ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಸದ್ದಡಗಿಸಿ ಸೆಮಿಗೇರಿದ ಭಾರತ

Last Updated 27 ಮೇ 2019, 2:58 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ ಸೇರಿದಂತೆ ಹಲವು ಟೂರ್ನಿಗಳಲ್ಲಿ ಪರಸ್ಪರ ಎದುರಾಗಿವೆ. ಅವುಗಳಲ್ಲಿ ಸ್ಮರಣೀಯ ಎನಿಸಿರುವುದು 1996ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ. ಮಾರ್ಚ್‌ 9ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿ ಕ್ರಿಕೆಟ್‌ ಪ್ರೇಮಿಗಳ ಸ್ಮೃತಿಪಟಲದಲ್ಲಿ ಇನ್ನೂ ಅಚ್ಚಳಿಯದೇ ಉಳಿದುಕೊಂಡಿದೆ. ಪಾಕ್‌ ತಂಡವನ್ನು 39 ರನ್‌ಗಳಿಂದ ಮಣಿಸಿದ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು.

* ಪಂದ್ಯದ ಆರಂಭಕ್ಕೆ ಮುನ್ನವೇ ಪಾಕಿಸ್ತಾನ ಬಲುದೊಡ್ಡ ಆಘಾತ ಅನುಭವಿಸಿತು. ನಾಯಕ ವಾಸಿಂ ಅಕ್ರಂ ಗಾಯದ ಕಾರಣ ಹಿಂದೆ ಸರಿದರು.

* ಅಕ್ರಂ ಅನುಪಸ್ಥಿತಿಯಲ್ಲಿ ಪಾಕ್‌ ತಂಡವನ್ನು ಅಮೀರ್‌ ಸೊಹೇಲ್‌ ಮುನ್ನಡೆಸಿದರು.

* ಸಚಿನ್‌ ತೆಂಡೂಲ್ಕರ್‌ ಮತ್ತು ನವಜೋತ್‌ ಸಿಂಗ್‌ ಸಿಧು ಮೊದಲ ವಿಕೆಟ್‌ಗೆ 90 ರನ್‌ ಸೇರಿಸಿದರು. ಸಂಜಯ್‌ ಮಾಂಜ್ರೇಕರ್‌ (20), ಅಜರುದ್ದೀನ್ (27) ಮತ್ತು ವಿನೋದ್‌ ಕಾಂಬ್ಳಿ (24) ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು.

* ಸಿಧು ಏಳು ರನ್‌ಗಳಿಂದ ಶತಕ ವಂಚಿತರಾದರು. 115 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 93 ರನ್‌ ಗಳಿಸಿದ ಅವರು ಮುಷ್ತಾಕ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು.

* ಭಾರತ 42 ಓವರ್‌ಗಳಲ್ಲಿ 4 ವಿಕೆಟ್‌ಗೆ 200 ರನ್‌ಗಳಿಸಿದ್ದ ವೇಳೆ ಅಜಯ್‌ ಜಡೇಜ ಕ್ರೀಸ್‌ಗೆ ಬಂದರು. ಎರಡು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳ ನೆರವಿನಿಂದ 25 ಎಸೆತಗಳಲ್ಲಿ 45 ರನ್‌ ಸಿಡಿಸಿದರು. ವಕಾರ್ ಯೂನಿಸ್ ಅವರ ಕೊನೆಯ ಎರಡು ಓವರ್‌ಗಳಲ್ಲಿ ಕ್ರಮವಾಗಿ 18 ಹಾಗೂ 20 ರನ್‌ಗಳು ಬಂದವು. ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 287 ರನ್‌ ಪೇರಿಸಿತು.

* ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ಪಾಕಿಸ್ತಾನಕ್ಕೆ ಒಂದು ಓವರ್‌ ಕಡಿತಗೊಳಿಸಿ, 49 ಓವರ್‌ಗಳಲ್ಲಿ 288 ರನ್‌ ಗಳಿಸುವ ಗುರಿ ನೀಡಲಾಯಿತು.

* ಸಯೀದ್‌ ಅನ್ವರ್‌ (48) ಮತ್ತು ಸೊಹೇಲ್‌ (55) ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 84 ರನ್‌ ಗಳಿಸಿ ದರು. ಅನ್ವರ್‌ ವಿಕೆಟ್‌ ಪಡೆದ ಜಾವಗಲ್‌ ಶ್ರೀನಾಥ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು.

* ಅಮೀರ್ ಸೊಹೇಲ್‌ ಅವರು ವೆಂಕಟೇಶ್‌ ಪ್ರಸಾದ್ ಬೌಲಿಂಗ್‌ನಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿ ‘ಇನ್ನೊಂದು ಬೌಂಡರಿ ಹೊಡೆಯುತ್ತೇನೆ’ ಎಂಬ ರೀತಿಯಲ್ಲಿ ಬ್ಯಾಟನ್ನು ಬೌಂಡರಿ ಕಡೆ ತೋರಿಸಿದರು. ಆದರೆ ಮುಂದಿನ ಎಸೆತದಲ್ಲಿ ಸೊಹೇಲ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಪ್ರಸಾದ್‌ ಮುಯ್ಯಿ ತೀರಿಸಿಕೊಂಡರು.

* ಪ್ರಸಾದ್‌ ಆ ಬಳಿಕ ಇಜಾಜ್‌ ಅಹ್ಮದ್ ಮತ್ತು ಇಂಜಮಾಮ್‌ ಉಲ್‌ ಹಕ್‌ ಅವರನ್ನು ಬೇಗನೇ ಪೆವಿಲಿಯನ್‌ಗಟ್ಟಿದರು. ಪಾಕ್‌ 132 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು. ಅನುಭವಿ ಸಲೀಂ ಮಲಿಕ್‌ (38) ಮತ್ತು ಜಾವೇದ್‌ ಮಿಯಾಂದಾದ್ (38) ಐದನೇ ವಿಕೆಟ್‌ಗೆ 52 ರನ್‌ ಸೇರಿಸಿದರು.

* ಮಿಯಾಂದಾದ್‌ ಅವರು ರಶೀದ್‌ ಲತೀಫ್‌ ಜತೆ ಆರನೇ ವಿಕೆಟ್‌ಗೆ 47 ರನ್‌ ಸೇರಿಸಿದರು. ಆದರೆ ಅಲ್ಪ ಅಂತರದಲ್ಲಿ ಇಬ್ಬರೂ ಮರಳಿದರು. ಪಾಕ್‌ 49 ಓವರ್‌ಗಳಲ್ಲಿ 9 ವಿಕೆಟ್‌ಗೆ 248 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಪ್ರಸಾದ್‌ ಮತ್ತು ಕುಂಬ್ಳೆ ತಲಾ 3 ವಿಕೆಟ್‌ ಪಡೆದರು.

* ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟೆಯೊಡೆದ ಸಂಭ್ರಮ ಬೆಂಗಳೂರಿನ ರಸ್ತೆಗಳಲ್ಲಿ ಹರಿಯಿತು. ಯುವಕ–ಯುವತಿಯರು ಬೀದಿಗಿಳಿದು ತಡರಾತ್ರಿಯವರೆಗೂ ಭಾರತದ ಗೆಲುವಿನ ಸಂಭ್ರಮ ಆಚರಿಸಿದರು.

* ಅತ್ತ ಪಾಕಿಸ್ತಾನ ಶೋಕಸಾಗರದಲ್ಲಿ ಮುಳುಗಿತು. ಸೋಲನ್ನು ಅರಗಿಸಿಕೊಳ್ಳಲಾಗದ ಪಾಕ್‌ ಅಭಿಮಾನಿಗಳು ತಮ್ಮ ತಂಡದ ಆಟಗಾರರ ಪ್ರತಿಕೃತಿ ದಹಿಸಿದರು. ಒಬ್ಬ ಅಭಿಮಾನಿ ಟಿ.ವಿಗೆ ಗುಂಡು ಹಾರಿಸಿ ತನಗೇ ಗುಂಡುಹಾರಿಸಿದ್ದು ವರದಿಯಾಗಿತ್ತು.

* ಸಿಧು ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು. ಈ ಪಂದ್ಯದೊಂದಿಗೆ ಜಾವೇದ್‌ ಮಿಯಾಂದಾದ್‌ ಅವರ ಎರಡು ದಶಕಗಳ ಕ್ರಿಕೆಟ್‌ ಜೀವನಕ್ಕೆ ತೆರೆಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT