ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನಾಮ ತಂಡವನ್ನು ಮಣಿಸಿ ಪ್ರೀ ಕ್ವಾರ್ಟರ್ ಪ್ರವೇಶ ಗಿಟ್ಟಿಸಿದ ಇಂಗ್ಲೆಂಡ್

Last Updated 24 ಜೂನ್ 2018, 16:22 IST
ಅಕ್ಷರ ಗಾತ್ರ

ನಿಜ್ನಿ ನೊವ್‌ಗರೊಡ್‌ : ಹ್ಯಾರಿ ಕೇನ್‌ ಮತ್ತೊಮ್ಮೆ ಇಂಗ್ಲೆಂಡ್ ಪಾಳಯದಲ್ಲಿ ಬೆಳಗಿದರು. ಹ್ಯಾಟ್ರಿಕ್ ಗೋಲಿನೊಂದಿಗೆ ತಂಡಕ್ಕೆ ವಿಶ್ವಕಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಗೆಲುವಿನ ಕಾಣಿಕೆ ನೀಡಿದರು. ಪನಾಮವನ್ನು 6–1 ಗೋಲುಗಳಿಂದ ಮಣಿಸಿದ ಈ ತಂಡ 16 ಘಟ್ಟಕ್ಕೆ ಪ್ರವೇಶಿಸಿತು. ಚೊಚ್ಚಲ ಟೂರ್ನಿ ಆಡಿದ ಪನಾಮ ಹೊರ ನಡೆಯಿತು. ‌

ಪನಾಮದ ದುರ್ಬಲ ರಕ್ಷಣಾ ವಿಭಾಗವನ್ನು ಬೆಕ್ಕಸ ಬೆರಗಾಗಿಸಿದ ಇಂಗ್ಲೆಂಡ್‌ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿತು. ಹೀಗಾಗಿ ಎಂಟನೇ ನಿಮಿಷದಲ್ಲೇ ಖಾತೆ ತೆರೆಯಲು ಈ ತಂಡಕ್ಕೆ ಸಾಧ್ಯವಾಯಿತು.

ಜಾನ್‌ ಸ್ಟೋನ್ಸ್ ಈ ಗೋಲು ಗಳಿಸಿದರು. 22ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಕೈ ಚೆಲ್ಲದ ಕೇನ್‌ ಚೆಂಡನ್ನು ಸುಲಭವಾಗಿ ಗುರಿ ಸೇರಿಸಿದರು. 36ನೇ ನಿಮಿಷದಲ್ಲಿ ಜೆಸ್ಸಿ ಲಿಂಗಾರ್ಡ್‌ ಗಳಿಸಿದ ಗೋಲಿನೊಂದಿಗೆ ಇಂಗ್ಲೆಂಡ್‌ನ ಮುನ್ನಡೆ 3–0ಗೆ ಏರಿತು. ನಾಲ್ಕೇ ನಿಮಿಷಗಳಲ್ಲಿ ಸ್ಟೋನ್ಸ್‌ ಮತ್ತೊಂದು ಗೋಲು ಗಳಿಸುತ್ತಿದ್ದಂತೆ ಪನಾಮ ದಂಗಾಯಿತು.

ಮೊದಲಾರ್ಧದ ಹೆಚ್ಚುವರಿ ಅವಧಿಯಲ್ಲಿ ಪೆನಾಲ್ಟಿ ಬಿಟ್ಟುಕೊಟ್ಟ ಪನಾಮ ಕೈ ಸುಟ್ಟುಕೊಂಡಿತು. ಈ ಅವಕಾಶವನ್ನು ಇಂಗ್ಲೆಂಡ್‌ ಸದುಪಯೋಗಪಡಿಸಿಕೊಂಡಿತು. ಹ್ಯಾರಿ ಕೇನ್ ಚೆಂಡನ್ನು ಗುರಿ ಸೇರಿಸಿದರು.

ತಿರುಗೇಟು ನೀಡಿದ ಪನಾಮ
ದ್ವಿತೀಯಾರ್ಧದಲ್ಲಿ ಪನಾಮ ತಂಡ ರಣತಂತ್ರ ಬದಲಿಸಿತು. ಹೀಗಾಗಿ ಗೋಲು ಮಳೆ ಸುರಿಸುವ ಇಂಗ್ಲೆಂಡ್‌ನ ಉದ್ದೇಶ ಈಡೇರಲಿಲ್ಲ. ಆದರೆ ಕೇನ್ ಅವರ ಹ್ಯಾಟ್ರಿಕ್ ಸಾಧನೆಗೆ ತಡೆಯೊಡ್ಡಲು ಪನಾಮಕ್ಕೆ ಸಾಧ್ಯವಾಗಲಿಲ್ಲ. 62ನೇ ನಿಮಿಷದಲ್ಲಿ ಗೋಲು ಗಳಿಸಿದ ಕೇನ್‌ ಹ್ಯಾಟ್ರಿಕ್‌ನೊಂದಿಗೆ ಸಂಭ್ರಮಿಸಿದರು.

ಶೂನ್ಯ ಸಂಪಾದನೆಯೊಂದಿಗೆ ಮರಳುವ ಆತಂಕದಲ್ಲಿದ್ದ ಪನಾಮ 78ನೇ ನಿಮಿಷದಲ್ಲಿ ನಗೆ ಸೂಸಿತು. ಆ ತಂಡದ ಫಿಲಿಪ್‌ ಬಲೊಯ್‌ ಗೋಲು ಗಳಿಸಿ ತಂಡಕ್ಕೆ ಸಮಾಧಾನ ತಂದುಕೊಟ್ಟರು.

ದಾಖಲೆ ಜಯ
ಇದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಅತಿದೊಡ್ಡ ಜಯವಾಗಿದೆ. ನಾಯಕ ಹ್ಯಾರಿ ಕೇನ್‌ ಒಟ್ಟು ಐದು ಗೋಲುಗಳೊಂದಿಗೆ ಈ ಬಾರಿಯ ಟೂರ್ನಿಯಲ್ಲಿ ಈ ವರೆಗೆ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಅವರು ಖಾತೆಯಲ್ಲಿ ಈಗ ಐದು ಗೊಲುಗಳಿವೆ.

ವಿಶ್ವಕಪ್ ಪಂದ್ಯವೊಂದರಲ್ಲಿ ಹ್ಯಾಟ್ರಿಕ್‌ ಗಳಿಸಿದ ಇಂಗ್ಲೆಂಡ್‌ನ ಮೂರನೇ ಆಟಗಾರ ಆಗಿದ್ದಾರೆ ಕೇನ್‌. 1966ರಲ್ಲಿ ಜೆಫ್‌ ಹರ್ಟ್‌ ಮತ್ತು 1986ರಲ್ಲಿ ಗ್ಯಾರಿ ಲೆಂಕೆರ್‌ ಈ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT