ಸಿಡ್ನಿ: ಫಿಫಾ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಮೂರನೇ ಸ್ಥಾನ ನಿರ್ಣಯಿಸಲು ನಡೆಯುವ ಪಂದ್ಯದಲ್ಲಿ ಶನಿವಾರ, ಆಸ್ಟ್ರೇಲಿಯಾ ಮತ್ತು ಸ್ವೀಡನ್ ತಂಡಗಳು ಪೈಪೋಟಿ ನಡೆಸಲಿವೆ.
ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿರುವ ಉಭಯ ತಂಡಗಳು ಕಂಚಿನ ಪದಕ ಗೆದ್ದುಕೊಂಡು, ವಿಶ್ವಕಪ್ ಟೂರ್ನಿಯನ್ನು ಸ್ಮರಣೀಯವನ್ನಾಗಿಸುವ ಗುರಿ ಇಟ್ಟುಕೊಂಡಿವೆ.
ತವರು ನೆಲದಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಆಸ್ಟ್ರೇಲಿಯಾ ತಂಡದ ಕನಸನ್ನು ಇಂಗ್ಲೆಂಡ್ ನುಚ್ಚುನೂರು ಮಾಡಿತ್ತು. ಆತಿಥೇಯ ತಂಡ ಸೆಮಿಫೈನಲ್‌ನಲ್ಲಿ 1–3 ರಿಂದ ಸೋತಿತ್ತು. ಸ್ವೀಡನ್ ತಂಡ ಸ್ಪೇನ್ ಕೈಯಲ್ಲಿ 1–2 ರಿಂದ ಪರಾಭವಗೊಂಡಿತ್ತು.
ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಸ್ವೀಡನ್, ನಾಲ್ಕು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಯೂರೋಪ್‌ನ ತಂಡ ಒಟ್ಟಾರೆಯಾಗಿ ಮೂರು ಸಲ ಕಂಚಿನ ಪದಕ ಗೆದ್ದುಕೊಂಡಿದೆ. 2003ರ ಟೂರ್ನಿಯಲ್ಲಿ ‘ರನ್ನರ್ ಅಪ್’ ಆಗಿರುವುದು ಸ್ವೀಡನ್‌ನ ಉತ್ತಮ ಸಾಧನೆ ಎನಿಸಿದೆ.
ಸ್ವೀಡನ್‌ನ ಮಿಡ್‌ಫೀಲ್ಡರ್ ಕರೋಲಿನ್ ಸೆಗೆರ್ ಅವರಿಗೆ ಶನಿವಾರದ ಹಣಾಹಣಿ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಎನಿಸಿದೆ. ದಾಖಲೆಯ 235 ಪಂದ್ಯಗಳಲ್ಲಿ ಸ್ವೀಡನ್ ತಂಡವನ್ನು ಪ್ರತಿನಿಧಿಸಿರುವ ಅವರು ಐದು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.