ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ವೇಳೆ ಕೊಹ್ಲಿಗೆ ಆಶೀರ್ವಾದ ಮಾಡಿದ್ದ ‘ಸೂಪರ್ ಫ್ಯಾನ್’ 87ರ ಅಜ್ಜಿ ಸಾವು

Last Updated 16 ಜನವರಿ 2020, 12:28 IST
ಅಕ್ಷರ ಗಾತ್ರ

2019ರ ವಿಶ್ವಕಪ್‌ ಟೂರ್ನಿವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡು ದೇಶದಾದ್ಯಂತ ಮನೆಮಾತಾಗಿದ್ದ 87 ವರ್ಷದ ಚಾರುಲತಾ ಪಟೇಲ್‌ ಜನವರಿ 13ರಂದು ವಿಧಿವಶರಾಗಿದ್ದಾರೆ. ಈ ಸುದ್ದಿಯನ್ನು ಚಾರುಲತಾ ಅವರ ‘ಕ್ರಿಕೆಟ್ ದಾದಿ’ ಇನ್‌ಸ್ಟಾಗ್ರಾಂ ಪುಟದಲ್ಲಿ ಖಚಿತಪಡಿಸಲಾಗಿದೆ.

ಪೋಸ್ಟ್‌ನಲ್ಲಿ ‘ನಾನಿದನ್ನು ತುಂಬಾ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ನಮ್ಮ ಅಜ್ಜಿ ಜನವರಿ 13ರಂದು ಸಂಜೆ 5.30ಕ್ಕೆ ಕೊನೆಯುಸಿರೆಳದರು. ಅವಳು ತುಂಬಾ ಮುದ್ದಾದದವಳು. ಆಕೆನಿಜವಾಗಿಯೂ ಅಸಾಧಾರಣಳು. ಅವಳೇ ನಮ್ಮ ಪ್ರಪಂಚ. ಕಳೆದ ವರ್ಷವನ್ನು ಅವಳ ಪಾಲಿಗೆ ವಿಶೇಷವಾಗಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ವಿರಾಟ್‌ ಕೊಹ್ಲಿಯವರೇ ನೀವು ಮತ್ತು ರೋಹಿತ್‌ ಶರ್ಮಾ ಅಜ್ಜಿಗೆ ಮತ್ತಷ್ಟು ವಿಶೇಷಅನುಭವ ನೀಡಿದ್ದೀರಿ. ನೀವು ಭೇಟಿ ಮಾಡಿದ ಆ ದಿನ ತನ್ನ ಬದುಕಿನ ಅತ್ಯುತ್ತಮ ಕ್ಷಣವೆಂದು ಆಕೆ ಸಾಕಷ್ಟು ಸಲ ಹೇಳಿಕೊಂಡಿದ್ದಾಳೆ. ಅದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ದೇವರೇ ಆಕೆಯ ಆತ್ಮವನ್ನು ಹರಸು. ಎಲ್ಲರೂ ಆಕೆಗಾಗಿ ಪ್ರಾರ್ಥಿಸಿ’ ಎಂದು ಬರೆಯಲಾಗಿದೆ.

ಈ ಸಂಬಂಧಟ್ವೀಟ್‌ ಮಾಡಿರುವ ಬಿಸಿಸಿಐ,‘ಟೀಂ ಇಂಡಿಯಾದ ಸೂಪರ್‌ ಫ್ಯಾನ್‌ ಚಾರುಲತಾ ಪಟೇಲ್‌ಅವರು ನಮ್ಮ ಹೃದಯದಲ್ಲಿ ಸದಾ ಉಳಿದುಕೊಳ್ಳಲಿದ್ದಾರೆ. ಕ್ರೀಡೆಯ ಬಗೆಗಿನ ಅವರ ಒಲವು ನಮಗೆ ಸದಾ ಸ್ಫೂರ್ತಿ ತುಂಬುತ್ತದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಉಲ್ಲೇಖಿಸಿದೆ.

ಕಳೆದ ವರ್ಷ ಜೂನ್‌ 2 ರಂದುಇಂಗ್ಲೆಂಡ್‌ನ ಎಜ್‌ಬಾಸ್ಟನ್‌ನಲ್ಲಿ ಭಾರತ–ಬಾಂಗ್ಲಾದೇಶ ಪಂದ್ಯದ ವೇಳೆ ಜಾರುಲತಾ ಪಟೇಲ್ ಕಾಣಿಸಿಕೊಂಡಿದ್ದರು.

ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಅವರು ಪೀಪಿ ಊದುತ್ತಲೇ ಭಾರತ ತಂಡವನ್ನು ಪ್ರೋತ್ಸಾಹಿಸಿದ್ದರು. ಕೆನ್ನೆಗಳಿಗೆ ಬಾವುಟದ ಬಣ್ಣ ಬಳಿದುಕೊಂಡು, ಎರಡೂ ಕೈಗಳಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಅಜ್ಜಿ, ಬಾವುಟದ ಬಣ್ಣದ್ದೇ ಉಡುಪು ಧರಿಸಿದ್ದರು. ಹೀಗಾಗಿ ಎಲ್ಲರಗಮನ ಸೆಳೆದಿದ್ದರು.

ಆ ಪಂದ್ಯವನ್ನು 28 ರನ್‌ಗಳಿಂದ ಗೆದ್ದುಕೊಂಡ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಅವರು ಆ ಹಿರಿಯ ಅಭಿಮಾನಿಯನ್ನು ಭೇಟಿ ಮಾಡಿ ಸಾಕಷ್ಟು ಹೊತ್ತು ಮಾತನಾಡಿಸಿದ್ದರು. ಅವರಿಂದ ಆಶೀರ್ವಾದ ಪಡೆದು ಮುಂದಿನ ಪಂದ್ಯಗಳಿಗೂ ಕ್ರೀಡಾಂಗಣಕ್ಕೆ ಬಂದು ಪ್ರೋತ್ಸಾಹ ನೀಡುವಂತೆ ಕೋರಿದ್ದ ಕೊಹ್ಲಿ, ಟಿಕೆಟ್‌ ವ್ಯವಸ್ಥೆ ಮಾಡಿಸಿದ್ದರು.

ಅಜ್ಜಿಯ ಭೇಟಿ ಬಳಿಕ ಮಾತನಾಡಿದ್ದ ಕೊಹ್ಲಿ,‘ಹೀಗೊಬ್ಬರು ಅಭಿಮಾನಿಯನ್ನು ನಾನು ಈವರೆಗೆ ನೋಡಿರಲಿಲ್ಲ. ವಯಸ್ಸು ಕೇವಲ ಸಂಖ್ಯೆ ಮಾತ್ರ ಆದರೆ ಉತ್ಸಾಹ ನಿಮ್ಮನ್ನು ಪುಟಿದೇಳುವಂತೆ ಮಾಡುತ್ತದೆ.ಅವರ ಆಶೀರ್ವಾದದೊಂದಿಗೆ ನಾವು ಮುಂದಿನ ಹಂತಕ್ಕೆ ಹೋಗುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT