ಗುರುವಾರ , ಫೆಬ್ರವರಿ 27, 2020
19 °C
ಯುವ ವಿಶ್ವಕಪ್

ಕಂಡಕ್ಟರ್ ಕೆಲಸ ಬಿಡುವಂತೆ ಅಮ್ಮನನ್ನು ಒತ್ತಾಯಿಸುತ್ತಿರುವ ಭಾರತದ ಸ್ಪಿನ್ನರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2018ರ ಜೂನಿಯರ್‌ ಏಷ್ಯಾಕಪ್‌ ಟೂರ್ನಿಯ ಫೈನಲ್‌ನಲ್ಲಿ ಕೇವಲ 28 ರನ್‌ ನೀಡಿ ಬಾಂಗ್ಲಾದೇಶ ತಂಡದ ಪ್ರಮುಖ 5 ವಿಕೆಟ್‌ ಪಡೆದು ಭಾರತದ ಗೆಲುವಿಗೆ ಕಾರಣನಾಗಿದ್ದ ಆ ಹುಡುಗ, ಕಳೆದ ವರ್ಷ ನಡೆದ ಐಪಿಎಲ್‌ ಹರಾಜಿಗೆ ಲಭ್ಯವಿರುವುದಾಗಿ ಹೆಸರು ನೋಂದಾಯಿಸಿಕೊಂಡಿದ್ದ. ಆದರೆ, ಒಂದೇಒಂದೂ ಪ್ರಥಮ ದರ್ಜೆ ಪಂದ್ಯ ಆಡದಿದ್ದ ಕಾರಣ ಆತನನ್ನು ಅಂತಿಮ ಹರಾಜು ಪಟ್ಟಿಯಿಂದ ಕೈಬಿಡಲಾಗಿತ್ತು.

ಹರಾಜಿನಲ್ಲಿ ನಿಗದಿಯಾಗಿದ್ದ ಕನಿಷ್ಠ ₹20 ಲಕ್ಷ ಮೂಲ ಬೆಲೆಯ ವಿಭಾಗದಲ್ಲೂ ಸ್ಥಾನ ಸಿಗಲಿಲ್ಲವಾದ್ದರಿಂದ, ತನ್ನ ತಾಯಿಯನ್ನು ಕಂಡಕ್ಟರ್‌ ಕೆಲಸ ಬಿಡುವಂತೆ ಒತ್ತಾಯಿಸುವ ಆಸೆಯೊಂದು ಕಮರಿತ್ತು. ಈ ಬೇಸರವನ್ನು ಮರೆಯಲು ಮತ್ತು ತನ್ನನ್ನು ತಾನು ಹುರಿದುಂಬಿಸಿಕೊಳ್ಳಲು ಬೇರೆ ದಾರಿಕಾಣದ ಆತ, ಮತ್ತೆ ಅಭ್ಯಾಸ ಆರಂಭಿಸಿದ. ಅದರ ಫಲವಾಗಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಸ್ಥಾನ ದೊರೆಯಿತು. ಆತ ಬೇರಾರೂ ಅಲ್ಲ, ಯುವ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಗೆಲುವಿಗೆ ಕಾರಣನಾದ ಅಥರ್ವ ಅಂಕೋಲೆಕರ್‌.

ಕ್ವಾರ್ಟರ್‌ ಫೈನಲ್‌ ಹೀರೋ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಜನವರಿ 28ರಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆರಂಭಿಕ ಯಶಸ್ವಿ ಜೈಸ್ವಾಲ್‌ (62) ಗಳಿಸಿದ ಅರ್ಧಶತಕದ ಹೊರತಾಗಿಯೂ, ಕೇವಲ 114 ರನ್‌ ಆಗುಷ್ಟರಲ್ಲಿ ಭಾರತದ ಪ್ರಮುಖ ಐದು ವಿಕೆಟ್‌ ಉರುಳಿದ್ದವು. ಈ ವೇಳೆ ಕ್ರೀಸ್‌ಗಿಳಿದ ಅಥರ್ವ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜೊತೆ ಸೇರಿ ಕೊನೆವರೆಗೂ ಆಡಿದ್ದ. ಅಜೇಯ 55 ರನ್ ಗಳಿಸಿ ತಂಡದ ಮೊತವನ್ನು 233ಕ್ಕೇರಿಸಿದ್ದ.

ಇದನ್ನೂ ಓದಿ: 

ಈ ಪಂದ್ಯದಲ್ಲಿ 159ರನ್‌ ಗಳಿಸಲಷ್ಟೇ ಶಕ್ತವಾದ ಆಸ್ಟ್ರೇಲಿಯಾ 74ರನ್‌ ಗಳಿಂದ ಸೋಲೊಪ್ಪಿಕೊಂಡಿತ್ತು. ಸದ್ಯ ಫೈನಲ್‌ ಪ್ರವೇಶಿಸಿರುವ ಭಾರತ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿತ್ತು.

ಭಾನುವಾರ ಬಾಂಗ್ಲಾದೇಶ ವಿರುದ್ಧ ಫೈನಲ್‌ ನಡೆಯಲಿದ್ದು, ಈ ಪಂದ್ಯ ಅಥರ್ವನಿಗೆ ಮಹತ್ವದ್ದಾಗಿದೆ. ಒಂದು ವೇಳೆ ಅದರಲ್ಲಿ ಭಾರತ ಗೆದ್ದರೆ, ಅಥರ್ವನ ಅಮ್ಮ ಕೆಲಸ ಬಿಡಲಿದ್ದಾರೆ. ಶ್ರಮದಾಯಕವಾದ ಕಂಡಕ್ಟರ್‌ ಕೆಲಸ ಮಾಡುವುದು ಅಥರ್ವನಿಗೆ ಇಷ್ಟವಿಲ್ಲ. ಹೀಗಾಗಿ ಆತನ ತಾಯಿ ಈ ನಿರ್ಧಾರ ಮಾಡಿದ್ದಾರೆ.

ಮಗನ ಒತ್ತಾಯಕ್ಕೆ ಕೆಲಸ ಬಿಡುವ ನಿರ್ಧಾರ
ಅಥರ್ವನ ತಾಯಿ ವೈದೇಹಿ ಅವರು ಸದ್ಯ ಬೆಸ್ಟ್‌ನಲ್ಲಿ (ಬಹನ್‌ ಮುಂಬೈ ವಿದ್ಯುತ್‌ ಸರಬರಾಜು ಮತ್ತು ಸಂಚಾರ ನಿಗಮ–ಬಿಇಎಸ್‌ಟಿ) ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮಗನ ಆಟ ಹಾಗೂ ತಮ್ಮ ನಿರ್ಧಾರ ಬಗ್ಗೆ ಮಾತನಾಡಿರುವ ಅವರು, ‘ಇದು (ವಿಶ್ವಕಪ್‌ ಗೆಲುವು) ನನ್ನ ಬದುಕಿಗೆ ತಿರುವು ನೀಡಬಹುದು. ಒಂದು ವೇಳೆ ಭಾರತ ಫೈನಲ್‌ ಗೆದ್ದು ಚಾಂಪಿಯನ್‌ ಆದರೆ, ಮಗನಿಗೆ ಸಾಕಷ್ಟು ಅವಕಾಶಗಳು ಸಿಗಬಹುದು. ಫೈನಲ್‌ ಗೆಲ್ಲುವುದರಿಂದ ಆತನಲ್ಲಿ ಆತ್ಮ ವಿಶ್ವಾಸವೂ ಹೆಚ್ಚಾಗಬಹುದು’ ಎನ್ನುತ್ತಾರೆ.

‘ಈ ವರ್ಷ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗದಿದ್ದ ಕಾರಣ ಸ್ವಲ್ಪ ನೊಂದುಕೊಂಡಿದ್ದ. ಐಪಿಎಲ್‌ ಪ್ರತಿವರ್ಷವೂ ಬರುತ್ತದೆ. ಆದರೆ, 19 ವರ್ಷದೊಳಗಿನವರ ವಿಶ್ವಕಪ್‌ ಹಾಗಲ್ಲ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವಿದು. ಸದ್ಯ ತಂಡದಲ್ಲಿರುವ ಎಲ್ಲ 15 ಆಟಗಾರರಿಗೂ, ಅದರಲ್ಲೂ ಅಥರ್ವನಂತೆ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಬಂದವರಿಗೆ ಈ ವಿಶ್ವಕಪ್‌ ಒಂದು ಒಳ್ಳೆಯ ಭವಿಷ್ಯ ರೂಪಿಸಿಕೊಡಲಿದೆ’ ಎಂದಿದ್ದಾರೆ.

ಇದನ್ನೂ ಓದಿ: 

ಬೆಳಗ್ಗಿನ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ವೈದೇಹಿ, ಸಂಜೆ ಸಮಯದಲ್ಲಿ ತಾವಿರುವ  ಮನೆಯಲ್ಲಿಯೇ ಮಕ್ಕಳಿಗೆ ಮನೆಪಾಠ (ಟ್ಯೂಷನ್‌) ಹೇಳಿಕೊಡುತ್ತಾರೆ. ಅಂದಹಾಗೆ, ಅಥರ್ವನ ತಂದೆ ವಿನೋದ್ ವೃತ್ತಿಯಲ್ಲಿ ಕಂಡಕ್ಟರ್‌ ಆಗಿದ್ದವರು. ಕ್ಲಬ್‌ವೊಂದರ ಪರ ಕ್ರಿಕೆಟ್‌ ಆಡುತ್ತಿದ್ದ ಅವರು 2010ರಲ್ಲಿ ಮೃತಪಟ್ಟಿದ್ದರು. ಹೀಗಾಗಿ ಅವರ ಹುದ್ದೆಯನ್ನು ವೈದೇಹಿ ಅವರಿಗೆ ನೀಡಲಾಯಿತು. ಆಗಿನಿಂದ ಸಂಸಾರ ಮುನ್ನಡೆಸುತ್ತಿರುವ ವೈದೇಹಿ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಫೈನಲ್‌ ಪಂದ್ಯದ ಕುರಿತು ವೈದೇಹಿ, ‘ಫೈನಲ್‌ ಪಂದ್ಯವು ಅಥರ್ವ ತನ್ನ ಅಪ್ಪನ ಕನಸನ್ನು ನನಸಾಗಿಸಲು ಇರುವ ಒಂದೊಳ್ಳೆ ಅವಕಾಶ’ ಎಂದಿದ್ದಾರೆ. ಮುಂದುವರಿದು, ‘ಕಂಡಕ್ಟರ್‌ ಕೆಲಸ ಕಠಿಣವಾದದ್ದು ಎನ್ನುವ ಕಾರಣಕ್ಕೆ ನಾನು ಕೆಲಸ ಬಿಡುವಂತೆ ಅಥರ್ವ ಒತ್ತಾಯಿಸುತ್ತಿದ್ದಾನೆ’ ಎಂದು ಹೇಳಿಕೊಂಡಿದ್ದಾರೆ.

‘ಆದರೆ ನಾನು ಇಲ್ಲಿಯವರೆಗೆ ಅಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಲಿಲ್ಲ. ಏಕೆಂದರೆ, ಅಥರ್ವನ ಆದಾಯ ಯಾವಗಲೋ ನಡೆಯುವ ಟೂರ್ನಿಗಳನ್ನು ಅವಲಂಭಿಸಿದೆ. ಹಾಗಾಗಿ ನಾನು ಸಂಪೂರ್ಣವಾಗಿ ಅವನ ಮೇಲೆ ಅವಲಂಭಿತಳಾಗುವುದು ಸರಿಯಲ್ಲ. 14 ವರ್ಷದ ಇನ್ನೊಬ್ಬ ಮಗನಿದ್ದಾನೆ. ಆವನೂ ಆಡುತ್ತಿದ್ದಾನೆ. ಹಾಗಾಗಿ ಕಡೇಪಕ್ಷ ಅಥರ್ವ ನೆಲೆಕಂಡುಕೊಳ್ಳುವವರೆಗಾದರೂ ಕೆಲಸವನ್ನು ಮುಂದುವರಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬೌಲಿಂಗ್‌ನ ಭರವಸೆ ಕಾರವಾದ ಅಥರ್ವ

ಅಥರ್ವ ಹುಟ್ಟಿದ್ದು, ಬೆಳೆದಿದ್ದು ಮುಂಬೈನಲ್ಲೇ ಆದರೂ ಅವರ ತಂದೆಯ ಮೂಲಮನೆ ಕಾರವಾರದ ಕೋಡಿಬಾಗದಲ್ಲಿದೆ. ಅವರ ತಾಯಿ ವೈದೇಹಿ ಅವರೊಂದಿಗೆ ವರ್ಷಕ್ಕೊಮ್ಮೆ ಬಂದು ನಾಲ್ಕೈದು ದಿನ ಇಲ್ಲಿದ್ದು ಹೋಗುತ್ತಾರೆ ಎಂಬುದು ವಿಶೇಷ.

ಮಗನ ಪಂದ್ಯ ನೋಡಲು ಕೆಲಸಕ್ಕೆ ಚಕ್ಕರ್
ಬಿಡುವಿಲ್ಲದೆ ದುಡಿಯುತ್ತಿರುವ ವೈದೇಹಿಯವರು ತನ್ನ ಮಗನ ಆಟವನ್ನು ಕ್ರೀಡಾಂಗಣದಲ್ಲಿ ಕುಳಿತು ನೋಡಿರುವುದು ಕೇವಲ ಒಮ್ಮೆ ಮಾತ್ರ. ಅದೂ, ಮುಂಬೈನ ವಾಂಖೆಡೆ ಮೈದಾನದಲ್ಲಿ ಐದು ವರ್ಷಗಳ ಹಿಂದೆ ನಡೆದ 14 ವರ್ಷದೊಳಗಿನವರ ಪಂದ್ಯವನ್ನು.

ಅನಿವಾರ್ಯ ಕಾರಣಗಳನ್ನು ಬಿಟ್ಟು ಉಳಿದಂತೆ ತಪ್ಪದೆ ಕೆಲಸಕ್ಕೆ ಹಾಜರಾಗುವ ವೈದೇಹಿ, ಈ ಭಾನುವಾರ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಹಾಗಾಗಿ, ವೈಶಾಲಿ ನಗರ ಮಾರ್ಗವಾಗಿ ಸಂಚರಿಸುವ ನಂ. 307ರ ಬಸ್‌ನಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ಕೊಡಲು ಅವರು ಇರುವುದಿಲ್ಲ. ಏಕೆಂದರೆ, ಅವರು ಮನೆಯಲ್ಲೇ ಉಳಿದು, ತಮ್ಮ ಮಗನಿಗೆ ಭವಿಷ್ಯ ಕಟ್ಟಿಕೊಡುವ ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಇದನ್ನೂ ಓದಿ: 

ಅಥರ್ವನಿಗೆ ಆಟ ಚೆನ್ನಾಗಿ ಅರ್ಥವಾಗಿದೆ
ಅಥರ್ವನ ಕ್ರಿಕೆಟ್‌ ಬದುಕಿನ ಬಗ್ಗೆ ಎಂಐಜಿ ಕ್ರಿಕೆಟ್‌ ಕ್ಲಬ್‌ನ ಮುಖ್ಯ ಕೋಚ್‌ ಪ್ರಶಾಂತ್‌ ಶೆಟ್ಟಿ ಮಾತನಾಡಿದ್ದಾರೆ. ‘ಅಥರ್ವನಂತಹವರಿಗೆ ಸೋಲಿನ ಬಗ್ಗೆ ಅಪಾರ ಭಯವಿದೆ. ಅದು ಮನೆಯಿಂದಲೇ ಆರಂಭವಾಗಿರುತ್ತದೆ. ಯಾಕೆಂದರೆ ಆತನ ಕುಟುಂಬ ಅವನಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಒಂದುವೇಳೆ ಕ್ರಿಕೆಟ್‌ನಲ್ಲಿ ಯಶಸ್ಸು ಸಿಗದಿದ್ದರೆ ಏನು ಮಾಡುವುದು ಎಂಬ ಭಯ ಇದ್ದೇ ಇರುತ್ತದೆ. ಇದು (ಕ್ರಿಕೆಟ್‌) ಗಟ್ಟಿ ಉದ್ಯೋಗವಲ್ಲ. ಹಾಗಾಗಿ ಇಲ್ಲಿ ನಿತ್ಯ ಉತ್ತಮ ಸಾಮರ್ಥ್ಯ ತೋರುತ್ತಲೇ ಇರಬೇಕು’ ಎಂದಿದ್ದಾರೆ.

ಅಥರ್ವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಸೇರಿದ ನಂತರ ಸಾಮರ್ಥ್ಯ ಉತ್ತಮಪಡಿಸಿಕೊಂಡಿದ್ದಾನೆ ಎನ್ನುವ ಶೆಟ್ಟಿ, ‘ಅಥರ್ವ ಅತ್ಯಂತ ಅದ್ಭುತ ಪ್ರತಿಭೆ ಎನ್ನಲಾರೆ. ಆದರೆ, ಅವನು ಚತುರ ‘ಗಲ್ಲಿ ಕ್ರಿಕೆಟರ್‌’. ಆಟವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಅದು ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಸಾಬೀತಾಗಿದೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಡುತ್ತಾನೆ ಆತ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು