ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಕೆ ಮೋಹನ್ ಬಾಗನ್ ವಿರುದ್ಧ ತ್ರಿ–ಸ್ಟಾರ್ ವಾರ್

Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತಿರುವ ಎಟಿಕೆ ಮೋಹನ್ ಬಾಗನ್ ತಂಡ ಕಣಕ್ಕೆ ಇಳಿಯುವ ಮೊದಲೇ ವಿವಾದ ಎಬ್ಬಿಸಿದ್ದು ಫುಟ್‌ಬಾಲ್ ಪ್ರಿಯರ ನಗರ ಕೋಲ್ಕತ್ತದ ಜನರು ಸಾಮಾಜಿಕ ತಾಣಗಳಲ್ಲಿ ತಂಡದ ವಿರುದ್ಧ ’ಸಮರ‘ ಸಾರಿದ್ದಾರೆ. ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಮತ್ತು ಹಾಲಿ ಚಾಂಪಿಯನ್ ಕೂಡ ಆಗಿರುವ ಎಟಿಕೆ ಈ ವರ್ಷ ಮೋಹನ್ ಬಾಗನ್‌ನಲ್ಲಿ ಸಂಯೋಜನೆಗೊಂಡಿದೆ. ಹೀಗಾಗಿ ಎಟಿಕೆ ಮೋಹನ್ ಬಾಗನ್ ಎಂಬ ಹೆಸರಿನಲ್ಲಿ ಇನ್ನು ಮುಂದೆ ಕಣಕ್ಕೆ ಇಳಿಯಲಿದೆ. ಗೋವಾದಲ್ಲಿರುವ ತಂಡ ಅಭ್ಯಾಸ ಆರಂಭಿಸಿದ್ದು ಈ ಸಂದರ್ಭದಲ್ಲಿ ಧರಿಸಿರುವ ಜೆರ್ಸಿಯಲ್ಲಿ ಅಚ್ಚಾಗಿರುವ ಮೂರು ನಕ್ಷತ್ರಗಳ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಹರಿಬಿಟ್ಟಿದ್ದಾರೆ.

ಮೂರು ಬಾರಿ ಚಾಂಪಿಯನ್ ಆಗಿರುವ ಕಾರಣ ಜೆರ್ಸಿಯ ಎಡತೋಳಿನಲ್ಲಿ ಮೂರು ನಕ್ಷತ್ರಗಳನ್ನು ಹಾಕಲಾಗಿದ್ದು ಅದರ ಕೆಳಗೆ ‘2019–20‘ರ ಚಾಂಪಿಯನ್ ಎಂಬ ಒಕ್ಕಣೆಯೂ ಇದೆ. ಇದು ಮೋಹನ್ ಬಾಗನ್ ತಂಡದ ಅಭಿಮಾನಿಗಳನ್ನು ಕೆರಳಿಸಿದೆ. 100ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಮತ್ತು ನೂರಾರು ಪ್ರಶಸ್ತಿಗಳನ್ನು ಗೆದ್ದಿರುವ ಕ್ಲಬ್‌ ಒಂದರ ಜೆರ್ಸಿಯಲ್ಲಿ ಕೇವಲ ಮೂರು ಪ್ರಶಸ್ತಿಗಳ ಬಗ್ಗೆ ಪ್ರಸ್ತಾಪಿಸಿರುವುದು ಕ್ಲಬ್‌ಗೂ ಅದನ್ನು ಪ್ರೀತಿಸುವ ಅಭಿಮಾನಿಗಳಿಗೂ ಮಾಡಿರುವ ಅವಮಾನ ಎಂದು ಅರ್ಥದಲ್ಲಿ ಟೀಕೆಗಳು ಬಂದಿವೆ. ‌

ಅಭಿಮಾನಿಗಳ ಧ್ವನಿಗೆ ತಕ್ಷಣ ಸ್ಪಂದಿಸಿರುವ ಕ್ಲಬ್ ಆಡಳಿತ ಶೀಘ್ರದಲ್ಲೇ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದೆ. ’ಐಎಸ್‌ಎಲ್ ಆಡಳಿತದ ಜೊತೆ ಸತತ ಮಾತುಕತೆ ನಡೆಯುತ್ತಿದ್ದು ಜೆರ್ಸಿಯಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ‘ ಎಂದು ಕ್ಲಬ್ ಟ್ವೀಟ್ ಮಾಡಿದೆ.

ಎಟಿಕೆ ತಂಡ 2014ರಲ್ಲಿ, ಐಎಸ್‌ಎಲ್‌ನ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗಳಿಸಿತ್ತು. ಎರಡು ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವರ್ಷ ಮಾರ್ಚ್‌ನಲ್ಲಿ ಗೋವಾದಲ್ಲಿ ನಡೆದ ಫೈನಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿಯನ್ನು 3–1ರಿಂದ ಮಣಿಸಿ ಮತ್ತೆ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಇದಕ್ಕೂ ಮೊದಲು, ಜನವರಿಯಲ್ಲಿ ಎಟಿಕೆ ಮತ್ತು ಮೋಹನ್ ಬಾಗನ್ ಒಪ್ಪಂದ ಮಾಡಿಕೊಂಡಿದ್ದವು. ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಫೈನಲ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. ಮಾರ್ಚ್‌ ನಂತರ ಭಾರತದಲ್ಲಿ ಸ್ಥಗಿತಗೊಂಡಿದ್ದ ಫುಟ್‌ಬಾಲ್ ಚಟುವಟಿಕೆ ಕಳೆದ ತಿಂಗಳಲ್ಲಿ ಐ–ಲೀಗ್ ಅರ್ಹತಾ ಟೂರ್ನಿಗಳ ಮೂಲಕ ಪುನರಾರಂಭಗೊಂಡಿತ್ತು. ಈ ಬಾರಿಯ ಐಎಸ್ಎಲ್‌ ಟೂರ್ನಿಯನ್ನು ಗೋವಾದ ಮೂರು ಕ್ರೀಡಾಂಗಣಗಳಲ್ಲಿ, ಪ್ರೇಕ್ಷಕರಿಲ್ಲದೆ ನಡೆಸಲು ತೀರ್ಮಾನಿಸಲಾಗಿದೆ. ಈ ತಿಂಗಳ 20ರಂದು ಎಟಿಕೆ ಮೋಹನ್ ಬಾಗನ್ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯದೊಂದಿಗೆ ಆರನೇ ಆವೃತ್ತಿ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT