ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಾತ್ಮಕ ತೀರ್ಪು; ಗುಣತಿಲಕ ಬಳಿ ಕ್ಷಮೆಯಾಚಿಸಿದ ಪೊಲಾರ್ಡ್

Last Updated 11 ಮಾರ್ಚ್ 2021, 15:13 IST
ಅಕ್ಷರ ಗಾತ್ರ

ಆ್ಯಂಟಿಗುವಾ: ವಿವಾದಾತ್ಮಕ ಅಂಪೈರ್ ತೀರ್ಪಿನ ಬಳಿಕ ಘಟನೆ ಸಂಬಂಧ ವೆಸ್ಟ್‌ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ತಮ್ಮ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಶ್ರೀಲಂಕಾ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ ಹೇಳಿದ್ದಾರೆ.

ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ನಡುವೆ ಆ್ಯಂಟಿಗುವಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಘಟನೆ ನಡೆದಿತ್ತು. ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್ ಗುಣತಿಲಕ ಆಕರ್ಷಕ ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿ ಕಂಡುಬಂದಿದ್ದರು.

ಈ ಹಂತದಲ್ಲಿ ಕೀರಾನ್ ಪೊಲಾರ್ಡ್ ಎಸೆದ ಇನ್ನಿಂಗ್ಸ್‌ನ 22ನೇ ಓವರ್‌ನ ಮೊದಲ ಎಸೆತದಲ್ಲಿ ಒಂಟಿ ರನ್ ಕಸಿಯುವ ಯತ್ನದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳ ನಡುವೆ ಗೊಂದಲವುಂಟಾಯಿತು.

ಗುಣತಿಲಕ ರಕ್ಷಣಾತ್ಮಕ ಆಟವಾಡಿ ಮೊದಲು ಒಂದು ರನ್ ಕದಿಯಲೆತ್ನಿಸಿ ಬಳಿಕ ನಾನ್ ಸ್ಟೈಕರ್ ಆಟಗಾರನನ್ನು ಮರಳಿಸಿದರು. ಈ ಸಂದರ್ಭದಲ್ಲಿ ಚೆಂಡು ಪಿಚ್ ಮೇಲೆ ಬಿದ್ದಿತ್ತು.

ಇದನ್ನು ಗಮನಿಸಿದ ಪೊಲಾರ್ಡ್ ಚೆಂಡಿನತ್ತ ಧಾವಿಸುತ್ತಾ ರನೌಟ್ ಮಾಡುವ ಪ್ರಯತ್ನ ಮಾಡಿದರು. ಆದರೆ ಗುಣತಿಲಕ ಅಡ್ಡಿಯಾಗಿದ್ದರಿಂದ ರನೌಟ್ ಮಾಡುವ ಯತ್ನ ಸಫಲವಾಗಲಿಲ್ಲ. ಆದರೂ ಆಕ್ರೋಶಗೊಂಡು ಅಂಪೈರ್‌ಗೆ ಮನವಿ ಮಾಡಿದರು.

ತಕ್ಷಣ ಮನವಿ ಪುರಸ್ಕರಿಸಿದ ಫೀಲ್ಡ್ ಅಂಪೈರ್, ತೀರ್ಪನ್ನು ಥರ್ಡ್ ಅಂಪೈರ್‌ಗೆ ಕಾಯ್ದಿರಿಸಿದರು. ಬಳಿಕ ರಿಪ್ಲೇ ಪರಿಶೀಲಿಸಿದ ಮೂರನೇ ಅಂಪೈರ್ ವಿವಾದಾತ್ಮಕ ತೀರ್ಪಿನಲ್ಲಿ ಗುಣತಿಲಕ ಔಟ್ ಎಂದು ಘೋಷಿಸಿದರು.

ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗದಿದ್ದರೂ ಫೀಲ್ಡಿಂಗ್‌ಗೆ‌ ಅಡ್ಡಿಯಾಗಿದ್ದಾರೆ ಎಂಬ ಐಸಿಸಿ ನಿಯಮದನ್ವಯ ಅಂಪೈರ್ ಔಟ್ ತೀರ್ಪು ನೀಡಿದರು. ಇದರಿಂದಾಗಿ ನಿರಾಸೆಯಾಗಿ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು.

ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ಫೀಲ್ಡಿಂಗ್‌ಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಗುಣತಿಲಕ ಮಾಡಿರಲಿಲ್ಲ. ಬಳಿಕ ಇದನ್ನು ಮನಗಂಡಿರುವ ಕೀರಾನ್ ಪೊಲಾರ್ಡ್, ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರನ ಬಳಿ ತೆರಳಿ ಕ್ಷಮೆಯಾಚನೆ ನಡೆಸಿದ್ದಾರೆ.

ಅವರು (ಪೊಲಾರ್ಡ್) ಕ್ಷಮೆಯಾಚಿಸಿದರು. ಪಂದ್ಯದ ವೇಳೆ ಅವರ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ನೋಡಿದ ಬಳಿಕವಷ್ಟೇ ನಾನು ತಪ್ಪು ಮಾಡಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡರು ಎಂದು ಧನುಷ್ಕಾ ವಿವರಿಸಿದರು.

ಧನುಷ್ಕಾ ಹೆಗಲ ಮೇಲೆ ಕೈಯನ್ನಿಟ್ಟಿರುವ ಪೊಲಾರ್ಡ್ ಸಮಾಲೋಚಿಸುತ್ತಿರುವ ಚಿತ್ರವನ್ನು ಹಂಚಿರುವ ವೆಸ್ಟ್‌ಇಂಡೀಸ್ ಕ್ರಿಕೆಟ್, ಉತ್ತಮ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ ಎಂದು ಶ್ಲಾಘಿಸಿದೆ.

ಅಂದ ಹಾಗೆ ಶಾಯ್ ಹೋಪ್ ಶತಕದ ಬೆಂಬಲದೊಂದಿಗೆ ವಿಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT