ಬುಧವಾರ, ಜೂನ್ 16, 2021
22 °C

PV Web Exclusive: ಬಿಳಿಚೆಂಡಿಗೊಂದು, ಕೆಂಪುಚೆಂಡಿಗೊಂದು...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಕೋವಿಡ್ ಲಸಿಕೆ ಪಡೆದು ಹೊರಬರುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ಆಡುವ ಏಕದಿನ ಪಂದ್ಯವನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜ ಅವರು ಟಿವಿಯಲ್ಲಿ ನೋಡ್ತಾ ಕುಳಿತುಕೊಳ್ಳುವ ದೃಶ್ಯವನ್ನು ಊಹಿಸಿಕೊಳ್ಳಿ.  ನಿಮ್ಮ ಊಹೆಯು ನಿಜವಾಗುವ ಕಾಲ ದೂರವಿಲ್ಲ. ಇನ್ನೆರಡು ತಿಂಗಳಲ್ಲಿ ಇಂತಹದೊಂದು ಊಹೆ ವಾಸ್ತವವಾಗಲಿದೆ.

ಹೌದು; ಶಿಖರ್ ಧವನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಮನೀಷ್ ಪಾಂಡೆ ಅವರೆಲ್ಲರೂ ಶ್ರೀಲಂಕಾದಲ್ಲಿ ಜುಲೈ 13ರಿಂದ ನಡೆಯಲಿರುವ ಏಕದಿನ ಸರಣಿಯಲ್ಲಿ ಆಡಲಿರುವ ಪಂದ್ಯಗಳನ್ನು ವಿರಾಟ್ ಕೊಹ್ಲಿ ಬಳಗವು ಇಂಗ್ಲೆಂಡ್‌ನಲ್ಲಿ ಕೂತು ವೀಕ್ಷಿಸಲಿದೆ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯಾಗುತ್ತಿರುವುದು ಇದೇ ಮೊದಲು. ಬಿಳಿಚೆಂಡಿಗೊಂದು ಮತ್ತು ಕೆಂಪು ಚೆಂಡಿಗೊಂದು ತಂಡಗಳನ್ನು ರಚಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಇದು ಮುನ್ನುಡಿಯೂ ಹೌದು.

ದೇಶದಲ್ಲಿ ಕೊರೊನಾ ವೈರಸ್‌ ಉಪಟಳದಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೊತ್ತಿನಲ್ಲಿ ನಡೆಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನೂ ಅರ್ಧಕ್ಕೆ ಮೊಟಕುಗೊಳಿಸಿದ ಬಿಸಿಸಿಐ ಸುಮಾರು 31 ಪಂದ್ಯಗಳನ್ನು ಮುಂದೂಡಿತ್ತು. ಆದರೆ ಮತ್ತಷ್ಟು ಬಲಯುತವಾಗಿ ಕಮ್‌ ಬ್ಯಾಕ್ ಮಾಡಲೂ ಇದೇ ಅವಕಾಶವನ್ನು ಬಳಸಿಕೊಂಡಿದೆ ಬಿಸಿಸಿಐ.


ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ಸಹ ಆಟಗಾರರು

ಜುಲೈನಲ್ಲಿ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿಯನ್ನು ಸೌರವ್ ಗಂಗೂಲಿ ಬಹಿರಂಗಪಡಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಏಕೆಂದರೆ, ಜೂನ್ 18ರಂದು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಲು ವಿರಾಟ್ ಕೊಹ್ಲಿ ಪಡೆಯು ಇದೇ 2ರಂದು ಪ್ರಯಾಣಿಸಲಿದೆ. ಅದರ ನಂತರ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ  ಐದು ಟೆಸ್ಟ್‌ಗಳ ಸರಣಿಯಲ್ಲಿಯೂ ಆಡಲಿದೆ.  ಕ್ವಾರಂಟೈನ್, ಐಸೋಲೆಷನ್‌  ಇತ್ಯಾದಿ ನಿಯಮಗಳ ಅನುಸಾರ ಭಾರತ ತಂಡವು ಬಹುತೇಕ ನಾಲ್ಕು ತಿಂಗಳುಗಳ ಕಾಲ ತವರಿನಿಂದ ಹೊರಗಿರಲಿದೆ.

ಆದರೆ ಈ ಅವಧಿಯಲ್ಲಿ ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ತುಂಬಿ ತುಳುಕುತ್ತಿರುವ ‘ಯುವ ಸಂಪನ್ಮೂಲ‘ವನ್ನು ವಿನಿಯೋಗಿಸಿ ಮತ್ತಷ್ಟು ಸಮೃದ್ಧ ಫಸಲು ಬೆಳೆಯುವತ್ತ ಬಿಸಿಸಿಐ ಚಿತ್ತ ನೆಟ್ಟಿದೆ. ಅದಕ್ಕಾಗಿಯೇ ಟೆಸ್ಟ್ ತಂಡದೊಂದಿಗೆ ತೆರಳದ ಯುವ ಮತ್ತು ಅನುಭವಿ ಪ್ರತಿಭೆಗಳ ದಂಡನ್ನು ಸಿದ್ಧಗೊಳಿಸುತ್ತಿದೆ. ಇದರಿಂದಾಗಿ ಏಕಕಾಲಕ್ಕೆ ಭಾರತದ ಎರಡು ಕ್ರಿಕೆಟ್‌ ತಂಡಗಳು ಬೇರೆ ಬೇರೆ ದೇಶಗಳಲ್ಲಿ ಅಂತರರಾಷ್ಟ್ರೀಯ ಸರಣಿಗಳನ್ನು ಆಡುವುದನ್ನು ಕಣ್ತುಂಬಿಕೊಳ್ಳುವ ಅವಕಾಶ ಕ್ರಿಕೆಟ್ ಪ್ರಿಯರಿಗೆ ಲಭಿಸುತ್ತಿದೆ.


ಆರ್. ಅಶ್ವಿನ್ ಮತ್ತು ಮಯಂಕ್ ಅಗರವಾಲ್

ಇದರ ಇನ್ನೊಂದು ಮಗ್ಗುಲನ್ನೂ ಗಮನಿಸಬೇಕು. ಈ ಪ್ರಯೋಗ ಯಶಸ್ವಿಯಾದರೆ ಬಿಸಿಸಿಐ, ಆಯೋಜನೆ ಮಾಡುವ ಮಂಡಳಿಗಳು ಮತ್ತು ಅಧಿಕೃತ ಪ್ರಸಾರಕ ಸಂಸ್ಥೆಗಳಿಗೆ ಹಣದ ಹೊಳೆಯೇ ಹರಿದುಬರುವ ಸಾಧ್ಯತೆ ಇದೆ. ಏಕೆಂದರೆ ಇವತ್ತು ಜಾಗತಿಕ ಕ್ರಿಕೆಟ್‌ನಲ್ಲಿ ಭಾರತವೇ ಸಾರ್ವಭೌಮ. ಎರಡು ತಂಡಗಳು ಏಕಕಾಲದಲ್ಲಿ ಬೇರೆ ಬೇರೆ ತಂಡಗಳೊಂದಿಗೆ ಸರಣಿಗಳಲ್ಲಿ ಆಡುವುದರಿಂದ ನಿರಂತರವಾಗಿ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತವೆ. ಟಿವಿಯಲ್ಲಿ ನೇರಪ್ರಸಾರ ಹೆಚ್ಚುತ್ತವೆ. ಅದರಲ್ಲೂ ಭಾರತವು ಆಡುವ ಪಂದ್ಯಗಳಿಗೆ ಹೆಚ್ಚು ವೀಕ್ಷಕರಿರುವುದು ಜಗಜ್ಜಾಹೀರು. ಇದರ ಲಾಭ ಬಹಳಷ್ಟು ವಿಧದಲ್ಲಿ ಆಗುವುದು ಖಚಿತ. ಭಾರತಕ್ಕೆ ಇದರಿಂದಾಗಿ ತನ್ನ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡಲೂ ಸಹಕಾರಿಯಾಗಲಿದೆ.

ಇಂಡಿಯಾ ಎ, 19 ವರ್ಷದೊಳಗಿನವರ ವಿಭಾಗದಲ್ಲಿ ಬಹಳಷ್ಟು ಪ್ರತಿಭೆಗಳು ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆ ಹೊಂದಿದ್ದಾರೆ. ಆದರೆ ಅವರಿಗೆ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಶುಭಮನ್ ಗಿಲ್, ಮಯಂಕ್ ಅಗರವಾಲ್ ಅವರಂತಹವರೇ ಬಹಳಷ್ಟು ಕಾಲ ಕಾಯಬೇಕಾಯಿತು. ಬೌಲಿಂಗ್‌ನಲ್ಲಿಯೂ ಅಷ್ಟೇ. ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಅವರಂತಹವರೂ ಬಹಳಷ್ಟು ಸಮಯ ಕಾದ ಮೇಲೆ ಅವಕಾಶ ಪಡೆದಿದ್ದಾರೆ. ಇದೀಗ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಂದೆ ಇರುವ ದೊಡ್ಡ ಸವಾಲು ಎಂದರೆ ಉತ್ತಮರಲ್ಲಿ ಅತ್ಯುತ್ತಮರನ್ನು ಅಯ್ಕೆ ಮಾಡುವುದು.  ಆದ್ದರಿಂದ ಎಲ್ಲ ಆಟಗಾರರೂ ತಮಗೆ ಸಿಗುವ ಅವಕಾಶಗಳಲ್ಲಿ ನಿರಂತರವಾಗಿ ಉತ್ತಮವಾಗಿ ಆಡುತ್ತ ಸಾಗುವುದೊಂದೇ ದಾರಿ.

ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್‌ನಂತಹ ಟೂರ್ನಿ ಬಂದ ಮೇಲೆ ಬಹಳಷ್ಟು ಆಟಗಾರರು ಗಮನ ಸೆಳೆಯುತ್ತಿದ್ದಾರೆ. ಆದ್ದರಿಂದ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ದೊಡ್ಡ ಸಂಖ್ಯೆಯ ಆಟಗಾರರು ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. ಆದ್ದರಿಂದಲೇ ಬಿಸಿಸಿಐ ಕೂಡ ಅದಕ್ಕೊಂದು ಪರಿಹಾರವೆಂಬಂತೆ ಎರಡನೇ ತಂಡ ಕಟ್ಟಲು ಮುಂದಾಗಿದೆ. ಇದರಿಂದ ಅತಿ ಹೆಚ್ಚು ಸರಣಿಗಳಲ್ಲಿ ಆಡಲು ಕೂಡ ಭಾರತಕ್ಕೆ ಸಾಧ್ಯವಾಗಲಿದೆ.  


ರೋಹಿತ್‌ ಶರ್ಮಾ

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಈಗಾಗಲೇ ಇಂತಹ ದ್ವಿತಂಡಗಳ ಪ್ರಯೋಗ ನಡೆದಿದೆ. ಮಾದರಿಗಳಿಗೆ ಪ್ರತ್ಯೇಕ ನಾಯಕರೂ ಇದ್ದಾರೆ.  ಮುಂದೊಂದು ದಿನ ಭಾರತದಲ್ಲಿಯೂ ಇದೇ ಮಾದರಿ ನಿರಂತರವಾಗಬಹುದು.  ಶ್ವೇತವಸ್ತ್ರಧಾರಿಗಳ ಆಟವಾಗಿ ಮುಂಚೂಣಿಗೆ ಬಂದ ಕ್ರಿಕೆಟ್‌ಗೆ ಬಿಳಿ ಚೆಂಡು ಪ್ರವೇಶಿಸಿದಾಗಲೇ ಆಟಗಾರರ ದಿರಿಸುಗಳ ಬಣ್ಣವೂ ಬದಲಾಯಿತು. ಅಷ್ಟೇ  ಏಕೆ, ಆಟದ ರಂಗು ಕೂಡ ಬಹುವರ್ಣ ಪಡೆಯಿತು. 1983ರಲ್ಲಿ ಭಾರತದ ಕಪಿಲ್ ದೇವ್ ಬಳಗವು ಏಕದಿನ ವಿಶ್ವಕಪ್ ಗೆದ್ದಿದ್ದು ಸೀಮಿತ ಓವರ್‌ಗಳ ಮಾದರಿಯು ಬೆಳೆಯಲು ಪ್ರಮುಖ ಕಾರಣ ಎಂಬುದು ನಿಸ್ಸಂಶಯ. ಕಳೆದುಹೋದ 38 ವರ್ಷಗಳ ಬಳಿಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇದು ಮತ್ತೆ ಯಾವ ರೀತಿಯ ಬದಲಾವಣೆಗೆ ಕಾರಣವಾಗುವುದೋ ಕಾದುನೋಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು