ಬುಧವಾರ, ಜೂನ್ 29, 2022
25 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ

ಬಿಎಫ್‌ಸಿ ಜಯ ತಪ್ಪಿಸಿದ ಗೋವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ISL

ಮಡಗಾಂವ್‌, ಗೋವಾ: ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಜಯವನ್ನು ಎಫ್‌ಸಿ ಗೋವಾ ತಂಡವು ಕೊನೆಯ ಕ್ಷಣದಲ್ಲಿ ಕಿತ್ತುಕೊಂಡಿತು.

ಇದರಿಂದಾಗಿ ಸೋಮವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯವು 1–1 ರೋಚಕ ಡ್ರಾದಲ್ಲಿ ಅಂತ್ಯವಾಯಿತು.

ಆರಂಭದಿಂದಲೂ ತುರುಸಿನ ಹಣಾಹಣಿ ನಡೆದ ಪಂದ್ಯದ 62ನೇ ನಿಮಿಷದಲ್ಲಿ ಬಿಎಫ್‌ಸಿಯ ಉದಾಂತ್ ಸಿಂಗ್ ಗೋಲು ಹೊಡೆದರು. ಅದರೊಂದಿಗೆ ಸುನಿಲ್ ಚೆಟ್ರಿ ಬಳಗದಲ್ಲಿ ಜಯದ ಕನಸು ಗರಿಗೆದರಿತು. 90ನೇ ನಿಮಿಷದವರೆಗೂ ತಂಡವು ಮುನ್ನಡೆ ಕಾಯ್ದುಕೊಂಡಿತು.  ಕೊನೆಯ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದ ಗೋವಾದ ಫೆರಾನ್‌ ಕೊರೊಮಿನಾಸ್‌ ಸಮಬಲ ಸಾಧಿಸಲು ಕಾರಣರಾದರು.

ಜೆಎಫ್‌ಸಿ–ಹೈದರಾಬಾದ್ ಹಣಾಹಣಿ

ಮಂಗಳವಾರ ಜೆಮ್‌ಶೆಡ್‌ಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ತಂಡ ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು 2–1 ಗೋಲುಗಳಿಂದ ಮಣಿಸಿರುವ ಜೆಮ್‌ಶೆ ಡ್‌ಪುರ ತವರಿನಲ್ಲಿ ಸತತ ಎರಡನೇ ಗೆಲುವಿಗಾಗಿ ಹಾತೊರೆಯುತ್ತಿದೆ. ಎಟಿಕೆ ವಿರುದ್ಧ 0–5 ಗೋಲುಗಳ ಸೋಲು ಕಂಡಿರುವ ಹೈದರಾಬಾದ್ ಲಯ ಕಂಡುಕೊಳ್ಳುವ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಒಡಿಶಾ ಎದುರಿನ ಪಂದ್ಯದಲ್ಲಿ 50ಕ್ಕು ನಿಮಿಷಕ್ಕೂ ಹೆಚ್ಚು ಸಮಯ ಜೆಮ್‌ಶೆಡ್‌ಪುರ 10 ಮಂದಿಯ ಬಲದೊಂದಿಗೆ ಆಡಿತ್ತು. ಆದರೂ ಜಯ ದಾಖಲಿಸಿ ಸಂಭ್ರಮಿಸಿತ್ತು. 85ನೇ ನಿಮಿಷದಲ್ಲಿ ಸರ್ಜಿಯೊ ಗಾಸ್ಟೆಲ್‌ ಗಳಿಸಿದ ಗೋಲು ತಂಡಕ್ಕೆ ಗೆಲುವು ತಂದಿತ್ತಿತ್ತು. ಇದೇ ಲಯದಲ್ಲಿ ಹೈದರಾಬಾದ್ ವಿರುದ್ಧವೂ ಆಡಲು ತಂಡ ಸಜ್ಜಾಗಲಿದೆ.

ಮೊದಲ ಪಂದ್ಯದುದ್ದಕ್ಕೂ ಮಿಂಚಿದ್ದ ಮಿಡ್‌ಫೀಲ್ಡರ್ ಪಿಟಿ ಚೆಂಡನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಎಲ್ಲರ ಕಣ್ಣು ಅವರ ಮೇಲೆಯೇ ಇರಲಿದೆ.

ನಿರ್ಣಾಯಕ ಸಂದರ್ಭದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಕಾಸ್ಟೆಲ್ ಕೂಡ ಗಮನ ಸೆಳೆಯಲಿದ್ದಾರೆ.

‘ತಂಡ ಇನ್ನೂ ಸರಿಯಾಗಿ ಲಯ ಕಂಡುಕೊಳ್ಳಲಿಲ್ಲ. ನಮ್ಮದೇ ಆದ ಆಟದ ಶೈಲಿಯೊಂದನ್ನು ರೂಢಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ’ ಎಂದು ಜೆಮ್‌ಶೆಡ್‌ಪುರ ಎಫ್‌ಸಿ ಕೋಚ್ ಆ್ಯಂಟೊನಿಯೊ ಇರಿಯೊಂಡೊ ಅಭಿಪ್ರಾಯಪಟ್ಟರು. ಅಮಾನತುಗೊಂಡಿರುವ ಮಿಡ್‌ಫೀಲ್ಡರ್ ವಿಕಾಸ್ ಜೈರು ಮತ್ತು ಗಾಯಗೊಂಡಿರುವ ಫಾರ್ವರ್ಡ್ ಆಟಗಾರ ಸಿ.ಕೆ.ವಿನೀತ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಹೈದರಾಬಾದ್ ಎಫ್‌ಸಿ ತಂಡ ’ಗಾಯ’ದ ಸಮಸ್ಯೆಯಿಂದ ಬಳಲುತ್ತಿದೆ. ಪ್ರಮುಖ ಆಟಗಾರರಾದ ಬೋಬೊ, ಜೈಲ್ಸ್‌ ಬಾರ್ನೀಸ್‌, ರಾಫೆಲ್ ಗೊಮೆಜ್ ಮತ್ತು ಆಶಿಶ್‌ ರಾಯ್ ಇನ್ನೂ ಪೂರ್ಣ ಗುಣಮುಖರಾಗಿಲ್ಲ. ಮಿಡ್‌ಫೀಲ್ಡರ್‌ ನೆಸ್ಟರ್ ಗಾರ್ಡಿಲೊ ಅಮಾನತಾಗಿರುವುದು ತಂಡಕ್ಕೆ ಇನ್ನಷ್ಟು ಸಂಕಷ್ಟ ತಂದಿದೆ.

ಇಂದಿನ ಪಂದ್ಯ

ಜೆಮ್‌ಶೆಡ್‌ಪುರ ಎಫ್‌ಸಿ–ಹೈದರಾಬಾದ್ ಎಫ್‌ಸಿ

ಸ್ಥಳ: ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣ, ಜೆಮ್‌ಶೆಡ್‌ಪುರ

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು