ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಚಾಲೆಂಜರ್ ಟೂರ್ನಿ | VEL VS TRL : ಟ್ರೇಲ್‌ಬ್ಲೇಜರ್ಸ್‌ಗೆ ಮಣಿದ ವೆಲೋಸಿಟಿ

Last Updated 5 ನವೆಂಬರ್ 2020, 13:54 IST
ಅಕ್ಷರ ಗಾತ್ರ

ಶಾರ್ಜಾ: ಮೊದಲ ಪಂದ್ಯದಲ್ಲಿ ಸೂಪರ್‌ನೋವಾ ಎದುರು ಭರ್ಜರಿ ಐದು ವಿಕೆಟ್‌ಗಳ ಜಯ ಸಾಧಿಸಿದ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ತಂಡ, ಐಪಿಎಲ್ ಅಂಗವಾಗಿ ನಡೆಯುತ್ತಿರುವ ಮಹಿಳಾ ಚಾಲೆಂಜ್‌ ಟೂರ್ನಿಯ ಎರಡನೇ ಹಣಾಹಣಿಯಲ್ಲಿ ನೀರಸ ಆಟವಾಡಿತು. ಗುರುವಾರ ಈ ತಂಡವನ್ನು ಸ್ಮೃತಿ ಮಂದಾನ ನಾಯಕತ್ವದ ಟ್ರೇಲ್‌ಬ್ಲೇಜರ್ಸ್‌ ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಲೋಸಿಟಿ ತಂಡ ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅವರ ಪರಿಣಾಮಕಾರಿ ದಾಳಿಗೆ ನಲುಗಿ ಕೇವಲ 47 ರನ್‌ಗಳಿಗೆ ಪತನಗೊಂಡಿತು. ಗುರಿ ಬೆನ್ನತ್ತಿದ ಟ್ರೇಲ್‌ಬ್ಲೇಜರ್ಸ್‌ ನಾಲ್ಕನೇ ಓವರ್‌ನಲ್ಲಿ ನಾಯಕಿಯ ವಿಕೆಟ್ ಕಳೆದುಕೊಂಡಿತು. ಆದರೆ ವೆಸ್ಟ್ ಇಂಡೀಸ್‌ನ ಡಿಯಾಂಡ್ರ ದೊತಿನ್ ಮತ್ತು ಪಶ್ಚಿಮ ಬಂಗಾಳದ ರಿಚಾ ಘೋಷ್ 37 ರನ್‌ಗಳ ಜೊತೆಯಾಟವಾಡಿ ಎಂಟನೇ ಓವರ್‌ನಲ್ಲೇ ತಂಡಕ್ಕೆ ಜಯ ತಂದುಕೊಟ್ಟರು. ದೊತಿನ್ 28 ಎಸೆತಗಳಲ್ಲಿ ಮೂರು ಬೌಂಡರಿ ಒಳಗೊಂಡ 29 ರನ್ ಕಲೆ ಹಾಕಿದರು. ಇನಿಂಗ್ಸ್‌ನ ಏಕೈಕ ಸಿಕ್ಸರ್ ಬಾರಿಸಿದ ರಿಚಾ ಘೋಷ್ 10 ಎಸೆತಗಳಲ್ಲಿ 13 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಒಂದು ಬೌಂಡರಿಯೂ ಇತ್ತು.

ಐಸಿಸಿಯ ಮಹಿಳಾ ಟಿ20 ರ‍್ಯಾಂಕಿಂಗ್‌ನಲ್ಲಿ ಒಂದೇ ಸ್ಥಾನದಲ್ಲಿರುವ ಎಕ್ಸೆಸ್ಟೋನ್ ಆರಂಭಲ್ಲೇ ಮಿಥಾಲಿ ರಾಜ್ ಬಳಗದ ಬ್ಯಾಟರ್‌ಗಳನ್ನು ಕಾಡಿದರು. ಭರ್ಜರಿ ಹೊಡೆತಗಳ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಮೂರನೇ ಓವರ್‌ನಲ್ಲಿ ಬೌಲ್ಡ್ ಮಾಡಿ ಜೂಲನ್ ಗೋಸ್ವಾಮಿ ಅವರು ಟ್ರೇಲ್‌ಬ್ಲೇಜರ್ಸ್‌ಗೆ ಮೇಲುಗೈ ತಂದುಕೊಟ್ಟರು. ಆರಂಭಿಕ ಆಟಗಾರ್ತಿ ಡ್ಯಾನಿ ವೈಟ್ ಕೂಡ ಜೂಲನ್‌ಗೆ ಬಲಿಯಾದರು. ಎಡಗೈ ಸ್ಪಿನ್ನರ್‌ ಎಕ್ಲೆಸ್ಟೋನ್ ನಾಯಕಿ ಮಿಥಾಲಿ ವಿಕೆಟ್ ಕಬಳಿಸುವ ಮೂಲಕ ವಿಕೆಟ್ ಬೇಟೆ ಆರಂಭಿಸಿದರು. 3.1 ಓವರ್‌ಗಳಲ್ಲಿ ಕೇವಲ ಒಂಬತ್ತು ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಎಡಗೈ ಸ್ಪಿನ್ನರ್, ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಕೂಡ ಅಮೋಘ ಬೌಲಿಂಗ್ ಮಾಡಿ ಇಬ್ಬರ್ ವಿಕೆಟ್ ಉರುಳಿಸಿದರು.

ತಂಡದ ಪರ ಏಕೈಕ ಸಿಕ್ಸರ್ ಸಿಡಿಸಿದ ಶಫಾಲಿ ವರ್ಮಾ ಜೊತೆ ಶಿಖಾ ಪಾಂಡೆ ಮತ್ತು ಲೇಗ್ ಕಾಸ್ಪರೆಕ್ ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಈ ಮೂವರು ತಲಾ ಒಂದೊಂದು ಬೌಂಡರಿಗಳನ್ನು ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ವೆಲೋಸಿಟಿ:
15.1 ಓವರ್‌ಗಳಲ್ಲಿ 47 (ಶಫಾಲಿ ವರ್ಮಾ 13, ಶಿಖಾ ಪಾಂಡೆ 10, ಲೇಗ್ ಕಾಸ್ಪರೆಕ್ ಔಟಾಗದೆ 11; ಜೂಲನ್ ಗೋಸ್ವಾಮಿ 13ಕ್ಕೆ2, ಸೋಫಿ ಎಕ್ಲೆಸ್ಟೋನ್ 9ಕ್ಕೆ4, ರಾಜೇಶ್ವರಿ ಗಾಯಕವಾಡ್ 13ಕ್ಕೆ2, ದೀಪ್ತಿ ಶರ್ಮಾ 8ಕ್ಕೆ1)

ಟ್ರೇಲ್‌ಬ್ಲೇಜರ್ಸ್‌: 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 49 (ಡಿಯಾಂಡ್ರ ದೊತಿನ್ ಔಟಾಗದೆ 29, ಸ್ಮೃತಿ ಮಂದಾನ 6, ರಿಚಾ ಘೋಷ್‌ ಔಟಾಗದೆ 13; ಲೇಗ್ ಕಾಸ್ಪರೆಕ್ 5ಕ್ಕೆ1).

ಫಲಿತಾಂಶ: ಟ್ರೇಲ್‌ಬ್ಲೇಜರ್ಸ್‌ಗೆ ಒಂಬತ್ತು ವಿಕೆಟ್‌ಗಳ ಜಯ.

ಪಂದ್ಯದ ಶ್ರೇಷ್ಠ ಆಟಗಾರ್ತಿ: ಸೋಫಿ ಎಕ್ಲೆಸ್ಟೋನ್
ಮುಂದಿನ ಪಂದ್ಯ: ಟ್ರೇಲ್‌ಬ್ಲೇಜರ್ಸ್‌–ಸೂಪರ್ ನೋವಾ; ನವೆಂಬರ್ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT