ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup | ವಿರಾಟ್ ಕೊಹ್ಲಿ ಚೊಚ್ಚಲ ಟಿ20 ಶತಕ; ಅಫ್ಗನ್‌ಗೆ 213 ರನ್ ಗುರಿ‌

Last Updated 8 ಸೆಪ್ಟೆಂಬರ್ 2022, 16:17 IST
ಅಕ್ಷರ ಗಾತ್ರ

ದುಬೈ: ಶತಕದ ಬರ ಅನುಭವಿಸುತ್ತಿದ್ದ ಭಾರತ ಕ್ರಿಕೆಟ್‌ ತಂಡದ 'ರನ್‌ ಯಂತ್ರ' ವಿರಾಟ್‌ ಕೊಹ್ಲಿ ಅವರು ಬಹುತೇಕ ಮೂರುವರ್ಷಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕದ ಸಂಭ್ರಮ ಆಚರಿಸಿದರು.

ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಫ್ಗಾನಿಸ್ತಾನ ತಂಡದ ವಿರುದ್ಧ ಇಂದು ನಡೆಯುತ್ತಿರುವ ಪಂದ್ಯದಲ್ಲಿಕೊಹ್ಲಿ ಮೂರಂಕಿ ರನ್‌ ಗಳಿಸಿಕೊಂಡರು. ಇದರೊಂದಿಗೆ ಚುಟುಕು ಕ್ರಿಕೆಟ್‌ನಲ್ಲಿ ಮೊದಲ ಹಾಗೂ ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 71ನೇ ಬಾರಿ ನೂರು ರನ್‌ ಸಿಡಿಸಿದರು.

ಕೊಹ್ಲಿ ಇನಿಂಗ್ಸ್‌ ಬಲದಿಂದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 212ರನ್‌ ಗಳಿಸಿದೆ.

ಕೊಹ್ಲಿಸ್ಫೋಟಕ ಬ್ಯಾಟಿಂಗ್
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಗಾನಿಸ್ತಾನ ಬೌಲಿಂಗ್‌ ಆಯ್ದುಕೊಂಡಿತು.

ಅದರಂತೆ ಭಾರತ ಪರ ಇನಿಂಗ್ಸ್‌ ಆರಂಭಿಸಿದ ನಾಯಕ ಕೆ.ಎಲ್‌.ರಾಹುಲ್ ಮತ್ತು ಕೊಹ್ಲಿ ಜೊಡಿ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 119 ರನ್ ಕಲೆಹಾಕಿತು. ರಾಹುಲ್‌41 ಎಸೆತಗಳಲ್ಲಿ 62 ರನ್‌ ಗಳಿಸಿ ಔಟಾದರು. ಬಳಿಕ ಬಂದ ಸೂರ್ಯಕುಮಾರ್‌ ಆಟ ಕೇವಲ 6 ರನ್‌ಗೆ ಸೀಮಿತವಾಯಿತು.

ನಂತರ ಕ್ರೀಸ್‌ಗಿಳಿದ ರಿಷಭ್‌ ಪಂತ್‌ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ವಿರಾಟ್‌, ಮುರಿಯದ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 87 ರನ್‌ ಕಲೆಹಾಕಿದರು. ಇದರಲ್ಲಿ ಪಂತ್‌ ಗಳಿಸಿದ್ದು ಕೇವಲ 20 ರನ್‌ ಮಾತ್ರ. ಆದರೆ, ಕೊಹ್ಲಿಗೆ ಉತ್ತಮ ಸಾಥ್‌ ನೀಡಿದರು.

ಒಟ್ಟಾರೆ 61 ಎಸೆತಗಳನ್ನು ಎದುರಿಸಿದ ಕೊಹ್ಲಿ 200ರ ಸ್ಟ್ರೈಕ್‌ರೇಟ್‌ನಲ್ಲಿ 6 ಸಿಕ್ಸರ್‌ ಮತ್ತು 12 ಬೌಂಡರಿ ಸಹಿತ 122ರನ್‌ ಸಿಡಿಸಿ ಅಜೇಯವಾಗಿ ಉಳಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟರ್‌ವೊಬ್ಬರು ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಅಂದಹಾಗೆ ಕೊಹ್ಲಿ 2019ರ ನವೆಂಬರ್‌ 22ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಮೂರಂಕಿ ರನ್‌ ಗಳಿಸಿದ್ದರು. ಆ ಶತಕ ಕೋಲ್ಕತ್ತದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಮೂಡಿ ಬಂದಿತ್ತು. ಅದಾದ ಬಳಿಕ ಶತಕದ ಬರ ಅನುಭವಿಸಿದ್ದರು.

ಕೊಹ್ಲಿ ಈವರೆಗೆಏಕದಿನ ಕ್ರಿಕೆಟ್‌ನಲ್ಲಿ 43 ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ 27 ಶತಕ ಸಿಡಿಸಿದ್ದಾರೆ. ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಧಿಕ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ (71) ಜೊತೆಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. 100 ಶತಕ ಸಿಡಿಸಿರುವ ಸಚಿನ್‌ ತೆಂಡೂಲ್ಕರ್‌ ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT