ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಮಧ್ಯಪ್ರದೇಶ ಪರ ದುಬೆ ಹೋರಾಟ, ಗೆಲುವಿನತ್ತ ಹೆಜ್ಜೆಯಿಟ್ಟ ವಿದರ್ಭ

Published 5 ಮಾರ್ಚ್ 2024, 15:18 IST
Last Updated 5 ಮಾರ್ಚ್ 2024, 15:18 IST
ಅಕ್ಷರ ಗಾತ್ರ

ನಾಗ್ಪುರ: ದಿನದ ಕೊನೆಯಲ್ಲಿ ಯಶ್‌ ದುಬೆ (94, 212ಎ, 4x10) ಅವರ ಮಹತ್ವದ ವಿಕೆಟ್‌ ಪಡೆದ ವಿದರ್ಭ ತಂಡ, ರಣಜಿ ಟ್ರೋಫಿ ಫೈನಲ್‌ನ ನಾಲ್ಕನೇ ದಿನವಾದ ಮಂಗಳವಾರ ದಿನದಾಟದ ಬಳಿಕ ಮಧ್ಯಪ್ರದೇಶದ ವಿರುದ್ಧ ಹಿಡಿತ ಸಾಧಿಸಿದೆ. ಮಾತ್ರವಲ್ಲ, ರೋಚಕ ಗೆಲುವಿನತ್ತ ಹೆಜ್ಜೆಯಿಟ್ಟಿದೆ.

ವಿಸಿಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂಧ್ಯದ ಕೊನೆಯ ದಿನವಾದ ಬುಧವಾರ ಆತಿಥೇಯ ವಿದರ್ಭ ತಂಡ ನಾಲ್ಕು ವಿಕೆಟ್ ಬೇಗನೇ ಪಡೆದಲ್ಲಿ ಮುಂಬೈ ವಿರುದ್ಧ ಫೈನಲ್ ಆಡುವ ಅವಕಾಶ ಪಡೆಯಲಿದೆ. ಇನ್ನೊಂದೆಡೆ ಗೆಲುವಿಗೆ ಇನ್ನೂ 93 ರನ್ ಗಳಿಸಬೇಕಾಗಿರುವ ಮಧ್ಯಪ್ರದೇಶ ಬಾಲಂಗೋಚಿ ಆಟಗಾರರಿಂದ ಸ್ಪೂರ್ತಿಯುತ ಹೋರಾಟದ ವಿಶ್ವಾಸದಲ್ಲಿದೆ.

ಗೆಲುವಿಗೆ 321 ರನ್‌ಗಳ ಬೆನ್ನುಹತ್ತಿರುವ ಮಧ್ಯಪ್ರದೇಶ ನಾಲ್ಕನೇ ದಿನದ ಕೊನೆಗೆ 6 ವಿಕೆಟ್‌ಗೆ 228 ರನ್ ಗಳಿಸಿದೆ. ಕೊನೆಯ ಪ್ರಮುಖ ಬ್ಯಾಟರ್‌ ಸಾರಾಂಶ್ ಜೈನ್ (ಔಟಾಗದೇ 16) ಜೊತೆ ಖಾತೆ ತೆರೆಯದ ಕುಮಾರ ಕಾರ್ತಿಕೇಯ ಆಟ ಮುಂದುವರಿಸಲಿದ್ದಾರೆ.

ಆದಿತ್ಯ ಸರ್ವಟೆ (51ಕ್ಕೆ2) ಮಾಡಿದ ದಿನದ ಕೊನೆಯ ಓವರ್‌ಗಿಂತ ಹಿಂದಿನ ಓವರ್‌ನಲ್ಲಿ, ಉತ್ತಮವಾಗಿ ಆಡುತ್ತಿದ್ದ ದುಬೆ, ಅಮನ್ ಮೊಖಾಡೆ ಅವರಿಗೆ ಕ್ಯಾಚಿತ್ತಿದ್ದು, ಪಂದ್ಯವನ್ನು ವಿದರ್ಭ ಕಡೆ ವಾಲಿಸಿತು. ಮೂರು ವರ್ಷಗಳಲ್ಲಿ ಎರಡನೆ ಬಾರಿ ಫೈನಲ್ ತಲುಪುವ ಮಧ್ಯಪ್ರದೇಶ ಆಸೆಗೆ ದೊಡ್ಡ ಹೊಡೆತ ನೀಡಿತು. ಇನ್ನೊಂದೆಡೆ ವಿಕೆಟ್‌ಗಳು ಉರುಳಿದರೂ ದುಬೆ ಬೇರೂರಿದ್ದು ತಂಡದ ಆಸೆ ಜೀವಂತವಾಗಿರಿಸಿದ್ದರು.

‌ದುಬೆ ಎರಡನೇ ವಿಕೆಟ್‌ಗೆ ಹರ್ಷ್ ಗಾವಳಿ (67, 80ಎ, 4x11) ಜೊತೆ 106 ರನ್ ಸೇರಿಸಿದ್ದರು. ಆದರೆ ಈ ಜೊತೆಯಾಟ ಮುರಿದ ನಂತರ ನಿಯಮಿತವಾಗಿ ವಿಕೆಟ್‌ಗಳು ಬಿದ್ದವು. ಸಾಗರ್ ಸೋಲಂಕಿ (12), ಶುಭಂ ಶರ್ಮಾ (6) ಮತ್ತು ವೆಂಕಟೇಶ ಅಯ್ಯರ್‌ (19) ಹೆಚ್ಚುಹೊತ್ತು ನಿಲ್ಲಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದ ಹಿಮಾಂಶು ಮಂತ್ರಿ ಎರಡನೇ ಇನಿಂಗ್ಸ್‌ನಲ್ಲಿ ಎಂಟು ರನ್‌ ಗಳಿಸಲಷ್ಟೇ ಶಕ್ತರಾದರು.

ಇದಕ್ಕೆ ಮೊದಲು, 6 ವಿಕೆಟ್‌ಗೆ 343 ರನ್‌ಗಳೊಡನೆ ಎರಡನೇ ಇನಿಂಗ್ಸ್‌ ಮುಂದುವರಿಸಿದ ವಿದರ್ಭ ಕೊನೆಯ 4 ವಿಕೆಟ್‌ಗಳಿಂದ 59 ರನ್ ಸೇರಿಸಿ 402 ರನ್‌ಗಳಿಗೆ ಆಲೌಟ್‌ ಆಯಿತು. 97 ರನ್ ಗಳಿಸಿ ಅಜೇಯರಾಗಿದ್ದ ಯಶ್ ರಾಥೋಡ್ ಶತಕ ಪೂರೈಸಿದರಲ್ಲದೇ ಅದನ್ನು 141 ರನ್‌ಗಳಿಗೆ (200 ಎ, 4x18, 6x2) ಬೆಳೆಸಿದರು. ಮಧ್ಯಪ್ರದೇಶ ಕಡೆ ಅನುಭವ ಮಂಡಲ್ 5 ವಿಕೆಟ್ ಪಡೆದರು.

ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಪಡೆದಿತ್ತು.

ಸ್ಕೋರುಗಳು: ವಿದರ್ಭ: 170 ಮತ್ತು 402 (ಯಶ್ ರಾಥೋಡ್ 141, ಆದಿತ್ಯ ಸರ್ವಟೆ 21; ಅನುಭವ್ ಅಗರ್ವಾಲ್ 92ಕ್ಕೆ5, ಕುಲವಂತ್ ಖೆಜ್ರೋಲಿಯಾ 64ಕ್ಕೆ2); ಮಧ್ಯಪ್ರದೇಶ: 252 ಮತ್ತು 71 ಓವರುಗಳಲ್ಲಿ 6 ವಿಕೆಟ್‌ಗೆ 228 (ಯಶ್ ದುಬೆ 94, ಹರ್ಷ್ ಗಾವಳಿ 67; ಆದಿತ್ಯ ಸರ್ವಟೆ 51ಕ್ಕೆ2, ಅಕ್ಷಯ್ ವಾಖರೆ 38ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT