ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್ 'ಆರಂಭದ' ಹೊಸ್ತಿಲಲ್ಲಿ 'ಯುವ ದಂಡು'

Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇಬ್ಬರೂ ಗಾಯಗೊಂಡರು. ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ಟೂರ್ನಿಗೆ ಅಲಭ್ಯರಾದರು. ಶರ್ಮಾ 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸಿದವರು. ಆದರೆ, ಈ ಅನುಭವಿಗಳ ಅನುಪಸ್ಥಿತಿಯು ತಂಡವನ್ನು ಕಾಡಲಿಲ್ಲ!

ಬದಲಿಗೆ ಇಬ್ಬರು ಯುವಪ್ರತಿಭೆಗಳು ಅನುಭವಿಗಳ ಸ್ಥಾನ ತುಂಬಿದರು. ಮಯಂಕ್ ಅಗರವಾಲ್ ಮತ್ತು ಪೃಥ್ವಿ ಶಾ ತಮ್ಮಿಬ್ಬರ ಪದಾರ್ಪಣೆಯಲ್ಲಿಯೇ ಇನಿಂಗ್ಸ್‌ ಆರಂಭದ ಹೊಣೆ ಹೊತ್ತರು. ಇವರಿಬ್ಬರೂ ಅಟೋಮ್ಯಾಟಿಕ್ ಆಯ್ಕೆಯೇನೂ ಆಗಿರಲಿಲ್ಲ.

ಇನ್ನೂ ಎಂಟು–ಹತ್ತು ಯುವ ಆಟಗಾರರ ಪೈಪೋಟಿಯನ್ನು ಮೀರಿ ಈ ಅವಕಾಶ ಪಡೆದುಕೊಂಡಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ಹೆಚ್ಚು ಅವಕಾಶಗಳಿಲ್ಲ. ಅನುಭವಿಗಳು ಚೇತರಿಸಿಕೊಂಡು ಮರಳುವಷ್ಟರಲ್ಲಿ ತಮ್ಮ ಛಾಪು ಮೂಡಿಸುವ ಒತ್ತಡವೂ ಇದೆ.

ಇದು ಇವತ್ತಿನ ಭಾರತದ ಕ್ರಿಕೆಟ್ ಚಿತ್ರಣ. ಬಹುಶ ಬೇರೆ ಯಾವ ದೇಶದ ತಂಡದಲ್ಲಿಯೂ ಇಷ್ಟೊಂದು ಮಜಬೂತಾದ ಬೆಂಚ್‌ ಶಕ್ತಿ ಇಲ್ಲ ಎಂದೇ ಹೇಳಬಹುದು. ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್‌ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಂತೂ ನಿವೃತ್ತಿಯಾದ ಆಟಗಾರರನ್ನೇ ಮರಳಿ ಕರೆಸಿಕೊಂಡು ಆಡುವ ಪರಿಸ್ಥಿತಿ ಇದೆ. ಟಿ–20 ವಿಶ್ವಕಪ್ ಟೂರ್ನಿಗೆ ಎಬಿ ಡಿವಿಲಿಯರ್ಸ್‌ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುತ್ತಾರೆ ಎಂಬ ಮಾತುಗಳು ಈಚೆಗೆ ಕೇಳಿಬಂದಿವೆ.

ಶ್ರೀಲಂಕಾದಲ್ಲಿ ಲಸಿತ್ ಮಾಲಿಂಗ, ವಿಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳೂ ಜೋರಾಗಿವೆ.

ಆದರೆ, ಭಾರತದಲ್ಲಿ ಇದು ತದ್ವಿರುದ್ಧ. ಮಹೇಂದ್ರಸಿಂಗ್ ಧೋನಿಯವರಂತಹ ಆಟಗಾರನ ಬದಲಿಗೆ ರಿಷಭ್ ಪಂತ್, ವೃದ್ಧಿಮಾನ್ ಸಹಾ, ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್. ರಾಹುಲ್ ಅವರನ್ನು ಪ್ರಯೋಗಿಸುವಷ್ಟು ಧಾರಾಳ ಅವಕಾಶ ಇಲ್ಲಿದೆ.

ಬರೀ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪಟ್ಟಿಯೇ ಹನುಮಂತನ ಬಾಲದಷ್ಟಿದೆ. ಅದರಲ್ಲಿ ಈಗಾಗಲೇ ರಾಷ್ಟ್ರೀಯ ತಂಡದ ಹೊಸ್ತಿಲಿನಲ್ಲಿ ನಿಂತು ಕದ ತಟ್ಟುತ್ತಿದ್ದಾರೆ. 18 ರಿಂದ 28 ವರ್ಷದವರೆಗಿನವರು ಈ ಪೈಪೋಟಿಯಲ್ಲಿದ್ದಾರೆಂಬುದು ವಿಶೇಷ.

‘ಗೋಡೆ’ಯ ಚಾಣಾಕ್ಷ ನಡೆ

ಭಾರತದಲ್ಲಿ ಯುವ ಆಟಗಾರರ ಸಂಖ್ಯೆ ಹೆಚ್ಚಲು ಕರ್ನಾಟಕದ ರಾಹುಲ್ ದ್ರಾವಿಡ್ ಕಾರಣರು. ಅವರು ಜೂನಿಯರ್ ಮತ್ತು ಯುವ ಭಾರತ ತಂಡಗಳ ಮುಖ್ಯ ಕೋಚ್ ಆದಾಗ ತೆಗೆದುಕೊಂಡು ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. ಸದ್ಯ ಭಾರತ ಜೂನಿಯರ್, ಎ ತಂಡಗಳಲ್ಲಿರುವ ಎಲ್ಲ ಆಟಗಾರರೂ ರಾಹುಲ್ ಕನಸಿನ ಅಂಗಳದಲ್ಲಿಯೇ ಬೆಳೆದವರು. ಅವರು ತಂಡದಲ್ಲಿ ತಂದ ಸೂಪರ್ ಸ್ಪೆಷಾಲಿಟಿ ಮಾದರಿಯ ತರಬೇತಿಯ ಫಲ. ಓಪನರ್, ಮಿಡಲ್‌ ಆರ್ಡರ್, ಟೇಲ್ ಎಂಡರ್, ಫೀಲ್ಡಿಂಗ್, ವಿಕೆಟ್‌ಕೀಪಿಂಗ್, ಪೇಸ್ ಬೌಲರ್, ಸ್ಪಿನ್ ಬೌಲರ್ ಮತ್ತು ಆಲ್‌ರೌಂಡರ್‌ ವಿಭಾಗಗಳಲ್ಲಿ ಆಟಗಾರರನ್ನು ಸಿದ್ಧಗೊಳಿಸಿದರು. ಅದರ ಫಲವಾಗಿ ಗಿಲ್, ಪೃಥ್ವಿ, ದೇವದತ್ತ, ಮಯಂಕ್ ಅಗರವಾಲ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಅವರಂತಹ ಆಟಗಾರರು ರೂಪುಗೊಳ್ಳಲು ಸಾಧ್ಯವಾಯಿತು. ದಶಕಗಳ ಹಿಂದೆ ತಂಡಗಳು ಒಬ್ಬಿಬ್ಬರು ಆಟಗಾರರ ಮೇಲೆ ಅವಲಂಬಿತವಾಗಿರುತ್ತಿತ್ತು. ಈಗ ಯಾವುದೇ ವಿಭಾಗದಲ್ಲಿಯೂ ಬದಲೀ ಆಟಗಾರರು ಲಭ್ಯರಿದ್ದಾರೆ.

ಶುಭಮನ್ ಗಿಲ್

ಕಿವೀಸ್ ನಲ್ಲಿ ಆಡುತ್ತಿರುವ ಭಾರತ ತಂಡದ ಬೆಂಚ್‌ನಲ್ಲಿ ಪಂಜಾಬಿ ಹುಡುಗ ಶುಭಮನ್ ಗಿಲ್ ಇದ್ದಾರೆ. ಎರಡು ವರ್ಷಗಳ ಹಿಂದೆ ಪೃಥ್ವಿ ಶಾ ನಾಯಕತ್ವದ 19 ವರ್ಷದೊಳಗಿನವರ ತಂಡವು ವಿಶ್ವಕಪ್ ಗೆದ್ದಾಗ ಗಿಲ್ ರನ್‌ಗಳ ಹೊಳೆ ಹರಿಸಿದ್ದರು. ಆಗಿನಿಂದಲೂ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದರು. ಅವರಿಗಿಂತ ಮೊದಲು ಪೃಥ್ವಿ ಟೆಸ್ಟ್ ಗೆ ಪದಾರ್ಪಣೆ ಮಾಡಿದರು. ಗಿಲ್ ಭಾರತ ‘ಎ’ ತಂಡ ಮತ್ತು ದೇಶಿ ಟೂರ್ನಿಗಳಲ್ಲಿ ಸತತವಾಗಿ ರನ್‌ಗಳ ರಾಶಿ ಪೇರಿಸಿದರು. ಹೋದ ವರ್ಷ ನ್ಯೂಜಿಲೆಂಡ್‌ನಲ್ಲಿ ಎರಡು ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ, ಅವರು ಮಧ್ಯಮಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದರು.

ದೇವದತ್ತ ಪಡಿಕ್ಕಲ್

ಈ ಸಲದ ದೇಶಿ ಋತುವಿನಲ್ಲಿ ಮಿಂಚಿರುವ ಕರ್ನಾಟಕದ ಪ್ರತಿಭಾವಂತ ಎಡಗೈ ಬ್ಯಾಟ್ಸ್‌ಮನ್. ಯಾವುದೇ ಮಾದರಿಯಲ್ಲಿಯೂ ರನ್‌ ಗಳಿಸಬಲ್ಲ ಸಮರ್ಥ ಆಟಗಾರ. ಮಯಂಕ್ ಅಗರವಾಲ್ ಅನುಪಸ್ಥಿತಿಯಲ್ಲಿ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಈ ಎರಡೂ ಟೂರ್ನಿಗಳಲ್ಲಿಯೂ ಕರ್ನಾಟಕ ಚಾಂಪಿಯನ್ ಆಗಿತ್ತು. ದೇವದತ್ತ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಗೌರವಕ್ಕೆ ಪಾತ್ರರಾಗಿದ್ದರು. ಏಕದಿನ ಮಾದರಿಯಲ್ಲಿ ಅವರು 650 ಮತ್ತು ಟಿ20ಯಲ್ಲಿ 580 ರನ್ ಗಳಿಸಿದ್ದರು. ರಣಜಿ ಟೂರ್ನಿಯಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಆರು ಅರ್ಧಶತಕಗಳನ್ನು ದಾಖಲಿಸಿದ್ದಾರೆ. 19 ವರ್ಷದ ದೇವದತ್ತ ಈಗ ಭಾರತ ಆಯ್ಕೆ ಸಮಿತಿಯ ಕಣ್ಸೆಳೆದಿದ್ದಾರೆ. ಈಗಾಗಲೇ ತಂಡದಲ್ಲಿರುವ ರಾಹುಲ್, ಮಯಂಕ್ ಮತ್ತು ಮನೀಷ್ ಪಾಂಡೆ ಅವರಿಗೂ ಸ್ಪರ್ಧೆ ಒಡ್ಡುವ ಛಾತಿ ಪ್ರದರ್ಶಿಸುತ್ತಿದ್ದಾರೆ.

ಪ್ರಿಯಂ ಗರ್ಗ್

19 ವರ್ಷ ದೊಳಗಿನವರ ತಂಡದ ನಾಯಕ ಪ್ರಿಯಂ ಗರ್ಗ್ ಕೂಡ ಆರಂಭಿಕ ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಸಮರ್ಥ.18 ವರ್ಷದ ಪ್ರಿಯಂ ಕೂಡ ಉತ್ತರಪ್ರದೇಶದ ಕೆಳಮಧ್ಯಮವರ್ಗದ ಕುಟುಂಬದಲ್ಲಿ ಕಷ್ಟಪಟ್ಟು ಬೆಳೆದವರು. ಶಾಲಾ ಬಸ್ ಡ್ರೈವರ್ ಆಗಿರುವ ತಂದೆ, ಪ್ರಿಯಂ ಕ್ರಿಕೆಟ್‌ ಪ್ರೀತಿಗೆ ಬೆಂಬಲವಾಗಿ ನಿಂತವರು. ಸಾಕಷ್ಟು ಕಷ್ಟನಷ್ಟಗಳ ನಡುವೆಯೂ ಛಲಬಿಡದ ಪ್ರಿಯಂ ಯುವ ತಂಡದ ನಾಯಕನಾಗಿದ್ದಾರೆ. ಸೀನಿಯರ್ ತಂಡಕ್ಕೆ ಜಿಗಿಯಲು ಕಾತರರಾಗಿದ್ದಾರೆ.

ಯಶಸ್ವಿ ಜೈಸ್ವಾಲ್

ಮುಂಬೈನ 18 ವರ್ಷದ ಯಶಸ್ವಿ ಜೈಸ್ವಾಲ್‌ ಕಷ್ಟದ ದಿನಗಳು ಮುಗಿದಿವೆ. ಈಗ ಅವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಯುವ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಎದುರು ಶತಕ ಹೊಡೆದ ಅವರು ತಾವೂ ಸೀನಿಯರ್ ಟೀಮ್ ಸೇರುವ ಅಕಾಂಕ್ಷಿ ಎಂದು ಸಂದೇಶ ರವಾನಿಸಿದರು. ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಯಶಸ್ವಿ, ಟೆಂಟ್‌ಗಳಲ್ಲಿ ಮಲಗಿ ಕಳೆದ ರಾತ್ರಿಗಳಿಗೆ ಲೆಕ್ಕವಿಲ್ಲ. ಉಪಜೀವನಕ್ಕಾಗಿ ಪಾನೀಪುರಿ ಮಾರುತ್ತಲೇ ಕ್ರಿಕೆಟ್ ಅಭ್ಯಾಸ ಮಾಡಿದವರು ಯಶಸ್ವಿ. ಅವರ ಪರಿಶ್ರಮಕ್ಕೆ ಈಗ ಮೌಲ್ಯ ಸಿಗುತ್ತಿದೆ. ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಅವರು ಕ್ರಿಕೆಟ್‌ ಲೋಕದ ಗಮನ ಸೆಳೆದಿದ್ದರು.

ಪ್ರಿಯಾಂಕ್ ಪಾಂಚಾಲ್

ಒಂದು ಕಡೆ ಜೂನಿಯರ್ ಆಟಗಾರರು ತಮ್ಮ ಅಮೋಘ ಸಾಧನೆಯೊಂದಿಗೆ ಭಾರತ ತಂಡಕ್ಕೆ ಲಗ್ಗೆ ಹಾಕಲು ಕಾಯುತ್ತಿದ್ದಾರೆ. ಇನ್ನೊಂದೆಡೆ ಸೀನಿಯರ್ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳಲು ಶ್ರಮಪಟ್ಟು ಆಡುತ್ತಿದ್ದಾರೆ. ಇವರಿಬ್ಬರ ನಡುವೆ ಮಧ್ಯಮವರ್ಗವದೊಂದಿದೆ. ಅದರಲ್ಲಿ ಗುಜರಾತ್ ತಂಡದ ಪ್ರಿಯಾಂಕ್ ಪಾಂಚಾಲ್ ಪ್ರಮುಖರು. 29 ವರ್ಷದ ಪ್ರಿಯಾಂಕ್ ಸತತವಾಗಿ ದೇಶಿ ಕ್ರಿಕೆಟ್‌ನಲ್ಲಿ ಬೆಳಗುತ್ತಿದ್ದಾರೆ. ಐಪಿಎಲ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಆದರೂ ಇದುವರೆಗೆ ಅವರಿಗೆ ಸೀನಿಯರ್ ತಂಡದ ಕರೆ ಬಂದೇ ಇಲ್ಲ. 2008ರಲ್ಲಿಯೇ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಪ್ರಿಯಾಂಕ್ ಇನ್ನೂ ಭರವಸೆ ಕಳೆದುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT