ಬಿಎಫ್‌ಸಿಗೆ ‘ಫೈನಲ್‌’ ಸಂಕಟ

ಸೋಮವಾರ, ಮಾರ್ಚ್ 25, 2019
24 °C
ಇಂಡಿಯನ್ ಸೂಪರ್ ಲೀಗ್ ಟೂರ್ನಿ: ನಾರ್ತ್ ಈಸ್ಟ್‌ಗೆ ಗಾಯಾಳು ಸಮಸ್ಯೆ

ಬಿಎಫ್‌ಸಿಗೆ ‘ಫೈನಲ್‌’ ಸಂಕಟ

Published:
Updated:
Prajavani

ಬೆಂಗಳೂರು: ತವರಿನ ಪ್ರೇಕ್ಷಕರಿಗೆ ಸದಾ ಗೆಲುವಿನ ಸಿಹಿ ನೀಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಗುರುತರವಾದ ಸವಾಲನ್ನು ಮೆಟ್ಟಿನಿಲ್ಲಲು ಈಗ ಸಜ್ಜಾಗಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎರಡನೇ ಲೆಗ್‌ನ ಸೆಮಿಫೈನಲ್‌ ಹಂತದ ಮೊದಲ ಪಂದ್ಯದಲ್ಲಿ ಆತಿಥೇಯರು ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ದಲ್ಲಿ ಗೆದ್ದು ಪೂರ್ಣ ಪಾಯಿಂಟ್ ಗಳಿಸಿದರೆ ಮಾತ್ರ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಲಿದೆ.

ಕಳೆದ ಬಾರಿಯ ರನ್ನರ್ ಅಪ್‌ ಬಿಎಫ್‌ಸಿ ಈ ಸಲ ಲೀಗ್ ಹಂತದಲ್ಲಿ ಅಮೋಘ ಸಾಧನೆ ಮಾಡಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತ್ತು. ಆದರೆ ಗುವಾಹಟಿಯಲ್ಲಿ ನಡೆದಿದ್ದ ಸೆಮಿಫೈನಲ್‌ ಮೊದಲ ಲೆಗ್‌ನ ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್‌ಗೆ 1–2 ಗೋಲುಗಳಿಂದ ಮಣಿದಿತ್ತು. ಪಂದ್ಯದ ಕೊನೆಯ ವರೆಗೂ 1–1ರ ಸಮಬಲ ಸಾಧಿಸಿದ್ದ ಬಿಎಫ್‌ಸಿ ಹೆಚ್ಚುವರಿ ಅವಧಿ ಯಲ್ಲಿ ಪೆನಾಲ್ಟಿ ಅವಕಾಶ ನೀಡಿ ಕೈಸುಟ್ಟುಕೊಂಡಿತ್ತು.

ಆರಂಭದಲ್ಲಿ ಎಲ್ಲ ತಂಡಗಳಿಗೆ ಸಿಂಹಸ್ವಪ್ನವಾಗಿದ್ದ ಬಿಎಫ್‌ಸಿ ಈಚೆಗೆ ನಿರೀಕ್ಷಿತ ಸಾಮರ್ಥ್ಯ ತೋರುತ್ತಿಲ್ಲ. ಲೀಗ್ ಹಂತದ ಕೊನೆಯ ಐದು ಪಂದ್ಯಗಳ ಪೈಕಿ ಒಂದನ್ನು ಮಾತ್ರ ಗೆದ್ದಿದ್ದ ತಂಡ ಮೂರರಲ್ಲಿ ಸೋತಿದೆ. ಇದು ತಂಡದ ಆತಂಕಕ್ಕೆ ಕಾರಣವಾಗಿದೆ. ಪ್ರಮುಖ ಸ್ಟ್ರೈಕರ್‌ಗಳಾದ ಸುನಿಲ್ ಚೆಟ್ರಿ ಮತ್ತು ಮಿಕು ಸತತ ವೈಫಲ್ಯ ಕಾಣುತ್ತಿರುವುದು ಆತಂಕ ಹೆಚ್ಚಿಸಿದೆ.

ಬಾರ್ತೊಲೊಮ್‌ ಒಗ್ಬೆಚೆ ಲಭ್ಯ ಇಲ್ಲ: ಐಎಸ್‌ಎಲ್‌ನಲ್ಲಿ ಮೊದಲ ಬಾರಿ ಪ್ಲೇ ಆಫ್ ಹಂತ ತಲುಪಿರುವ ನಾರ್ತ್ ಈಸ್ಟ್‌ ಯುನೈಟೆಡ್‌ ತಂಡ ಈಗ ಭರವಸೆಯಲ್ಲಿದೆ. ಆದರೆ ಫಾರ್ವರ್ಡ್ ವಿಭಾಗದ ಪ್ರಮುಖ ಆಟಗಾರ ಬಾರ್ತೊಲೊಮ್‌ ಒಗ್ಬೆಚೆ ಗಾಯಗೊಂಡಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ. ಮಿಡ್‌ಫೀಲ್ಡರ್‌ ರಾವ್ಲಿನ್‌ ಬೋರ್ಜ್‌ ಫಿಟ್ ಇಲ್ಲದ ಕಾರಣ ಬದಲಿ ಆಟಗಾರನನ್ನು ಹುಡುಕುವ ಸವಾಲು ಕೂಡ ತಂಡದ ಆಡಳಿತದ ಮುಂದೆ ಇದೆ.

ಪ್ರಮುಖ ಅಂಶಗಳು

* ಗೋವಾ ತಂಡ ಬಿಟ್ಟರೆ, ಕ್ರಾಸ್‌ಗಳ ಮೂಲಕ ಹೆಚ್ಚು ಗೋಲು ಗಳಿಸಿದ ತಂಡ ಬಿಎಫ್‌ಸಿ. ಈ ತಂಡ 11 ಗೋಲುಗಳನ್ನು ಗಳಿಸಿದೆ.

* ನಾರ್ತ್‌ ಈಸ್ಟ್ ಯುನೈಟೆಡ್‌ ಒಟ್ಟು 24 ಗೋಲುಗಳ ಪೈಕಿ 16 ಗೋಲುಗಳನ್ನು ‘ಓಪನ್‌ ಪ್ಲೇ’ ಮೂಲಕ ಗಳಿಸಿದೆ.

* ಬಿಎಫ್‌ಸಿ 30 ಗೋಲುಗಳ ಪೈಕಿ ಎಂಟನ್ನು ಕೊನೆಯ 15 ನಿಮಿಷಗಳಲ್ಲಿ ಗಳಿಸಿದೆ. ನಾರ್ತ್ ಈಸ್ಟ್‌ ಈ ಅವಧಿಯಲ್ಲಿ ಒಂಬತ್ತು ಗೋಲು ಗಳಿಸಿದೆ.

* ಬಿಎಫ್‌ಸಿ ಈ ಬಾರಿ ತಲಾ 12 ಗೋಲುಗಳನ್ನು ಪ್ರಥಮ ಮತ್ತು ದ್ವಿತೀಯಾರ್ಧದಲ್ಲಿ ನೀಡಿದೆ. ನಾರ್ತ್ ಈಸ್ಟ್‌ ನೀಡಿದ ಒಟ್ಟು 19 ಗೋಲುಗಳಲ್ಲಿ 12 ಅನ್ನು ದ್ವಿತೀಯಾರ್ಧದಲ್ಲಿ ಬಿಟ್ಟುಕೊಟ್ಟಿದೆ.

* ಮೊದಲಾರ್ಧದಲ್ಲಿ ಮುನ್ನಡೆ ಗಳಿಸಿದ ಯಾವುದೇ ಪಂದ್ಯದಲ್ಲ ಬಿಎಫ್‌ಸಿ ಸೋತಿಲ್ಲ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಯಾವ ಪಂದ್ಯದಲ್ಲೂ ಬಿಎಫ್‌ಸಿ ಗೆದ್ದಿಲ್ಲ.

* ಮೊದಲು ಗೋಲು ಗಳಿಸಿದ ಯಾವುದೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಸೋಲಲಿಲ್ಲ. ಮೊದಲಾರ್ಧದಲ್ಲಿ ಸಮಬಲ ಸಾಧಿಸಿದ ಒಟ್ಟು 12 ಪಂದ್ಯಗಳ ಪೈಕಿ 11ರಲ್ಲಿ ಈ ತಂಡ ಗೆಲುವು ಸಾಧಿಸಿದೆ.

ಪಂದ್ಯ ಆರಂಭ: ರಾತ್ರಿ 7.30
ಸ್ಥಳ: ಕಂಠೀರವ ಕ್ರೀಡಾಂಗಣ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !