೋರ್ಡ್ ಇದನ್ನು ನಿರಾಕರಿಸಿದ್ದರು.

ಈ ವೇಳೆನಾನ್‌ ಸ್ಟ್ರೈಕ್‌ನಲ್ಲಿದ್ದ ರವೀಂದ್ರ ಜಡೇಜ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರು. ಇದೇ ಸಂದರ್ಭದಲ್ಲಿ ಡಗ್‌ಔಟ್‌ನಲ್ಲಿದ್ದ ಧೋನಿ ಮೈದಾನಕ್ಕೆ ಧಾವಿಸಿ ಬಂದು ಅಂಪೈರ್‌ಗಳ ಜೊತೆಗೆ ವಾದಕ್ಕಿಳಿದರು.

ಇದು ಐಸಿಸಿಯ 2.20ರ ನಿಯಮದ ಉಲ್ಲಂಘನೆಯಾಗಿದ್ದು, ದೊಡ್ಡ ಸುದ್ದಿಯಾಗಿತ್ತು.ಧೋನಿಗೆ ಪಂದ್ಯದ ಸಂಭಾವನೆಯ ಶೇ.50 ರಷ್ಟು ದಂಡ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT