ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕಲ್ಲು–ಮುಳ್ಳಿನ ಹಾದಿಯಲ್ಲಿ ಬೆಂಗಳೂರು ಎಫ್‌ಸಿ

Last Updated 10 ಜನವರಿ 2021, 7:04 IST
ಅಕ್ಷರ ಗಾತ್ರ

ಆರಂಭದಲ್ಲಿ ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಸೋಲಿನಿಂದ ತಪ್ಪಿಸಿಕೊಂಡ ಸಮಾಧಾನದಲ್ಲಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ನಂತರ ಜಯದ ಹಾದಿಗೆ ಮರಳಿ ಭರವಸೆ ಮೂಡಿಸಿತ್ತು. ಇದಾದ ಮೇಲೆ ಜಯ–ಡ್ರಾಗಳ ಹಾವು ಏಣಿಯಾಟ ನಡೆದಿತ್ತು. ಆದರೆ ಹಿಂದಿನ ನಾಲ್ಕು ಪಂದ್ಯಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಬಿಎಫ್‌ಸಿಯ ಭವಿಷ್ಯಕ್ಕೇ ಕುತ್ತುತರುವ ಫಲಿತಾಂಶ ನೀಡಿವೆ. ಮೊದಲ ಲೆಗ್‌ನ ಎಲ್ಲ 10 ‍ಪಂದ್ಯಗಳು ಮುಗಿದಾಗ ತಂಡದ ಖಾತೆಯಲ್ಲಿ ಇರುವುದು 12 ‍ಪಾಯಿಂಟ್‌ ಮಾತ್ರ. ಹೀಗಾಗಿ ಮುಂದಿನ ಲೆಗ್‌ನ 10 ಪಂದ್ಯಗಳು ತಂಡದ ಪಾಲಿಗೆ ಅಗ್ನಿ ಪರೀಕ್ಷೆಯೇ ಆಗಲಿವೆ.

ಬಿಎಫ್‌ಸಿ ತಂಡ ಐಎಸ್‌ಎಲ್‌ಗೆ ಪದಾರ್ಪಣೆ ಮಾಡುವಾಗಲೇ ಇತರ ತಂಡಗಳ ಎದೆ ನಡುಗಿತ್ತು. ಏಷ್ಯಾ ಖಂಡದ ಮತ್ತು ದೇಶಿ ಫುಟ್‌ಬಾಲ್‌ನಲ್ಲಿ ಆಗ ಅದು ಮೂಡಿಸಿದ್ದ ಛಾಪು ಅಂಥದ್ದು. ಲೀಗ್ ಆರಂಭವಾಗಿ ಮೂರು ಆವೃತ್ತಿಗಳ ನಂತರ ಬಿಎಫ್‌ಸಿ ಕಣಕ್ಕೆ ಇಳಿದಿತ್ತು. ಹೆಸರಿಗೆ ತಕ್ಕಂತೆ ಐಎಸ್‌ಎಲ್‌ನಲ್ಲಿ ತಂಡ ಸಾಮರ್ಥ್ಯವನ್ನೂ ಮೆರೆದಿತ್ತು. ಮೊದಲ ವರ್ಷವೇ ಲೀಗ್ ಹಂತದಲ್ಲಿ ಚಾಂಪಿಯನ್ ಆಗಿ ಅಂತಿಮವಾಗಿ ರನ್ನರ್ ಅಪ್ ಸ್ಥಾನ ಪಡೆದ ತಂಡ ಮರು ವರ್ಷವೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ವರ್ಷವೂ ಲೀಗ್‌ ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. ಈ ಸಾಧನೆ ಮಾಡಿ ಪ್ರಶಸ್ತಿಯನ್ನೂ ಗಳಿಸಿದ ಮೊದಲ ಮತ್ತು ಏಕೈಕ ತಂಡ ಎಂಬ ಹೆಗ್ಗಳಿಕೆ ಸುನಿಲ್ ಚೆಟ್ರಿ ಪಡೆಯದ್ದು. ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಸೋತಿದ್ದರೂ ಟೂರ್ನಿಯುದ್ದಕ್ಕೂ ಎದುರಾಳಿಗಳಿಗೆ ಕಠಿಣ ಪೈಪೋಟಿ ನೀಡಿತ್ತು.

ಪ್ರತಿ ಬಾರಿಯೂ ಪ್ಲೇ ಆಫ್ ಹಂತಕ್ಕೇರಿರುವ ತಂಡ ಈ ಸಲ ಮೊದಲ ಆರು ಪಂದ್ಯಗಳಲ್ಲಿ ಸೋಲಿಲ್ಲದೆ (ತಲಾ ಮೂರು ಡ್ರಾ, ಮೂರು ಜಯ) ಮುಂದೆ ಸಾಗಿತ್ತು. ಹೀಗಾಗಿ ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿತ್ತು. ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಈಗ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟು ಹಾಲಿ ಆರನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ಬಳಿ ಬಿಎಫ್‌ಸಿಗಿಂತ 10 ಪಾಯಿಂಟ್‌ಗಳು ಹೆಚ್ಚು ಇದ್ದು ಎರಡನೇ ಸ್ಥಾನದಲ್ಲಿರುವ ಎಟಿಕೆ ಮೋಹನ್ ಬಾಗನ್ ಎಂಟು ಪಾಯಿಂಟ್‌ಗಳ ಅಂತರದಲ್ಲಿದೆ. ಬಿಎಫ್‌ಸಿಗಿಂತ ಹಿಂದೆ ಇರುವ ನಾರ್ತ್ ಈಸ್ಟ್ ಯುನೈಟೆಡ್, ಚೆನ್ನೈಯಿನ್ ಎಫ್‌ಸಿ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಗಳಿಸಿರುವ ಪಾಯಿಂಟ್‌ಗಳ ಮೇಲೆ ಕಣ್ಣಾಡಿಸಿದರೆ, ಈ ತಂಡಗಳು ಬಿಎಫ್‌ಸಿಯ ಸನಿಹದಲ್ಲೇ ಇವೆ. ಅವು ಕ್ರಮವಾಗಿ 11,10,10 ಪಾಯಿಂಟ್‌ಗಳನ್ನು ಹೊಂದಿವೆ. ಆದ್ದರಿಂದ ಬಿಎಫ್‌ಸಿಗೆ ಈಗ ಅತ್ತ ದರಿ, ಇತ್ತ ಪುಲಿ ಎಂಬ ಆತಂಕ–ಗೊಂದಲದ ಪರಿಸ್ಥಿತಿ.

ಗೋಲುಗಳಿಕೆಯದ್ದೇ ಸಮಸ್ಯೆ

ಕಾಲಿನಿಂದಲೂ ತಲೆಯಿಂದಲೂ ಮಾಂತ್ರಿಕವಾಗಿ ಗೋಲು ಗಳಿಸಬಲ್ಲ ಸುನಿಲ್ ಚೆಟ್ರಿ ಅವರನ್ನು ಒಳಗೊಂಡ ಫಾರ್ವರ್ಡ್ ವಿಭಾಗ ಬಿಎಫ್‌ಸಿಯ ಬಲ. ಚೆಂಡನ್ನು ಸಮರ್ಪಕವಾಗಿ ತಂದುಕೊಡಬಲ್ಲ ಮಿಡ್‌ಫೀಲ್ಡರ್‌ಗಳು ಕೂಡ ತಂಡದ ಆಸ್ತಿ. ಆದರೆ ಈ ಎರಡೂ ವಿಭಾಗ ಈ ಬಾರಿ ಮುಗ್ಗರಿಸುತ್ತಿದೆ. ಭಾರತ ಕಂಡಿರುವ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ, ಐಎಸ್‌ಎಲ್‌ನಲ್ಲಿ ಎರಡು ಬಾರಿ ಚಿನ್ನದ ಗವಸು ಪ್ರಶಸ್ತಿ ಗಳಿಸಿರುವ ಗುರುಪ್ರೀತ್ ಸಿಂಗ್ ಸಂಧು ಧಾರಾಳಿಯಾಗಿರುವುದೂ ತಂಡದ ವೈಫಲ್ಯಗಳಿಗೆ ಕಾರಣವಾಗಿದೆ. ಸೋತಿರುವ ಹಿಂದಿನ ನಾಲ್ಕು ಪಂದ್ಯಗಳಲ್ಲಿ ತಂಡ ಕೇವಲ ಒಂದೇ ಗೋಲು ಗಳಿಸಿದ್ದು ಆರು ಗೋಲುಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದೆ. ಮೊದಲ ಆರು ಪಂದ್ಯಗಳಲ್ಲೂ ಗೋಲು ಗಳಿಕೆಯಲ್ಲಿ ತಂಡ ಹಿನ್ನಡೆಯಲ್ಲೇ ಇತ್ತು. ಆ ಪಂದ್ಯಗಳಲ್ಲಿ 11 ಗೋಲು ಗಳಿಸಿದ್ದರೆ ಏಳು ಗೋಲುಗಳನ್ನು ಬಿಟ್ಟುಕೊಟ್ಟಿತ್ತು. 4–2ರಲ್ಲಿ ಜಯ ಸಾಧಿಸಿದ ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯದಲ್ಲಿ ಮಾತ್ರ ತಂಡದ ನೈಜ ಸಾಮರ್ಥ್ಯ ಪ್ರಕಟವಾಗಿತ್ತು.

ವೈಫಲ್ಯಗಳಿಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದೇ ಇರುವುದೇ ತಂಡದ ಈಗಿನ ಬಹುದೊಡ್ಡ ಸಮಸ್ಯೆ. ಈ ಬಾರಿ ತಂಡ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಮರ್ಥ ಹೊಸ ಆಟಗಾರರನ್ನು ಸೇರಿಸಿಕೊಂಡಿದೆ ಕೂಡ. ಆದರೆ ಯಾರಿಂದಲೂ ನಿರೀಕ್ಷೆಗೆ ತಕ್ಕ ಆಟ ಕಂಡುಬರುತ್ತಿಲ್ಲ. ಗುರುಪ್ರೀತ್ ಸಿಂಗ್‌ ಸಂಧುಗೆ ಬೆಂಬಲವಾಗಿ ರಕ್ಷಣಾ ವಿಭಾಗದಲ್ಲಿ ಜುವನಾನ್ ಮತ್ತು ಮಿಡ್‌ಫೀಲ್ಡರ್‌ ಎರಿಕ್ ಪಾರ್ಟಲು, ದಿಮಾಸ್ ಡೆಲ್ಗಾಡೊ ಇದ್ದಾರೆ. ಯುವ, ಪ್ರತಿಭೆಗಳಾದ ಆಶಿಕ್ ಕುರುಣಿಯನ್ ಮತ್ತು ಉದಾಂತ ಸಿಂಗ್ ಅವರನ್ನೂ ತಂಡ ಉಳಿಸಿಕೊಂಡಿದೆ. ಆಕ್ರಮಣಕಾರಿ ಆಟಕ್ಕೆ ಹೆಸರಾದ ದೇಶಾನ್ ಬ್ರೌನ್‌ಗೆ ನೆರವಾಗಲು ಈ ಬಾರಿ ನಾರ್ವೆಯ ಕ್ರಿಸ್ಟಿಯನ್ ಒಪ್ಸೆತ್‌, ಬ್ರೆಜಿಲ್‌ನ ಕ್ಲೀಟನ್ ಸಿಲ್ವಾ ಮತ್ತು ಬಿಎಫ್‌ಸಿ ಅಕಾಡೆಮಿಯಿಂದ ಬಡ್ತಿ ಪಡೆದಿರುವ ನೌರೆಮ್ ಸಿಂಗ್‌ ಬಂದಿದ್ದಾರೆ. ಆಲ್ಬರ್ಟ್ ಸೆರಾನ್ ಮತ್ತು ನಿಶು ಕುಮಾರ್ ಅವರನ್ನು ಕಳೆದುಕೊಂಡಿದ್ದರೂ ಫ್ರಾನ್ಸಿಸ್ಕೊ ಗೊಂಜಾಲೆಸ್ ಮತ್ತು ಅಜಿತ್ ಕುಮಾರ್ ಬಂದಿದ್ದಾರೆ. ಮಿಡ್‌ಫೀಲ್ಡ್ ವಿಭಾಗದಲ್ಲಿ ಸುರೇಶ್ ವಾಂಗ್ಜಂ, ಹರ್ಮನ್‌ಜೋತ್ ಖಾಬ್ರಾ ಮತ್ತು ಥೊಯ್ ಸಿಂಗ್ ತಂಡದಲ್ಲೇ ಉಳಿದಿದ್ದಾರೆ. ಆದರೂ ಹಿನ್ನಡೆ ಅನುಭವಿಸುತ್ತಿರುವುದು ತಂಡದ ಆಡಳಿತಕ್ಕೆ ತಲೆನೋವು ತಂದಿದೆ. ಈ ಕಾರಣದಿಂದಲೇ ಇರಬೇಕು, ಕೋಚ್ ಕಾರ್ಲಸ್‌ ಕ್ವದ್ರತ್ ಬಿಎಫ್‌ಸಿ ತೊರೆದಿದ್ದಾರೆ. ಹೊಸ ಕೊಚ್ ನೌಶಾದ್ ಮೂಸಾ ಅವರಿಗೂ ತಂಡಕ್ಕೆ ಚೇತನ, ಸ್ಪೂರ್ತಿ ತುಂಬಲು ಆಗಲಿಲ್ಲ.

ತವರಿನ ಅಂಗಳದ ಕೊರತೆ?

ಬಿಎಫ್‌ಸಿಗೆ ತವರಿನ ಅಂಗಳವಾದ ಕಂಠೀರವ ಕ್ರೀಡಾಂಗಣ ಮತ್ತು ಇಲ್ಲಿನ ಪ್ರೇಕ್ಷಕರೇ ದೊಡ್ಡ ಶಕ್ತಿ. ಇದನ್ನು ಹಿಂದಿನ ಕೋಚ್ ಕ್ವದ್ರತ್ ಮತ್ತು ನಾಯಕ ಸುನಿಲ್ ಚೆಟ್ರಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ತಂಡ ತವರಿನಲ್ಲಿ ಪಂದ್ಯಗಳನ್ನು ಸೋಲುವುದು ತೀರಾ ಕಡಿಮೆ. ಕನ್ನಡ ಹಾಡುಗಳನ್ನು ಹಾಡುತ್ತ, ನೀಲಿ ಧ್ವಜಗಳನ್ನು ಬೀಸುತ್ತ ಕುಣಿದಾಡುವ ‘ನಮ್ಮ ಬೆಂಗಳೂರು’ ಅಭಿಮಾನಿಗಳು ‘ಪಶ್ಚಿಮದ ಸ್ಟ್ಯಾಂಡ್‌‘ನಿಂದ ನೀಡುವ ಬೆಂಬಲ ಅಮೋಘ. ಈ ಬಾರಿ ಕೊರೊನಾ–19 ಕಾಟದಿಂದಾಗಿ ಎಲ್ಲ ಪಂದ್ಯಗಳೂ ಗೋವಾದಲ್ಲಿ ನಡೆಯುತ್ತಿವೆ. ಪ್ರೇಕ್ಷಕರಿಗೆ ಅವಕಾಶವಿಲ್ಲ. ಬಿಎಫ್‌ಸಿಯನ್ನು ಕಾಡುತ್ತಿರುವ ಪ್ರಮುಖ ಅಂಶಗಳಲ್ಲಿ ಇದೂ ಒಂದು ಆಗಿರಬಹುದೇ…?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT