ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫೈನಲ್‌ಗೆ ಪ್ರೇಕ್ಷಕರಿಲ್ಲ

Last Updated 12 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಚೆನ್ನೈಯಿನ್ ಎಫ್‌ಸಿ ಹಾಗೂ ಎಟಿಕೆ ಎಫ್‌ಸಿ ನಡುವಣ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಪ್ರೇಕ್ಷಕರಿಲ್ಲದೆಯೇ ನಡೆಸಲು ನಿರ್ಧರಿಸಲಾಗಿದೆ.

ಲೀಗ್‌ನ ಸಂಘಟಕರು ಗುರುವಾರ ಈ ವಿಷಯ ತಿಳಿಸಿದ್ದಾರೆ. ಉಭಯ ತಂಡಗಳ ನಡುವಣ ಫೈನಲ್‌ ಪೈಪೋಟಿ ಗೋವಾದ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದೆ.

‘ಆಟಗಾರರು, ಪ್ರೇಕ್ಷಕರು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಐಎಸ್‌ಎಲ್‌ ಪಂದ್ಯ ಇದಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಸ್ಸಾಂ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಗುವಾಹಟಿಯಲ್ಲಿ ನಿಗದಿಯಾಗಿದ್ದ ಬೆಂಗಳೂರು ಎಫ್‌ಸಿ ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ನಡುವಣ ಪಂದ್ಯವನ್ನೂ ‍ಪ್ರೇಕ್ಷಕರಿಲ್ಲದೆಯೇ ಆಯೋಜಿಸಲಾಗಿತ್ತು.

ಈಗಾಗಲೇ ಫೈನಲ್‌ ಪಂದ್ಯದ ಟಿಕೆಟ್‌ ಖರೀದಿಸಿರುವವರಿಗೆ ಹಣ ಹಿಂತಿರುಗಿಸುವುದಾಗಿ ಎಫ್‌ಎಸ್‌ಡಿಎಲ್‌ ಹೇಳಿದೆ. ಚೆನ್ನೈಯಿನ್‌ ಮತ್ತು ಎಟಿಕೆ ನಡುವಣ ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌ ಹಾಗೂ ಜಿಯೊ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

ಐ ಲೀಗ್‌ಗೂ ತಟ್ಟಿದ ಬಿಸಿ: ಐ ಲೀಗ್‌ ಫುಟ್‌ಬಾಲ್‌ ಟೂರ್ನಿಗೂ ಕೊರೊನಾ ಬಿಸಿ ತಟ್ಟಿದೆ.

ಇದೇ ತಿಂಗಳ 15ರಂದು ಸಾಲ್ಟ್‌ಲೇಕ್‌ ಮೈದಾನದಲ್ಲಿ ನಿಗದಿಯಾಗಿರುವ ಮೋಹನ್‌ ಬಾಗನ್‌ ಮತ್ತು ಈಸ್ಟ್‌ ಬೆಂಗಾಲ್‌ ನಡುವಣ ‘ಕೋಲ್ಕತ್ತ ಡರ್ಬಿ’ ಸೇರಿದಂತೆ ಒಟ್ಟು 28 ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಅಖಿಲ ಭಾರತ ಫುಟ್‌ಬಾಲ್‌ ಸಂಸ್ಥೆ (ಎಐಎಫ್‌ಎಫ್‌) ಚಿಂತಿಸಿದೆ.

ಶುಕ್ರವಾರ ನಡೆಯುವ ಸಭೆಯಲ್ಲಿ ಎಐಎಫ್‌ಎಫ್‌, ಐ ಲೀಗ್‌ ಕ್ಲಬ್‌ಗಳ ಜೊತೆ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದೆ.

‘ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ನಾವು ಸಿದ್ಧರಿಲ್ಲ. ಈ ವಿಷಯದಲ್ಲಿ ಎಲ್ಲಾ ಕ್ಲಬ್‌ಗಳ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕಿದೆ. ಹೀಗಾಗಿ ಶುಕ್ರವಾರ ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT