ಭಾನುವಾರ, ಏಪ್ರಿಲ್ 11, 2021
27 °C
ಫೈನಲ್ ಹಣಾಹಣಿ : ಕೇನ್‌ ವಿಲಿಯಮ್ಸನ್‌–ಇಯಾನ್‌ ಮಾರ್ಗನ್‌ಗೆ ನಾಯಕತ್ವದ ಪರೀಕ್ಷೆ

ವಿಶ್ವಕಪ್‌ | ‘ಪ್ರಥಮ’ ಕಿರೀಟಧಾರಣೆಗಾಗಿ ಇಂದು ಇಂಗ್ಲೆಂಡ್–ನ್ಯೂಜಿಲೆಂಡ್ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾರ್ಡ್ಸ್‌: ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ ಕ್ರಿಕೆಟ್‌ ಅಂಗಳದಲ್ಲಿ ಒಂದು ಅಟ್ಟಣಿಗೆ ಇದೆ. ಅದರ ಮೇಲೆ ನಿಂತು ವಿಶ್ವಕಪ್‌ಗೆ ಮುತ್ತಿಡುವ ಕನಸು ಪ್ರತಿಯೊಂದು ಕ್ರಿಕೆಟ್ ತಂಡದ ನಾಯಕನಿಗೂ ಇರುತ್ತದೆ.

ಇದೀಗ ಅಂತಹ ದೊಂದು ವಿಶೇಷವಾದ ಪ್ರಥಮ ಅನುಭವ ಪಡೆಯುವ ಪೈಪೋಟಿಯಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ ಕಣಕ್ಕಿಳಿಯಲಿವೆ. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಬಾರಿಯ ಫೈನಲ್ ವಿಶೇಷ ಎನಿಸಿದೆ. ಏಕೆಂದರೆ ಇಂಗ್ಲೆಂಡ್ ತಂಡದ ನಾಯಕತ್ವವನ್ನು ಐರ್ಲೆಂಡ್ ಮೂಲದ ಇಯಾನ್ ಮಾರ್ಗನ್ ವಹಿಸುತ್ತಿದ್ದಾರೆ. 1975ರಿಂದ ಇಲ್ಲಿಯವರೆಗೂ ಇಂಗ್ಲೆಂಡ್‌ನ ಯಾವುದೇ ತಂಡದಿಂದ ಆಗದ ಸಾಧನೆಯನ್ನು ಮಾರ್ಗನ್ ಬಳಗವು ಮಾಡುವ ಅಪಾರ ನಿರೀಕ್ಷೆ ಗರಿಗೆದರಿದೆ.

ಇಂಗ್ಲೆಂಡ್‌ನಲ್ಲಿ ಫುಟ್‌ಬಾಲ್ ಮತ್ತು ಕ್ರಿಕೆಟ್‌ ಎರಡೂ ಜನಪ್ರಿಯ ಕ್ರೀಡೆಗಳು. 1966ರಲ್ಲಿ ಇಂಗ್ಲೆಂಡ್ ಫುಟ್‌ಬಾಲ್ ತಂಡವು ಸರ್ ಆಲ್ಫ್‌ ರಾಮ್ಸೆ ನಾಯಕತ್ವದಲ್ಲಿ ಫಿಫಾ ವಿಶ್ವಕಪ್ ಗೆದ್ದಿತ್ತು. ಆನಂತರದಲ್ಲಿ ಫಿಫಾ ಕಪ್ ಒಮ್ಮೆಯೂ ಬ್ರಿಟಿಷರ ಮಡಿಲಿಗೆ ಬಿದ್ದಿಲ್ಲ. ಹೋದ ವರ್ಷದ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಸ್ಥಾನ ಪಡೆದಿದ್ದು ಸಾಧನೆಯಷ್ಟೇ. ವಿಶ್ವಕ್ಕೇ ಕ್ರಿಕೆಟ್ ಪರಿಚಯಿಸಿರುವ ಈ ದೇಶಕ್ಕೆ ಇದುವರೆಗೂ ಕಿರೀಟ ಧರಿಸಲು ಸಾಧ್ಯವಾಗಿಲ್ಲ. ಇದೀಗ ವಿಶ್ವಮಟ್ಟದ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಸಮಯ ಕೂಡಿ ಬಂದಿದೆ. ಅದೂ ತವರಿನ ಅಂಗಳದಲ್ಲಿ.

ಆರಂಭಿಕ ಜೋಡಿ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅವರು ತಂಡವು ಫೈನಲ್‌ ತಲುಪುವಲ್ಲಿ ನೀಡಿರುವ ಕಾಣಿಕೆ ಮಹತ್ವದ್ದು. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್, ಜೋಸ್ ಬಟ್ಲರ್, ಮಾರ್ಗನ್ ಮತ್ತು ಜೇಮ್ಸ್ ವಿನ್ಸಿ ಅವರು ಬೌಲರ್‌ಗಳನ್ನು ಕಾಡುವ ಸಮರ್ಥರು. ಬೌಲಿಂಗ್‌ನಲ್ಲಿಯೂ ಬಿರುಗಾಳಿ ವೇಗದ ಬೌಲರ್‌ಗಳು ಇದ್ದಾರೆ. ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್‌ ಅವರ ಸ್ವಿಂಗ್ ಅಸ್ತ್ರಗಳ ಮುಂದೆ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವೇ ಶರಣಾಯಿತು. ಸ್ಪಿನ್ನರ್ ಆದಿಲ್ ರಶೀದ್ ಕೂಡ ಮಿಂಚಿದ್ದರು. ತಂಡದ ಆಟಗಾರರ ಫೀಲ್ಡಿಂಗ್ ಕೂಡ ಉನ್ನತ ಮಟ್ಟದಲ್ಲಿದೆ. ಇದರಿಂದಾಗಿ ಇಂಗ್ಲೆಂಡ್ ತಂಡವೇ ಈಗ ‘ಬೆಟ್ಟಿಂಗ್‌ ಮಾರುಕಟ್ಟೆ’ಯಲ್ಲಿ ಗೆಲ್ಲುವ ಕುದುರೆಯಾಗಿ ಬಿಂಬಿತವಾಗಿದೆ.

ಆದರೆ ಕಠಿಣ ಹಾದಿಯಲ್ಲಿ ಪುಟಿದೆದ್ದು ನಿಲ್ಲುವ ಗುಣ ಇರುವ ‘ಕೂಲ್ ಕ್ಯಾಪ್ಟನ್’ ಕೇನ್ ವಿಲಿಯಮ್ಸನ್‌ ಬಳಗವು ಇಂಗ್ಲೆಂಡ್‌ಗೆ ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ. 2015ರಲ್ಲಿ ರನ್ನರ್ಸ್ ಅಪ್ ಆಗಿರುವ ನ್ಯೂಜಿಲೆಂಡ್ ಬಳಗವು ಈ ಬಾರಿ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಕಿವೀಸ್‌ ಬೌಲರ್‌ಗಳು ಶಿಸ್ತಿನ ಬೌಲಿಂಗ್‌ನಿಂದ ಕಾಡಿದ್ದರು. ಭಾರತದ ಯಶಸ್ವಿ ಆರಂಭಿಕ ಜೋಡಿ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ‘ರನ್ ಯಂತ್ರ’ ವಿರಾಟ್ ಕೊಹ್ಲಿ ಅವರನ್ನು ಆರಂಭದಲ್ಲಿಯೇ ಕಟ್ಟಿಹಾಕಿದ್ದ ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೌಲ್ಡ್‌ ಅವರು ನ್ಯೂಜಿಲೆಂಡ್ ಗೆಲುವಿಗೆ ಕಾರಣರಾಗಿದ್ದರು. ವೇಗಿ ಲಾಕಿ ಫರ್ಗ್ಯುಸನ್, ಸ್ಪಿನ್ನರ್ ಮಿಷೆಲ್ ಸ್ಯಾಂಟನರ್ ಅವರೂ ಉತ್ತಮ ಲಯದಲ್ಲಿದ್ದಾರೆ.

‘ಬ್ಲ್ಯಾಕ್‌ ಕ್ಯಾಪ್ಸ್‌’ ಬಳಗಕ್ಕೆ ಚಿಂತೆ ಇರುವುದು ಬ್ಯಾಟಿಂಗ್ ವಿಭಾಗದಲ್ಲಿ. ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ ಅವರು ಸತತ ವೈಫಲ್ಯ ಅನುಭವಿಸಿದ್ದಾರೆ. ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅವರಷ್ಟೇ ಸ್ಥಿರವಾದ ಆಟವಾಡುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಜಿಮ್ಮಿ ನಿಶಾಮ್, ಟಾಮ್ ಲಥಾಮ್ ಅವರು ಕೂಡ ಕೆಲವು ಪಂದ್ಯಗಳಲ್ಲಿ ಮಾತ್ರ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ.

ರೌಂಡ್‌ ರಾಬಿನ್ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು ಹೀನಾಯ ಸೋಲನುಭವಿಸಿದ್ದು ಕೂಡ ಬ್ಯಾಟಿಂಗ್ ವೈಫಲ್ಯದಿಂದಲೇ. ಫೈನಲ್‌ನಲ್ಲಿ ಅಂತಹ ಒಂದು ಲೋಪವೂ ತಂಡಕ್ಕೆ ದುಬಾರಿಯಾಗಬಹುದು. ರನ್ನರ್ಸ್‌ ಅಪ್ ಹಂತದಿಂದ ಚಾಂಪಿಯನ್ ಪಟ್ಟಕ್ಕೆ ಏರುವ ತವಕದಲ್ಲಿರುವ ತಂಡವು ಹೆಣೆದಿರುವ ಯೋಜನೆಯ ಬಗ್ಗೆ ಈಗ ಕುತೂಹಲ ಗರಿಗೆದರಿದೆ.

ಭಾರತೀಯ ಅಭಿಮಾನಿಗಳಿಗೆ ಜಿಮ್ಮಿ ಮನವಿ
ಲಂಡನ್ (ಪಿಟಿಐ): ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಭಾರತ ತಂಡವು ಪ್ರವೇಶಿಸುವ ಭರ್ತಿ ವಿಶ್ವಾಸದಲ್ಲಿದ್ದ ಹಲವಾರು ಅಭಿಮಾನಿಗಳು ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದ್ದರು. ಇದೀಗ ಭಾರತ ಸೋತಿರುವುದರಿಂದ ಫೈನಲ್ ಆಡಲಿರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡದ ಅಭಿಮಾನಿಗಳಿಗೆ ಟಿಕೆಟ್‌ಗಳು ಲಭ್ಯವಾಗುತ್ತಿಲ್ಲ.

ಆದ್ದರಿಂದ ಭಾರತದ ಅಭಿಮಾನಿಗಳು ಕಿವೀಸ್ ಅಭಿಮಾನಿಗಳಿಗೆ ಟಿಕೆಟ್‌ಗಳನ್ನು ಮಾರಾಟ ಮಾಡಬೇಕು ಎಂದು ನ್ಯೂಜಿಲೆಂಡ್ ಆಟಗಾರ ಜಿಮ್ಮಿ ನಿಶಾಮ್ ಮನವಿ ಮಾಡಿಕೊಂಡಿದ್ದಾರೆ.

‘ಪ್ರಿಯ ಭಾರತೀಯ ಕ್ರಿಕೆಟ್ ಪ್ರೇಮಿಗಳೇ. ಫೈನಲ್ ಪಂದ್ಯವನ್ನು ನೀವು ವೀಕ್ಷಿಸಲು ಇಚ್ಚೆಪಡದಿದ್ದರೆ ದಯವಿಟ್ಟು ನಿಮ್ಮ ಟಿಕೆಟ್‌ಗಳನ್ನು ಕಿವೀಸ್ ಅಭಿಮಾನಿಗಳಿಗೆ ಮಾರಿಬಿಡಿ. ಲಾಭದ ಆಸೆಗೆ ಬೆಲೆ ಹೆಚ್ಚಿಸದೇ ಕ್ರಿಕೆಟ್‌ಪ್ರೇಮಿಗಳಿಗೆ ಅನುಕೂಲ ಮಾಡಿಕೊಡಿ. ಇದು ನನ್ನ ಕಳಕಳಿಯ ಮನವಿ’ ಎಂದು ನಿಶಾಮ್ ಟ್ವೀಟ್ ಮಾಡಿದ್ದಾರೆ.

‘ಆಟವಷ್ಟೇ ಮುಖ್ಯ, ನಾಯಿಯ ತಳಿ ಅಲ್ಲ’
ಲಂಡನ್(ಪಿಟಿಐ):
‘ನಮ್ಮ ತಂಡ ಯಾವ ತಳಿಯ ನಾಯಿ ಎಂಬುದು ಮುಖ್ಯವಲ್ಲ. ನಾವು ಕ್ರಿಕೆಟ್‌ ಮೇಲೆ ಮಾತ್ರ ಗಮನ ನೆಟ್ಟಿದ್ದೇವೆ. ಚೆನ್ನಾಗಿ ಆಡುವುದು ನಮ್ಮ ಗುರಿ. ಬಹಳ ವರ್ಷಗಳಿಂದ ನೋಡುತ್ತಿದ್ದೇವೆ. ಯಾವುದೇ ತಂಡ ಬೇಕಾದರೂ ಗೆಲ್ಲಬಹುದು. ಯಾರೂ ಸೋಲಬಹುದು. ಅದಕ್ಕೆ ನಾಯಿಯ ತಳಿಯ ತಾರತಮ್ಮವಿಲ್ಲ’ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಇಂಗ್ಲೆಂಡ್ ಮಾಧ್ಯಮಗಳು  ಆತಿ ಥೇಯ ಇಂಗ್ಲೆಂಡ್ ತಂಡವನ್ನು ಪ್ರಶಸ್ತಿ ಜಯಿಸುವ ನೆಚ್ಚಿನ ತಂಡ ಮತ್ತು ಕಿವೀಸ್ ತಂಡವನ್ನು ‘ಅಂಡರ್‌ಡಾಗ್ಸ್‌’ ಎಂದು ವಿಶ್ಲೇಷಣೆ ಮಾಡುತ್ತಿವೆ. ಶನಿವಾರದ ಪತ್ರಿಕಾಗೋಷ್ಠಿಯಲ್ಲಿಯೂ ಪತ್ರಕರ್ತರೊಬ್ಬರು ಇದೇ ಪ್ರಶ್ನೆ ಕೇಳಿದಾಗ ಕೇನ್ ಪ್ರತಿಕ್ರಿಯಿಸಿದರು.

‘ಇಂಗ್ಲೆಂಡ್‌ ಬಲಿಷ್ಠವಾಗಿದೆ. ನಾವು ಸೋಲಲು ಬಯಸುವುದಿಲ್ಲ. ಜಯಿಸ ಲೆಂದೇ ಕಣಕ್ಕಿಳಿಯುತ್ತೇವೆ’ ಎಂದರು.

ತಂಡಗಳು
ಇಂಗ್ಲೆಂಡ್:
ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಜಾಸ್ ಬಟ್ಲರ್ (ವಿಕೆಟ್‌ಕೀಪರ್), ಟಾಮ್ ಕರನ್, ಲಿಯಾಮ್ ಡಾಸನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್‌, ಜೇಮ್ಸ್ ವಿನ್ಸಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಟಾಮ್ ಲಥಾಮ್ (ವಿಕೆಟ್‌ಕೀಪರ್), ಟಾಮ್ ಬ್ಲೆಂಡೆಲ್. ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜಿಮ್ಮಿ ನಿಶಾಮ್, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಮಿಷೆಲ್ ಸ್ಯಾಂಟನರ್ , ಹೆನ್ರಿ ನಿಕೊಲ್ಸ್‌, ಟಿಮ್ ಸೌಥಿ, ಈಶ್ ಸೋಧಿ.

ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ

ಪಂದ್ಯಗಳು

90
ನ್ಯೂಜಿಲೆಂಡ್ ಜಯ43
ಇಂಗ್ಲೆಂಡ್ ಜಯ41
ಫಲಿತಾಂಶವಿಲ್ಲ04
ಟೈ02

ವಿಶ್ವಕಪ್ ಕ್ರಿಕೆಟ್‌ನಲ್ಲಿ ಬಲಾಬಲ

ಪಂದ್ಯಗಳು

8

ನ್ಯೂಜಿಲೆಂಡ್ ಜಯ

5
ಇಂಗ್ಲೆಂಡ್ ಜಯ3

**

ರ‍್ಯಾಂಕಿಂಗ್
ಇಂಗ್ಲೆಂಡ್: 1
ನ್ಯೂಜಿಲೆಂಡ್: 3

––

ನಾಯಕರ ಬಲಾಬಲ (ಏಕದಿನ ಕ್ರಿಕೆಟ್)
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
ಪಂದ್ಯ: 148
ರನ್: 6102
ಶ್ರೇಷ್ಠ: 148
ಶತಕ: 13
ಅರ್ಧಶತಕ: 39
ಸ್ಟ್ರೈಕ್‌ರೇಟ್: 82

––

ಇಯಾನ್ ಮಾರ್ಗನ್ (ಇಂಗ್ಲೆಂಡ್ )
ಪಂದ್ಯ: 232
ರನ್: 7339
ಶ್ರೇಷ್ಠ: 148
ಶತಕ: 13
ಅರ್ಧಶತಕ: 46
ಸ್ಟ್ರೈಕ್‌ರೇಟ್: 91.38

*
ಲೀಗ್ ಹಂತದಲ್ಲಿ ಹೇಳಿಕೊಳ್ಳುವಂತಹ ಸಾಧನೆ ನನ್ನದಲ್ಲ. ಆದರೆ ತಂಡದ ನಾಯಕ ಇಯಾನ್ ಮಾರ್ಗನ್ ಅವರು ನನ್ನ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಯಾವ ಹಂತದಲ್ಲಿಯೂ ಕಳೆದುಕೊಳ್ಳಲಿಲ್ಲ.
-ಆದಿಲ್ ರಶೀದ್, ಇಂಗ್ಲೆಂಡ್ ಆಟಗಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು