ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳನೇ ಬಾರಿ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ

Last Updated 3 ಏಪ್ರಿಲ್ 2022, 19:04 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್: ಆಸ್ಟ್ರೇಲಿಯಾ ಮಹಿಳೆಯರ ಕ್ರಿಕೆಟ್ ತಂಡವು ಏಳನೇ ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಕಿರೀಟವನ್ನು ಧರಿಸಿತು.

ಇದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪಾರಮ್ಯವನ್ನು ವಿಸ್ತರಿಸಿತು. ಭಾನುವಾರ ನಡೆದ ಫೈನಲ್‌ನಲ್ಲಿ ಅಲೀಸಾ ಹೀಲಿ ದಾಖಲಿಸಿದ ಅಮೋಘ ಶತಕದ ಬಲದಿಂದ ಇಂಗ್ಲೆಂಡ್ ವಿರುದ್ಧ 71 ರನ್‌ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 356 ರನ್ ಗಳಿಸಿತು. ಹೀಲಿ (170; 138ಎ) ಶತಕದಾಟದಿಂದಾಗಿ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು.

ಗುರಿ ಬೆನ್ನಟ್ಟಿದಕಳೆದ ಬಾರಿಯ ಚಾಂಪಿಯನ್‌ ಇಂಗ್ಲೆಂಡ್ 43.4 ಓವರ್‌ಗಳಲ್ಲಿ 285 ರನ್ ಗಳಿಸಿ ಆಲೌಟ್ ಆಯಿತು. ನಥಾಲಿ ಶಿವರ್ (148; 121ಎ) ದಿಟ್ಟ ಆಟ ಮಾತ್ರ ಇಂಗ್ಲೆಂಡ್‌ ಅಭಿಮಾನಿಗಳ ಮನದಲ್ಲಿ ಉಳಿಯಿತು.

ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾದ ಮೆಗನ್ ಶುಟ್ (42ಕ್ಕೆ2) ಆರಂಭದಲ್ಲಿಯೇ ಆಘಾತ ನೀಡಿದರು. ಡೇನಿಯಲ್ ವಯಟ್ ಮತ್ತು ಟ್ಯಾಮಿ ಬೆಮೌಂಟ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಅವರ ಹಾದಿಯಲ್ಲಿಯೇ ಸಾಗಿದ ಲೆಗ್‌ಸ್ಪಿನ್ನರ್ ಅಲನಾ ಕಿಂಗ್ (64ಕ್ಕೆ3) ಇಂಗ್ಲೆಂಡ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದರು.

ಹೀಲಿ ದಾಖಲೆ: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾದ ಆರಂಭಿಕ ಜೋಡಿ ಹೀಲಿ ಮತ್ತು ರಚೆಲ್ ಹೇಯ್ನ್ಸ್‌ ಮೊದಲ ವಿಕೆಟ್‌ ಜೊತೆಯಾಟದಲ್ಲಿ 160 ರನ್‌ ಸೇರಿಸಿ ಅಮೋಘ ಆರಂಭ ನೀಡಿದರು.

ಹೀಲಿ ಏಕದಿನ ವಿಶ್ವಕಪ್ ಕ್ರಿಕೆಟ್‌ ಫೈನಲ್‌ನಲ್ಲಿ (ಮಹಿಳೆ ಮತ್ತು ಪುರುಷರು ಸೇರಿ) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನೂ ಬರೆದರು.

ಆ್ಯಡಂ ಗಿಲ್‌ಕ್ರಿಸ್ಟ್ (149; 2007), ನಥಾಲಿ ಶಿವರ್ (148; ಇದೇ ಪಂದ್ಯ), ರಿಕಿ ಪಾಂಟಿಂಗ್ (140; 2003) ಅವರನ್ನು ಹೀಲಿ ಹಿಂದಿಕ್ಕಿದರು.

ತಂಡವು ಗಳಿಸಿದ 356 ರನ್‌ಗಳು ಎರಡನೇ ಅತಿ ಹೆಚ್ಚು ಸ್ಕೋರ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 2003ರಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ಪುರುಷರ ತಂಡವು 2 ವಿಕೆಟ್‌ಗಳಿಗೆ 359 ರನ್‌ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 5ಕ್ಕೆ356 (ಅಲೀಸಾ ಹೀಲಿ 170, ರಚೆಲ್ ಹೇಯ್ನ್ಸ್‌ 68, ಬೆಥ್ ಮೂನಿ 62, ಅನ್ಯಾ ಶ್ರಬ್‌ಸೋಲ್ 46ಕ್ಕೆ3) ಇಂಗ್ಲೆಂಡ್:43.4 ಓವರ್‌ಗಳಲ್ಲಿ 285 (ಟ್ಯಾಮಿ ಬೇಮೌಂಟ್ 27, ಹೀಥರ್ ನೈಟ್ 26, ನಥಾಲಿ ಶಿವರ್ ಔಟಾಗದೆ 148, ಅಮಿ ಜೋನ್ಸ್ 20, ಸೋಫಿಯಾ ಡಂಕ್ಲಿ 22, ಚಾರ್ಲೊಟ್ ಡೀನ್ 21, ಮೇಘನ್ ಶೂಟ್ 42ಕ್ಕೆ2, ಅಲನಾ ಕಿಂಗ್ 64ಕ್ಕೆ3, ಜೆಸ್ ಜಾನ್ಸೆನ್ 57ಕ್ಕೆ3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 71 ರನ್‌ಗಳ ಜಯ. ಪಂದ್ಯ ಮತ್ತು ಟೂರ್ನಿಯ ಆಟಗಾರ್ತಿ: ಅಲೀಸಾ ಹೀಲಿ.

ಪತ್ನಿಯ ದಾಖಲೆ ಕಣ್ತುಂಬಿಕೊಂಡ ಸ್ಟಾರ್ಕ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಭಾನುವಾರ ಶತಕದ ದಾಖಲೆ ಮಾಡಿದ ತಮ್ಮ ಪತ್ನಿ ಅಲೀಸಾ ಹೀಲಿ ಅವರ ಆಟವನ್ನು ಕಣ್ತುಂಬಿಕೊಂಡರು. 2015ರಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಆಗ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದ ಸ್ಟಾರ್ಕ್ ಅವರೊಂದಿಗೆ ಹೀಲಿ ಟ್ರೋಫಿ ಹಿಡಿದು ಸಂಭ್ರಮಿಸಿದ್ದರು. ಇದೀಗ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಆಟಗಾರ್ತಿ ಗೌರವ ಗಳಿಸಿದ ವಿಕೆಟ್‌ಕೀಪರ್ ಹೀಲಿಯೊಂದಿಗೆ ಸ್ಟಾರ್ಕ್ ಸಂಭ್ರಮಿಸಿದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT