ಭಾನುವಾರ, ಆಗಸ್ಟ್ 9, 2020
23 °C
ವಿಶ್ವಕಪ್‌ ಕ್ರೀಡೆ

ಅವಿಷ್ಕಾ ಫರ್ನಾಂಡೊ ಶತಕ, ಲಂಕನ್ನರ ಭರ್ಜರಿ ಆಟ; ವಿಂಡೀಸ್‌ಗೆ 339 ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಸ್ಟರ್‌ ಲಿ ಸ್ಟ್ರೀಟ್: ಸೆಮಿಫೈನಲ್‌ ಪ್ರವೇಶಿಸುವ ಅವಕಾಶದಿಂದ ಹೊರಗುಳಿದಿರುವ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ನಡುವಿನ ಸೋಮವಾರ ಪಂದ್ಯದಲ್ಲಿ ಟಾಸ್‌ ಗೆದ್ದ ಕೆರಿಬಿಯನ್‌ ಪಡೆ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ. ಪೆರೆರಾ–ಕರುಣಾರತ್ನೆ ಜತೆಯಾಟದಿಂದ ಲಂಕನ್ನರು ಉತ್ತಮ ಆರಂಭ ಪಡೆದರು.  

ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 338 ರನ್‌ ಗಳಿಸಿತು. ಭರ್ಜರಿ ಆಟ ಪ್ರದರ್ಶಿಸಿದ ಅವಿಷ್ಕಾ ಫರ್ನಾಂಡಿಸ್‌ 100 ಎಸೆತಗಳಲ್ಲಿ 100 ರನ್‌ ದಾಖಲಿಸಿದರು. ಇದು ಅವರ ಚೊಚ್ಚಲ ಅಂತರರಾಷ್ಟ್ರೀಯ ಶತಕವಾಗಿದೆ. ಅವಿಷ್ಕಾ(104) ಆಟದಿಂದಾಗಿ ತಂಡ 300ರನ್‌ ಗಡಿದಾಟಿತು. ಶೆಲ್ಡಾನ್‌ ಕಾಟ್ರೆಲ್‌ ಎಸೆತದಲ್ಲಿ ಅವರು ಕ್ಯಾಚ್‌ ನೀಡಿ ಹೊರ ನಡೆದರು. 

ಕ್ಷಣಕ್ಷಣದ ಸ್ಕೋರ್‌: https://bit.ly/322DFqR

ಬಿರುಸಿನ ಆಟ ಪ್ರದರ್ಶಿಸಿದ ಕುಶಾಲ ಪೆರೆರಾಗೆ, ನಾಯಕ ದಿಮುತ್ ಕರುಣಾರತ್ನೆ ತಾಳ್ಮೆಯ ಆಟದೊಂದಿಗೆ ಸಾಥ್‌ ನೀಡಿದರು. 93 ರನ್‌ ಜತೆಯಾಟಕ್ಕೆ ಜೇಸನ್‌ ಹೋಲ್ಡರ್‌ ತಡೆಯಾದರು. 32 ರನ್‌ ಗಳಿಸಿದ್ದ ಕರುಣಾರತ್ನೆ 15ನೇ ಓವರ್‌ನಲ್ಲಿ ಕ್ಯಾಚ್‌ ನೀಡಿ ಹೊರನಡೆದರು.  ಆರನೇ ಕ್ರಮಾಂಕದಲ್ಲಿ ಆಡಿದ ಲಾಹಿರು ತಿರಿಮನ್ನೆ ಚುರುಕಿನ ಆಟದಿಂದಾಗಿ ತಂಡ ಸವಾಲಿನ ಮೊತ್ತ ದಾಖಲಿಸಿತು. ಲಾಹಿರು 33 ಎಸೆತಗಳಲ್ಲಿ 45 ರನ್‌ ದಾಖಲಿಸಿದರು. 

ಪೆರೆರಾ 38 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ವಿಶ್ವಕಪ್‌ ಟೂರ್ನಿಯಲ್ಲಿ ಇದು ಅವರ ಮೂರನೇ ಅರ್ಧ ಶತಕವಾಗಿದೆ. 64 ರನ್‌ ಗಳಿಸಿದ್ದ ಪೆರೆರಾ 18ನೇ ಓವರ್‌ನಲ್ಲಿ ರನ್‌ಔಟ್‌ ಆದರು. ಅವಿಷ್ಕಾ ಜತೆ ಉತ್ತಮ ಜತೆಯಾಟ ನಡೆಸಿದ ಕುಶಾಲ ಮೆಂಡಿಸ್‌(39) ಫ್ಯಾಬಿಯನ್ ಅಲೆನ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಉತ್ತಮ ಆಟ ಆಡಿದ ಏಂಜೆಲೊ ಮ್ಯಾಥ್ಯೂಸ್(26) ಜೇಸನ್‌ ಹೋಲ್ಡರ್‌ಗೆ ವಿಕೆಟ್‌ ನೀಡಿದರು. 

ಜೇಸನ್‌ ಹೋಲ್ಡರ್‌ 2 ವಿಕೆಟ್, ಶೆಲ್ಡನ್‌ ಕಾಟ್ರೆಲ್‌, ಒಷೆನ್ ಥಾಮಸ್ ಹಾಗೂ ಫ್ಯಾಬಿಯನ್ ಅಲೆನ್ ತಲಾ 1 ವಿಕೆಟ್ ಪಡೆದರು. 

ಲಾಹಿರು ತಿರಿಮನ್ನೆ, ಜೆಫ್ರಿ ವಾಂಡರ್ಸೆ ಹಾಗೂ ಕಸುನ್‌ ರಜಿತಾಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಪ್ರತಿಭಾನ್ವಿತ ಯುವ ಆಟಗಾರರು ಇರುವ ಶ್ರೀಲಂಕಾ ಮತ್ತು ಅನುಭವಿ  ಆಲ್‌ರೌಂಡರ್‌ಗಳು ಇರುವ ವಿಂಡೀಸ್‌ ತಂಡಗಳು ನಿರೀಕ್ಷಿತ ಆಟವಾಡದೇ ನಿರಾಶೆ ಅನುಭವಿಸಿವೆ. ಇದೀಗ ಸಮಾಧಾನಕರ ಗೆಲುವಿಗಾಗಿ ಕಣಕ್ಕಿಳಿಯಲಿವೆ. 

ಎರಡೂ ತಂಡಗಳು ತಲಾ ಏಳು ಪಂದ್ಯಗಳನ್ನು ಆಡಿವೆ. ಲಂಕಾ ಎರಡರಲ್ಲಿ ಗೆದ್ದಿದೆ. ಮೂರರಲ್ಲಿ ಸೋತಿದೆ. ಇನ್ನೆರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಇದರಿಂದಾಗಿ ಆರು ಅಂಕ ಗಳಿಸಿದೆ. ವಿಂಡೀಸ್‌ ಏಳು ಪಂದ್ಯಗಳಲ್ಲಿ ಗೆದ್ದಿದ್ದು ಒಂದರಲ್ಲಿ. ಐದರಲ್ಲಿ ಸೋತಿತು. ಮಳೆಯಿಂದಾಗಿ ಒಂದು ರದ್ದಾಗಿತ್ತು. ಕೇವಲ ಮೂರು ಪಾಯಿಂಟ್‌ಗಳನ್ನು ಮಾತ್ರ ಗಳಿಸಿದೆ.

ತಂಡಗಳು:

ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವಾ, ಅವಿಷ್ಕಾ ಫರ್ನಾಂಡೊ, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ ಮೆಂಡಿಸ್, ಜೀವನ್ ಮೆಂಡಿಸ್, ಕುಶಾಲ ಪೆರೆರಾ, ತಿಸಾರ ಪೆರೆರಾ, ನುವಾನ ಪ್ರದೀಪ್, ಕರುನ್ ರಜಿತಾ, ಮಿಲಿಂದ ಸಿರಿವರ್ಧನ, ಲಾಹಿರು ತಿರಿಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯನ್ ಅಲೆನ್, ಸುನಿಲ್ ಆ್ಯಂಬ್ರಿಸ್, ಕಾರ್ಲೋಸ್ ಬ್ರಾಥ್‌ವೇಟ್, ಡರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಶಾನನ್ ಗ್ಯಾಬ್ರಿಯಲ್, ಕ್ರಿಸ್ ಗೇಲ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಎವಿನ್ ಲೂಯಿಸ್, ಆ್ಯಷ್ಲೆ ನರ್ಸ್, ನಿಕೋಲಸ್ ಪೂರನ್, ಕೆಮರ್ ರೋಚ್, ಆ್ಯಂಡ್ರೆ ರಸೆಲ್, ಒಷೆನ್ ಥಾಮಸ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು