ಸೋಮವಾರ, ಏಪ್ರಿಲ್ 19, 2021
31 °C
ಟೆಸ್ಟ್‌ ಕ್ರಿಕೆಟ್‌

ಆಡಿದ ಹತ್ತು ಎಸೆತಗಳಲ್ಲೇ ಎರಡು ದಾಖಲೆ ಬರೆದ ಉಮೇಶ್‌ ಯಾದವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ: 6 6 0 1 6 0 6 0 6 W

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್‌ ಉಮೇಶ್‌ ಯಾದವ್‌ ಬ್ಯಾಟ್‌ ಬೀಸಿದ್ದು ಹೀಗೆ.

ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಒಟ್ಟು ಹತ್ತು ಎಸೆತಗಳನ್ನು ಎದುರಿಸಿ ಬಿರುಸಿನ ಆಟವಾಡಿದ ಉಮೇಶ್‌ ಯಾದವ್‌, ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಹತ್ತು ಎಸೆತಗಳಲ್ಲಿ ಐದು ಸಿಕ್ಸರ್‌ ಸಹಿತ 31ರನ್‌ ಗಳಿಸಿದ ಯಾದವ್‌ 310ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದರು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಹತ್ತಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ ಯಾವುದೇ ಬ್ಯಾಟ್ಸ್‌ಮನ್‌ ದಾಖಲಿಸಿದ ಅತಿಹೆಚ್ಚಿನ ಸ್ಟ್ರೈಕ್‌ರೇಟ್‌ ಆಗಿದೆ.

ಮಾತ್ರವಲ್ಲ ಅತಿ ಕಡಿಮೆ ಎಸೆತಗಳಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಶ್ರೇಯವೂ ಉಮೇಶ್‌ ಅವರದ್ದಾಯಿತು. ನ್ಯೂಜಿಲೆಂಡ್‌ ತಂಡದ ಸ್ಟೀಫನ್‌ ಪ್ಲೆಮಿಂಗ್‌ ಅವರು 2004ರಲ್ಲಿ 11 ಎಸೆತಗಳಲ್ಲಿ 31ರನ್‌ ಸಿಡಿಸಿದ್ದರು. 1998ರಲ್ಲಿ ವೆಸ್ಟ್‌ ಇಂಡೀಸ್‌ ತಂಡದ ನಾಮ್‌ ಮೆಕ್‌ಲೀನ್‌ 12 ಎಸೆತಗಳಲ್ಲಿ 31 ರನ್‌ ಬಾರಿಸಿದ್ದರು. ಮೂವರೂ ಬ್ಯಾಟ್ಸ್‌ಮನ್‌ಗಳು ದಕ್ಷಿಣ ಆಫ್ರಿಕಾ ವಿರುದ್ಧವೇ ಈ ಸಾಧನೆ ಮಾಡಿರುವುದು ವಿಶೇಷ.

ಒಂಭತ್ತನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಯಾದವ್‌, ಮೊದಲ ಎಸೆತದಿಂದಲೇ ಸ್ಫೋಟಕ ಬ್ಯಾಟಿಂಗ್‌ ಮಾಡಿದರು. 112 ಓವರ್‌ನಲ್ಲಿ ಚಾರ್ಜ್‌ ಲಿಂಡೆ ಎಸೆದ ಐದು ಮತ್ತು ಆರನೇ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಎದುರಿಸಿದ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ಈ ಹಿಂದೆ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹಾಗೂ ವೆಸ್ಟ್‌ ಇಂಡೀಸ್‌ನ ಮಾಜಿ ಕ್ರಿಕೆಟಿಗ ಫೊಫಿ ವಿಲಿಯಮ್ಸನ್‌  ಈ ಸಾಧನೆ ಮಾಡಿದ್ದರು.‌

ಬಳಿಕ 113ನೇ ಓವರ್‌ನಲ್ಲಿ ಎರಡು ಎಸೆತ ಆಡಿ 1 ರನ್‌ ಗಳಿಸಿದ ಉಮೇಶ್‌, ನಂತರದ ಓವರ್‌ನಲ್ಲಿ ಮತ್ತಷ್ಟು ಅಬ್ಬರಿಸಿದರು. ಮೂರು ಸಿಕ್ಸರ್‌ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು.

ಪಂದ್ಯವು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ತಂಡ 9 ವಿಕೆಟ್‌ ನಷ್ಟಕ್ಕೆ 497 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿರುವ ಆಫ್ರಿಕಾ ಪಡೆ ಐದು ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 9 ರನ್‌ ಗಳಿಸಿದೆ.

ಮಂದ ಬೆಳಕಿನ ಕಾರಣ ಎರಡನೇ ದಿನದಾಟವನ್ನು ಬೇಗನೆ ನಿಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು