ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ನಾಯಕತ್ವಕ್ಕೆ ಹಾರ್ದಿಕ್–ಧವನ್ ಸ್ಪರ್ಧೆ?

ಜುಲೈನಲ್ಲಿ ಶ್ರೀಲಂಕಾದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ಆಡಲಿರುವ ಬಳಗ
Last Updated 11 ಮೇ 2021, 13:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಲ್ಲಿ ಒಬ್ಬರಿಗೆ ಶ್ರೀಲಂಕಾ ಪ್ರವಾಸದ ವೇಳೆ ಭಾರತ ತಂಡದ ನಾಯಕತ್ವ ಒಲಿಯುವ ಸಾಧ್ಯತೆ ಇದೆ.

ಜುಲೈನಲ್ಲಿ ಭಾರತ ತಂಡವು ಶ್ರೀಲಂಕಾದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಲಿದೆ. ಅದೇ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಇರುವುದರಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಶ್ರೀಲಂಕಾ ಎದುರಿನ ಸರಣಿಯಲ್ಲಿ ಇರುವುದಿಲ್ಲ. ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ತಂಡವನ್ನು ರಚಿಸಲಾಗುತ್ತಿದೆ ಎಂದು ಈಚೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.

ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರೇ ಈ ತಂಡವನ್ನು ಮುನ್ನಡೆಸುವುದಾಗಿಯೂ ಹೇಳಲಾಗಿತ್ತು. ಆದರೆ ಅವರು ಈಚೆಗೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಒಂದೊಮ್ಮೆ ಅವರು ಫಿಟ್ ಆಗಿ ಮರಳದಿದ್ದರೆ, ನಾಯಕತ್ವ ಬೇರೆಯವರಿಗೆ ನೀಡಲಾಗುತ್ತದೆ. ಆ ಸ್ಪರ್ಧೆಯಲ್ಲಿ ಶಿಖರ್ ಮತ್ತು ಹಾರ್ದಿಕ್ ಹೆಸರು ಈಗ ಕೇಳಿಬರುತ್ತಿದೆ.

‘ಇದುವರೆಗೂ ಶ್ರೇಯಸ್ ಪೂರ್ತಿ ಚೇತರಿಸಿಕೊಂಡಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಇಂತಹ ಶಸ್ತ್ರಚಿಕಿತ್ಸೆಗಳು ಆದಾಗ ಪುನಶ್ಚೇತನಕ್ಕಾಗಿ ಬಹಳಷ್ಟು ಸಮಯ ಬೇಕಾಗುತ್ತದೆ. ತಮ್ಮ ಮೊದಲಿನ ಲಯಕ್ಕೆ ಮರಳಬೇಕಾದರೆ ಸುಮಾರು ನಾಲ್ಕು ತಿಂಗಳುಗಳಾದರೂ ಬೇಕಾಗುತ್ತವೆ‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಒಂದೊಮ್ಮೆ ಶ್ರೇಯಸ್ ಫಿಟ್ ಆದರೆ ನಾಯಕತ್ವಕ್ಕೆ ಅವರೇ ಮೊದಲ ಆಯ್ಕೆಯಾಗುವರು. ಕಳೆದ ಎರಡು ಐಪಿಎಲ್‌ ಟೂರ್ನಿಗಳಲ್ಲಿ ಶಿಖರ್ ಚೆನ್ನಾಗಿ ಆಡಿದ್ದಾರೆ. ಅನುಭವಿಯಾಗಿರುವ ಅವರು ಉತ್ತಮ ಲಯದಲ್ಲಿಯೂ ಇದ್ದಾರೆ. ಎಂಟು ವರ್ಷಗಳಿಂದ ಭಾರತ ತಂಡದಲ್ಲಿ ಅವರು ಆಡುತ್ತಿದ್ದಾರೆ. ಹಾರ್ದಿಕ್ ಪಂದ್ಯಗಳ ಜಯದ ರೂವಾರಿಯಾಗಿದ್ದಾರೆ. ಆದರೆ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೌಲಿಂಗ್ ಮಾಡುತ್ತಿಲ್ಲ‘ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT