ಶುಕ್ರವಾರ, ಏಪ್ರಿಲ್ 23, 2021
28 °C
ಭಾನುವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯ

‘ಕ್ರಿಕೆಟ್‌ ಜಾಗರಣೆ’ಗೆ ಕಿವೀಸ್‌ ಸಜ್ಜು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ನ್ಯೂಜಿಲೆಂಡ್‌ ನಲ್ಲಿ ರಗ್ಬಿ ಅತ್ಯಂತ ಜನಪ್ರಿಯ. ಆದರೆ ಭಾನುವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ  ಫೈನಲ್‌ ಆಡುವಾಗ ದೇಶದಾದ್ಯಂತ ಎಲ್ಲ ಕ್ರೀಡಾಭಿಮಾನಿಗಳು ಟಿ.ವಿ.ಗಳ ಮುಂದೆ ‘ರಾತ್ರಿಯಿಡೀ ಜಾಗರಣೆ’ ಮಾಡಿಕೊಂಡು ತಂಡವನ್ನು ಬೆಂಬಲಿಸುತ್ತಾರೆ ಎನ್ನುವುದು ನ್ಯೂಜಿ ಲೆಂಡ್‌ ಕೋಚ್‌ ಗ್ಯಾರಿ ಸ್ಟೀಡ್‌ ಅವರ ಅಚಲವಾದ ವಿಶ್ವಾಸ.

ಇಂಗ್ಲೆಂಡ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಪಂದ್ಯ ಆರಂಭವಾಗುವುದಾದರೂ, ಅದು ನ್ಯೂಜಿಲೆಂಡ್‌ನಲ್ಲಿ ಸ್ಥಳೀಯ ಕಾಲಮಾನ ರಾತ್ರಿ 9.30. ಇದು ಸ್ವಲ್ಪ ಸಮಸ್ಯೆಗೂ ಕಾರಣವಾಗಿದೆ.

ನ್ಯೂಜಿಲೆಂಡ್‌ ಫೈನಲ್‌ ತಲುಪುವುದು ಅನುಮಾನವಾಗಿದ್ದ ಕಾರಣ ಅಲ್ಲಿ ಪಬ್‌ ಮತ್ತು ಬಾರ್‌ಗಳು ತಡರಾತ್ರಿಯ ಮದ್ಯ ಸರಬರಾಜಿಗೆ ಲೈಸೆನ್ಸ್‌ ಕೇಳಿರಲಿಲ್ಲ.

ನ್ಯೂಜಿಲೆಂಡ್‌ಗೆ ಇದು ಸತತ ಎರಡನೇ ಫೈನಲ್‌ ಇರಬಹುದು. ಆದರೆ ಭಾನುವಾರ ಫೈನಲ್‌ ಪಂದ್ಯದಲ್ಲಿ ಎದುರಾಗಲಿರುವ ಈ ಎರಡು ತಂಡಗಳು ಹಿಂದೆ ಎಂದೂ ವಿಶ್ವ ಚಾಂಪಿಯನ್ ಕಿರೀಟ ಧರಿಸಿಲ್ಲ. ನಾಲ್ಕು ವರ್ಷ ಹಿಂದೆ ನಡೆದ ವಿಶ್ವ ಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌, ನೆರೆಯ ರಾಷ್ಟ್ರ ಆಸ್ಟ್ರೇಲಿಯಾಕ್ಕೆ ತಲೆಬಾಗಿತ್ತು. 

ವಿಶ್ವಕಪ್‌ ಪ್ರಸಾರ ಹಕ್ಕು ಪಡೆದಿರುವ ಸ್ಕೈ ಮತ್ತು ಚಾನೆಲ್‌ 4 ನಡುವೆ ಒಪ್ಪಂದದ ಪರಿಣಾಮ ಟೆಲಿವಿಷನ್‌ಗಳಲ್ಲಿ ಉಚಿತ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.  1979, 1987, 1992ರ ಫೈನಲ್‌ ತಲುಪಿದ್ದ ಇಂಗ್ಲೆಂಡ್‌ ತಂಡಗಳಿಗಿಂತ, ಇಯಾನ್‌ ಮಾರ್ಗನ್‌ ನಾಯಕತ್ವದ ತಂಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದೆಂಬ ವಿಶ್ವಾಸದಲ್ಲಿ ಕೋಟ್ಯಂತರ ಅಭಿಮಾನಿಗಳು ನೇರಪ್ರಸಾರ ವೀಕ್ಷಿಸಬಹುದು ಎನ್ನುವ ವಿಶ್ವಾಸ ಈ ನಿರ್ಧಾರಕ್ಕೆ ಕಾರಣ.

ಸ್ಟೀಡ್‌ ಕೂಡ ಇಂಥದ್ದೇ ನಂಬುಗೆಯಲ್ಲಿದ್ದಾರೆ. ನ್ಯೂಜಿಲೆಂಡ್‌ನ ಆಲ್‌ಬ್ಲ್ಯಾಕ್ಸ್‌ ರಗ್ಬಿಯಲ್ಲಿ ಮಾಡಿದ ಚಾಂಪಿಯನ್‌ ಸಾಧನೆಯನ್ನು ಕ್ರಿಕೆಟ್‌ನಲ್ಲೂ ತಮ್ಮ ತಂಡ ಮಾಡಬಹುದೆಂಬ ವಿಶ್ವಾಸದಲ್ಲಿದ್ದಾರೆ. ‘ನಾನು ಅರ್ಥಮಾಡಿಕೊಂಡಂತೆ ನ್ಯೂಜಿಲೆಂಡ್‌ನಲ್ಲೂ ಉಚಿತ ಪ್ರಸಾರವಿದೆ. ಅದಾದರೆ ಬಹಳ ಒಳ್ಳೆಯದು’ ಎಂದು ಸ್ಟೀಡ್‌  ಶುಕ್ರವಾರ ಲಾರ್ಡ್ಸ್‌ನಲ್ಲಿ ವರದಿಗಾರರ ಜೊತೆ ಮಾತನಾಡುವಾಗ ಹೇಳಿದರು.

‘ಈ ಪಂದ್ಯದಿಂದಾಗಿ ನ್ಯೂಜಿಲೆಂಡ್‌ನಲ್ಲಿ ಜನರು ಭಾನುವಾರ ರಾತ್ರಿ ಬಹಳ ತಡವಾಗಿ ಮಲಗುವುದರಿಂದ ಸೋಮವಾರ ಸಾರ್ವಜನಿಕ ರಜೆ ಯಿರಬಹುದು. ಈಗಾಗಲೇ ನಮಗೆ ಬೆಂಬಲವಾಗಿ ಸಂದೇಶಗಳು ಹರಿ ಯುತ್ತಿವೆ. ಮುಂದೇನಾಗಬಹುದು ಎಂಬ ಕುತೂಹಲವಿದೆ’ ಎಂದರು.

ಇಂಗ್ಲೆಂಡ್‌, ವಿಶ್ವಕಪ್‌ನ ಅಂತಿಮ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 119 ರನ್‌ಗಳಿಂದ ಸೋಲಿಸಿತ್ತು. ಆದರೆ ಆ ನಿರಾಶೆಯನ್ನು ಮರೆಯುವಂತೆ ಆಡಿದ ಕಿವೀಸ್‌ ತಂಡ, ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು 18 ರನ್‌ಗಳಿಂದ ಸೋಲಿಸಿ ಫೈನಲ್‌ ತಲುಪಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು