ಗುರುವಾರ , ಡಿಸೆಂಬರ್ 3, 2020
20 °C
ಭಾರತ–ಅಫ್ಗಾನಿಸ್ತಾನ ನಡುವಣ ಹಣಾಹಣಿ ಇಂದು; ಭುವನೇಶ್ವರ್ ಅಲಭ್ಯ; ಶಿಖರ್ ಬದಲು ಸ್ಥಾನ ಪಡೆದಿರುವ ರಿಷಭ್ ಪಂತ್

ಇಂದು ಭಾರತ vs ಅಫ್ಗನ್: ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌತಾಂಪ್ಟನ್: ಈ ಬಾರಿಯ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ತಂಡವು ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದ ಎದುರು ಸುಲಭ ಜಯದ ನಿರೀಕ್ಷೆಯಲ್ಲಿದೆ.

ನಾಲ್ಕು ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಮೂರರಲ್ಲಿ ಜಯಿಸಿದೆ. ಅದರಲ್ಲಿ ದಕ್ಷಿಣ ಆಫ್ರಿಕಾ, ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯ ಮಳೆಯಿಂದ ರದ್ದಾಗಿತ್ತು.

ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅವರ ಬದಲಿಗೆ ಕನ್ನಡಿಗ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಿದ್ದರು. ಅರ್ಧಶತಕ ಹೊಡೆದಿದ್ದರು. ರೋಹಿತ್ ಶರ್ಮಾ ಭರ್ಜರಿ ಶತಕ ದಾಖಲಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಹೊಡೆದು ಮಿಂಚಿದ್ದರು.

ಪಂದ್ಯದ ಅಗತ್ಯಕ್ಕೆ ತಕ್ಕಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕಿಳಿಸಲಾಗುತ್ತಿದೆ. ಪಾಕ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಕಳಿಸಿದ್ದು ಫಲ ನೀಡಿತ್ತು. ಇದೀಗ ಶಿಖರ್ ಬದಲು ಸ್ಥಾನ ಪಡೆದಿರುವ ರಿಷಭ್ ಪಂತ್ ಅವರಿಗೆ ಅವಕಾಶ ಸಿಗುವುದೋ ಇಲ್ಲವೋ ಕಾದು ನೋಡಬೇಕು. ಬುಧವಾರ ಸಂಜೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದ ವಿಜಯಶಂಕರ್ ಫಿಟ್ ಆಗದಿದ್ದರೆ, ಪಂತ್ ಅಥವಾ ದಿನೇಶ್ ಕಾರ್ತಿಕ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಇವರಿಬ್ಬರನ್ನೂ ಕೈಬಿಟ್ಟು, ಎರಡನೇ ಆಲ್‌ರೌಂಡರ್‌ ಆಗಿ ರವೀಂದ್ರ ಜಡೇಜಗೂ ಅವಕಾಶ ಲಭಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯುತ್ತಿಲ್ಲ. ಅವರು ಹೋದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಆದ್ದರಿಂದ ಜಸ್‌ಪ್ರೀತ್ ಬೂಮ್ರಾ ಅವರೊಂದಿಗೆ ಮೊಹಮ್ಮದ್ ಶಮಿ ಬೌಲಿಂಗ್ ವಿಭಾಗದ ಹೊಣೆ ನಿಭಾಯಿಸುವುದು ಬಹುತೇಕ ಖಚಿತವಾಗಿದೆ. ಟೂರ್ನಿ ಇದು ಶಮಿಗೆ ಮೊದಲ ಪಂದ್ಯ. ಹಾರ್ದಿಕ್ ಪಾಂಡ್ಯ ಮೂರನೇ ಮಧ್ಯಮವೇಗಿಯ ಜವಾಬ್ದಾರಿ ನಿಭಾಯಿಸುವರು.

ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಉತ್ತಮ ಲಯದಲ್ಲಿರುವುದರಿಂದ ಅವರು ಆಡುವುದು ಬಹುತೇಕ ಖಚಿತ. ಅಫ್ಗನ್ ತಂಡವು ದುರ್ಬಲವಾಗಿರುವುದರಿಂದ ಭಾರತ ತಂಡವು ಹೆಚ್ಚು ಪ್ರಯೋಗಗಳನ್ನು ಮಾಡಿದರೆ ಅಚ್ಚರಿ ಪಡಬೇಕಿಲ್ಲ.

ಸಾಲು ಸಾಲು ಸೋಲುಗಳಿಂದ ಜರ್ಜರಿತರಾಗಿರುವ  ಅಫ್ಗನ್ ಬಳಗವು ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿದೆ. ತಂಡದ ನಾಯಕನ ಅಯ್ಕೆಯ ಕುರಿತು ಕೋಚ್ ಫಿಲ್ ಸಿಮನ್ಸ್‌ ಮತ್ತು ಆಯ್ಕೆ ಸಮಿತಿಯ ಜಟಾಪಟಿಯು ಇನ್ನೂ ಮುಗಿದಿಲ್ಲ. ಇದೆಲ್ಲದರ ನಡುವೆ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಕುಡ ಫಾರ್ಮ್‌ನಲ್ಲಿ ಇಲ್ಲ. ಇದೆಲ್ಲವೂ ತಂಡದ ನಾಯಕ ಗುಲ್ಬದೀನ್ ನೈಬ್‌ ಮೇಲಿನ ಒತ್ತಡ ಹೆಚ್ಚಿಸಿವೆ.

ಹೋದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಫ್ಗನ್ ವಿರುದ್ಧ 397 ರನ್‌ಗಳನ್ನು ಪೇರಿಸಿತ್ತು. ಆತಿಥೇಯ ಬ್ಯಾಟ್ಸ್‌ಮನ್‌ಗಳು ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸಿದ್ದರು. ಆದರೂ ಆ ಪಂದ್ಯದಲ್ಲಿ ಅಫ್ಗನ್ ಬ್ಯಾಟ್ಸ್‌ಮನ್‌ಗಳು ಹೋರಾಟ ಮಾಡಿದ್ದರು. ಸುಲಭವಾಗಿ ಶರಣಾಗುವವರು ತಾವಲ್ಲ ಎಂದು ತೋರಿಸಿದ್ದರು. ಹಷ್ಮತ್‌ ಉಲ್ಲಾ ಶಹೀದಿ ಅರ್ಧಶತಕ ಸಿಡಿಸಿದ್ದರು. ನೈಬ್ ಅಫ್ಗನ್ ಮತ್ತು ರೆಹಮತ್ ಶಾ ಕೂಡ ಒಳ್ಳೆಯ ಬ್ಯಾಟಿಂಗ್ ಮಾಡಿದ್ದರು. ಅಂತಹದೇ ಹೋರಾಟದ ಮೂಲಕ ಭಾರತಕ್ಕೆ ಸವಾಲೊಡ್ಡುವ ವಿಶ್ವಾಸದಲ್ಲಿ ತಂಡವಿದೆ.

ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ
ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಒಂದೊಂದೇ ದಾಖಲೆಗಳನ್ನು ಹಿಂದಿಕ್ಕುತ್ತ ಸಾಗುತ್ತಿರುವ ವಿರಾಟ್ ಕೊಹ್ಲಿ ಈಗ ಮತ್ತೊಂದು ಸಾಧನೆಗೆ ಸಿದ್ಧರಾಗಿದ್ದಾರೆ.

ಈ ಪಂದ್ಯದಲ್ಲಿ ಅವರು 104 ರನ್‌ಗಳನ್ನು ಗಳಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ಗಳನ್ನು ಪೇರಿಸಿದವರ ಕ್ಲಬ್‌ಗೆ ಸೇರ್ಪಡೆಯಾಗಲಿದ್ದಾರೆ. ಈ ಸಾಧನೆ ಮಾಡುವ 12ನೇ ಬ್ಯಾಟ್ಸ್‌ಮನ್ ಅವರಾಗಲಿದ್ದಾರೆ. ಭಾರತದ ಮೂರನೇ ಆಟಗಾರನಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ (34,357) ಮತ್ತು ರಾಹುಲ್ ದ್ರಾವಿಡ್ (24,208) ಅವರ ಸಾಲಿಗೆ ಕೊಹ್ಲಿ ಸೇರಲಿದ್ದಾರೆ.

*
ನಾನು ಗುಲ್ಬದೀನ್ ಅಥವಾ ಕ್ರಿಕೆಟ್ ಬೋರ್ಡ್ ಗಾಗಿ ಆಡುವುದಿಲ್ಲ. ಅಫ್ಗಾನಿಸ್ತಾನ ದೇಶಕ್ಕಾಗಿ ಆಡುತ್ತೇನೆ. ಅದಕ್ಕಾಗಿ ತಂಡವು ಗೆಲ್ಲಬೇಕು.
–ರಶೀದ್ ಖಾನ್, ಅಫ್ಗನ್ ಆಟಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು