ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಿನ್ನತೆಯಿಂದ ಬಳಲಿದ ದಿನಗಳನ್ನು ಹಂಚಿಕೊಂಡ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

Published : 20 ಆಗಸ್ಟ್ 2024, 16:40 IST
Last Updated : 20 ಆಗಸ್ಟ್ 2024, 16:40 IST
ಫಾಲೋ ಮಾಡಿ
Comments

ನವದೆಹಲಿ: ಈ ತಿಂಗಳ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಗ್ರಹಾಂ ಥೋರ್ಪ್ ಅವರ ಅಕಾಲಿಕ ಮರಣದ ನಂತರ ಖಿನ್ನತೆ ಜೊತಗಿನ ಹೋರಾಟದ ಬಗ್ಗೆ ಮಾತನಾಡುವ ತುರ್ತು ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಅಲ್ಲದೆ, ತಾವು ಸಹ ಖಿನ್ನತೆಗೆ ಒಳಗಾಗಿದ್ದ ಸಂದರ್ಭವನ್ನು ಅವರು ಹಂಚಿಕೊಂಡಿದ್ದಾರೆ.

ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, 2009 ಮತ್ತು 2011ರ ನಡುವಿನ ತಮ್ಮ ಜೀವನದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ಆತ್ಮಹತ್ಯೆಗೆ ಚಿಂತಿಸಿದ್ದ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಥೋರ್ಪೆ ಬಳಿಕ ಕರ್ನಾಟಕದವರೇ ಆದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಸಹ ತಮ್ಮ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ನಾನೀಗ ಖಿನ್ನತೆ ಮತ್ತು ಆತ್ಮಹತ್ಯೆ ಬಗ್ಗೆ ಮಾತನಾಡುತ್ತಿದ್ದೇನೆ. ಖಿನ್ನತೆಯಿಂದ ಹಲವರು ಆತ್ಮಹತ್ಯೆಗೆ ಶರಣಾದ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲೂ ಇತ್ತೀಚೆಗೆ ಕೆಲ ಕ್ರಿಕೆಟಿಗರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೆಯೂ ಕೆಲ ಅಥ್ಲೀಟ್ಸ್ ಮತ್ತು ಕ್ರಿಕೆಟಿಗರು ಖಿನ್ನತೆಯಿಂದ ಆತ್ಮಹತ್ಯೆಗೆ ಮಾಡಿಕೊಂಡ ಬಗ್ಗೆ ಕೇಳಿದ್ದೇವೆ. ನಾನೂ ಸಹ ಆ ಹಂತ ದಾಟಿ ಬಂದಿದ್ದೇನೆ. ಅದು ಸುಲಭದ ಪಯಣವಲ್ಲ ಅತ್ಯಂತ ಸವಾಲಿನದ್ದು. ಅದೊಂದು ದುರ್ಬಲಗೊಂಡ, ದಣಿದ ಮತ್ತು ಭಾರವಾದ ಕ್ಷಣವಾಗಿರುತ್ತದೆ’ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾ ಪರ 46 ಏಕದಿನ, 13 ಟಿ20 ಪಂದ್ಯಗಳನ್ನು ಆಡಿರುವ ಉತ್ತಪ್ಪ ಥೋರ್ಪೆ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

‘ಅದು(ಖಿನ್ನತೆ) ಹೇಗಿರುತ್ತದೆ ಎಂದರೆ, ಅತ್ಯಂತ ಭಾರದ ದುರ್ಬಲ ಸ್ಥಿತಿಯಾಗಿರುತ್ತದೆ. ನಾನೂ ಸಹ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ಅದನ್ನು ಅನುಭವಿಸಿದ್ದೇನೆ. ನನ್ನ ಸುತ್ತ ಮಾತನಾಡುವ ಜನರನ್ನು ಬಿಟ್ಟುಬಿಡಿ,, ನಾನು ಎಲ್ಲಿ ಇರಬೇಕಿತ್ತೋ ಅಲ್ಲಿಂದ ಎಷ್ಟು ಹಿಂದೆ ಬಿದ್ದಿದ್ದೇನೆ ಎಂದು ನನಗೆ ಅನಿಸುತ್ತಿತ್ತು. ನನ್ನ ಆ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿರಲಿಲ್ಲ’ ಎಂದಿದ್ದಾರೆ.

ತಮ್ಮ ಜೀವನದಲ್ಲಿ ಬಂದು ಹೋದ ಹಲವು ಕ್ರೀಡಾಪಟುಗಳು ತಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ. ಜೀವನ ಒಂದೇ ರೀತಿ ಇರುವುದಿಲ್ಲ. ಗ್ರಹಾಂ ಥೋರ್ಪೆ ಮತ್ತು ಡೇವಿಡ್ ಜಾನ್ಸನ್ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

‘ನಿಮ್ಮನ್ನು ಪ್ರೀತಿಸುವವರಿಗೆ ನೀವು ಹೊರೆ ಎನಿಸಿದಾಗ, ಅತ್ಯಂತ ನಿರಾಶೆ ಅನುಭವಿಸಿದಾಗ ಪ್ರತಿಯೊಂದು ಹೆಜ್ಜೆಯು ಭಾರವೆನಿಸುತ್ತದೆ. ನೀವು ಮುಂದುವರಿಯಲಾಗದೆ ಒದ್ದಾಡುತ್ತೀರಿ. ನಾನು ಸಹ ವಾರ, ತಿಂಗಳು ಮತ್ತು ವರ್ಷಗಟ್ಟಲೇ ಹಾಸಿಗೆ ಬಿಟ್ಟು ಮೇಲೇಳದ ಮನಸ್ಥಿತಿಗೆ ಬಂದಿದ್ದೆ. 2011ರ ವರ್ಷದುದ್ದಕ್ಕೂ ನಾನು ಅದನ್ನು ಅನುಭವಿಸಿದ್ದೇನೆ. ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಳ್ಳಲು ನಾಚಿಕೆಪಡುತ್ತಿದ್ದೆ’ಎಂದಿದ್ದಾರೆ.

ಇಷ್ಟೆಲ್ಲ ಹೇಳಿದ ಮೇಲೆ ಖಿನ್ನತೆಯಿಂದ ಹೊರಬರುವ ಮಾರ್ಗಗಳ ಬಗ್ಗೆಯೂ ಉತ್ತಪ್ಪ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಏನೇ ಆಗಿದ್ದರೂ ಅದರಿಂದ ಹೊರಬರುವ ಮಾರ್ಗವಿದೆ. ಸುರಂಗದ ಅಂತ್ಯದಲ್ಲಿ ಬೆಳಕು ಇದ್ದೇ ಇರುತ್ತದೆ. ವಾಸ್ತವವನ್ನು ಒಪ್ಪಿಕೊಳ್ಳದೆ ಇರುವುದರಿಂದ ಯಾವುದೇ ಸಹಾಯ ಆಗುವುದಿಲ್ಲ. ಅದರಲ್ಲೇ ನೀವು ಮುಂದುವರಿದರೆ ಬಹಳ ಕಷ್ಟವಾಗುತ್ತದೆ. ನಿಮ್ಮಲ್ಲಿ ಏನೊ ತಪ್ಪಿದೆ ಎನ್ನುವುದನ್ನು ಅರಿತುಕೊಳ್ಳಿ. ನಿಮ್ಮ ಸಮಸ್ಯೆಯನ್ನು ಒಂದು ಕಡೆ ಬರೆದು ಅರ್ಥ ಮಾಡಿಕೊಳ್ಳಿ. ನೀವು ನಂಬುವ ವ್ಯಕ್ತಿಗಳು ಅಥವಾ ನಿಮ್ಮನ್ನು ಪ್ರೀತಿಸುವವರ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ಅವರ ಜೊತೆ ಹಂಚಿಕೊಳ್ಳಿ. ನಿಮ್ಮ ಸಮಸ್ಯೆಗಳ ಬಗ್ಗೆ ಬೇರೆಯವರ ಜೊತೆ ಮಾತನಾಡಿ ಪರಿಹರಿಸಿಕೊಳ್ಳದಿದ್ದರೆ ಅದು ಮನಸ್ಸಿನಲ್ಲೇ ಬೆಳೆದು ದೊಡ್ಡದಾಗುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT