ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ‘ದಾಖಲೆ’ಗೆ ಅನುಮಾನ, ಆಕ್ಷೇಪ

Last Updated 22 ಜನವರಿ 2021, 19:30 IST
ಅಕ್ಷರ ಗಾತ್ರ

ನೆಪೋಲಿ ತಂಡದ ವಿರುದ್ಧ ಬುಧವಾರ ನಡೆದ ಇಟಾಲಿಯನ್ ಸೂಪರ್ ಕಪ್ ಟೂರ್ನಿಯ ಪಂದ್ಯದಲ್ಲಿ ಯುವೆಂಟಸ್ 2–0ಯಿಂದ ಜಯ ಗಳಿಸಿತು. ಈ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಗೋಲು ತಂಡದ ಜಯಕ್ಕೆ ಕಾರಣವಾಗುವುದರೊಂದಿಗೆ ‘ದಾಖಲೆ’ಯನ್ನೂ ಬರೆಯಿತು. ಇದು, ರೊನಾಲ್ಡೊ ವೃತ್ತಿಜೀವನದ 760ನೇ ಗೋಲಾಗಿತ್ತು. ಫುಟ್‌ಬಾಲ್‌ ಇತಿಹಾಸದಲ್ಲಿ ಗರಿಷ್ಠ ಗೋಲು ಗಳಿಸಿದ ಆಟಗಾರ ರೊನಾಲ್ಡೊ ಎಂಬ ಮಾಹಿತಿ ಹೊರಬಿದ್ದು ಕೆಲವೇ ನಿಮಿಷಗಳಲ್ಲಿ ಈ ಕುರಿತು ಆಕ್ಷೇಪ, ತಕರಾರು ಮತ್ತು ಚರ್ಚೆ ಆರಂಭವಾಯಿತು. ಇದು ದಾಖಲೆಯೇನೂ ಅಲ್ಲ, ಫುಟ್‌ಬಾಲ್‌ನಲ್ಲಿ ಒಂದು ಸಾವಿರ ಗೋಲು ಗಳಿಸಿದ ಆಟಗಾರರೂ ಇದ್ದಾರೆ ಎಂಬ ವಾದವು ವಿವಾದದ ಕಿಡಿ ಹಚ್ಚಿದೆ.

ರಾಷ್ಟ್ರೀಯ ತಂಡ ಪೋರ್ಚುಗಲ್‌ಗಾಗಿ 102 ಗೋಲುಗಳನ್ನು ಗಳಿಸಿರುವ ರೊನಾಲ್ಡೊ ಕ್ಲಬ್ ಹಂತದಲ್ಲಿ ಅತಿ ಹೆಚ್ಚು ಬಾರಿ ಚೆಂಡನ್ನು ಗುರಿಮುಟ್ಟಿಸಿದ್ದು ರಿಯಲ್ ಮ್ಯಾಡ್ರಿಡ್‌ಗಾಗಿ. ಆ ತಂಡದ ಪರ ಅವರು 450 ಗೋಲು ಗಳಿಸಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್‌ಗಾಗಿ 118, ಯುವೆಂಟಸ್‌ಗಾಗಿ 85, ಸ್ಪೋರ್ಟಿಂಗ್ ಲಿಸ್ಬನ್‌ಗಾಗಿ ಐದು ಗೋಲುಗಳು ಅವರಿಂದ ಮೂಡಿಬಂದಿವೆ.

ದೇಶಕ್ಕಾಗಿ ಮತ್ತು ರಿಯಲ್‌ ಮ್ಯಾಡ್ರಿಡ್‌ಗಾಗಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿರುವ ರೊನಾಲ್ಡೊ ಚಾಂಪಿಯನ್ಸ್‌ ಲೀಗ್‌ನಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಲಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿಯೂ ಗಮನ ಸೆಳೆದಿದ್ದಾರೆ. ಆದರೆ ಫುಟ್‌ಬಾಲ್‌ನಲ್ಲಿ ಈ ವರೆಗೆ ಅತಿ ಹೆಚ್ಚು ಗೋಲು ಗಳಿಸಿದವರು ಎಂಬ ಖ್ಯಾತಿ ಅವರಿಗೆ ಸಲ್ಲುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಬ್ರೆಜಿಲ್‌ನ ಪೆಲೆ ಮತ್ತು ರೊಮಾರಿಯೊ ಒಂದು ಸಾವಿರಕ್ಕೂ ಹೆಚ್ಚು ಗೋಲು ಗಳಿಸಿದ್ದಾರೆ ಎಂಬು ಹೀಗೆ ಹೇಳುವವರ ವಾದ.

ಕ್ಲಬ್‌ ಒಂದಕ್ಕಾಗಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕಳೆದ ತಿಂಗಳು ಮೆಸ್ಸಿ ತಮ್ಮದಾಗಿಸಿಕೊಂಡಿದ್ದರು. ಬಾರ್ಸಿಲೋನಾ ಪರವಾಗಿ ಪೆಲೆ ಗಳಿಸಿದ್ದ 643 ಗೋಲುಗಳನ್ನು ಅವರು ಹಿಂದಿಕ್ಕಿದ್ದರು. ಆದರೆ ತಕ್ಷಣ ತಕರಾರು ಎತ್ತಿದ ಸ್ಯಾಂಟೋಸ್ ಎಫ್‌ಸಿ, ಸೌಹಾರ್ದ ಪಂದ್ಯಗಳೂ ಸೇರಿದಂತೆ ಕ್ಲಬ್‌ಗಾಗಿ ಪೆಲೆ 1091 ಗೋಲುಗಳನ್ನು ಗಳಿಸಿದ್ದಾರೆ ಎಂದು ವಾದಿಸಿತ್ತು. ಬ್ರೆಜಿಲ್‌ಗಾಗಿ ಗಳಿಸಿದ 92 ಗೋಲು ಸೇರಿದಂತೆ 750ಕ್ಕೂ ಹೆಚ್ಚು ಗೋಲುಗಳನ್ನು ಸ್ಪರ್ಧಾತ್ಮಕ ಫುಟ್‌ಬಾಲ್‌ನಲ್ಲಿ ಪೆಲೆ ಗಳಿಸಿದ್ದಾರೆ ಎಂಬ ಲೆಕ್ಕ ಮುಂದಿಟ್ಟದ್ದೂ ಉಂಟು. ರೊಮಾರಿಯೊ ಇದಕ್ಕೂ ಹೆಚ್ಚು ಗೋಲು ಗಳಿಸಿದ್ದಾರೆ ಎಂಬ ತರ್ಕವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT