ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಏಕದಿನ ರ‍್ಯಾಂಕಿಂಗ್‌: ವಿರಾಟ್ ಕೊಹ್ಲಿ, ರೋಹಿತ್‌ ಸ್ಥಾನ ಅಬಾಧಿತ

Last Updated 17 ಸೆಪ್ಟೆಂಬರ್ 2020, 12:26 IST
ಅಕ್ಷರ ಗಾತ್ರ

ದುಬೈ: ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಐಸಿಸಿ ಗುರುವಾರ ಬಿಡುಗಡೆ ಮಾಡಿರುವ ಏಕದಿನ ಕ್ರಿಕೆಟ್‌ ರ್‍ಯಾಂಕಿಂಗ್‌ನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಕೊಹ್ಲಿ ಮೊದಲ ಸ್ಥಾನದಲ್ಲೂ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲೂ ಇದ್ದಾರೆ. ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಜಾನಿ ಬೇಸ್ಟೊ ಮೊದಲ ಬಾರಿ ಅಗ್ರ ಹತ್ತರಲ್ಲಿ ಸ್ಥಾನ ಗಳಿಸಿದ್ದಾರೆ.

ಭಾರತ ತಂಡದ ನಾಯಕನೂ ಆಗಿರುವ ವಿರಾಟ್ ಕೊಹ್ಲಿ 871 ಪಾಯಿಂಟ್‌ಗಳನ್ನು ಹೊಂದಿದ್ದು ರೋಹಿತ್ ಶರ್ಮಾ ಬಳಿ 855 ಪಾಯಿಂಟ್‌ಗಳಿವೆ. ಕೋವಿಡ್‌–19 ತಂದೊಡ್ಡಿರುವ ವಿಷಮ ಸ್ಥಿತಿಯಿಂದಾಗಿ ಕ್ರಿಕೆಟ್ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ಇವರಿಬ್ಬರೂ ಕಳೆದ ಆರು ತಿಂಗಳಿಗಿಂತ ಹೆಚ್ಚು ಕಾಲದಿಂದ ಕ್ರಿಕೆಟ್ ಅಂಗಣಕ್ಕೆ ಇಳಿಯಲಿಲ್ಲ.

ಆಸ್ಟ್ರೇಲಿಯಾ ವಿರುದ್ಧ ಬುಧವಾರ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 1–2ರಲ್ಲಿ ಸೋತಿತ್ತು. ಕೊನೆಯ ಪಂದ್ಯದಲ್ಲಿ 126 ಎಸೆತಗಳಲ್ಲಿ 112 ರನ್ ಗಳಿಸಿ ಮಿಂಚಿದ್ದ ಜಾನಿ ಬೇಸ್ಟೊ ಸರಣಿಯಲ್ಲಿ ಒಟ್ಟು 196 ರನ್‌ಗಳೊಂದಿಗೆ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿದ್ದರು. 2018ರ ಅಕ್ಟೋಬರ್‌ನಲ್ಲಿ ಎಂಟನೇ ಸ್ಥಾನ ಗಳಿಸಿದ್ದು ಯಾರ್ಕ್‌ಶೈರ್‌ನ ಈ ಆಟಗಾರನ ಗರಿಷ್ಠ ಸಾಧನೆಯಾಗಿತ್ತು.

ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ದ್ವಿಶತಕದ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅಲೆಕ್ಸ್ ಕ್ಯಾರಿ ಕೂಡ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಐದು ಸ್ಥಾನಗಳ ಮುನ್ನಡೆಯೊಂದಿಗೆ ಮ್ಯಾಕ್ಸ್‌ವೆಲ್‌ 26ನೇ ಸ್ಥಾನಕ್ಕೇರಿದ್ದಾರೆ. ಸರಣಿಯ ಮೂರು ಪಂದ್ಯಗಳಲ್ಲಿ 186 ರನ್‌ ಸಿಡಿಸಿದ ಅವರು ಐರ್ಲೆಂಡ್‌ನ ಪಾಲ್ ಸ್ಟರ್ಲಿಂಗ್‌ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಒಟ್ಟು 152 ರನ್‌ ಸಿಡಿಸಿರುವ ಕ್ಯಾರಿ 11 ಸ್ಥಾನಗಳ ಏರಿಕೆಯೊಂದಿಗೆ 28ನೇ ಸ್ಥಾನ ಗಳಿಸಿದ್ದಾರೆ.

ಕ್ರಿಸ್ ವೋಕ್ಸ್‌ಗೆ ಭಾರಿ ಮುನ್ನಡೆ

ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಕ್ರಿಸ್ ವೋಕ್ಸ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಮೂರು ಸ್ಥಾನಗಳ ಏರಿಕೆ ಕಂಡಿರುವ ಅವರು ಜೀವನಶ್ರೇಷ್ಠ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಅವರು ಒಟ್ಟು ಆರು ವಿಕೆಟ್ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ಭಾರತದ ಜಸ್‌ಪ್ರೀತ್ ಬೂಮ್ರಾ ಬೌಲರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಕ್ರಿಸ್ ವೋಕ್ಸ್ ಎರಡನೇ ಸ್ಥಾನ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ 89 ರನ್ ಸಿಡಿಸಿದ್ದರು. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅಗ್ರ 20ರ ಒಳಗೆ ಇದ್ದು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಅಗ್ರ ಹತ್ತರಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT